ADVERTISEMENT

‘ಕಠಿಣ ಕ್ರಮ ಅಂದ್ರೆ ಏನು?’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಮೇ 2017, 19:30 IST
Last Updated 13 ಮೇ 2017, 19:30 IST

ಹೊಸಪೇಟೆ: ‘ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪ್ರತಿ ಸಾರಿ ಹೇಳುತ್ತೀರಿ. ಕಠಿಣ ಕ್ರಮವೆಂದರೆ ಏನು ಎಂಬುದನ್ನು ಸ್ವಲ್ಪ ಬಿಡಿಸಿ ಹೇಳಿ’

ಜಿಲ್ಲಾಧಿಕಾರಿ ರಾಮಪ್ರಸಾದ ಮನೋಹರ್‌  ಅವರಿಗೆ ಶಾಸಕ ಆನಂದ ಸಿಂಗ್‌ ಅವರು ಕೇಳಿದ ಪ್ರಶ್ನೆ ಇದು.

ಇತ್ತೀಚೆಗೆ ನಡೆದ ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ ಹಣ ವಸೂಲಿ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ನಿಮ್ಮ ವಿರುದ್ಧವೇ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಶಾಸಕರು ಮೇಲಿನಂತೆ ಕೇಳಿದರು.

ADVERTISEMENT

ಶಾಸಕರ ಪ್ರಶ್ನೆಗೆ ಥಟ್ಟನೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ‘ಅದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಕಠಿಣ ಕ್ರಮ ಏನೆಂಬುದನ್ನು ಈಗಾಗಲೇ ಜಾರಿಮಾಡಿ ತೋರಿಸಿದ್ದೇನೆ’ ಎಂದರು. ಆಗ ಸಭೆಯಲ್ಲಿದ್ದವರು ಗೊಳ್ಳನೆ ನಕ್ಕರು.

ಅಷ್ಟಕ್ಕೇ ನಿಲ್ಲದೆ, ‘ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲ ಸೇರಿ ಕೆಲಸ ಮಾಡಿದರೆ ಅಭಿವೃದ್ಧಿ ಆಗುತ್ತದೆ. ಒಬ್ಬರಿಂದಲೇ ಎಲ್ಲವೂ ಮಾಡಲು ಆಗುವುದಿಲ್ಲ’ ಎಂದಾಗ ಅಲ್ಲಿದ್ದವರು ಮತ್ತೆ ಮುಸಿ ಮುಸಿ ನಕ್ಕರು.

ಕೊನೆಗೆ ಶಾಸಕರು, ‘ನೀವು ಆಗಾಗ ನಮಗೆ ಸಲಹೆ ಕೊಡುತ್ತಿರಿ, ಅದರಂತೆ ಮುಂದುವರಿಯುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.