ADVERTISEMENT

ಕಳ್ಳನ ಹಿಡಿಯಲು ಜೆಸಿಬಿ ತಂದರು!

ಜೋಮನ್ ವರ್ಗಿಸ್
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST

ಗದಗ: ಇತ್ತೀಚೆಗೆ ಗದುಗಿನಲ್ಲೊಂದು ಮನೆ ಕಳವು ಪ್ರಕರಣ ನಡೆಯಿತು. ನಗರದ ಇರಾನಿ ಕಾಲೋನಿಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳ, ಚಿನ್ನ, ನಗದು ಕದ್ದು ಪರಾರಿಯಾಗುವಾಗ ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದ. ಪೊಲೀಸರು ಇನ್ನೇನು ಕಳ್ಳನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಆತ ಅವರ ಮೇಲೆ ಹಲ್ಲೆ ಮಾಡಿ, ಸಮೀಪದಲ್ಲೇ ಇದ್ದ ಜಾಲಿ ಮುಳ್ಳಿನ ಪೊದೆಯೊಳಗೆ ನುಗ್ಗಿ, ಅವಿತುಕೊಂಡ. ಅರ್ಧ ಎಕರೆ ಪ್ರದೇಶದಲ್ಲಿ ಹುಲುಸಾಗಿ ಬೆಳೆದಿದ್ದ ಮುಳ್ಳಿನ ಪೊದೆ. ಕಗ್ಗತ್ತಲು ಬೇರೆ. ಕಳ್ಳನನ್ನು ಹುಡುಕುವ ಸವಾಲು ಪೊಲೀಸರಿಗೆ ಎದುರಾಯಿತು.

ಜಾಲಿ ಮುಳ್ಳಿನ ಪೊದೆ ತೆರವುಗೊಳಿಸಿ ಕಳ್ಳನನ್ನು ಹಿಡಿಯಲು ಮೂರು ಜೆಸಿಬಿ ಯಂತ್ರಗಳನ್ನು ಸ್ಥಳಕ್ಕೆ ತರಲಾಯಿತು. ಜೆಸಿಬಿಯ ಬಾಹುಗಳು ಮುಳ್ಳಿನ ಗಿಡಗಳನ್ನು ಕಿತ್ತು ಹಾಕುತ್ತಿದ್ದಂತೆ ಪೊಲೀಸರು, ಟಾರ್ಚ್‌ ಹಿಡಿದುಕೊಂಡು, ಪೊದೆಯನ್ನು ಸುತ್ತುವರಿದರು. ಸಾರ್ವಜನಿಕರು ಅವರೊಂದಿಗೆ ಕೈಜೋಡಿಸಿದರು. ವಿಷಯ ತಿಳಿದು ರಾತ್ರಿ ಒಬ್ಬೊಬ್ಬರಾಗಿ ನಿದ್ರೆಗಣ್ಣಿನಲ್ಲೇ ಹೊರಬಂದ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು, ಗುಂಪುಗೂಡಿ ರಸ್ತೆಯ ಪಕ್ಕದಲ್ಲಿ, ಕಟ್ಟಡಗಳ ಮೇಲೆ ನಿಂತುಕೊಂಡು ಕಾರ್ಯಾಚರಣೆಯನ್ನು ವೀಕ್ಷಿಸಿದರು. ರಾತ್ರಿ 10 ಗಂಟೆಗೆ ಪ್ರಾರಂಭವಾದ ಕಾರ್ಯಾಚರಣೆ ತಡರಾತ್ರಿ 2 ಗಂಟೆಯವರೆಗೂ ನಡೆಯಿತು. ಸತತ 4 ಗಂಟೆ ಪೊಲೀಸರು ಬೆವರಿಳಿಸಿದರೂ ಕಳ್ಳ ಸಿಗಲಿಲ್ಲ.

‘ಪೊಲೀಸರು ಕಾರ್ಯಾಚಾರಣೆ ಪ್ರಾರಂಭಿಸುವ ಮೊದಲೇ ಕಳ್ಳ ಪೊದೆಯೊಳಗಿನಿಂದ ನುಸುಳಿ ಪಾರಾಗಿದ್ದಾನೆ. ಇದು ನಮಗೂ ಗೊತ್ತಿತ್ತು. ಆದರೆ, ಕಳ್ಳನನ್ನು ಹಿಡಿಯುವ ನೆಪದಲ್ಲಾದರೂ, ಮುಳ್ಳಿನ ಗಿಡಗಳಿಂದ ತುಂಬಿಕೊಂಡಿದ್ದ ಈ ಪ್ರದೇಶ ಸ್ಚಚ್ಛವಾಗಲಿ ಎಂದು ಸುಮ್ಮನಿದ್ದೆವು’ ಎಂದು ಬಡಾವಣೆಯ ನಿವಾಸಿಗಳು ಮಾತನಾಡಿಕೊಂಡರು. ಜೆಸಿಬಿ ತಂದು ಕಾರ್ಯಾಚರಣೆ ನಡೆಸಿದರೂ ಕಳ್ಳ ಸಿಗದೆ ಬೇಸತ್ತ ಪೊಲೀಸರು ಕೊನೆಗೆ ಇಡೀ ಪೊದೆಗೆ ಬೆಂಕಿ ಹಚ್ಚಿ ಠಾಣೆಗೆ ಮರಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.