ADVERTISEMENT

ಕಾಂಗ್ರೆಸ್ ಸಂಸ್ಕೃತಿ... ಅಲ್ಲಲ್ಲ ಆದರ್ಶವಾಗಿರಬೇಕ್ರೀ..!

ವಾರೆಗಣ್ಣು

ಡಿ.ಬಿ, ನಾಗರಾಜ
Published 5 ಆಗಸ್ಟ್ 2017, 19:30 IST
Last Updated 5 ಆಗಸ್ಟ್ 2017, 19:30 IST

ವಿಜಯಪುರ: ‘ಬಾಯಿಗೆ ಬಂದಂತೆ ಮಾತನಾಡೋದು ಕಾಂಗ್ರೆಸ್‌ ಸಂಸ್ಕೃತಿ. ಅದು ಅವರಿಗೆ ರಕ್ತಗತವಾಗಿದೆ...’

ಮುಧೋಳ ಶಾಸಕ ಗೋವಿಂದ ಕಾರಜೋಳ ವಿಜಯಪುರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಸಚಿವ ಆರ್‌.ರೋಷನ್ ಬೇಗ್‌ ದೇಶಭಕ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಬಿಜೆಪಿಗರನ್ನು ‘ಬಡ್ಡಿ ಮಕ್ಳು’ ಎಂದು ಜರಿದಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಿಯಿದು.

ತಕ್ಷಣವೇ ಪತ್ರಕರ್ತರೊಬ್ಬರು ‘ಸದನದಲ್ಲಿ ಬ್ಲೂ ಫಿಲಂ ನೋಡಿದ್ದು ಯಾರ ಸಂಸ್ಕೃತಿ’ ಎಂದು ಪ್ರಶ್ನಿಸುತ್ತಿದ್ದಂತೆ, ತಬ್ಬಿಬ್ಬಾದ ಕಾರಜೋಳ ‘ನಮ್ಮ ಸದಸ್ಯರು ಬ್ಲೂ ಫಿಲಂ ನೋಡಲಿಲ್ಲ. ತಮ್ಮ ಮೊಬೈಲ್‌ಗೆ ಬಂದಿದ್ದ ವಿಡಿಯೋ, ಇಮೇಜ್‌ ನೋಡುತ್ತಿದ್ದರು’ ಎಂಬ ಸಮಜಾಯಿಷಿ ನೀಡಿದರು.

ADVERTISEMENT

‘ತನ್ವೀರ್ ಶೇಠ್‌ ಮಾಡಿದ್ದು ಅದನ್ನೇ ಅಲ್ಲವೇ. ಅದಕ್ಯಾಕೆ ದೊಡ್ಡ ರಾಮಾಯಣ ಮಾಡಿದಿರಿ’ ಎಂಬ ಮರು ಪ್ರಶ್ನೆಗೆ, ಶಾಸಕರು ಎರಡೂ ಒಂದೇ ಎಂದರು.

ಶೋಭಾ ಕರಂದ್ಲಾಜೆ ಬಳಸಿದ ‘ಷಂಡರು’ ಪದ ಯಾವ ಸಂಸ್ಕೃತಿಯಲ್ಲಿ ಬರುತ್ತದೆ ಎಂಬ ಪ್ರಶ್ನೆ ಪತ್ರಕರ್ತರಿಂದ ತೂರಿ ಬರುತ್ತಿದ್ದಂತೆ ಎಚ್ಚೆತ್ತ ಕಾರಜೋಳ ಏಕಾಏಕಿ ಯೂಟರ್ನ್‌ ಪಡೆದರು.

‘ಅಸಭ್ಯ ಪದ ಬಳಕೆ ರಾಜಕಾರಣಿಗಳಿಗೆ ಶೋಭೆಯಲ್ಲ. ಕಾಂಗ್ರೆಸ್‌–ಬಿಜೆಪಿ ಯಾರೇ ಆಗಲಿ, ಅಸಂಸದೀಯ ಪದ ಬಳಸಬಾರದು. ನಾವು ಎಲ್ಲರಿಗೂ ಆದರ್ಶವಾಗಿರಬೇಕ್ರೀ. ಈ ವಿಷಯ ಮುಂದುವರೆಸುವುದು ಬ್ಯಾಡ’ ಎಂದು ತಮ್ಮ ಪತ್ರಿಕಾಗೋಷ್ಠಿಯನ್ನೇ ಮೊಟಕುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.