ADVERTISEMENT

ಕಿಡಿಯನ್ನು ಬೆಂಕಿಮಾಡುವವರ ನಡುವೆ...

ಡಾ.ಮಲ್ಲಿಕಾರ್ಜುನ ಗುಮ್ಮಗೋಳ
Published 16 ಸೆಪ್ಟೆಂಬರ್ 2017, 19:30 IST
Last Updated 16 ಸೆಪ್ಟೆಂಬರ್ 2017, 19:30 IST
ಕಿಡಿಯನ್ನು ಬೆಂಕಿಮಾಡುವವರ ನಡುವೆ...
ಕಿಡಿಯನ್ನು ಬೆಂಕಿಮಾಡುವವರ ನಡುವೆ...   

2005. ಭಾರತೀಯ ದಂಡ ಸಂಹಿತೆಯ (ಐಪಿಸಿ) 498 ಕಲಮಿಗೆ ‘ಎ’ ಸೇರಿಸಿ, ಗಂಡನ ಮನೆಯವರ ವಿರುದ್ಧ ದನಿ ಎತ್ತಲು ಹೆಣ್ಣಿಗೆ ರಕ್ಷಣೆ ದೊರಕಿಸಿಕೊಟ್ಟ ವರ್ಷವಿದು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ (ಕಲಮು 498ಎ) ಎಂಬ ಹೆಸರಿನಲ್ಲಿ ಜಾರಿಗೆ ಬಂದ ಈ ಕಾನೂನು, ತನ್ನ ಮೇಲೆ ಗಂಡನ ಮನೆಯವರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಹೆಣ್ಣು ದೂರು ಕೊಟ್ಟ ತಕ್ಷಣ, ದೂರಿನಲ್ಲಿ ಉಲ್ಲೇಖಗೊಂಡ ಎಲ್ಲರನ್ನೂ ತಕ್ಷಣವೇ ಪೊಲೀಸರು ಬಂಧಿಸಬೇಕು ಎಂದು ಹೇಳಿತು. ಇದರ ಪ್ರಯೋಜನ ಪಡೆದುಕೊಂಡು ಹೆಣ್ಣುಮಕ್ಕಳು ಗೊತ್ತು ಗುರಿಯಿಲ್ಲದೇ ದೂರು ದಾಖಲಿಸುವುದು, ಪೊಲೀಸರು ಅವರ ಗಂಡನ ಮನೆಯವರನ್ನು ಜೈಲಿಗೆ ಅಟ್ಟುವುದು ಅವ್ಯಾಹತವಾಗಿ ನಡೆಯುತ್ತಲೇ ಸಾಗಿತು.

ಈ ಪ್ರಕರಣದ ತನಿಖೆ ನಡೆದು ಕೇಸು ದಾಖಲು ಮಾಡಿರುವುದು ಸುಳ್ಳು ಎಂದು ಗೊತ್ತಾಗುವ ಹೊತ್ತಿಗೆ ಗಂಡ ಹಾಗೂ ಆತನ ಮನೆಯವರು ಜೈಲಿನಲ್ಲಿ ನೋವು ಅನುಭವಿಸಿದ ಉದಾಹರಣೆಗಳು ಲೆಕ್ಕಕ್ಕಿಲ್ಲ.  ಅಮಾಯಕರು ಕೂಡ ಸೆರೆಮನೆವಾಸ ಅನುಭವಿಸಿ ಪಟ್ಟ ಸಂಕಷ್ಟ ಅಷ್ಟಿಷ್ಟಿಲ್ಲ.

ಆದರೆ ನಂತರ ಕಾನೂನು ಬದಲಾಯಿತು. ಹೆಣ್ಣುಮಕ್ಕಳು ಕಾಯ್ದೆಯ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಹಲವು ಪ್ರಕರಣಗಳಲ್ಲಿ ಕೋರ್ಟ್‌ ಗಮನಕ್ಕೆ ಬಂದ ಕಾರಣ, ಸುಪ್ರೀಂ ಕೋರ್ಟ್‌ ‘ದೂರು ದಾಖಲಾದ ತಕ್ಷಣ ಗಂಡನ ಮತ್ತು ಆತನ ಕುಟುಂಬದವರನ್ನು ವಿಚಾರಣೆಯಿಲ್ಲದೇ ಬಂಧಿಸಬಾರದು’ ಎಂದು ಆದೇಶ ನೀಡಿತು. ಅದಾದ ನಂತರ ದೂರು ದಾಖಲಾಗುವ ಸಂಖ್ಯೆ ಕಮ್ಮಿಯಾಗುತ್ತ ಬಂತು. ಆದರೆ, ಈ ಕಾಯ್ದೆಯ ಆರಂಭದ ದಿನಗಳಲ್ಲಿ ಕೋರ್ಟ್‌ನಲ್ಲಿ ದಾಖಲಾದ ಒಂದು ಪ್ರಕರಣ, ನನ್ನ ವೃತ್ತಿ ಜೀವನದಲ್ಲಿ ಎಂದಿಗೂ ಮರೆಯಲಾಗದಂಥದ್ದು.

ADVERTISEMENT

ದಂಪತಿ ನಡುವೆ ಹೊಂದಾಣಿಕೆ ಇದ್ದರೆ ಎಲ್ಲ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಬಹುದು. ಪ್ರತಿಷ್ಠೆ ಮತ್ತು ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಸಮಸ್ಯೆ ಹೇಗೆ ಬಿಗಡಾಯಿಸಿ ದುರಂತಮಯ ಅಂತ್ಯ ಕಾಣುತ್ತದೆ ಎಂಬುದನ್ನು ಈ ಘಟನೆ ತೋರಿಸಿಕೊಡುತ್ತದೆ.

ಈಗ ಕಸ-ಗಿಡಗಂಟಿಗಳಿಂದ ತುಂಬಿ ನಲುಗುತ್ತಿರುವ ಧಾರವಾಡದ ಈ ವಾಡೆ ಒಂದು ಕಾಲದಲ್ಲಿ ವೈಭವದಿಂದ ಮೆರೆಯುತ್ತಿತ್ತು. ಶ್ರೀಮಂತ ಮರಾಠಿ ಕುಟುಂಬವೊಂದು ಇಲ್ಲಿ ನೆಲೆಸಿತ್ತು. ವಾಸು-ಲಕ್ಷ್ಮಮ್ಮ ದಂಪತಿ, ಮಗ ಸುಂದರ್‌ ಇದ್ದರು. ಮಡಿ-ಮೈಲಿಗೆ, ಪೂಜೆ-ಪುನಸ್ಕಾರ ಎಂದುಕೊಂಡು ಬದುಕುವ ಸಂಪ್ರದಾಯಸ್ಥ ಕುಟುಂಬ ಇದು.

ಸುಂದರ್‌, ತಮಗಿದ್ದ ಒಬ್ಬನೇ ಮಗ ಎಂಬ ಕಾರಣಕ್ಕೆ ಸ್ವಲ್ಪ ಅತಿಯಾದ ಮುದ್ದಿನಿಂದ ಬೆಳೆಸಿದ್ದರು ವಾಸು ದಂಪತಿ. ಮುಗ್ಧನಂತೆ ಬೆಳೆದಿದ್ದ ಆತನಿಗೆ ವ್ಯವಹಾರ ಜ್ಞಾನ ಸ್ವಲ್ಪ ಕಮ್ಮಿಯೇ ಇತ್ತು. ವಿದ್ಯಾಭ್ಯಾಸವೂ ಸರಿ ತಲೆಗೆ ಹತ್ತಲಿಲ್ಲ. ಅಂತೂ ಇಂತೂ ಖಾಸಗಿ ಕಂಪನಿಯೊಂದರಲ್ಲಿ ಸಣ್ಣದೊಂದು ಸೇಲ್ಸ್‌ಮ್ಯಾನ್‌ ಉದ್ಯೋಗ ಕೊಡಿಸಿದರು ವಾಸು.

ಸುಂದರ್‌ ಮದುವೆ ವಯಸ್ಸಿಗೆ ಬರುತ್ತಿದ್ದಂತೆಯೇ ಅವನ ಮದುವೆ ಮಾಡಲು ಅಪ್ಪ-ಅಮ್ಮ ಯೋಚಿಸಿದರು. ಲಕ್ಷ್ಮಮ್ಮ ಅವರಿಗೆ ಮಾಡರ್ನ್‌ ಹುಡುಗಿಯನ್ನು ಸೊಸೆ ಮಾಡಿಕೊಳ್ಳಬೇಕೆಂಬ ಆಸೆ. ಕೊನೆಗೂ ಅಂಥದ್ದೇ ಹುಡುಗಿ ಸೌಮ್ಯಾಳನ್ನು ಸೊಸೆಯಾಗಿ ತಂದುಕೊಂಡರು.

ಮದುವೆಯಾಗಿ ವರ್ಷವಾಗಿರಲಿಲ್ಲ. ಆಗಲೇ ದಾಂಪತ್ಯ ಏರುಪೇರಾಗತೊಡಗಿತು. ಸುಂದರ್ ಸೇಲ್ಸ್‌ಮ್ಯಾನ್‌ ಆಗಿದ್ದರಿಂದ ಮಾರಾಟ ವ್ಯವಹಾರಕ್ಕೆಂದು 10-15 ದಿನ ಊರೂರು ಸುತ್ತುತ್ತಿದ್ದ. ಇದರಿಂದ ದಂಪತಿ ಒಟ್ಟಿಗೆ ಇರಲು ಆಗಲಿಲ್ಲ. ಸೌಮ್ಯಾಳಿಗೆ ಇದು ತುಂಬಾ ಹಿಂಸೆ ಎನಿಸತೊಡಗಿತು. ಅದಕ್ಕಾಗಿ ಆಕೆ ಬೇಸರ ಕಳೆಯುವ ಸಲುವಾಗಿ ತನ್ನ ಸ್ನೇಹಿತರ ಜೊತೆ ತಿರುಗಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ವೇಳೆ ಕಳೆಯುವುದು ಮಾಡತೊಡಗಿದಳು. ಸೊಸೆಯ ಈ ಸ್ವಭಾವದಿಂದ ಸುಂದರ್‌ನ ತಾಯಿ ಲಕ್ಷ್ಮಮ್ಮ ಅವರಿಗೆ ರೇಗಿ ಹೋಯಿತು. ಮಾಡರ್ನ್‌ ಸೊಸೆಯೇ ಬೇಕು ಎಂದು ಸೌಮ್ಯಾಳನ್ನು ಆಯ್ಕೆ ಮಾಡಿದ್ದ ಲಕ್ಷ್ಮಮ್ಮ ಅವರಿಗೆ ಸೊಸೆಯ ಮಾಡರ್ನ್‌ ಡ್ರೆಸ್‌ಗಳು, ಗಂಟೆಗಟ್ಟಲೆ ಅವರಿವರ ಜೊತೆ ತಿರುಗಾಡುವುದು, ಮೊಬೈಲ್‌ನಲ್ಲಿ ಹರಟುತ್ತಾ ವಾಸ್ತವದ ಪರಿವೆ ಇಲ್ಲದೆ ಕಾಲಕಳೆಯುವುದು... ಇವೆಲ್ಲಾ ಸಹಿಸಲು ಆಗಲಿಲ್ಲ. ಸೊಸೆಯ ಬಗ್ಗೆ ವಿಪರೀತ ಕೆಂಡ ಕಾರಲು ಶುರುವಿಟ್ಟುಕೊಂಡರು.

ಮಗ ಮನೆಗೆ ಬರುವುದನ್ನೇ ಕಾಯುತ್ತಿದ್ದ ಲಕ್ಷ್ಮಮ್ಮ, ಸೊಸೆ ಸೌಮ್ಯಾಳ ವಿರುದ್ಧ ಚಾಡಿಹೇಳತೊಡಗಿದರು. ಅಡುಗೆ ಮಾಡಲು ಬರುವುದಿಲ್ಲ. ಹೊತ್ತಿಗೆ ಸರಿಯಾಗಿ ಚಹಾ, ಊಟ ಕೊಡುವುದಿಲ್ಲ ಎನ್ನುವುದರಿಂದ ಹಿಡಿದು ಇದ್ದದ್ದು, ಇಲ್ಲದ್ದೂ ಎಲ್ಲವನ್ನೂ ಸೇರಿ ಮಗನ ಬಳಿ ದೂರತೊಡಗಿದಳು. ತನ್ನ ಗಂಡನ ಬಳಿ ಚಾಡಿ ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದ ಸೌಮ್ಯಾ, ಅತ್ತೆಯ ವಿರುದ್ಧ ಗಂಡನ ಕಿವಿ ತುಂಬತೊಡಗಿದಳು. ಒಟ್ಟಿನಲ್ಲಿ ತಾಯಿ ಹಾಗೂ ಹೆಂಡತಿಯ ನಡುವೆ ‘ಮುಗ್ಧ’ ಸುಂದರ್‌ ತತ್ತರಿಸಿಹೋದ.

ಹೀಗೆ ಎರಡು ವರ್ಷ ಆಗುತ್ತಾ ಬಂತು. ದಿನಗಳೆದಂತೆ ಅತ್ತೆ-ಸೊಸೆಯ ಸಂಬಂಧ ಹದಗೆಡುತ್ತಲೇ ಹೋಯಿತೇ ವಿನಾ ಸುಧಾರಿಸಲಿಲ್ಲ. ದಿನವೂ ಕತ್ತಲಾಗುತ್ತಿದ್ದಂತೆ ಹೆಂಡತಿ ಸೌಮ್ಯಾಳ ಆಲಾಪ ಶುರುವಾಗುತ್ತಿತ್ತು. ‘ಕುಂತ್ರ ಕುಂತ್ಯಾಕ, ನಿಂತ್ರ ನಿಂತ್ಯಾಕ ಅನ್ನುತ್ತಾರೆ. ಅಡಗಿ ಹೆಂಗಮಾಡಿದರೂ ಅದಕ್ಕೊಂದು ಹೆಸರಿಡತಾರ. ಏನ ಮಾಡಿದ್ರೂ ಅವ್ರನ್ ಕೇಳೇ ಮಾಡಬೇಕು. ನನ್ನ ಕಂಡ್ರ ಸಿಡದ ಬೀಳತಾರ. ಹಿಂಗಾದ್ರ ಈ ಮನ್ಯಾಗ ನಾ ಹೆಂಗ ಬಾಳ್ವೆ ಮಾಡಬೇಕು’ ಎಂದು ಸೌಮ್ಯ ತನ್ನ ಸಂಕಟವನ್ನು ಸುಂದರ್‌ನ ಮುಂದೆ ತೋಡಿಕೊಳ್ಳುತ್ತಿದ್ದಳು. ‘ಅತ್ತಿ ಮಾಂವ ಹಂಗ ಅದಾರಂದ್ರ. ಗಂಡನಾದರೂ ಚೂಲೋ ಅದಾನಂತ ತಿಳಕೋಳಾಕ, ನೀವೂ ನನ್ನ ಪರ ಇಲ್ಲ. ಮದುವೆಯಾಗಿ ಎರಡು ವರ್ಷ ಆತು. ಒಡವೆ ವಸ್ತ್ರ ಹೋಗಲಿ ಒಂದು ಛಂದನ ಸೀರಿಸುದಾ ನೀವು ಕೊಡಿಸಿಲ್ಲ. ಒಂದ ದಿನಾನೂ ನನ್ನ ಹೊರಗ ಕರಕೊಂಡ ಹೋಗಿಲ್ಲ. ದುಡಿದ ದುಡ್ಡೆಲ್ಲ ತಂದು ನಿಮ್ಮ ಅವ್ವನ ಕೈಯಾಗ ಕೊಡುತ್ತೀರಿ. ಅವ್ರೀಗೆ ಪೆನ್‍ಷನ್ ಬರ್ತದ. ನನಗಂತ ನೀವು ಏನ ಮಾಡೀರಿ?’ ಎಂದು ಹೆಂಡತಿ ಅಳುತ್ತ ತನ್ನ ಸಂಕಟವನ್ನು ತೋಡಿಕೊಳ್ಳುತ್ತಿದ್ದಳು. ‘ನೀವಿಬ್ಬರು ಹಿಂಗ ಕಚ್ಚಾಡಿದರ ನಾನು ಮನೆಗೆ ಬರುವುದನ್ನೆ ಬಿಡುತ್ತೇನೆ’ ಎಂದು ಸುಂದರ್ ಮಗ್ಗಲು ಬದಲಿಸಿ ಮಲಗಿಕೊಳ್ಳುತ್ತಿದ್ದ.

(ಡಾ. ಮಲ್ಲಿಕಾರ್ಜುನ ಗುಮ್ಮಗೋಳ)

ಅತ್ತೆ-ಸೊಸೆ ಜಗಳ ಎಷ್ಟರಮಟ್ಟಿಗೆ ಹೋಯಿತು ಎಂದರೆ ಒಂದೇ ಮನೆಯಲ್ಲಿ ಎರಡು ಅಡುಗೆ ಕೋಣೆಗಳು ಹುಟ್ಟಿಕೊಂಡವು. ತಂದೆ–ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಗಂಡನ ಕೋಪ. ಗಂಡ ತಂದೆತಾಯಿ ಮಾತು ಕೇಳುತ್ತಾನೆ, ಅವರೊಂದಿಗೇ ಇರುತ್ತಾನೆ ಎಂದು ಸೌಮ್ಯಾಳ ಸಿಟ್ಟು. ವಿರಸಕ್ಕೆ ಕಾರಣಗಳು ಒಂದೇ ಎರಡೇ? ಅವಳು ಓಡುವ ಕುದುರೆ. ಇವನು ಅರಳಿ ಬತ್ತಿ...

ಒಂದೊಂದು ದಿನ ಜಗಳ ಬೀದಿಗೆ ಬಂದು ನೆರೆಹೊರೆಯವರು ಬಂದು ಬಿಡಿಸುವವರೆಗೆ ಹೋಗುತ್ತಿತ್ತು. ಅತ್ತೆ ಎನ್ನಿಸಿಕೊಂಡವಳು ಮನೆ ಎದುರಿಗೆ ಇರುವ ಕಟ್ಟೆಯಮೇಲೆ ಕುಳಿತು ಸೊಸೆಯ ಪುರಾಣವನ್ನೆಲ್ಲ ಬಣ್ಣ ಕಟ್ಟಿ ಗುರುತು ಪರಿಚಯವಿಲ್ಲದ ಜನರ ಮುಂದೆ ಹೇಳುತ್ತ ಕುಳಿತುಕೊಳ್ಳುತ್ತಿದ್ದಳು. ಸೊಸೆ ಮಹಿಳಾ ಸ್ವಸಹಾಯ ಸಂಘಕ್ಕೆ ಹೋದಾಗ ಓಣಿಯ ಎಲ್ಲ ಹೆಂಗಸರ ಮುಂದೆ ತನ್ನ ಅತ್ತೆಯ ಕಿರುಕುಳವನ್ನು ಕಥೆ ಮಾಡಿ ಹೇಳುತ್ತಿದ್ದಳು. ಓಣಿಯ ಹಿರಿಯರು, ಬಂಧು ಬಳಗದವರು, ಅವಳ ತವರು ಮನೆಯವರು ಆಗಾಗ ಬಂದು ಇವರ ಜಗಳ ಬಿಡಿಸಲು ಸಾಹಸಪಟ್ಟದ್ದೂ ಉಂಟು.

***

ಕೊನೆಗೂ ಅವರಿವರ ಮಾತು ಕೇಳಿದ ಸೌಮ್ಯಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದಳು. ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಅತ್ತೆ-ಮಾವಂದಿರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಾಗುತ್ತದೆ. ಅಲ್ಲಿಂದ ಶುರುವಾಯ್ತು ಕೋರ್ಟ್‌ ಅಲೆದಾಟ. ‌

ಅದೊಂದು ದಿನ ಏನು ಆಗಬಾರದೋ ಅದು ಆಗಿಯೇ ಹೋಯಿತು. ಇದ್ದಕ್ಕಿದ್ದಂತೆಯೇ ಒಂದುದಿನ ಅಡುಗೆ ಮನೆಯಲ್ಲಿದ್ದ ಸೌಮ್ಯಾಳ ಮೈಗೆ ಬೆಂಕಿ ತಗಲುತ್ತದೆ. ಅಕ್ಕಪಕ್ಕದವರೆಲ್ಲಾ ಸೇರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಬೇರೆ ಊರಿನಲ್ಲಿದ್ದ ವಾಸು ವಿಷಯ ತಿಳಿಯುತ್ತಲೇ ಗಾಬರಿಯಿಂದ ಆಸ್ಪತ್ರೆಗೆ ಧಾವಿಸುತ್ತಾನೆ. ಆದರೆ ಆತ ಬರುವಷ್ಟರಲ್ಲಿಯೇ ಸೌಮ್ಯ ಸಾವನ್ನಪ್ಪುತ್ತಾಳೆ. ತಮ್ಮ ಮಗಳ ಸಾವಿಗೆ ಅತ್ತೆ-ಮಾವನೇ ಕಾರಣ ಎಂದು ಸೌಮ್ಯಾಳ ಪೋಷಕರು ದೂರು ದಾಖಲಿಸುತ್ತಾರೆ. ಕೇಸು ದಾಖಲಾಗುತ್ತಿದ್ದಂತೆಯೇ ಪೊಲೀಸರು ಸುಂದರನ ವೃದ್ಧ ತಂದೆ-ತಾಯಿಯನ್ನು ಜೈಲಿಗೆ ಅಟ್ಟುತ್ತಾರೆ. ಹೆಂಡತಿ ಸತ್ತಾಗ ಸುಂದರ್‌ ಊರಲ್ಲಿ ಇರಲಿಲ್ಲ ಎಂಬ ಕಾರಣದಿಂದ ಬಂಧನದಿಂದ ಆತ ಹೊರಗೆ ಉಳಿಯುತ್ತಾನೆ.

ಇಂಥ ಕೇಸಿನಲ್ಲಿ ಬಿಡುಗಡೆ ಸಿಗುವುದು ಆಗ ತುಂಬಾ ಕಷ್ಟವಾಗಿದ್ದರಿಂದ ಸುಂದರ್‌ ಕೋರ್ಟ್‌, ಕಚೇರಿ ಎಂದೆಲ್ಲಾ ಅಲೆದಾಡಿ ಹೈರಾಣಾಗಿ ಹೋಗುತ್ತಾನೆ. ಅಪ್ಪ-ಅಮ್ಮನ ಬಿಡುಗಡೆಯೂ ಸಾಧ್ಯವಾಗದೇ ಅವರಿಗೆ ಶಿಕ್ಷಯಾಗುತ್ತದೆ. ಈ ಅಲೆದಾಟದಿಂದಾಗಿ ಕೆಲಸಕ್ಕೆ ಹೋಗದ ಕಾರಣ, ಸುಂದರನ ನೌಕರಿಯೂ ಹೋಗುತ್ತದೆ. ಇದ್ದ ಹಣವೆಲ್ಲಾ ಖರ್ಚಾಗಿ ಕೈ ಖಾಲಿಯಾಗುತ್ತದೆ. ಕೊನೆಗೆ ಸ್ಥಳೀಯ ಕಾರ್ಪೊರೇಟರ್‌ ಗಾಯಕ್‌ವಾಡ್‌ ಸಾಲ ಕೊಡಲು ಮುಂದೆ ಬಂದು ಒಂದಿಷ್ಟು ಸಹಾಯ ಮಾಡುತ್ತಾನೆ.

ಒಂದೆಡೆ ಸತ್ತುಹೋದ ಹೆಂಡತಿ, ಇನ್ನೊಂದೆಡೆ ಜೈಲುಪಾಲಾದ ಅಪ್ಪ-ಅಮ್ಮ. ಮಗದೊಂದೆಡೆ ಕೈಯಲ್ಲಿ ಉದ್ಯೋಗವಿಲ್ಲ, ದುಡ್ಡೂ ಇಲ್ಲ... ಎಲ್ಲವೂ ಬರಿದಾದಾಗ ಯಾರೂ ಹತ್ತಿರ ಬರುವುದಿಲ್ಲವಲ್ಲ...!

ಇವೆಲ್ಲವುಗಳಿಂದ ಸುಂದರ್‌ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಒಂದು ರೀತಿಯ ವಿಚಿತ್ರ ವರ್ತನೆಗಳು, ಸುಮ್ಮ ಸುಮ್ಮನೆ ನಗುವುದು, ಬೀದಿಯ ಬದಿಯಲ್ಲಿ ತಲೆ ಕೆರೆದುಕೊಳ್ಳುತ್ತ ನಿಲ್ಲುವುದು. ಊಟ, ಸ್ನಾನ ಯಾವುದರ ಪರಿವೆ ಇಲ್ಲದಂತೆ ತಿರುಗತೊಡುಗುತ್ತಾನೆ. ಕೊನೆಗೆ ಮಾನಸಿಕ ಆಸ್ಪತ್ರೆ ಸೇರುತ್ತಾನೆ. ಹೀಗೆ ವರ್ಷಗಳು ಉರುಳುತ್ತವೆ. ಅದೊಂದು ದಿನ ಸುಂದರ್‌ ಆತ್ಮಹತ್ಯೆಗೆ ಶರಣಾಗಿಬಿಡುತ್ತಾನೆ!

ಹಲವು ವರ್ಷ ಕಳೆದ ಮೇಲೆ ವಾಸು ದಂಪತಿ ಜೈಲಿನಿಂದ ಬಿಡುಗಡೆಯಾಗುತ್ತಾರೆ. ಇದ್ದ ಏಕೈಕ ಮಗನನ್ನು ಕಳೆದುಕೊಂಡ ಆ ಒಡಲು ಇನ್ನೂ ಆ ಆಘಾತದಿಂದ ಹೊರಬಂದಿರುವುದಿಲ್ಲ. ಆದರೆ ಜೈಲಿನಿಂದ ಹೊರಗೆ ಬಂದು ನೋಡುತ್ತಾರೆ... ಅವರಿದ್ದ ವಾಡೆ ಅಲ್ಲಿಯ ಕಾರ್ಪೋರೇಟರ್‌ ಗಾಯಕ್‌ವಾಡನ ಪಾಲಾಗಿರುತ್ತದೆ...! ದಿಗಿಲುಗೊಂಡ ವಾಸು ಈ ಬಗ್ಗೆ ವಿಚಾರಿಸಿದಾಗ, ಗಾಯಕ್‌ವಾಡ ಅವರನ್ನು ತನ್ನ ಹೆಸರಿಗೆ ಖರೀದಿ ಕರಾರು (Agreement of Sale) ಮಾಡಿಕೊಂಡಿರುತ್ತಾನೆ! ಅಂದರೆ ಆ ಬಂಗಲೇ ತನ್ನದೇ ಹೆಸರಿನಲ್ಲಿ ಇದೆ ಎಂಬಂತೆ ಛಾಪಾ ಕಾಗದಕ್ಕೆ(ಸ್ಟ್ಯಾಂಪ್‌ ಪೇಪರ್‌) ವಾಸು ದಂಪತಿಯ ಸಹಿ ಹಾಕಿಸಿಕೊಂಡಿರುತ್ತಾನೆ. ಅವರು ಜೈಲಿನಲ್ಲಿ ಇದ್ದಾಗ ಸುಂದರ್‌ಗೆ ಸಹಾಯ ಮಾಡುವ ನೆಪದಲ್ಲಿ ಛಾಪಾ ಕಾಗದ ತಯಾರಿಸಿ ಅದರಲ್ಲಿ ಎಲ್ಲರ ಸಹಿ ಮಾಡಿಸಿಕೊಂಡು ಬಿಟ್ಟಿರುತ್ತಾನೆ! ಜೈಲಿನಿಂದ ಬಿಡುಗಡೆಗೊಂಡರೆ ಸಾಕು ಎಂದುಕೊಂಡಿದ್ದ ದಂಪತಿ ಅದರ ಮೇಲೆ ಏನು ಬರೆದಿದ್ದಾರೆ ಎಂದು ನೋಡದೇ ಸಹಿ ಮಾಡಿರುತ್ತಾರೆ! ಈ ದಾಖಲೆಯನ್ನೇ ಕೋರ್ಟ್‌ನಲ್ಲಿ ಹಾಜರುಪಡಿಸಿ ಗೆದ್ದೂ ಬಿಟ್ಟಿರುತ್ತಾನೆ ಗಾಯಕ್‌ವಾಡ್‌.

ತಮ್ಮ ಸೊಸೆ ಸೌಮ್ಯಾಳ ತಂದೆ-ತಾಯಿಯ ಕಿವಿ ಊದಿ ಪೊಲೀಸ್‌ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಲು ಇದೇ ಗಾಯಕ್‌ವಾಡ್‌ ಹೇಳಿದ್ದು ಎಂಬ ಸತ್ಯ ಈ ದಂಪತಿಗೆ ಆ ನಂತರ ತಿಳಿಯುತ್ತದೆ. ಆದರೆ ಏನೂ ಮಾಡುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಗ್ಯಾಸ್‌ ಸ್ಟೌವ್‌ ಸಿಡಿದು ತಮ್ಮ ಸೊಸೆ ಸತ್ತಿದ್ದೇ ವಿನಾ, ಅವಳನ್ನು ಕೊಲೆ ಮಾಡುವಷ್ಟು ಕಟುಕರು ತಾವಲ್ಲ ಎಂದು ಅವರು ಸಾರಿ ಸಾರಿ ಗೋಳುತೋಡಿಕೊಂಡರೂ ಅವರ ಕಣ್ಣೀರಿಗೆ ಬೆಲೆ ಇಲ್ಲ. ಆದರೆ ‘ಕೊಲೆಗಡುಕರು’ ಎಂಬ ಹಣೆಪಟ್ಟಿ ಅವರಿಗೆ ಬಂದಿದೆ. ಮಗನೂ ಇಲ್ಲ, ಮನೆಯೂ ಇಲ್ಲದ ಪರಿಸ್ಥಿತಿ ಈ ದಂಪತಿಯದ್ದು.

ಯಾರದೋ ಮನೆಯ ಕಿಡಿಯನ್ನು ಬೆಂಕಿಮಾಡಿ ಅದರಲ್ಲಿ ಬೇಳೆ ಬೇಯಿಸಿಕೊಳ್ಳುವ ಗಾಯಕ್‌ವಾಡ್‌ನಂಥ ದುರ್ಜನರು ಇರುವಾಗ ಜನರು ಎಚ್ಚರದಿಂದ ಇರಬೇಕು. ನ್ಯಾಯಾಲಯಗಳು ಬಾಯಿಮಾತಿಗಿಂತ ಸಾಕ್ಷಿಪುರಾವೆಗಳನ್ನು ಮಾತ್ರ ನಂಬುತ್ತವೆ. ಕಣ್ಣೀರಾಗಲಿ, ಅಮಾಯಕತೆಯಾಗಲಿ ಪ್ರಕರಣವನ್ನು ಗೆಲ್ಲಿಸಿಕೊಡಲಾರವು.

ಹೆಸರುಗಳನ್ನು ಬದಲಾಯಿಸಲಾಗಿದೆ

(ಲೇಖಕರು: ನ್ಯಾಯಾಂಗ ಇಲಾಖೆ ಅಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.