ADVERTISEMENT

ಖರೇ ಸಬಲೀಕರಣ ಸಾಧಿಸುವ ಪರಿಯೆಂದರೆ...

ಮೃದು ಮಾತು ಹೆಣ್ಣೊಬ್ಬಳ ಒಡಲಾಳದ ದನಿ

ಮೃದುಲಾ
Published 28 ಫೆಬ್ರುವರಿ 2015, 19:30 IST
Last Updated 28 ಫೆಬ್ರುವರಿ 2015, 19:30 IST

ಭಾಳ ದಿನದ ಮ್ಯಾಲೆ ಟೀವಿ ನೋಡ್ಕೊಂತ ಕುಂತಿದ್ದೆ. ಕ್ರಿಕೆಟ್‌ ಮ್ಯಾಚು ನಡಿಯೂಮುಂದ ಒಂದು ಜಾಹೀರಾತು ಬಂತು. ಹುಡುಗೂರು ಅಳೂದಿಲ್ಲ ಅಂತ ಎಲ್ಲಾರೂ ಹುಡುಗನೊಳಗ ಗಂಡಸಿನ ಅಹಂ ತುಂಬ್ತಿದ್ರು. ಅಂವಾ ಬೆಳದು ದೊಡ್ಡಾಂವ ಆದಮ್ಯಾಲೆ ಹೆಂಡ್ತೀನ ಬಡೀತಾನ. ಅಳಬಾರದ ಹುಡುಗ ಅಳಸಬಹುದಾ? ಹುಡುಗೂರು ಅಳಸಬಾರದು... ಆ ಸಂಸ್ಕಾರನೂ ನಾವೇ ತುಂಬಬೇಕು ಅಂತ ಛಂದನ ಮಾಧುರಿ ದೀಕ್ಷಿತ್‌ ಹೇಳ್ತಿದ್ರ ಹಸಿ ಗ್ವಾಡ್ಯಾಗ ಹಳ್ಳ ನಟ್ಟಂಗ ಆ ಮಾತು ಗುಂಯ್‌ಗುಡ್ತಿತ್ತು. ಭಾಳತ್ತನಾ...

ಈ ಮಾರ್ಚ್‌ ತಿಂಗಳು ಬಂತಂದ್ರ ಸಾಕು ಮಹಿಳಾ ಸಬಲೀಕರಣದ ಬಗ್ಗೆ ಮಾತು, ಶಬ್ದ, ವಿಚಾರ ಎಲ್ಲಾನೂ ಧೋ ಅಂತ ಮಳೀ ಸುರದ್ಹಂಗ ಸುರೀತಾವ. ಹೆಣ್ಮಕ್ಕಳಿಗೆ ಓದಸ್ರಿ. ಹೆಣ್ಮಕ್ಳಿಗೆ ಬೆಳಸ್ರಿ. ಆರ್ಥಿಕವಾಗಿ ಸ್ವಾವಲಂಬಿಯಾಗಲಿ. ಸ್ವಂತ ನಿರ್ಧಾರ ತೊಗೊಲಿ. ಮಾರ್ಷಲ್‌ ಆರ್ಟ್‌ ಕಲೀಲಿ. ಸಮರ ಕಲೆ ಕಲತ್ರ ಸಾಕು, ಕೈ ಮಾಡ್ದೋರ ಕೈ ಮುರದು ಬರಲಿ... ಹಿಂತಾವ ಒಂದಲ್ಲ ಹತ್ತಲ್ಲ ನೂರಾರು ಸಲಹೆಗಳು.

ಆದ್ರ ಒಂದು ಕಡೆಯರೆ ಗಂಡಸ್ರಿಗೆ ಹೆಣ್ಮಕ್ಕಳನ್ನ ಗೌರವಸ್ರಿ, ಪ್ರೀತಿಯಿಂದ ಕಾಣ್ರಿ. ಗೌರವದಿಂದ ಆಗದೇ ಇದ್ರೂ ಹೀಗಳೆಯದೇ ಇರ್ರಿ ಅನ್ನೂದು ಹೇಳ್ಕೊಡಾಕ ಯಾಕ ಆಗೂದಿಲ್ಲ? ಯಾಕ ಹೇಳೂದಿಲ್ಲ?

ನಮ್ಮೊಳಗ ಬರೇ ಪುರುಷರು ಅಂದ್ರ ಪಾಳೇಗಾರಿಕೆಯ ಪ್ರಭುಗಳ ಪಳೆಯುಳಕಿ ಹಂಗ ಉಳದು ಬಿಟ್ಟಾರ. ಬರೇ ಅಹಂಕಾರ, ಬರೇ ಹಟಮಾರಿತನ... ಆದರ ನೆನಪಿರಲಿ, ಇವೆಲ್ಲ ಕೆಲವೇ ಕೆಲವು ಗಂಡಸರ ಗುಣಗಳು ಅಂತ. ಅವಗುಣ ಅಂದ್ರೂ ಅಡ್ಡಿ ಇಲ್ಲ.

ಮತ್ತೊಂದು ಜಾಹೀರಾತು... ಒಂದಲ್ಲ... ಎಲ್ಲವೂ ಅದನ್ನೇ ಹೇಳ್ತಾವ.. ಬೆಳ್ಳಗಾಗ್ರಿ ಬೆಳ್ಳಗಾಗ್ರಿ... ಖರೇ ಹೇಳ್ರಿ ನಾವೆಂದರೆ ನಮ್ಮಮ್ಮ, ನಮ್ಮಕ್ಕ, ನಮ್ಮಕ್ಕಳು ಖರ್ರಗದಾರ ಅನ್ನೂ ಕಾರಣಕ್ಕೇ ಪ್ರೀತಿ ಮಾಡದೇ ಇರ್ತೀವೇನು? ಮತ್ಯಾಕ...ಹುಡುಗ ಪ್ರೀತಿ ಮಾಡಾಕ ಬಿಳೀನೇ ಇರಬೇಕು, ತೆಳ್ಳಗೇ ಇರಬೇಕು ಅಂತ ತೋರಸ್ತಾರ?

ನಾವು ನಾವಿದ್ದಂಗ ಇರ್ತೀವಿ. ತೀರ ಮೊದಲ ಹಂತದೊಳಗ ನಮ್ಮ ಕಣ್ಣು, ಮೂಗು, ಕೂದಲು, ಬಣ್ಣ ಮುಖ್ಯ ಅನಸ್ತಾವ. ಆದ್ರ ಆಮೇಲೆ ನಮ್ಮ ಹೆಸರು ತೊಗೊಂಡಾಗ ಯಾರಿಗೂ ನಮ್ಮ ಕಣ್ಣು, ಬಣ್ಣ ನೆನಪಾಗೂದಿಲ್ಲ... ನಾವು ನೆನಪಾಗ್ತೀವಿ. ಆ ‘ನಾವು’ ಏನದೀವಿ ಅನ್ನೂದು ನಮಗ ಗೊತ್ತಿರಬೇಕು ಅಷ್ಟೆ.

ಹತ್ತು ಸೆಕೆಂಡ್‌ನಾಗ ಮಿಂಚಿನ್ಹಂಗ ಮಿಂಚಿ ಹೋಗುವ ಈ ಜಾಹೀರಾತು ಪ್ರಪಂಚ ಹೆಣ್ಮಕ್ಕಳನ್ನೇ ತಪ್ಪಾಗಿ ಗ್ರಹಿಸಿದ್ಹಂಗ ಐತಿ ... ಖರೇನೆ ಒಮ್ಮೊಮ್ಮೆ ಅಂತೂ ಸಿಟ್ಟು ನೆತ್ತಿಗೇರುಹಂಗ ಇರ್ತಾವ.

ಒಂದು ಹುಡುಗಿ ತನ್ನ ಪ್ರೇಮಿಯ ಜೊತಿಗಿದ್ದಾಗ ಅವರಪ್ಪ ಬರ್ತಾನ... ಅವಾಗ ಅಕಿ ಆ ಫೋನಿನ ಕಿಮ್ಮತ್ತು ಹೇಳ್ತಾಳ... ಇಡೀ ಕೌಟುಂಬಿಕ ಮೌಲ್ಯವನ್ನೇ ಕಾಸಿನ ಕಿಮ್ಮತ್ತು ಇರಲಾರದ ಹಂಗ ಮಾಡಿದ ಜಾಹೀರಾತು ಅದು.

ಅಗ್ದಿ ಸಶಕ್ತ ಮಹಿಳೆ ಅನ್ನೂಹಂಗ ತೋರಿಸುವ ಜಾಹೀರಾತುಗಳೇ ಭಾಳ ಕಡಿಮಿ ನೋಡ್ರಿ. ಒಮ್ಮೆ ಒಂದು ಜಾಹೀರಾತಿನೊಳಗ ಹೆಂಡ್ತಿ ಗಂಡನ ಬಾಸು... ಅಯ್ಯ ಅಂತ ಖುಷಿ ಪಡೂದ್ರೊಳಗೆ ಅಕಿ ಮನೀಗೆ ಹೋಗಿ ಅಡಗಿ ಮಾಡಿ, ಅವನಿಗೆ ಕಾಯುವ ಚಿತ್ರ... ಯಾಕ ಹಿಂಗ..?

ಕಾಯೂದು ತಪ್ಪು ಅಂತ ಹೇಳೂದಿಲ್ಲ, ಆದ್ರ ಆ ಹಳೆಯ ಚಿತ್ರಣಗಳಿಂದ ಹೊರಗ ಯಾಕ ಬರೂದಿಲ್ಲ ಅಂತ?

ಹೆಣ್ಮಕ್ಕಳ ಬಗ್ಗೆ ಹಿಂಗ ವಾದ ಮಾಡಿದ್ರ, ಅಗ್ದೀ ಪುರುಷ ದ್ವೇಷಿಯೇನು ಅನ್ನುವ ಸಂಶಯದಿಂದಲೇ ನೋಡ್ತಾರ್ರಿ. ಆದ್ರ ಅದೂ ನಮ್ಮಿಂದ ಆಗೂದಿಲ್ಲ. ಯಾಕಂದ್ರ ಯಾವಾಗಲೂ, ಯಾವ ಕಾಲದೊಳಗೋ ಒಬ್ಬ ಪುರುಷನ ಔದಾರ್ಯದ ನಿರ್ಣಯದಿಂದಲೇ ನಾವು ಇಷ್ಟು ಹೊರಗಬಂದು ಆತ್ಮವಿಶ್ವಾಸದಿಂದ ನಮ್ಮ ಅಸ್ಮಿತೆ ನಿರ್ಮಿಸಿಕೊಳ್ಳಾಕ ಸಾಧ್ಯ ಆಗಿದ್ದು. 

ಅಂಥ ಔದಾರ್ಯದ ವಿಸ್ತರಣೆ ಆಗಬೇಕಾಗೇದ. ಅವಕಾಶಗಳನ್ನು ಕೊಟ್ಟೋರು... ಸಹಸ್ಪರ್ಧಿಯಾಗೂದು ಇಷ್ಟ ಪಡೂದಿಲ್ಲ. ಇಂದಿರಾ ನೂಯಿಗೆ ಅವರಮ್ಮ ಪೆಪ್ಸಿಕೊ ಸಿಇಒ ಆಗಿರುವ ಸುದ್ದಿ ಪ್ರಸಾರ ಆಗೂಮುಂದ ಹಾಲು ತೊಗೊಂಬಾ ಹೋಗು ಅಂತ ಹೇಳಿದಷ್ಟೇ ಕಠಿಣ ಅದ ಈ ಸಮಾಜದೊಳಗ.

ADVERTISEMENT

ಇದೆಲ್ಲ ಒತ್ತಟ್ಟಿಗಿಡೂನು... ಈ ಜಾಹೀರಾತಿನ ನಡುವ ಬರುವ ಧಾರಾವಾಹಿಯೊಳಗರೆ ಒಂದು ಗಟ್ಟಿ ಪಾತ್ರ ಬರ್ತದೇನು? ಇಲ್ಲೇ ಇಲ್ಲ. ಬರೇ ಕುಹಕ, ವ್ಯಂಗ್ಯ, ಇರುವ ಪಾತ್ರಗಳು. ಇಲ್ಲಾಂದ್ರ ಕಣ್ಣೀರಾಗ ತೊಯ್ದು ತೊಪ್ಪಿಯಾಗಿರುವ ತ್ಯಾಗಮಯಿ ಪಾತ್ರಗಳು. ಇವೂ ಬ್ಯಾಸರ ಹುಟ್ಟಸ್ತಾವ.

ಖರೇವಂದ್ರೂ ಅಗ್ದಿ ಗಟ್ಟಿ ಇರುವ ಪಾತ್ರ ಅಂದ್ರ ಎಲ್ಲಾರೂ ಒಪ್ಕೊಳ್ಳೂದು ಅಮ್ಮಂದು. ಅಕಿ ಎಲ್ಲಾನೂ ಮಕ್ಕಳ ಸಲ್ಯಾಗ ತಡಕೋತಾಳ. ಮಕ್ಕಳ ಸಲ್ಯಾಗೇ ಎಲ್ಲಾನೂ ವಿರೋಧಸ್ತಾಳ. ಈ ಅಂತಃಕರಣ ಐತೆಲ್ಲ, ಅದು ಅಕಿಯೊಳಗಿನ ಅಂತಃಸತ್ವವೂ ಹೌದು. ಅದನ್ನು ಗೌರವಿಸಬೇಕು. ಆದ್ರ ಅದೇ ಅಮ್ಮ ಹೆಂಡ್ತಿಯೂ ಆಗಿದ್ಲು. ಆ ಪಾತ್ರದ ಬಗ್ಗೆ ಯಾಕ ಅವಗಣನೆ ಇರ್ತದ? ಅಲಕ್ಷ್ಯ ಇರ್ತದ?

ಒಬ್ಬರೂ ಜೀವ ಕೊಟ್ಟಾಕಿ, ಇನ್ನೊಬ್ರು ಜೀವನ ಹಂಚಕೊಂಡಾಕಿ. ಹಿಂಗನ್ನೂತ್ಲೆ ಇನ್ನೊಂದು ಜಾಹೀರಾತು ನೆನಪಾತು ನೋಡ್ರಿ. ಗಂಡ ಅಳುಮುಖ ಮಾಡ್ಕೊಂಡು ಸಂತೋಷ ಕೂಟದೊಳಗ ಇರ್ತಾನ. ಕಾರಣ ಕೇಳದಾಗ ಹೇಳ್ತಾನ, ಅಂವನ ಹೆಂಡತಿಯ ಬಿಸಿನೆಸ್‌ ಟ್ರಿಪ್‌ ಒಂದು ಕ್ಯಾನ್ಸಲ್‌ ಆಗಿದ್ದಕ್ಕ.... ಅಂತ

ಒಂದು ಸಾಂಗತ್ಯ ಸಾಕಾಯ್ತು ಅಂದ್ರ, ಬ್ಯಾಸರ ಆಯ್ತು ಅಂದ್ರ ಒಂದಷ್ಟು ಸಮಯ ಕೂಡಿ ಕಳಿಯೂದ್ರಿಂದ ಅದರೊಳಗ ಹೊಸತನ ತರಬಹುದು. ಉತ್ಸಾಹ ತುಂಬ ಬಹುದು.

ಆದ್ರ ಆ ಸಮಯ ಟೀವಿಯ ಮುಂದು ಕುಂತು ಇಂಥಾ ಕಾರ್ಯಕ್ರಮ, ಜಾಹೀರಾತು ನೋಡೂದ್ರಿಂದ ಸಾಧ್ಯ ಆಗ್ತದೇನು ಅನ್ನೂದು ಇವೊತ್ತಿನ ಪ್ರಶ್ನೆ.

ಹೆಣ್ಮಕ್ಕಳು ಈಗ ಯಾವುದ್ರೊಳಗೂ ಕಡಿಮಿ ಇಲ್ಲ. ಆದ್ರ ಆ ಅಹಂ ಅವರನ್ನು ಆವರಸಬಾರದು. ಗಂಡಸರೂ ಯಾವುದ್ರೊಳಗೂ ಹೆಚ್ಚಲ್ಲ, ಆ ಅಹಂಕಾರ ಅವರನ್ನು ಕಳೆದು ಹೋಗಬೇಕು. ಆ ಬದಲಾವಣೆ ಬಂದಾಗಲೇ ಖರೇ ಸಬಲೀಕರಣ ಆಗೂದು ನಮ್ಮ ಬಾಂಧವ್ಯಗಳು. ಅವಾಗ ಇಂಥ ಯಾವ ಸಮಸ್ಯೆಗಳೇ ಬರಲಿಕ್ಕಿಲ್ಲ...
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.