ADVERTISEMENT

ಟರ್ಕಿಯಿಂದ ಪಾಠ ಕಲಿಯಬೇಕಿದೆ ಇಸ್ರೇಲ್‌!

ಭಯೋತ್ಪಾದನೆಗೆ ಕಡಿವಾಣ

ಮುಸ್ತಾಫಾ ಅಕ್ಯೋಲ್, ದಿ ನ್ಯೂಯಾರ್ಕ್ ಟೈಮ್ಸ್
Published 26 ಜುಲೈ 2014, 19:30 IST
Last Updated 26 ಜುಲೈ 2014, 19:30 IST

ಇಸ್ರೇಲ್ ಹಾಗೂ ಗಾಜಾ ಪಟ್ಟಿಯಲ್ಲಿ ನಡೆದಿರುವ ಸಂಘರ್ಷ ಎರಡೂ ಕಡೆಯಲ್ಲೂ ಅಪಾರ  ಸಾವು, ನೋವಿಗೆ ಕಾರಣ ವಾಗಿದೆ. ಇದು ಈ ಎರಡೂ ರಾಷ್ಟ್ರಗಳಿಗೆ ಹೊಸದೇನೂ ಅಲ್ಲ! ಕಾದಾಟದಲ್ಲಿ ಇಸ್ರೇಲ್ ಈಗಾಗಲೇ ತನ್ನ 30 ಯೋಧರು ಮತ್ತು ಇಬ್ಬರು ನಾಗರಿಕರನ್ನು ಕಳೆದುಕೊಂಡಿದೆ. ಇಸ್ರೇಲ್ ವೈಮಾನಿಕ ದಾಳಿಗೆ ಗಾಜಾ ಪಟ್ಟಿಯ ನೂರಕ್ಕೂ ಹೆಚ್ಚು ಮುಗ್ಧ ಮಕ್ಕಳು ಸೇರಿದಂತೆ 600ಕ್ಕೂ ಹೆಚ್ಚು ಜನರು ಪ್ರಾಣ ತೆತ್ತಿದ್ದಾರೆ.  ಸಂಘರ್ಷ ಇನ್ನೂ ಕೊನೆಯಾಗಿಲ್ಲ. ಸಾವು, ನೋವಿನ ಸಂಖ್ಯೆ ಇನ್ನೂ ಹೆಚ್ಚುತ್ತಲಿದೆ.

ಪ್ರತಿ ಬಾರಿ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಮಧ್ಯೆ ಸಂಘರ್ಷ ನಡೆದಾಗ ‘ಇಸ್ರೇಲ್‌ಗೆ ತನ್ನನ್ನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕು ಇದೆ’  ಎಂದು ಪಾಶ್ಚಾತ್ಯ ರಾಷ್ಟ್ರಗಳು, ರಾಜಕಾರಣಿಗಳು ಸಮರ್ಥಿಸಿ ಕೊಳ್ಳುವುದು ಪರಿಪಾಠವಾಗಿದೆ. ಹಾಗಾದರೆ, ಪ್ಯಾಲೆಸ್ಟೀನ್ಗೆ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಲ್ಲವೇ? ಎಂಬ ಪ್ರಶ್ನೆಗೆ ‘ಇಸ್ರೇಲ್ ಒಂದು ರಾಷ್ಟ್ರ’ ಎಂಬ ಮಾರುತ್ತರ ಸಿದ್ಧವಿರುತ್ತದೆ. ಹಾಗಾದರೆ ಪ್ಯಾಲೆಸ್ಟೀನ್ ರಾಷ್ಟ್ರ ಅಲ್ಲವೇ? ಅದು ರಾಷ್ಟ್ರವಾಗಲು ಅಡ್ಡಿಯಾದವರು ಯಾರು? ಎಂಬ ಪ್ರಶ್ನೆ ಎದುರಾಗುತ್ತದೆ.

ಕಟ್ಟಾ ಸಂಪ್ರದಾಯವಾದಿಗಳು, ಸುಧಾರಣೆಯ ಪರವಿದ್ದ ಪ್ರಗತಿಪರರು, ಶಾಂತಿಪ್ರಿಯರು... ಹೀಗೆ ನಾನಾ ಸೈದ್ಧಾಂತಿಕ ಹಿನ್ನೆಲೆ ಇರುವ ಇಸ್ರೇಲ್ ಜನರು ದ್ವಿರಾಷ್ಟ್ರ ಸಿದ್ಧಾಂತವೊಂದೇ ಶಾಶ್ವತ ಪರಿಹಾರ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ, ಸಂಪ್ರದಾಯವಾದಿಗಳು ‘ಶಾಂತಿ ಮರು ಸ್ಥಾಪನೆ ಯತ್ನ ಆರಂಭಿಸುವ ಮುನ್ನ ಭಯೋತ್ಪಾದನೆ ಕೈಬಿಡುವಂತೆ ಪ್ಯಾಲೆಸ್ಟೀನ್ ತಾಕೀತು ಮಾಡಬೇಕು’ ಎಂಬ ಷರತ್ತು ಒಡ್ಡಿದ್ದಾರೆ. 

ರಕ್ತದ ಮಡುವಲ್ಲಿ ಅರಳಿದ ಶಾಂತಿ ಹೂ...
90ರ ದಶಕದಲ್ಲಿ ಇದೇ ಪರಿಸ್ಥಿತಿ ಪುಟ್ಟ ರಾಷ್ಟ್ರ ಟರ್ಕಿಯಲ್ಲೂ ಇತ್ತು. ಕುರ್ದ್ ಪ್ರತ್ಯೇಕತಾವಾದಿಗಳ ಗೆರಿಲ್ಲಾ ಯುದ್ಧದಿಂದ ಟರ್ಕಿ ನಲುಗಿ ಹೋಗಿತ್ತು. ದಶಕಗಳ ಕಾಲ ನಿರಂತರವಾಗಿ ನಡೆದ ಸಂಘರ್ಷದಲ್ಲಿ 40 ಸಾವಿರ ಜನರು ಜೀವ ತೆತ್ತಿದ್ದರು. ಆದರೆ, ಈಗ ಎರಡು ವರ್ಷಗಳಿಂದ ಅಲ್ಲಿ ಗುಂಡಿನ ಸದ್ದು ಸಂಪೂರ್ಣ ಸ್ತಬ್ಧವಾಗಿದೆ. ರಕ್ತದಿಂದ ತೊಯ್ದ ನೆಲದಲ್ಲಿ ಶಾಂತಿ ಅರಳಿದೆ. ಯುದ್ಧಪೀಡಿತ ಟರ್ಕಿಯಲ್ಲಿ ಶಾಂತಿ ಸ್ಥಾಪನೆ ಅಂದುಕೊಂಡಷ್ಟು ಸುಲಭದ ಮಾತಾಗಿರಲಿಲ್ಲ.

ಕುರ್ದ್‌ ಪ್ರತ್ಯೇಕತಾವಾದಿಗಳ ಭಯೋತ್ಪಾದನೆಗೆ  ಪರಿಹಾರ ಕಂಡುಕೊಳ್ಳಲು ಟರ್ಕಿ ಮುಂದೆ ಎರಡು ಆಯ್ಕೆ ಇದ್ದವು. ಒಂದು ರಾಜಕೀಯ ಪರಿಹಾರ, ಮತ್ತೊಂದು ಮಿಲಿಟರಿ ಬಲದ ಪ್ರಯೋಗ. ಸಂಪ್ರದಾಯವಾದಿ ಗಳು ಸೇನಾ ಕಾರ್ಯಾಚರಣೆಯ ಪ್ರಸ್ತಾಪ ಮುಂದಿಟ್ಟಿದ್ದರು. ಪ್ರಗತಿಪರರು ರಾಜಕೀಯ ಪರಿಹಾರಕ್ಕೆ ಪಟ್ಟು ಹಿಡಿದಿದ್ದರು. ಇವೆಲ್ಲಕ್ಕೂ ಮೊದಲು ಟರ್ಕಿ ತನ್ನ ರಾಷ್ಟ್ರವಾದಿ ಸಿದ್ಧಾಂತವನ್ನು ಕೈ ಬಿಡಬೇಕಿತ್ತು.

ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂಬ ಪ್ರಗತಿಪರರ ಸಲಹೆಯನ್ನು ತಳ್ಳಿ ಹಾಕಿದ್ದ ಸರ್ಕಾರ ಸೇನಾ ಕಾರ್ಯಾಚರಣೆ ಒಂದೇ ದಾರಿ ಎಂಬ ಮನಸ್ಥಿತಿಯಲ್ಲಿತ್ತು. ಅದಕ್ಕೆ ಪೂರಕವಾಗಿ ‘ಒಬ್ಬೊಬ್ಬರನ್ನಾಗಿ ಎಲ್ಲ ಭಯೋತ್ಪಾದಕರನ್ನು ಕೊಂದು ಹಾಕಿ ಬಿಡೋಣ’ ಎಂದು ಸೇನೆಯ ಜನರಲ್‌ ಸಲಹೆ ನೀಡಿದ್ದರು. 90ರ ದಶಕದಲ್ಲಿ ಟರ್ಕಿಯ ಬಹುತೇಕ ಉನ್ನತ ರಾಜಕೀಯ ನಾಯಕರು ಹಾಗೂ ಸೇನಾ ಮುಖ್ಯಸ್ಥರ ವಾದವೂ ಇದೇ ಆಗಿತ್ತು. ಇಂದು ಇದೇ ಪರಿಸ್ಥಿತಿ ಇಸ್ರೇಲ್‌ನಲ್ಲೂ ಇದೆ.

ಪ್ರತ್ಯೇಕತಾವಾದಿಗಳ ಕುರ್ದಿಸ್ತಾನ್ ವರ್ಕರ್‍ಸ್‌ ಪಾರ್ಟಿ (ಪಿ.ಕೆ.ಕೆ) ಹಾಗೂ ಟರ್ಕಿಯ ಮಿಲಿಟರಿ ನಡುವೆ 1984ರಲ್ಲಿ ಆರಂಭವಾದ ಯುದ್ಧ ಹತ್ತಾರು ವರ್ಷ ನಿರಂತರವಾಗಿ ನಡೆಯಿತು. ಅಪಾರ ಸಾವು, ನೋವುಗಳಾದವು. ಅನೇಕ ಮುಗ್ಧ ಜೀವಗಳನ್ನು ಈ ಯುದ್ಧ ಬಲಿ ಪಡೆಯಿತು. 
 
ಮುಗ್ಧರನ್ನು ಕೊಂದ ಸೇನೆ
ಟರ್ಕಿಯ ಸೇನೆ ಕುರ್ದ್‌ ಜನಾಂಗದ ಮೇಲೆ ಇನ್ನಿಲ್ಲದ ಹಿಂಸೆ ನಡೆಸಿತು. ಏಕಾಏಕಿ ಮೂರು ಸಾವಿರಕ್ಕೂ ಹೆಚ್ಚು ಕುರ್ದ್‌ ಜನರ ಗ್ರಾಮಗಳನ್ನು ಹೇಳ ಹೆಸರಿಲ್ಲದಂತೆ ಸಂಪೂರ್ಣವಾಗಿ ನೆಲಸಮಗೊಳಿಸಿತು. ಅನ್ಯಾಯವಾಗಿ ಸಾವಿರಾರು ಕುರ್ದ್‌ ಜನರನ್ನು ಕೊಂದು ಹಾಕಿತು. ‘ಸ್ವಭಾವತಃ ಜಗಳಗಂಟರು, ಒರಟರೂ ಹಾಗೂ ಸದಾ ಹಿಂಸೆಯನ್ನು ಸಂಭ್ರಮಿಸುವ ಹಟಮಾರಿ ಕುರ್ದ್‌ ಜನರಿಗೆ  ಬಂದೂಕಿನ ಹೊರತಾಗಿ ಬೇರೆ ಭಾಷೆ ಅರ್ಥವಾಗದು.

ಈ ಜನಾಂಗದ ಮಹಿಳೆಯರು ತಮ್ಮ ಮಕ್ಕಳು ಓದಿ ಡಾಕ್ಟರ್, ಎಂಜಿನಿಯರ್‌ ಅಥವಾ ವಕೀಲರಾಗಲಿ ಎಂದು ಬಯಸುವುದಿಲ್ಲ. ಬದಲಾಗಿ ಭಯೋತ್ಪಾದಕರಾಗಲಿ ಎಂದು ಹಾರೈಸುತ್ತಾರೆ. ಇಂತಹವರಿಗೆ ಬಂದೂಕಿನ ಗುಂಡುಗಳಲ್ಲದೆ ಬೇರೆ ಭಾಷೆ ಅರ್ಥವಾಗದು’ ಎಂದು ಸಂಪ್ರದಾಯವಾದಿಗಳು ಸೇನಾ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. ‘ಹಮಾಸ್’ ಪ್ರತ್ಯೇಕತಾವಾದಿಗಳ ಬಗ್ಗೆ ಇಸ್ರೇಲ್‌ನಲ್ಲೂ ಇದೇ  ರೀತಿಯ ಮಾತುಗಳು ಕೇಳಿ ಬರುತ್ತಿವೆ.

ದಬ್ಬಾಳಿಕೆಗೆ ಕೋವಿಯ ಉತ್ತರ
ಟರ್ಕಿ ಸೇನೆ ತಮ್ಮ ಜನಾಂಗದ ಮೇಲೆ ನಿರಂತರವಾಗಿ ನಡೆಸಿದ ದೌರ್ಜನ್ಯ ಮತ್ತು ಕ್ರೌರ್ಯ ಕುರ್ದ್‌ ಜನಾಂಗದ ಯುವಕರು ಕೋವಿಯನ್ನು ಕೈಗೆತ್ತಿಕೊಳ್ಳಲು ಮುಖ್ಯ ಕಾರಣ. ತಮ್ಮ ಸಂಸ್ಕೃತಿ, ಭಾಷೆ ಹಾಗೂ ಹಕ್ಕುಗಳ ಮೇಲೆ ದಬ್ಬಾಳಿಕೆಯನ್ನು ಕಂಡು ಅವರು ರೋಸಿ ಹೋಗಿದ್ದರು. ತಮ್ಮ ಆತ್ಮಗೌರವದ ಮೇಲೆ ಪದೇ ಪದೇ ನಡೆಯುತ್ತಿದ್ದ ದೌರ್ಜನ್ಯ ಅವರನ್ನು ಕಂಗೆಡಿಸಿತ್ತು. ಅದನ್ನು ವಿರೋಧಿಸುವ ಮಾರ್ಗವನ್ನು ಅವರು ಬಂದೂಕಿನಲ್ಲಿ ಕಂಡುಕೊಂಡರು.

ತಮ್ಮಿಂದ ಆದ ತಪ್ಪನ್ನು ಟರ್ಕಿಯ ಸರ್ಕಾರ ಮತ್ತು ಜನರು ಒಪ್ಪಿಕೊಂಡ ನಂತರವಷ್ಟೇ ಶಾಂತಿ ಮರುಸ್ಥಾಪನೆ ಪ್ರಕ್ರಿಯೆ ಸಾಧ್ಯವಾಯಿತು. ಈ ಕೀರ್ತಿ ಟರ್ಕಿಯ ಪ್ರಧಾನಿ ರೆಸೆಪ್‌ ತಯ್ಯಿಪ್‌ ಎರ್ಡೊಗಾನ್‌ ಹಾಗೂ ಜೈಲಿನಲ್ಲಿದ್ದ ಕುರ್ದ್‌ ಜನಾಂಗದ ನಾಯಕ, ಪಿ.ಕೆ.ಕೆ. ಪ್ರತ್ಯೇಕವಾದಿಗಳ ಗುಂಪಿನ ಮುಖ್ಯಸ್ಥ ಅಬ್ದುಲ್ಲ ಒಕಲಾನ್‌ ಅವರಿಗೆ ಸಲ್ಲಬೇಕು.

ಅದೇ ರೀತಿ ಇಸ್ರೇಲ್ ಕೂಡಾ ನಿಜವಾಗಿಯೂ ಶಾಂತಿ ಬಯಸುವುದಾದರೆ, ರಕ್ತಪಾತ  ಕೊನೆಗಾಣಿಸುವುದಾದರೆ ಮೊದಲು ತನ್ನಿಂದಾದ ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಟರ್ಕಿಗೆ  ಕುರ್ದಿಸ್ತಾನ್‌ ವರ್ಕರ್‍್ಸ ಪಾರ್ಟಿ (ಪಿ.ಕೆ.ಕೆ) ಸಮಸ್ಯೆಯಾದಂತೆ ಇಸ್ರೇಲ್‌ಗೆ ಉಗ್ರ ಸಂಘಟನೆ ‘ಹಮಾಸ್‌‘ ದೊಡ್ಡ ತಲೆ ನೋವಾಗಿದೆ. ಕುರ್ದ್‌ ಜನಾಂಗದಂತೆ ‘ಹಮಾಸ್‌’ ಕೂಡಾ ಗೆರಿಲ್ಲಾ ಯುದ್ಧದಲ್ಲಿ ಎತ್ತಿದ ಕೈ. 

ಇಸ್ರೇಲ್‌ ಇಡಬೇಕಿದೆ ಜಾಣ್ಮೆಹೆಜ್ಜೆ
ಅರಬ್ ರಾಷ್ಟ್ರಗಳ ಬೆಂಬಲದಿಂದ ‘ಹಮಾಸ್‌’ ಯೆಹೂದಿಗಳ ರಾಷ್ಟ್ರ ಇಸ್ರೇಲ್‌ ನಿರ್ನಾಮಕ್ಕಾಗಿ ನಿರಂತರವಾಗಿ ಕ್ಷಿಪಣಿ ದಾಳಿ ನಡೆಸುತ್ತಲೇ ಇದೆ. ವಿಧ್ವಂಸಕ ಕೃತ್ಯವನ್ನು ಹಮಾಸ್‌ ನಿಲ್ಲಿಸಬೇಕು. ಆದರೆ, ಇದು ಸಾಧ್ಯವೇ? ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ನಿಜವಾಗಿಯೂ ತಮ್ಮ ದೇಶಕ್ಕೆ ಏನಾದರೂ ಒಳ್ಳೆಯದನ್ನು ಮಾಡುವ ಮನಸ್ಸಿದ್ದರೆ ಟರ್ಕಿಯಿಂದ ಪಾಠ ಕಲಿಯುವುದು ಬಹಳಷ್ಟಿದೆ. ದಶಕಗಳ ಕಾಲ ಭಯೋತ್ಪಾದನೆಯಿಂದ ನಲುಗಿದ್ದ ಟರ್ಕಿಯಲ್ಲಿ ಈಗ ಶಾಂತಿ ನೆಲೆಸಿದೆ.

ಈ ದಿಸೆಯಲ್ಲಿ ಆ ರಾಷ್ಟ್ರದ ಪ್ರಧಾನಿ ಎರ್ಡೊಗಾನ್‌ ಪ್ರಯತ್ನ ಹಾಗೂ ಇಟ್ಟ ದಿಟ್ಟ ಹೆಜ್ಜೆ ನೆತನ್ಯಾಹು ಅವರಿಗೆ ಮಾದರಿಯಾಗಬೇಕು. ನೆತನ್ಯಾಹು ಪ್ಯಾಲೆಸ್ಟೀನ್‌ ಜತೆ ಶಾಂತಿ ಮಾತುಕತೆಗೆ ಮುಂದಾಗಬೇಕು. ಅಂದಾಗ ಮಾತ್ರ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ದಶಕಗಳಿಂದ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಸಾಧ್ಯ.

ಟರ್ಕಿಯಲ್ಲಿ ಸಂಘರ್ಷ ಕೊನೆಗಾಣಿಸಲು ಉದಾರವಾದಿಗಳು ನಡೆಸಿದ ನಿರಂತರ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಟರ್ಕಿಯ ಜನರು ತಮ್ಮ ಸರ್ಕಾರದ ತಪ್ಪನ್ನು ಮತ್ತು ಕುರ್ದ್ ಜನಾಂಗದವರ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ.  ಯಾರೂ ಹುಟ್ಟುತ್ತಲೇ ಭಯೋತ್ಪಾದಕರಾಗಿರುವುದಿಲ್ಲ. ಸರ್ಕಾರದ ನಿರಂಕುಶ ಆಡಳಿತದಲ್ಲಿ ನಲುಗಿದ ಜನಾಂಗದ ಮನಸ್ಥಿತಿ  ಹಾಗೂ ಅನುಭವಿಸಿದ ಯಾತನೆ ಅವರನ್ನು ಉಗ್ರರನ್ನಾಗಿ ಮಾಡುತ್ತದೆ ಎಂಬ ಸತ್ಯ ಟರ್ಕಿಗಳಿಗೆ ಅರಿವಾಗಿದೆ.

ಭಾವನಾತ್ಮಕವಾಗಿ ಗೆದ್ದ ಪ್ರಧಾನಿ
ಟರ್ಕಿಯ ಅಧ್ಯಕ್ಷ ಎರ್ಡೋಗಾನ್ ಎಂದೂ ಕುರ್ದ್‌ ಜನಾಂಗದವರಿಗೆ ‘ಭಯೋತ್ಪಾದಕರು’ ಅಥವಾ ‘ಉಗ್ರರು’ ಎಂಬ ಶಬ್ದಗಳನ್ನು ಪ್ರಯೋಗಿಸಲಿಲ್ಲ. ಬದಲಾಗಿ ‘ಯಾವ ತಾಯಿಯೂ ಇನ್ನು ಮುಂದೆ ಕಣ್ಣೀರಿಡುವುದು ಬೇಡ’ ಎಂದು ಮನವಿ ಮಾಡಿಕೊಂಡರು. ಅದು ಎಷ್ಟರ ಮಟ್ಟಿಗೆ ಕೆಲಸ ಮಾಡಿತೆಂದರೆ ಪ್ರಧಾನಿಯ ಈ ಭಾವನಾತ್ಮಕ ಮನವಿ ಎಲ್ಲರ ಮನ ತಟ್ಟಿತು. ಕುರ್ದ್‌ ನಾಯಕರೊಂದಿಗೆ ಪ್ರಧಾನಿ ನಡೆಸಿದ ಶಾಂತಿ ಮಾತುಕತೆ ಫಲ ನೀಡಿದವು.

ಪಿ.ಕೆ.ಕೆ., ಸರ್ಕಾರ ಹಾಗೂ ಸೇನೆಯ ಕಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾದರೂ ಅವರು ತಮ್ಮ ಪ್ರಯತ್ನ ಕೈಬಿಡಲಿಲ್ಲ. ಈ ದಿಸೆಯಲ್ಲಿ ತಾವು ಕ್ರಮಿಸುವ ಹಾದಿ ಕಠಿಣ ಎಂಬ ಸ್ಪಷ್ಟ ಅರಿವು ಎರ್ಡೋಗಾನ್ ಅವರಿಗಿತ್ತು. ಇವರ ಪ್ರಯತ್ನದ ನಡುವೆಯೂ ಟರ್ಕಿ ಮತ್ತು ಕುರ್ದ್‌ ಕಾದಾಟ ಮುಂದುವರೆದಿತ್ತು. ಕೊನೆಗೆ ದೀರ್ಘ ಸಂಘರ್ಷದ ಹಾದಿ ಸಾಕೆನಿಸಿ ರಾಜಿ ಹಾದಿಯತ್ತ ತಿರುಗಿತ್ತು.

ಗಟ್ಟಿ ನಿರ್ಧಾರ ಬೇಕು
ಟರ್ಕಿಯ ರೀತಿ ಇಸ್ರೇಲ್‌ ಕೂಡಾ, ಪರಿಸ್ಥಿತಿಯ ಗತಿಯನ್ನೇ ಬದಲಿಸುವಂತಹ ನಿರ್ಣಾಯಕ ನಿರ್ಧಾರಕ್ಕೆ ಬಾರದ ಹೊರತು ಪರಿಸ್ಥಿತಿ ಬದಲಾಗದು. ಇಸ್ರೇಲ್‌ ನಾಯಕರು, ರಾಜಕೀಯ ಮುಖಂಡರು, ನೀತಿ ನಿರೂಪಕರು ‘ಎಲ್ಲ ಭಯೋತ್ಪಾದಕರನ್ನೂ  ಕೊಲ್ಲಿ’ ಎಂಬ ಹಳೆಯ ಸಿದ್ಧಾಂತಕ್ಕೆ ಜೋತು ಬಿದ್ದರೆ 90ರ ದಶಕದಲ್ಲಿ ಟರ್ಕಿ ಅನುಭವಿಸಿದ್ದ ಶೋಚನೀಯ ಸ್ಥಿತಿಯಲ್ಲಿಯೇ ತೊಳಲಾಡಬೇಕಾಗುತ್ತದೆ. ಪ್ರತಿನಿತ್ಯ ರಕ್ತದಲ್ಲಿ ಕೈತೊಳೆಯಬೇಕಾಗುತ್ತದೆ.

ಒಬ್ಬ ಭಯೋತ್ಪಾದಕ ಸತ್ತರೆ ಆತನ ಅಣ್ಣ ಅಥವಾ ತಮ್ಮ, ಅಕ್ಕ ಅಥವಾ ತಂಗಿಯ ಮಗ ಸೇಡಿಗಾಗಿ ಬಂದೂಕು ಹಿಡಿಯುತ್ತಾರೆ. ಹಿಂಸೆಯ ಚಕ್ರ ಮತ್ತೆ ಮುಂದುವರಿಯುತ್ತದೆ. ಆಗ ಇಸ್ರೇಲಿಗಳಾಗಲಿ, ಪ್ಯಾಲೆಸ್ಟೀನ್‌ಗಳಾಗಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಘನತೆ, ಗೌರವದಿಂದ ಜೀವಿಸಲೂ ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.