ADVERTISEMENT

‘ತಪ್ಪು ಗ್ರಹಿಕೆಯಿಂದ ಗೊಂದಲವಾಯಿತು’

ಹೊನಕೆರೆ ನಂಜುಂಡೇಗೌಡ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
ಆರೋಗ್ಯ ಸಚಿವ ರಮೇಶ್‌ ಕುಮಾರ್‌
ಆರೋಗ್ಯ ಸಚಿವ ರಮೇಶ್‌ ಕುಮಾರ್‌   

* ನಾಲ್ಕೈದು ದಿನಗಳ ಹಗ್ಗಜಗ್ಗಾಟದಲ್ಲಿ ಸೋತವರು ಯಾರು? ಗೆದ್ದವರು ಯಾರು?

ತಪ್ಪು ಗ್ರಹಿಕೆಗಳನ್ನು ಬಿಟ್ಟರೆ ಯಾವ ಗಂಭೀರವಾದ, ಗಹನವಾದ ವಿಷಯಗಳೂ ಗೆಲ್ಲಲಿಲ್ಲ. ವೈದ್ಯರಲ್ಲಿ, ಕೂತು ಚರ್ಚೆ ಮಾಡುವ ವ್ಯವಧಾನ ವೈದ್ಯರಲ್ಲಿ ಇರಲಿಲ್ಲ. ಅವರ ಮನಸ್ಸಿನಲ್ಲಿ, ‘ಈ ಹೊತ್ತು ಮಸೂದೆ ಅಂಗೀಕಾರ ಆಯಿತೆಂದರೆ ನಾಳೆ ನಮ್ಮನ್ನು ಜೈಲಿಗೆ ಹಾಕಿಬಿಡ್ತಾರೆ. ನಾವ್ಯಾರೂ ವೃತ್ತಿ ಮಾಡೋಕೆ ಆಗೋಲ್ಲ. ಬ್ಲ್ಯಾಕ್‌ಮೇಲ್‌ ಮಾಡೋರು ಬಂದು ಆಸ್ಪತ್ರೆ ಮುಂದೆ ಕುಳಿತುಬಿಡ್ತಾರೆ. ಚಿಕಿತ್ಸೆ ಸಮಯದಲ್ಲಿ ಯಾರಾದರೂ ಸತ್ತರೆ ಬಿಲ್‌ ಕಟ್ಟದಿದ್ದರೂ ಶವ ಕೊಡಬೇಕಾಗುತ್ತೆ. ಹೀಗಾದರೆ ಆಸ್ಪತ್ರೆ ಬಾಗಿಲು ಮುಚ್ಚಬೇಕಾಗುತ್ತೆ’ ಎಂಬ ತಪ್ಪು ತಿಳಿವಳಿಕೆ ಇತ್ತು. ಇದು ಸಮಸ್ಯೆಗೆ ಕಾರಣವಾಯಿತು. ಶುಕ್ರವಾರದ ಚರ್ಚೆ ಆತಂಕವನ್ನು ದೂರ ಮಾಡಿದೆ.

* ಮಸೂದೆ ರೂಪಿಸುವ ಹಂತದಲ್ಲಿ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲವೇ?

ADVERTISEMENT

ಜೂನ್‌ 19, 2016ರಲ್ಲಿ ಮಂತ್ರಿಯಾದೆ. ಜುಲೈನಲ್ಲಿ ಬಿ.ಸಿ. ರಾಯ್‌ ಜನ್ಮ ದಿನವನ್ನು ವೈದ್ಯರ ದಿನವಾಗಿ ಆಚರಿಸುತ್ತಾರೆ. ಆ ಸಮಯದಲ್ಲಿ ಮೊದಲ ಬಾರಿಗೆ ಕೆಪಿಎಂಇ ಕಾಯ್ದೆ ಕುರಿತು ಪ್ರಸ್ತಾಪ ಮಾಡಿದೆ. ‘ಖಾಸಗಿ ಆಸ್ಪತ್ರೆಗಳ ವಿರುದ್ಧ ಬರುತ್ತಿರುವ ದೂರುಗಳ ನಿವಾರಣೆಗೆ ಕಾಯ್ದೆ ತಿದ್ದುಪಡಿ ಮಾಡಬೇಕಾಗಿದೆ’ ಎಂದು ಹೇಳಿದ್ದೆ. ಆನಂತರ ಈ ಉದ್ದೇಶಕ್ಕೆ ಸಮಿತಿ ಮಾಡಿದೆ. ಈ ಸಮಿತಿ ತನ್ನ ಕಾರ್ಯವ್ಯಾಪ್ತಿ ಮೀರಿ ಶಿಫಾರಸುಗಳನ್ನು ಮಾಡಿತು. ಅದು ತನ್ನ ಕಾರ್ಯವ್ಯಾಪ್ತಿ ಮೀರಿದಾಗ ವರದಿ ಒಪ್ಪುವ, ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ನಾವು ಮೂರನೇ ಮಾರ್ಗ ಆಯ್ಕೆ ಮಾಡಿಕೊಂಡೆವು. ಕರಡು ಮಸೂದೆ ಸಿದ್ಧಪಡಿಸುವಾಗಲೇ ವೈದ್ಯರು ನಮ್ಮನ್ನು ಭೇಟಿ ಮಾಡಿದ್ದರು. ಸಮಾಧಾನವಾಗೇ ಇದ್ದರು. ಆಮೇಲೆ ಯಾಕೊ ತಲೆಕೆಡಿಸಿಕೊಂಡರು. ಇದರಿಂದಾಗಿ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಗೆ ಮಸೂದೆ ಕಳುಹಿಸಲಾಯಿತು. ಅಲ್ಲೂ ವೈದ್ಯರ ಅಭಿಪ್ರಾಯಗಳನ್ನು ಕೇಳಿಯೇ ಮಸೂದೆ ರೂಪಿಸಲಾಯಿತು. ನಾವು ಏಕಪಕ್ಷೀಯ
ವಾಗಿ ಮಸೂದೆ ರೂಪಿಸಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡಿದ್ದೇವೆ.

* ಇಷ್ಟಾದ ಮೇಲೂ ಗೊಂದಲ ಸೃಷ್ಟಿಯಾಗಿದ್ದು ಏಕೆ?

ಸೋಮವಾರ ವಿಧಾನಮಂಡಲ ಅಧಿವೇಶನ ಆರಂಭವಾಯಿತು. ನನಗೆ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ಇತ್ತು. ಅಂದೇ ಮುಖ್ಯಮಂತ್ರಿ ಅವರನ್ನು ವೈದ್ಯರು ಭೇಟಿ ಮಾಡಿದರು. ‘ಆರೋಗ್ಯ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಆನಂತರ ನಿಮ್ಮೊಂದಿಗೂ ಚರ್ಚೆ ಮಾಡುತ್ತೇನೆ. ನಿಮ್ಮ ಜೊತೆ ಮಾತನಾಡದೆ ವಿಧೇಯಕ ಮಂಡನೆ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಭರವಸೆ ಕೊಟ್ಟರು. ಅವರ ವಾಗ್ದಾನದ ಬಳಿಕವಾದರೂ ಮುಷ್ಕರ ಕೈಬಿಡಬೇಕಿತ್ತು. ಅನವಶ್ಯಕವಾಗಿ ಸೇವೆಗಳನ್ನು ಬಂದ್‌ ಮಾಡಿ ಅವರೂ ತೊಂದರೆಗೆ ಸಿಕ್ಕಿಕೊಂಡರು. ನಮಗೂ ಕಷ್ಟ ಕೊಟ್ಟರು.

* ನೀವೂ ಮಾನಸಿಕವಾಗಿ ಜರ್ಜರಿತರಾಗಿದ್ದೀರಿ ಅಲ್ಲವೇ?

ಹೌದು, ನಾನು ಐದು ದಿನಗಳಿಂದ ಮೌನಕ್ಕೆ ಶರಣಾಗಿದ್ದೆ. ಮುಖ್ಯಮಂತ್ರಿಗಳು ಜನರ ಹಿತದೃಷ್ಟಿಯಿಂದ ‘ನಾವು ಮುಕ್ತ ಮನಸ್ಸಿನಿಂದ ಇರೋಣ. ವೈದ್ಯರನ್ನೂ ಕರೆದು ಮಾತನಾಡೋಣ. ಜನರ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಮಾಡೋಣ’ ಎಂದು ಹೇಳಿದ್ದರು. ಅವರ ಮಾತಿಗೆ ಸರಿ ಎಂದಿದ್ದೆ. ನಾವು ಸಂಯಮದಿಂದ ನಡೆದುಕೊಂಡ ಮೇಲೂ ಒಂದು ಕಡೆ ಮುಷ್ಕರ ಮಾಡ್ತಾರೆ, ಒಳಗಡೆ ಅಸೆಂಬ್ಲಿಯಲ್ಲಿ, ಕೌನ್ಸಿಲ್‌ನಲ್ಲಿ ಇದೇ ಪ್ರಶ್ನೆ ಕೇಳ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಜನ, ‘ಯಾವುದೇ ಕಾರಣಕ್ಕೂ ಹಿಂದೆ ಸರಿಯಬೇಡಿ’ ಎಂದು ನಮಗೆ ಹೇಳ್ತಾರೆ. ವಿರೋಧ ಪಕ್ಷಗಳ ಅನೇಕ ಶಾಸಕರು, ‘ಇದು ಒಳ್ಳೆಯ ಮಸೂದೆ ಜಾರಿಗೆ ತನ್ನಿ’ ಎಂದು ಬೆನ್ನು ತಟ್ಟುತ್ತಾರೆ. ಅವರದೇ ಪಕ್ಷದ ನಾಯಕರು ಬೇರೆ ನಿಲುವು ತಳೆಯುತ್ತಾರೆ. ಇಷ್ಟೆಲ್ಲಾ ಒತ್ತಡಗಳಲ್ಲಿ ಸಿಲುಕಿದ್ದೆ.

* ನಿಮ್ಮ ಪಕ್ಷದಲ್ಲೇ ನಿಮಗೆ ಬೆಂಬಲವಿಲ್ಲ. ಮಸೂದೆ ಸೋಲಿಸಲು ಪಿತೂರಿ ನಡೆದಿತ್ತು ಅಲ್ಲವೇ?

ಎಲ್ಲರೂ ಅಲ್ಲ, ಕೆಲವರು ಮಾತ್ರ. ಮಸೂದೆ ಬಂದರೆ ಏನೋ ಆಗಿಬಿಡುತ್ತದೆ ಎಂಬ ತಪ್ಪು ಗ್ರಹಿಕೆಯಿಂದ ವಿರೋಧ ಮಾಡಿದರು. ‘ವಿರೋಧ ಇರಲೇ ಇಲ್ಲ, ಇಡೀ ಕಾಂಗ್ರೆಸ್‌ ಪಕ್ಷ ನನ್ನ ಬೆನ್ನಿಗೆ ಇತ್ತು’ ಎಂದು ಹೇಳಿದರೆ ಆತ್ಮವಂಚನೆಯಾಗುತ್ತದೆ.

* ನಿಮ್ಮ ಪಕ್ಷದವರನ್ನು ಏಕೆ ಮನವೊಲಿಸುವ ಪ್ರಯತ್ನ ಮಾಡಲಿಲ್ಲ?

ಪ್ರಯತ್ನ ಮಾಡಿದ್ವಿ. ಯಾರು ಪಿತೂರಿ ಮಾಡ್ತಾರೆ ಎಂದು ತಿಳಿಯೋದು ಹೇಗೆ? ನನ್ನ ಮುಂದೆ ಯಾರೂ ಮಾತಾಡೋದಿಲ್ಲ. ಹಿಂದೆ ಮಾತಾಡ್ತಾರೆ. ನನಗೆ ಯಾರ ಮೇಲೆ ಅನುಮಾನವಿತ್ತೊ ಅವರನ್ನು ಕರೆಸಿ ಮಾತನಾಡಿದ್ದೆ. ‘ನಿನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಇಡೀ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಅಂದಿದ್ದರು ಮುಖ್ಯಮಂತ್ರಿ. ನಾಲ್ಕು ದಿನವಾದರೂ ಏನೂ ಆಗಲಿಲ್ಲ. ಈ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ಆಗದಿದ್ರೆ ಎಲ್ಲ ಪ್ರಯತ್ನ ನಿರರ್ಥಕ ಆಗಿಬಿಡುತ್ತೆ. 40 ವರ್ಷದ ಸಾರ್ವಜನಿಕ ಬದುಕಿನಲ್ಲಿ ಇಂಥದೊಂದು ಸಾಹಸಕ್ಕೆ ಕೈಹಾಕಿ ವಿಫಲನಾಗಿ ನಾನು ಮನೆಗೆ ಹೋದ್ರೆ ಬದುಕಿದ್ದೂ ಸತ್ತಂತೆ. ಈ ಪ್ರಸಂಗ ಎಲ್ಲಿ ಬಂದುಬಿಡುತ್ತೋ ಎಂಬ ಆತಂಕ ಶುರುವಾಗಿತ್ತು.

* ಮಸೂದೆಯನ್ನು ದುರ್ಬಲಗೊಳಿಸಿ ಮಂಡಿಸಲಾಗುತ್ತೆ ಎಂಬ ಅಭಿಪ್ರಾಯವಿದೆ?

ಏನೇನೂ ಬದಲಾವಣೆ ಮಾಡಿಲ್ಲ. ವಾಸ್, ಈಸ್‌ ಬದಲಾಗಬಹುದು ಅಷ್ಟೇ. ಕುಂದುಕೊರತೆ ಸಮಿತಿಗೆ ಜಿಲ್ಲಾ ಪಂಚಾಯತಿ ಸಿಇಒ ಮುಖ್ಯಸ್ಥರಾಗಬೇಕು ಎಂದಿತ್ತು. ಅವರ ಬದಲು ‘ಜಿಲ್ಲಾಧಿಕಾರಿ’ ಮಾಡಲಾಗುತ್ತಿದೆ. ದುಬಾರಿ ದರಕ್ಕೆ ದಂಡ ಹಾಕಲಾಗುತ್ತದೆ. ಹೀಗೆ ಸಣ್ಣಪುಟ್ಟ ಬದಲಾವಣೆ ಮಾಡಲಾಗುತ್ತಿದೆ. 2007ರ ಕಾಯ್ದೆಯಲ್ಲೇ ವೈದ್ಯ ಪದವಿ ಪಡೆಯದೆ ನೋಂದಣಿ ಮಾಡಿದರೆ ಜೈಲು ಶಿಕ್ಷೆ ಇದೆ. ಅದು ಮುಂದುವರಿಯುತ್ತೆ. ಕ್ರಿಮಿನಲ್‌ ದೂರು ಬಂದರೆ ಜಿಲ್ಲಾ ಎಸ್‌ಪಿಗೆ ಹೋಗುತ್ತೆ. ಪ್ರಾಸಿಕ್ಯೂಟರ್‌ ಜೊತೆ ಚರ್ಚಿಸಿ ಅವರು ತೀರ್ಮಾನ ಮಾಡುತ್ತಾರೆ. ಚಿಕಿತ್ಸೆಗೆ ಸಂಬಂಧಿಸಿದ ದೂರು ಸೂಕ್ತ ವೇದಿಕೆಗೆ ವರ್ಗಾವಣೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.