ADVERTISEMENT

ತಮಿಳುನಾಡಿಗೆ ಜಲಾಶಯ ಕೊಟ್ಟು ಬಿಡಿ!

ಎಂ.ಎನ್.ಯೋಗೇಶ್‌
Published 12 ಆಗಸ್ಟ್ 2017, 19:30 IST
Last Updated 12 ಆಗಸ್ಟ್ 2017, 19:30 IST
ಕೆ.ಎಸ್‌. ನಂಜುಂಡೇಗೌಡ, ಚಿತ್ರ: ಸಂತೋಷ್‌ ಚಂದ್ರಮೂರ್ತಿ
ಕೆ.ಎಸ್‌. ನಂಜುಂಡೇಗೌಡ, ಚಿತ್ರ: ಸಂತೋಷ್‌ ಚಂದ್ರಮೂರ್ತಿ   

ಕಾವೇರಿ ಕಣಿವೆಯ ನಾಲೆಗಳಲ್ಲಿ ನೀರು ಹರಿಯುತ್ತಿದ್ದರೂ ಕೃಷಿಗೆ ಬಳಸಿಕೊಳ್ಳಲಾಗದ ಅಸಹಾಯಕ ಸ್ಥಿತಿ ರೈತನದು. ಭತ್ತ, ಕಬ್ಬು, ರಾಗಿ ಬೆಳೆಯದಂತೆ ಸರ್ಕಾರ ಕಟ್ಟಪ್ಪಣೆ ಮಾಡಿರುವುದರಿಂದ ಹರಿಯುವ ನೀರನ್ನು ನೋಡುತ್ತಾ ಸುಮ್ಮನೆ ಕುಳಿತಿದ್ದಾನೆ. ಅತ್ಯಲ್ಪ ಮಳೆಯಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಾದೊಡನೆ ಸರ್ಕಾರ ಜಲಾಶಯಗಳ ಗೇಟು ತೆಗೆದು ತಮಿಳುನಾಡಿಗೆ ನೀರು ಬಿಟ್ಟಿದೆ.

‘ನಮಗೂ ನೀರು ಕೊಡಿ, ನಾಲೆ, ಕೆರೆ, ಕಟ್ಟೆ, ಕೊಳವೆ ಬಾವಿಗೆ ಜೀವ ಕೊಡಿ’ ಎಂದು ಕಾವೇರಿ ಕಣಿವೆ ಜಿಲ್ಲೆಗಳ ರೈತರು ಘೋಷಣೆ ಕೂಗಿದರು. ಈ ಹೋರಾಟಕ್ಕೆ ಮಣಿದ ಸರ್ಕಾರ ನಾಲೆಗಳಿಗೆ ನೀರು ಹರಿಸಿದೆ. ಆದರೆ... ಇಂತಹ ಸಂದಿಗ್ಧ ಸ್ಥಿತಿಯಲ್ಲಿ ‘ರೈತ ಸಂಘ ಹಾಗೂ ಹಸಿರು ಸೇನೆ’ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಕೆ.ಎಸ್‌.ನಂಜುಂಡೇಗೌಡ ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

*ನೀರು ಹರಿಯುತ್ತಿದ್ದರೂ ಬೆಳೆ ಬೆಳೆಯುವಂತಿಲ್ಲ. 30 ದಿನ ನೀವು ನಡೆಸಿದ ಹೋರಾಟದಿಂದ ರೈತರಿಗೆ ಸಿಕ್ಕಿದ್ದೇನು?
ರೈತ ಚಳವಳಿಗೆ ಬೆದರಿ ಸರ್ಕಾರ ನೀರು ಬಿಟ್ಟಿದೆ. ಆದರೆ ಕೆರೆ–ಕಟ್ಟೆ ತುಂಬಿಸಲು ಎಷ್ಟು ನೀರು ಬೇಕು, ಜನ–ಜಾನುವಾರುಗಳಿಗೆ ಕುಡಿಯಲು ಎಷ್ಟು ಬೇಕು, ನದಿಗೆ ಎಷ್ಟು ನೀರು ಹರಿಸಬೇಕು ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರವಿಲ್ಲ. ಹೈನು, ಬೆಳೆಗೆ ನೀರು ಕೊಡದಿದ್ದರೆ ಆಗುವ ಅನಾಹುತಗಳನ್ನು ಸರ್ಕಾರವೇ ಎದುರಿಸಬೇಕು.

ADVERTISEMENT

*ಕರ್ನಾಟಕ, ದೆಹಲಿಯ ಕುತುಬ್‌ ಮಿನಾರ್‌ ಎತ್ತರದ ಬೇಡಿಕೆ ಇಟ್ಟಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಕೆ.ಆರ್‌.ಎಸ್‌ ಜಲಾಶಯದಲ್ಲಿ ಅಷ್ಟು ನೀರು ಎಲ್ಲಿದೆ?
ಕರ್ನಾಟಕಕ್ಕೆ ಕುತುಬ್‌ ಮಿನಾರ್‌ ಬೇಡ. ಕೆ.ಆರ್‌.ಎಸ್‌ ಜಲಾಶಯದಲ್ಲಿ ಲಭ್ಯ ಇರುವ ನೀರು ಸಹಜ ನ್ಯಾಯಕ್ಕೆ ಅನುಗುಣವಾಗಿ ಹಂಚಿಕೆ ಆದರೆ ಸಾಕು. ಸುಪ್ರೀಂಕೋರ್ಟ್‌ ಬಗ್ಗೆ ನಮಗೆ ಗೌರವ ಇದೆ. ಆದರೆ, ಇತಿಹಾಸದ ಪುಟ ತಿರುಗಿಸಿ ನೋಡಿದರೆ, ತಕ್ಕಡಿ ನೆರೆಯ ರಾಜ್ಯದ ಕಡೆ ಸ್ವಲ್ಪ ಹೆಚ್ಚು ವಾಲಿರುವುದು ಗೋಚರವಾಗುತ್ತದೆ. ನೆಲ ಹಾಗೂ ಜಲದ ಬಗ್ಗೆ ಅರಿವಿಲ್ಲದ ನಮ್ಮ ರಾಜಕಾರಣಿಗಳೇ ಇದಕ್ಕೆ ಕಾರಣ. ಅದಕ್ಕಾಗಿ ‘ಕಾವೇರಿ ಸೆಲ್‌’ ರಚನೆಯಾಗಬೇಕು. ಕಾನೂನು ಹೋರಾಟಗಳನ್ನು ಈ ಸೆಲ್‌ ವತಿಯಿಂದಲೇ ನಡೆಸಬೇಕು. ನೆಲ,ಜಲದ ಮೇಲೆ ಅಭಿಮಾನ ಇರುವವರು, ನೀರಾವರಿ, ಕಾನೂನು ತಜ್ಞರು ಈ ಸೆಲ್‌ಗೆ ನೇಮಕವಾಗಬೇಕು.

*ಮಂಡ್ಯ ರೈತರು ಕಾವೇರಿ ನೀರನ್ನು ಬೇಕಾಬಿಟ್ಟಿ ಬಳಸುತ್ತಾರೆ ಎಂಬ ಆರೋಪ ಇದೆಯಲ್ಲಾ?
ಇದೊಂದು ಸುಳ್ಳು ಆರೋಪ. ಪ್ರತಿ ವರ್ಷ ತಮಿಳುನಾಡು ರೈತರು 340 ಟಿಎಂಸಿ ಅಡಿ ನೀರನ್ನು ವ್ಯರ್ಥವಾಗಿ ಸಮುದ್ರಕ್ಕೆ ಹರಿಸುತ್ತಾರೆ. ಆದರೂ ನೀರು ಬಿಡುವಂತೆ ನಮ್ಮನ್ನು ಪೀಡಿಸುತ್ತಾರೆ. ನಾವು ಮಂಡ್ಯ ಜನ ನೋಡುವುದಕ್ಕೆ ಒರಟರು ಅಷ್ಟೇ, ಮನಸ್ಸು ಮಾತ್ರ ಮೃದು.

*ಕನ್ನಂಬಾಡಿ ತಮ್ಮ ಜಹಗೀರು ಎನ್ನುವಂತೆ ನಮ್ಮ ರೈತರು ವರ್ತನೆ ಇದೆ ಎಂಬ ಟೀಕೆಗಳು ಇವೆಯಲ್ಲಾ?
ಎರಡು ತಿಂಗಳಿಂದ ತಮಿಳುನಾಡಿಗೆ ನೀರು ಹರಿದಿದೆ. ಆದರೆ, ಸರ್ಕಾರ ನಮಗೆ ನೀರು ಕೊಡುವುದಕ್ಕೆ ಮೀನಾಮೇಷ ಎಣಿಸುತ್ತಿದೆ. ಈಗ ಕಬ್ಬು– ಭತ್ತ ಬೆಳೆಯದಂತೆ ಷರತ್ತು ವಿಧಿಸಿ, ನೀರು ಬಿಟ್ಟಿದೆ. ಹೀಗಾದರೆ, ನಮಗೆ ಈ ಕನ್ನಂಬಾಡಿ ಏಕೆ ಬೇಕು. ಕಾವೇರಿ ಕೊಳ್ಳದ ನಮ್ಮ ಎಲ್ಲಾ ಜಲಾಶಯಗಳನ್ನು ತಮಿಳುನಾಡಿಗೆ ಕೊಟ್ಟು ಬಿಡಲಿ. ಬೇಕಾದಷ್ಟು ನೀರು ಅವರೇ ಹರಿಸಿಕೊಳ್ಳಲಿ. ಆಮೇಲಾದರೂ ಕರ್ನಾಟಕಕ್ಕೆ ಮಾನವೀಯ ನೆಲೆಯಲ್ಲಿ ನೀರು ಬಿಡಬಹುದೇನೋ. ಸದ್ಯ, ತಮಿಳು ನಾಡಿಗೆ ನೀರು ಬಿಡಲು ನಾವು ಜಲಾಶಯಗಳನ್ನು ಕಾಪಾಡಿಕೊಳ್ಳುವ ಸ್ಥಿತಿ ಇದೆ.

*1892, 1924ರ ಒಪ್ಪಂದಗಳು ಕರ್ನಾಟಕದ ಮರಣ ಶಾಸನವಾಗಿ ಇನ್ನು ಎಷ್ಟು ದಿನ ಉಳಿಯಬೇಕು?
ಟಿಪ್ಪು ಸುಲ್ತಾನ್‌ ಬ್ರಿಟಿಷರ ವಿರುದ್ಧ ಬಂಡೆದ್ದಿದ್ದ. ಹೀಗಾಗಿ ಮೈಸೂರು ಪ್ರಾಂತ್ಯ ಕಂಡರೆ ಬ್ರಿಟಿಷರಿಗೆ ಕೆಟ್ಟ ಕೋಪವಿತ್ತು. ಮೈಸೂರು ಪ್ರಾಂತ್ಯದ ಮೇಲೆ ಸೇಡು ತೀರಿಸಿಕೊಳ್ಳಲು ಬ್ರಿಟಿಷರು ಕೋಪದಲ್ಲಿ ಬರೆದಿಟ್ಟ ಒಪ್ಪಂದಗಳಿವು. ಇಡೀ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದ ಒಪ್ಪಂದಗಳು ಸತ್ತು ಹೋಗಿವೆ. ಇವೆರಡು ಒಪ್ಪಂದಗಳಿಗೆ ಮಾತ್ರ ತಮಿಳುನಾಡು ಜೀವ ತುಂಬುತ್ತಾ ಬಂದಿದೆ.

* ಕೆ.ಆರ್‌.ಎಸ್‌ ಜಲಾಶಯದ ಮೇಲೆ ರೈತರು ಹೆಚ್ಚು ಅವಲಂಬಿತರಾದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಭಿಪ್ರಾಯವಿದೆ. ಏಕೆ ಪರ್ಯಾಯ ಚಿಂತನೆಗಳನ್ನು ಮಾಡಿಲ್ಲ?
ಹೌದು, ಪರ್ಯಾಯವಾಗಿ ಚಿಂತಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಬದುಕಿಲ್ಲ. ಇಷ್ಟು ದಿನ ನಮ್ಮ ಜೀವನ ನಿಂತಿದ್ದೇ ಕಾವೇರಿ ಮೇಲೇ. ಅದಕ್ಕಾಗಿ ನಮ್ಮ ನೂರಾರು ರೈತರು ಜೀವ ತೆತ್ತಿದ್ದಾರೆ.

*ನ್ಯಾಯಾಲಯದ ಹೊರಗೆ ಜಲವಿವಾದ ಇತ್ಯರ್ಥಕ್ಕೆ ಪರಿಹಾರ ಸೂತ್ರಗಳಿವೆಯೇ?
ರಾಷ್ಟ್ರೀಯ ಜಲ ನೀತಿಯೇ ಪರಿಹಾರ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳೂ ಸಮಾನವೆಂದು ಪರಿಗಣಿಸಿ, ನೀರು ಹಂಚುವ ರಾಷ್ಟ್ರೀಯ ಜಲನೀತಿ ಜಾರಿಯಾಗಬೇಕು.

*ಹೋರಾಟಗಾರರ ಮುಂದಿನ ನಡೆ?
ಸುಪ್ರೀಂ ಕೋರ್ಟ್‌, ಲಭ್ಯತೆ ಆಧಾರದ ಮೇಲೆ ನೀರು ಹಂಚುತ್ತದೆ ಎಂಬ ಆಶಾಭಾವನೆ ಇದೆ. ಇಲ್ಲದಿದ್ದರೆ ನಮ್ಮ ಹಕ್ಕಿನ ನೀರು ಉಳಿಸಿಕೊಳ್ಳಲು ದೊಡ್ಡ ಹೋರಾಟ ನಡೆಸುವುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.