ADVERTISEMENT

ನಾಟಕ ನೋಡಲು ಬಂದವರು...

ಗಣೇಶ ಅಮಿನಗಡ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST

ಮೈಸೂರು: ನಾಟಕ ನೋಡಲು ಬಂದವರನ್ನು ಭಾಷಣ ಕೇಳಲು ಕರೆತಂದರೆ? ಹಾಗೆ ಬಂದವರನ್ನು ದಬಾಯಿಸಿ ವಾಪಸು ಕರೆಸಿಕೊಂಡರೆ ಹೇಗಿರುತ್ತದೆ? ಇಂಥದ್ದೊಂದು ಘಟನೆ ಇಲ್ಲಿನ ಕಲಾಮಂದಿರದ ‘ಮನೆಯಂಗಳ’ದಲ್ಲಿ ನಡೆಯಿತು. 

ಅದು ಕನಕದಾಸರ ಜಯಂತಿ ಸಮಾರಂಭ. ಉದ್ಘಾಟಕರಾಗಿದ್ದ ಸಾಹಿತಿ ಕೆ.ಎಸ್‌.ಭಗವಾನ್‌ ಹಾಗೂ ಇತರ ಅತಿಥಿಗಳು ಅದಾಗಲೇ ಬಂದು ಕುಳಿತಿದ್ದರು. ಆದರೆ, ಬೆರಳೆಣಿಕೆಯಷ್ಟು ಜನ ಮಾತ್ರ ಬಂದಿದ್ದರು. ಕಾರ್ಯಕ್ರಮ ಆಯೋಜಿಸಿದ್ದ ‘ಕನ್ನಡ ಕಂದ’ ಅವರು ಕಲಾಮಂದಿರದತ್ತ ಹೋಗಿ, ಅಲ್ಲಿ ಪೌರಾಣಿಕ ನಾಟಕ ನೋಡಲು ಬಂದಿದ್ದ ಗ್ರಾಮೀಣ ಜನರನ್ನು ‘ಮನೆಯಂಗಳ’ಕ್ಕೆ ಕರೆತಂದರು.

ಇದಾದ ಹತ್ತು ನಿಮಿಷಗಳಲ್ಲಿಯೇ ಕೂಗೊಂದು ಕೇಳಿತು– ‘ನಾಟಕ ನೋಡಲು ಕರೆದುಕೊಂಡು ಬಂದರೆ, ಭಾಷಣ ಕೇಳಲು ಹೋಗಿದ್ದೀರಿ. ಅಲ್ಲಿ ಶಾಸಕ ಜಿ.ಟಿ.ದೇವೇಗೌಡ ಬಂದು ಕುಳಿತಿದ್ದಾರೆ. ನೀವು ಕೆಳಗಿಳಿದು ಬನ್ನಿ’ ಎಂಬ ಆವಾಜ್‌ ಕೇಳಿದ್ದೇ ತಡ ಅವರೆಲ್ಲ ಕೆಳಗಿಳಿದು ಹೊರಟರು.

ಆಗ ‘ಕನ್ನಡ ಕಂದ’ ಅವರು ‘ತಡೆಯಿರಿ, ಕಾರ್ಯಕ್ರಮ ಶುರು ಮಾಡೋಣ’ ಎಂದು ಅವರನ್ನು ಕುಳ್ಳಿರಿಸಿದರು. ಮತ್ತೆ ಐದು ನಿಮಿಷಕ್ಕೆ ನಾಟಕ ಸಂಘಟಕರಿಂದ ಕರೆ ಬಂತು. ಕೂಡಲೇ ಎಲ್ಲರೂ ಎದ್ದು ಹೋದರು. ಆಗ ಉಳಿದವರು ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಬಂದವರು ಮಾತ್ರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT