ADVERTISEMENT

ನಾನು ಈಗ ರಾಜಕಾರಣಿ ಅಷ್ಟೇ...

ಕೆ.ನರಸಿಂಹ ಮೂರ್ತಿ
Published 4 ನವೆಂಬರ್ 2017, 19:30 IST
Last Updated 4 ನವೆಂಬರ್ 2017, 19:30 IST
ಅನುಪಮಾ ಶೆಣೈ –ಚಿತ್ರ ಟಿ. ರಾಜನ್
ಅನುಪಮಾ ಶೆಣೈ –ಚಿತ್ರ ಟಿ. ರಾಜನ್   

ಅನುಪಮಾ ಶೆಣೈ, ದಿಟ್ಟತನ ಮತ್ತು ಜನಪರ ನಿಲುವಿನಿಂದಾಗಿ ಕೂಡ್ಲಿಗಿಯಲ್ಲಿ ಜನಮೆಚ್ಚುಗೆ ಪಡೆದಿದ್ದ ಮಾಜಿ ಡಿವೈಎಸ್ಪಿ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪಿ.ಟಿ. ಪರಮೇಶ್ವರನಾಯ್ಕ ಅವರೊಂದಿಗಿನ ವಾಗ್ವಾದ ಮತ್ತು  ಆನಂತರದ ವರ್ಗಾವಣೆ ವಿವಾದದಿಂದಾಗಿ, ‘ಭ್ರಮನಿರಸನಗೊಂಡು’ ರಾಜೀನಾಮೆ ನೀಡಿದವರು.  ಒಂದು ವರ್ಷ ತೆರೆಮರೆಯಲ್ಲೇ ಇದ್ದ ಅವರು ‘ಭಾರತೀಯ ಜನಶಕ್ತಿ ಕಾಂಗ್ರೆಸ್‌’ ಪಕ್ಷ ಸ್ಥಾಪಿಸಿ ರಾಜ್ಯದ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ. ‘80 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಂತೂ ಖಚಿತ’ ಎಂದಿರುವ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.


* ಹೊಸ ಪಕ್ಷ ಕಟ್ಟುವ ಸವಾಲನ್ನು ತೆಗೆದುಕೊಂಡಿದ್ದು ಏಕೆ?
ಹೊಸ ಪಕ್ಷ ಸವಾಲು ಹೌದು. ಈ ವರ್ಷದ ಜನವರಿವರೆಗೂ ರಾಜಕಾರಣಕ್ಕೆ ಬರುವ ಬಗ್ಗೆ ಆಲೋಚಿಸಿರಲಿಲ್ಲ. ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟಕ್ಕೆ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಬೆಂಬಲ ಕೊಡುವುದಿಲ್ಲ. ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೇ ಓಟು ಹಾಕಿದ್ದೆ. ಅದು ನನ್ನನ್ನೇ ನೋಯಿಸಿತು. ಹೀಗಾಗಿ ರಿಸ್ಕ್‌ ತೆಗೆದುಕೊಂಡಿದ್ದೇನೆ. ಯಾರಿಗೆ ಗೊತ್ತು ಇದು ನನ್ನ ಬೃಹತ್‌ ನೆಗೆತವೂ ಆಗಬಹುದು.


* ಪೊಲೀಸ್‌ ಅಧಿಕಾರಿಯಾಗಿದ್ದಾಗಿನ ವರ್ಚಸ್ಸು ಬಳಸಿ ರಾಜಕಾರಣಕ್ಕೆ ಬರುವುದು ಸುಲಭ ಅಲ್ಲವೇ?
ಶಂಕರ ಬಿದರಿ, ಬಿ.ಎಸ್‌.ಪಾಟೀಲರಂಥ ಅಧಿಕಾರಿಗಳು ಇಲಾಖೆಯಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆದು ನಿವೃತ್ತಿಯಾದವರು. ಆದರೆ, ನಾನು ಇಲಾಖೆಯಿಂದ ಅನ್ಯಾಯವಾಗಿದ್ದರಿಂದ ಹೊರಗೆ ಬಂದೆ. ನಾನು ಸ್ವಯಂನಿವೃತ್ತಿ ಪಡೆದಿಲ್ಲ. ರಾಜೀನಾಮೆ ನೀಡಿದ್ದೇನೆ. ನನಗೆ ಪಿಂಚಣಿಯೂ ಬರುತ್ತಿಲ್ಲ. ಈಗ ನಾನು ಪೊಲೀಸ್‌ ಮನಸ್ಥಿತಿಯಿಂದ ಹೊರಗೆ ಬಂದಿದ್ದೇನೆ. ನಾನೀಗ ರಾಜಕಾರಣಿ ಅಷ್ಟೇ, ಆದರೂ ನನ್ನ ಹಿಂದಿನ ಹುದ್ದೆಯ ಬಗ್ಗೆಯೇ ಯಾಕೆ ಕೆದಕುತ್ತೀರಿ ಎಂದು ಅರ್ಥವಾಗುತ್ತಿಲ್ಲ.

ADVERTISEMENT


* ಡಿವೈಎಸ್ಪಿ ಆಗಿದ್ದಾಗ ನೀವು ಗಳಿಸಿದ್ದ ವರ್ಚಸ್ಸು ಪಕ್ಷಕ್ಕೆ ಹೇಗೆ ನೆರವಾಗಬಹುದು?
ಅದನ್ನು ಮರೆತುಬಿಟ್ಟಿದ್ದೇನೆ. ಈಗ ಪಕ್ಷದ ಮಾತಷ್ಟೇ. ಆಗ ಜನಬೆಂಬಲದಿಂದ ಧೈರ್ಯ ದೊರಕಿತ್ತು. ಅದೇ ಕಾರಣಕ್ಕೆ ಮುಂದೆ ಹೆಜ್ಜೆ ಇಟ್ಟಿರುವೆ. ನನ್ನ ವರ್ಚಸ್ಸಿನ ಮೇಲೆ ಪಕ್ಷ ನಡೆಯುತ್ತದೆಯೇ ಎಂಬುದು ಶೀಘ್ರವೇ ಗೊತ್ತಾಗಲಿದೆ.

* ರಾಜಕೀಯ ಪಕ್ಷ ಬಿಟ್ಟು ಬೇರೆ ಸಾಧ್ಯತೆಗಳು ನಿಮಗೆ ಇರಲಿಲ್ಲವೇ?
ಬೇರೆ ಸಾಧ್ಯತೆಗಳು ಏನಿವೆ? ನೀವೇ ನನಗೆ ಹೇಳಿ. ಮೂರೂ ಪಕ್ಷಗಳ ಕುರಿತು ಭ್ರಮನಿರಸನ ಹೊಂದಿ, ಉಪೇಂದ್ರ ಅವರನ್ನು ಭೇಟಿ ಮಾಡಿ ನನ್ನ ಆಲೋಚನೆಗಳ ಬಗ್ಗೆ ಹೇಳಿದ್ದೆ. ಆದರೆ, ಅವರು ನನ್ನನ್ನು ಒಬ್ಬ ಶಾಸಕಿಯನ್ನಾಗಿಸಿ ಅವರ ಇಮೇಜ್‌ ಅನ್ನು ಬೆಳೆಸಿಕೊಳ್ಳಲು ಬಯಸಿದರು. ಮುಖ್ಯಮಂತ್ರಿ ವಾಚ್‌ ಹಗರಣ ಕುರಿತ ನನ್ನ ಆರೋಪಕ್ಕೆ ಉಪೇಂದ್ರ ಪ್ರತಿಕ್ರಿಯಿಸುತ್ತಾರೆ ಎಂದು ನಿರೀಕ್ಷಿಸಿದ್ದೆ. ಹಾಗಾಗಲಿಲ್ಲ, ಇದರಿಂದಾಗಿ ನಾನೇ ಪಕ್ಷ ಕಟ್ಟಿದೆ.

* ಡಿವೈಎಸ್ಪಿ ಆಗಿ ಮುಂದುವರಿದಿದ್ದರೆ ಭ್ರಮನಿರಸನ ಆಗುತ್ತಿರಲಿಲ್ಲವೇ?
ಆ ಹುದ್ದೆಯನ್ನು ಬಿಟ್ಟಿದ್ದೇ ಭ್ರಮನಿರಸನದಿಂದಾಗಿ. ವರ್ಗಾವಣೆ ಹಂತದಿಂದಲೇ ನಾನು ಮನನೊಂದೆ. ನಂತರದ ಬೆಳವಣಿಗೆಗಳಿಂದ ಹೆಚ್ಚು ಬೇಸರ ತರಿಸಿದವು. ನನ್ನ ಪರವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಕೂಡ್ಲಿಗಿಯ ಜನರಿಂದ ಆಗ ನನಗೆ ನ್ಯಾಯ ಸಿಕ್ಕಿತಷ್ಟೇ.


* ರಾಜಕಾರಣ ಹುಡುಗಾಟವೇ?
ಮೂರೂ ಪಕ್ಷಗಳು ರಾಜಕಾರಣವನ್ನು ಹುಡುಗಾಟವನ್ನಾಗಿಸಿವೆ ಎಂದು ನಿಮಗೆ ಅನ್ನಿಸುವುದಿಲ್ಲವೇ? ಅವುಗಳಲ್ಲಿ ಯಾವ ಪ್ರಬುದ್ಧ ರಾಜಕಾರಣ ಕಂಡುಬರುತ್ತಿದೆ? ಹೀಗಿರುವಾಗ ನನ್ನದು ‘ಹುಡುಗಾಟ’ ಎಂದು ಏಕೆ ಹೇಳುತ್ತಿದ್ದೀರಿ?


* ನಿಮ್ಮ ಪಕ್ಷದ ಓಟ್‌ ಬ್ಯಾಂಕ್‌ ಯಾವುದು?
ಎಲ್ಲ ಜನಸಾಮಾನ್ಯರೇ ನಮ್ಮ ಓಟ್‌ ಬ್ಯಾಂಕ್‌, ಜಾತಿ, ಧರ್ಮದ ಆಧಾರದಲ್ಲಿ ನಾವು ಮತದಾರರನ್ನು ಒಡೆದಿಲ್ಲ. ಕರ್ನಾಟಕದ ಜನ ಜಾತಿ, ಧರ್ಮ ನೋಡದೆ ಮತ ಹಾಕುವಷ್ಟು ಪ್ರಬುದ್ಧರಲ್ಲ ಎಂದು ನೀವೇಕೆ ಹೇಳುತ್ತೀರಿ? ನನ್ನಂತೆಯೇ ಭ್ರಮನಿರಸನ ಹೊಂದಿದ ಸಾವಿರಾರು ಮಂದಿ ಕರ್ನಾಟಕದಲ್ಲಿ ಇರಬಹುದಲ್ಲ? ಅವರೆಲ್ಲ ನನಗೇ ಮತ ಹಾಕುತ್ತಾರೆ.


* ಹೊಸ ಪಕ್ಷದ ಯೋಜನೆಗಳೇನು?
ತಕ್ಷಣಕ್ಕೆ ಅಭ್ಯರ್ಥಿಗಳ ಹುಟುಕಾಟ. ಭ್ರಷ್ಟಾಚಾರ, ಅಪರಾಧ ಹಿನ್ನೆಲೆಯುಳ್ಳವರಿಗೆ ಅವಕಾಶವಿಲ್ಲ. ಆ ಬಗ್ಗೆ ಬೆಂಗಳೂರಿನಲ್ಲಿ ಶೀಘ್ರ ಸುದ್ದಿಗೋಷ್ಠಿ ನಡೆಸಲಿದ್ದೇನೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಕ್ಷೇತ್ರದಲ್ಲಿ ಖಾಸಗೀಕರಣವನ್ನು ಸಂಪೂರ್ಣ ವಿರೋಧಿಸುವುದು ಪಕ್ಷದ ಧ್ಯೇಯೋದ್ದೇಶಗಳಲ್ಲಿ ಒಂದು.


* ನಿಮ್ಮ ಪಕ್ಷದ ಭವಿಷ್ಯವೇನು?
ಕೆಜೆಪಿ ಸ್ಥಾಪಿಸಿದ್ದ ಬಿ.ಎಸ್‌.ಯಡಿಯೂರಪ್ಪ ಅಲ್ಲಿಯೇ ಮುಂದುವರಿದಿದ್ದರೆ ಇನ್ನೂ ಬೆಳೆಯಬಹುದಿತ್ತು. ಬಿಎಸ್‌ಆರ್‌ ಕಾಂಗ್ರೆಸ್‌, ವಿಜಯ ಸಂಕೇಶ್ವರರ ಪಕ್ಷವೂ ಬಿಜೆಪಿಯಲ್ಲಿ ವಿಲೀನಗೊಂಡಿತು. ನಮಗೆ ಅಂಥ ಉದ್ದೇಶಗಳಿಲ್ಲ. ಚುನಾವಣೆಯನ್ನಷ್ಟೇ ನಾವು ಗುರಿಯಾಗಿಸಿಕೊಂಡಿಲ್ಲ. ನಂತರವೂ ಪಕ್ಷ ಮುಂದುರಿಯುತ್ತದೆ.


* ಪಕ್ಷಕ್ಕೆ ಹಣವನ್ನು ಎಲ್ಲಿಂದ ತರುತ್ತೀರಿ?
ಅದರ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ನೋಡೋಣ ಮುಂದೆ, ನಮ್ಮ ಉದ್ದೇಶಗಳಿಗೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೋ ನೋಡಬೇಕು.


* ಪಕ್ಷ ಸ್ಥಾಪನೆ ಕುರಿತ ಮೊದಲ ಸುದ್ದಿಗೋಷ್ಠಿಯಲ್ಲೇ ಮಾಧ್ಯಮದವರೊಂದಿಗೆ ವಾಗ್ವಾದ ಏಕೆ ನಡೆಯಿತು?
ನಿರ್ದಿಷ್ಟ ಪಕ್ಷದ ಬೆಂಬಲವುಳ್ಳ ವಾಹಿನಿಯ ವರದಿಗಾರರೊಬ್ಬರು, ಆಹ್ವಾನವಿಲ್ಲದಿದ್ದರೂ ಸುದ್ದಿಗೋಷ್ಠಿಯನ್ನು ಕೆಡಿಸಲೆಂದೇ ಬಂದಿದ್ದರು. ನನ್ನ ಕೆಲವು ಮಾತುಗಳು ಅವರ ಪಕ್ಷವನ್ನು ಗುರಿಯಾಗಿಸಿಕೊಂಡಿವೆ ಎಂದು ಅವರು ಭಾವಿಸಿದರು. ಅವರೊಂದಿಗೆ ಜಗಳವಾಡಲು ಇಷ್ಟವಿಲ್ಲದೆ ನಾನು ಎದ್ದುಹೋದೆ. ಆ ಸಂದರ್ಭದಲ್ಲಿ ಅವರ ವರ್ತನೆ ವಿರುದ್ಧ ಎಫ್‌ಐಆರ್ ದಾಖಲಿಸಬಹುದು. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಗೌರವವಿರುವುದರಿಂದ ಹಾಗೆ ಮಾಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.