ADVERTISEMENT

ನಿಮ್ಮ ಹೆಸರೇನು!?

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 16:24 IST
Last Updated 23 ಜುಲೈ 2017, 16:24 IST

ಬೆಂಗಳೂರು: ದಾವಣಗೆರೆಯಲ್ಲಿ ಡಿಸೆಂಬರ್‌ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ವಿಶ್ವ ಕನ್ನಡ ಸಮ್ಮೇಳನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ವಿಧಾನಸೌಧದಲ್ಲಿ ಸಾಹಿತಿಗಳು, ಬರಹಗಾರರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಚಂದ್ರಶೇಖರ ಪಾಟೀಲ, ಕುಂ. ವೀರಭದ್ರಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಹಿಂದಿ ಹೇರಿಕೆ, ಕನ್ನಡ ಧ್ವಜ, ಬರಗಾಲ ಎಲ್ಲವೂ ಈ ಸಭೆಯಲ್ಲಿ ಪ್ರಸ್ತಾಪವಾಯಿತು. ಸುಮಾರು ಎರಡು ತಾಸು ಚರ್ಚೆ ಬಳಿಕ ಒಬ್ಬೊಬ್ಬರಾಗಿ ಹೊರ ಬಂದರು. ದೃಶ್ಯ  ಮಾಧ್ಯಮಗಳ ವರದಿಗಾರರು ಮತ್ತು ಕ್ಯಾಮರಾಮನ್‌ಗಳು ಎಂದಿನಂತೆ ಹೊರಗೆ ಗಣ್ಯರ ಬೈಟ್‌ಗಾಗಿ ಕಾಯುತ್ತಿದ್ದರು. ಸಭಾಂಗಣದಿಂದ ಹೊರ ಬಂದ ಕೆಂಪು ಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಧರಿಸಿದ್ದ ಗಣ್ಯರೊಬ್ಬರ ಮುಂದೆ ಅವರು ಮೈಕ್‌ಗಳನ್ನು ಹಿಡಿದರು.

ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ‘ನಮ್ಮದು ಒಕ್ಕೂಟ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ರಾಜ್ಯಗಳು ಬಲಿಷ್ಠವಾಗಿದ್ದರೆ ದೇಶವೂ ಬಲಿಷ್ಠವಾಗಿರುತ್ತದೆ. ಎಲ್ಲ ಅಂಗಗಳೂ ಆರೋಗ್ಯವಾಗಿದ್ದರೆ ಮನುಷ್ಯ ಆರೋಗ್ಯವಾಗಿರುತ್ತಾನೆ’ ಎಂದು ವಿಶ್ಲೇಷಿಸಿದರು.

ADVERTISEMENT

ರಾಜ್ಯದ ಮೇಲೆ ಹಿಂದಿ ಹೇರುವುದನ್ನು ವಿರೋಧಿಸಿದರು. ಪ್ರತ್ಯೇಕ ಕನ್ನಡ ಧ್ವಜ ಇರಬೇಕೆಂದರು. ಅವರ ಮುಂದೆ ಮೂವರು ಮೈಕ್‌ಗಳನ್ನು ಹಿಡಿದಿದ್ದರು... ಎಲ್ಲ ಕೇಳಿದ ಮೇಲೆ ಅವರಲ್ಲೊಬ್ಬ ‘ನಿಮ್ಮ ಹೆಸರೇನು ಹೇಳಿ ಸಾರ್‌!?’ ಎಂದ...

‘ನನ್ನ ಹೆಸರು ಕುಂ. ವೀರಭದ್ರಪ್ಪ. ಕನ್ನಡ ಲೇಖಕ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ’ ಎಂದು ಹೇಳಿ ಅವರು ಮುಂದೆ ಹೊರಟರು. ಅವರ ಮಾತಿನಲ್ಲಿ ಕೋಪವಿತ್ತೋ, ವ್ಯಂಗ್ಯವಿತ್ತೋ ತಿಳಿಯಲಿಲ್ಲ ಕುಂ.ವಿ. ಅವರನ್ನು ಮಾತನಾಡಿಸಲು  ಸ್ವಲ್ಪ ದೂರದಲ್ಲಿ ನಿಂತಿದ್ದ ನಾನು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾಗಿ,  ಮಾತನಾಡಿಸದೆ ಮೆಲ್ಲನೆ ದೂರ ಸರಿದೆ. ಈ ಮಾಧ್ಯಮ ಪ್ರತಿನಿಧಿಗಳ ಅಜ್ಞಾನಕ್ಕೆ ಏನನ್ನಬೇಕು!
–ಹೊನಕೆರೆ ನಂಜುಂಡೇಗೌಡ

*
ಕೃಷಿ, ಸಹಕಾರದಲ್ಲಿ ‘ಸಾಹಿತ್ಯ’ ಎಲ್ಲಿ?
ಬಳ್ಳಾರಿ: ಜಿಲ್ಲಾ ಕೇಂದ್ರದಲ್ಲಿ ‘ಕೃಷಿ ಮತ್ತು ಸಹಕಾರ ಸಾಹಿತ್ಯ ಸಮಾವೇಶ’ ಹಮ್ಮಿಕೊಂಡ ಬಗ್ಗೆ ಮಾಹಿತಿ ನೀಡಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಸುದ್ದಿಗೋಷ್ಠಿ ಕರೆದಿದ್ದರು. ಸಮಾವೇಶದಲ್ಲಿ ನಡೆಯಲಿರುವ ಗೋಷ್ಠಿಗಳ ಬಗ್ಗೆ ಅವರು ಮಾಹಿತಿಯನ್ನೂ ನೀಡಿದರು.

ನಂತರ ನಡೆದ ಅನೌಪಚಾರಿಕ ಮಾತುಕತೆಯಲ್ಲಿ, ಕೃಷಿ ಮತ್ತು ಸಹಕಾರದ ಜೊತೆಗೆ ಇರುವ ‘ಸಾಹಿತ್ಯ’ದ ಕುರಿತು ಗೋಷ್ಠಿಯೇ ಇಲ್ಲವಲ್ಲಾ, ಅದು ಯಾವ ಸಾಹಿತ್ಯ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ.

ನೀರಿನ ಸಂರಕ್ಷಣೆ, ನಿರ್ವಹಣೆ, ಭತ್ತದ ಕೃಷಿಯಲ್ಲಿನ ಸತ್ಯ–ಮಿಥ್ಯೆಗಳು, ಕಾರ್ಪೊರೇಟ್‌ ಕೃಷಿ, ಸಹಕಾರ ಚಳವಳಿಯ ಪ್ರಸ್ತುತತೆ... ಹೀಗೆಲ್ಲ ಗೋಷ್ಠಿಗಳಿವೆ. ‘ಸಾಹಿತ್ಯ’ ಎಲ್ಲಿದೆ. ಕೃಷಿ ಮತ್ತು ಸಹಕಾರ ಸಮಾವೇಶ ಎಂಬ ಶೀರ್ಷಿಕೆ ಇದ್ದರೂ ಸಾಕಾಗಿತ್ತು. ‘ಸಾಹಿತ್ಯ’ವನ್ನು ಬಲವಂತವಾಗಿ ತಂದಿದ್ದೇಕೆ? ಸಾಹಿತ್ಯ ಪರಿಷತ್ತಿನ ಪಾಲ್ಗೊಳ್ಳುವಿಕೆ ಇದೆ ಎಂಬ ಕಾರಣಕ್ಕೆ ‘ಸಾಹಿತ್ಯ’ ಪದ ಸೇರಿಸಲಾಗಿದೆಯೇ ಎಂಬ ಪ್ರಶ್ನೆಗಳಿಗೆ  ಅವರಲ್ಲಿ ಉತ್ತರ ಇರಲಿಲ್ಲ.

ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬರುತ್ತಿದ್ದಾಗ ‘ಸಾಹಿತ್ಯ ಎಂಬುದು ಬೆಸೆಯುವ ಮಾಧ್ಯಮ. ಕೃಷಿ ಮತ್ತು ಸಹಕಾರ ಕುರಿತ ಸಮಾವೇಶವನ್ನೂ ಈ ಸಾಹಿತ್ಯವೇ ಬೆಸೆದಿದೆ!’ ಎಂಬ ಜಾಣ ಉತ್ತರ ಕೊಟ್ಟು ಜಾರಿಕೊಂಡರು.
–ಕೆ. ನರಸಿಂಹಮೂರ್ತಿ

*
ನಾನಿರೋದೇ ಹಿಂಗೆ ಏನು ಮಾಡಕ್ಕೆ ಆಯ್ತದೆ?
ಧಾರವಾಡ:
‘ಗಡಸು ಧ್ವನಿ ಹೊಂದಿ, ನೇರ–ನಿಷ್ಠುರವಾಗಿ ಮಾತನಾಡುವವರಿಗೆ ಅನೇಕ ಬಾರಿ ಗರ್ವಿಷ್ಠ ಅಥವಾ ಅಹಂಕಾರಿ ಎಂಬ ಅಪವಾದಗಳು ಬರುತ್ತವೆ. ಹಾಗೆಂದ ಮಾತ್ರಕ್ಕೆ ನಮ್ಮ ಸ್ವಭಾವ ಬದಲು ಮಾಡಿಕೊಳ್ಳಲು ಸಾಧ್ಯವೇ? ನಾನಿರೋದೇ ಹಿಂಗೆ, ಏನು ಮಾಡಕ್ಕೆ ಆಯ್ತದೆ? ಹಾಗೆಯೇ ಡಾ. ಪಾಟೀಲ ಪುಟ್ಟಪ್ಪ ಅವರೂ ನೇರ ಮಾತುಗಳಿಗೆ ಹೆಸರುವಾಸಿಯಾದವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿದ ಮಾತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣ ಚಪ್ಪಾಳೆಯ ಮಳೆಗರೆಯಿತು.

ಕರ್ನಾಟಕ ವಿದ್ಯಾವರ್ಧಕ ಸಂಘದ 128ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಒಳ್ಳೆಯ ಲಹರಿಯಲ್ಲಿ ಮಾತನಾಡುತ್ತಿದ್ದರು.

‘ಈ ಧ್ವನಿ ನನಗೆ ವಂಶವಾಹಿಯಿಂದ ಬಳುವಳಿಯಾಗಿ ಬಂದಿದ್ದು. ನಾನು ಮಾತನಾಡುವುದೇ ಹೀಗೆ, ನೇರವಾಗಿ ಮಾತನಾಡುವವರ ಧ್ವನಿ ಹೀಗೇ ಇರುತ್ತದೆ.

ಹಾಗೆಂದ ಮಾತ್ರಕ್ಕೆ ಇದೇ ಧ್ವನಿ ನಿನಗೆ ಬೇಕು ಅಂದರೂ ಬರಲ್ಲ’ ಎಂದು ಪಕ್ಕದಲ್ಲೇ ಕುಳಿತಿದ್ದ ಬಸವರಾಜ ಹೊರಟ್ಟಿಯನ್ನು ಕಿಚಾಯಿಸಿದರು. ಆಗ ಸಭಾಂಗಣದಲ್ಲಿ ನಗೆಯ ಅಲೆ ಎದ್ದಿತು.  
– ಇ.ಎಸ್‌. ಸುಧೀಂದ್ರ ಪ್ರಸಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.