ADVERTISEMENT

ಪೇಜಾವರರಿಗೆ ಈಗೇಕೆ ಮುಸ್ಲಿಂ ಪ್ರೀತಿ?

ಬಸವರಾಜ ಹವಾಲ್ದಾರ
Published 1 ಜುಲೈ 2017, 20:33 IST
Last Updated 1 ಜುಲೈ 2017, 20:33 IST
ಪ್ರಮೋದ್‌ ಮುತಾಲಿಕ್‌ ಶ್ರೀರಾಮ ಸೇನೆ ಸಂಸ್ಥಾಪಕ. ಚಿತ್ರಗಳು: ತಾಜುದ್ದೀನ್‌ ಆಜಾದ್‌
ಪ್ರಮೋದ್‌ ಮುತಾಲಿಕ್‌ ಶ್ರೀರಾಮ ಸೇನೆ ಸಂಸ್ಥಾಪಕ. ಚಿತ್ರಗಳು: ತಾಜುದ್ದೀನ್‌ ಆಜಾದ್‌   

ಪೇಜಾವರ ಮಠದ ವಿಶ್ವೇಶತೀರ್ಥರು ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದು ಈಗ ದೊಡ್ಡ ವಿವಾದವಾಗಿದೆ. ಇದನ್ನು ಮೊದಲಿಗೆ ವಿವಾದ ಮಾಡಿದ್ದೇ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌. ಇದನ್ನು ಖಂಡಿಸಿ ಭಾನುವಾರ (ಜುಲೈ 2) ರಾಜ್ಯದಾದ್ಯಂತ ಪ್ರತಿಭಟನೆಗೆ ಅವರು ಕರೆ ನೀಡಿದ್ದಾರೆ.

ಸಮಾಜದಲ್ಲಿ ಸೌಹಾರ್ದ ಇರಬೇಕು. ಆದರೆ, ಒಂದು ಕಡೆಯಿಂದ ಮಾತ್ರ ಇಂಥ ಪ್ರಯತ್ನ ಆಗುತ್ತಿದೆ. ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಮುಸ್ಲಿಮರು ಈ ವಿಷಯದಲ್ಲಿ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ ಎನ್ನುವುದು ಅವರ ವಾದ. ಪೇಜಾವರ ಶ್ರೀಗಳ ನಿಲುವು, ಗೋಹತ್ಯೆ ನಿಷೇಧ ಹೋರಾಟ ಕುರಿತು ಮುತಾಲಿಕ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ಏರ್ಪಡಿಸಿದ್ದಕ್ಕೆ ಆಕ್ಷೇಪ ಏಕೆ?
ಹಿಂದುತ್ವದ ಪ್ರತೀಕವಾಗಿರುವ ಶ್ರೀಕೃಷ್ಣ ಮಠದ ಆವರಣದಲ್ಲಿ ಇಫ್ತಾರ್ ಕೂಟ ಏರ್ಪಡಿಸಿರುವುದು ಅಘಾತ ನೀಡಿದೆ. ಶ್ರೀಕೃಷ್ಣನ ಇನ್ನೊಂದು ಹೆಸರು ಗೋಪಾಲಕ. ಗೋವುಗಳ ರಕ್ಷಣೆ ಮಾಡಿದ್ದ. ಅಂಥ ಸ್ಥಳಕ್ಕೆ ಗೋಹತ್ಯೆ, ಗೋಭಕ್ಷಣೆ ಮಾಡುವವರನ್ನು ಕರೆದು ನಮಾಜ್‌ ಮಾಡಲು ಅವಕಾಶ ಕೊಟ್ಟಿದ್ದು ಕೆಟ್ಟ ಸಂಪ್ರದಾಯ. ಹಾಗಾಗಿ ವಿರೋಧ ಮಾಡುತ್ತಿದ್ದೇವೆ.

ADVERTISEMENT

ಇಫ್ತಾರ್ ಕೂಟ ನಡೆದ ಮರು ದಿನವೇ ಉಡುಪಿಗೆ ಹೋಗಿ ಪೇಜಾವರ ಶ್ರೀಗಳನ್ನು ಭೇಟಿಯಾಗಿದ್ದೆವು. ಆಗ ಅವರು, ‘ಇಫ್ತಾರ್‌ ಮಾಡಿದರೆ ತಪ್ಪೇನು ಎಂದಿದ್ದಲ್ಲದೇ, ಎಲ್ಲ ಮಠಾಧೀಶರು ಇಂಥ ಕೆಲಸ ಮಾಡಬೇಕು’ ಎಂದರು. ಅವರ ಧೋರಣೆ ನೋವು ತಂದಿದೆ.

* ಮನೆಗೆ ಬಂದ ಅತಿಥಿಗೆ ಊಟ ಹಾಕುವುದು ಹಿಂದೂ ಸಂಪ್ರದಾಯ. ಅತಿಥಿಗಳು ಬಂದರೆ ನೀವು ಸತ್ಕರಿಸುವುದಿಲ್ಲವೇ?
ಇಲ್ಲಿ ಅವರಾಗಿಯೇ ಬಂದಿಲ್ಲ, ಶ್ರೀಗಳೇ ಆಹ್ವಾನ ನೀಡಿದ್ದಾರೆ. ಅತಿಥಿ ಯಾರು. ಅವರಿಗೆ ಎಲ್ಲಿ ಆತಿಥ್ಯ ನೀಡಬೇಕು ಎನ್ನುವುದೂ ಮುಖ್ಯ. ಮನೆಗೆ ಬಂದ ಎಲ್ಲರನ್ನೂ ದೇವರ ಮನೆಗೆ, ಅಡುಗೆ ಮನೆಗೆ ಕರೆದುಕೊಂಡು ಹೋಗುವುದಿಲ್ಲ. ಪ್ರಸಾದ ಕೊಟ್ಟು ಮಸೀದಿಯಲ್ಲಿ ವಿತರಿಸುವಂತೆ ಹೇಳಬೇಕಿತ್ತು. ಮಠಕ್ಕೆ ಕರೆದಿದ್ದು ಏಕೆ ಎಂಬುದು ನಮ್ಮ ಪ್ರಶ್ನೆ. 

* ಉಡುಪಿ, ದಕ್ಷಿಣ ಕನ್ನಡ ಸೌಹಾರ್ದಕ್ಕೆ ಹೆಸರುವಾಸಿಯಾದ ಜಿಲ್ಲೆಗಳು. ಅಲ್ಲಿ ಕೋಮು ಸೌಹಾರ್ದ ಇರಬಾರದೇ?
ಸೌಹಾರ್ದ ಬೇಕೇ ಬೇಕು. ಅಶಾಂತಿ, ಗಲಭೆಗಳನ್ನು ಯಾರೂ ಬಯಸುವುದಿಲ್ಲ. ಎರಡೂ ಜಿಲ್ಲೆಗಳಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಲಕ್ಷಾಂತರ ಭಕ್ತರು ಅಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿ ಕೋಮು ಗಲಭೆ ಇದ್ದರೆ ಭೇಟಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲ ಕಡೆಗಳಲ್ಲಿ ನಡೆಯುವಂತೆ ಅಲ್ಲಿಯೂ ಕೆಲವು ಅಹಿತಕರ ಘಟನೆಗಳು ನಡೆಯುತ್ತವೆ.  ಆದರೆ, ಕೆಲವರು ಅಲ್ಲಿ ಮಾತ್ರ ನಡೆಯುತ್ತಿವೆ ಎಂಬಂತೆ ಬಿಂಬಿಸುತ್ತಾರೆ.

* ಹಿಂದೂ ಧರ್ಮದ ಮೌಲ್ಯಗಳು ಪೇಜಾವರ ಶ್ರೀಗಳಿಗೆ ಜಾಸ್ತಿ ಗೊತ್ತೋ ಅಥವಾ ನಿಮಗೆ ಜಾಸ್ತಿ ಗೊತ್ತೋ?
ಅವರು ಬಹಳ ದೊಡ್ಡವರು. ಧರ್ಮದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಅವರು ಆಲದ ಮರವಾದರೆ, ನಾನು ಆ ಮರದ ಒಂದು ಎಲೆ ಮಾತ್ರ. ಅವರ ಮುಂದೆ ನಾನು ಏನೂ ಅಲ್ಲ. ಜ್ಞಾನಿಗಳು ತಪ್ಪು ಮಾಡಬಾರದು ಎಂದಿದೆಯೋ, ಮಾಡಿದ ತಪ್ಪನ್ನು ಹೇಳಬಾರದು ಎಂದಿದೆಯೋ. ಯಾರು ಮಾಡಿದರೂ ತಪ್ಪು ತಪ್ಪೇ. ಅವರು ಮಾಡಿದ ತಪ್ಪನ್ನು ಯಾರಾದರೂ ಹೇಳಬೇಕಿತ್ತು.

ಆ ಕೆಲಸವನ್ನು ನಾನು ಮಾಡಿದ್ದೇನೆ. ಲಾಲ್‌ಕೃಷ್ಣ ಅಡ್ವಾಣಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನದಲ್ಲಿರುವ ಮಹಮ್ಮದ್‌ ಅಲಿ ಜಿನ್ನಾ ಅವರ ಸಮಾಧಿಗೆ ಭೇಟಿ ನೀಡಿದ್ದರು. ಅಲ್ಲಿದ್ದ ಡೈರಿಯಲ್ಲಿ ಜಿನ್ನಾ ಅವರು ಜಾತ್ಯತೀತರಾಗಿದ್ದರು ಎಂದು ಬರೆದಿದ್ದರು. ಆಗ ಅವರಿಗಿಂತ ಕಿರಿಯರಾದ ಡಾ.ಪ್ರವೀಣಭಾಯಿ ತೊಗಾಡಿಯಾ ಅವರು, ‘ಜಿನ್ನಾ ಮತೀಯವಾದಿ ಆಗಿದ್ದರು.

ಇದೊಂದು ದೇಶದ್ರೋಹಿ ಹೇಳಿಕೆ’ ಎಂದು ಖಂಡಿಸಿದ್ದರು. ತೊಗಾಡಿಯಾ ಅವರು ನನ್ನ ಆದರ್ಶ. ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದೇನೆ. ತಪ್ಪನ್ನು ನೇರವಾಗಿ ಹೇಳುತ್ತೇನೆ. ಬೇರೆಯವರಿಗೆ ಸರಿ ಕಾಣುತ್ತದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಸಮಾಜಕ್ಕೆ ತೊಂದರೆ ಆಗುವ ಆಘಾತಕಾರಿ ವಿಷಯ ಆದ್ದರಿಂದ ಹೇಳಿದ್ದೇನೆ. ಈ ವಿಷಯ ಅಷ್ಟೇ ಅಲ್ಲ, ಬೇರೆ ವಿಷಯಗಳಲ್ಲೂ ಹೇಳಿದ್ದೇನೆ.

* ಹಿಂದು ಮತ್ತು ಮುಸ್ಲಿಂ ನಡುವೆ ಸಾಮರಸ್ಯ ಇರಬೇಕು ಎಂದು ಬಯಸುತ್ತೀರೋ, ಬೇಡ ಎಂದು ಬಯಸುತ್ತೀರೋ?
ಖಂಡಿತವಾಗಿ ಸಾಮರಸ್ಯ ಬೇಕು. ಒಂದೇ ಬದಿಯಿಂದ ಯತ್ನಿಸಿದರೆ ಸಾಮರಸ್ಯ ಮೂಡುವುದಿಲ್ಲ. ಚಪ್ಪಾಳೆ ತಟ್ಟಲು ಎರಡೂ ಕೈಗಳು ಬೇಕು. ಒಂದೇ ಕೈಯಲ್ಲಿ ಚಪ್ಪಾಳೆ ತಟ್ಟಿದರೆ ಗಾಳಿಯಲ್ಲಿ ಗುದ್ದಾಟ ಆಗುತ್ತದೆ.‌

ಹಿಂದೂ ಸಮಾಜ ಮಾತ್ರ ‘ಬೆಂಡ್‌’ ಆಗುತ್ತಿದೆ. ನಾವು ಮಾತ್ರ ಸರ್ವಧರ್ಮ ಸಹಿಷ್ಣುತೆ, ಸೌಹಾರ್ದ ಎನ್ನುತ್ತಿದ್ದೇವೆ. ಮುಸ್ಲಿಮರು ಅವರ ಧರ್ಮ ಆಚರಣೆ, ಸಂಪ್ರದಾಯದಿಂದ ಒಂದೇ ಒಂದು ಇಂಚೂ ಹಿಂದೆ ಸರಿದಿಲ್ಲ. ಮುಂದೆಯೂ ಬಂದಿಲ್ಲ. ಇದನ್ನು ಆಧಾರ ಸಹಿತವಾಗಿ ಹೇಳಬಲ್ಲೆ.
1932ರಲ್ಲಿ ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅವರು ವಿರೋಧ ಮಾಡಿದರೆಂದು ಮಹಾತ್ಮ ಗಾಂಧೀಜಿ ಅವರು ‘ವಂದೇ ಮಾತರಂ’ ಗೀತೆಯನ್ನು  ಮೊಟಕುಗೊಳಿಸಿದರು.

ಸ್ವಾತಂತ್ರ್ಯಾನಂತರ ಧ್ವಜ ಸಮಿತಿಯು ದೇಶಕ್ಕೆ ಕೇಸರಿ ಧ್ವಜವು ರಾಷ್ಟ್ರಧ್ವಜ ಆಗಬೇಕು ಎಂದು ಶಿಫಾರಸು ಮಾಡಿತ್ತು. ಆದರೆ, ಅದನ್ನೂ ಗಾಂಧೀಜಿ ಅವರ ಸಲಹೆ ಮೇರೆಗೆ ಮೂರು ವರ್ಣ ಮಾಡಲಾಯಿತು. ಪಾಕಿಸ್ತಾನ ರಚನೆ ಸಂದರ್ಭದಲ್ಲಿಯೂ ಹಲವಾರು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಯಿತು.

ಗೋಹತ್ಯೆ ನಿಲ್ಲಿಸಬೇಕು ಎಂದು  ಸ್ವಾಮಿ ವಿವೇಕಾನಂದ, ವಿನೋಬಾಭಾವೆ, ಸಾವರ್ಕರ್ ಹಾಗೂ ಗಾಂಧೀಜಿ ಹೇಳಿದ್ದರು. ಈ ಬಗ್ಗೆ ಮುಸ್ಲಿಂ ಸಮಾಜದವರು ಎಂದಾದರೂ ಯೋಚಿಸಿದ್ದಾರೆಯೇ. ನಾವೂ ಗೋವಿನ ಹಾಲು ಕುಡಿಯುತ್ತಿದ್ದೇವೆ. ಗೋಹತ್ಯೆ ಮಾಡುವುದಿಲ್ಲ ಎಂದು ಅವರು ಹೇಳಿದ್ದರೆ ಸಮಾಜದಲ್ಲಿ ಸೌಹಾರ್ದದ ದೊಡ್ಡ ಬದಲಾವಣೆಯೇ ಆಗುತ್ತಿತ್ತು. ಪೇಜಾವರ ಶ್ರೀಗಳ ಸೌಹಾರ್ದ ನಡೆಗೂ ಬೆಲೆ ಸಿಗುತ್ತಿತ್ತು.

* ಆಗಾಗ್ಗೆ ಕಾನೂನು ಕೈಗೆತ್ತಿಕೊಳ್ಳುತ್ತೀರಿ ಎಂಬ ಆರೋಪವಿದೆ. ಪ್ರೇಮಿಗಳ ದಿನದಂದು ಅನೈತಿಕ ಪೊಲೀಸಗಿರಿ ಪ್ರದರ್ಶಿಸಿದ್ದು ಎಷ್ಟು ಸರಿ?
ಪೋಲಿಸರು ನಿಷ್ಕ್ರಿಯರಾದಾಗ ಹಿಂದೂ ಸಂಘಟನೆಗಳು ಕ್ರಿಯಾಶೀಲ ಆಗುತ್ತವೆ. ಗೋವುಗಳನ್ನು ಟ್ರಕ್‌ನಲ್ಲಿ ಸಾಗಿಸುವುದು ಪೊಲೀಸರಿಗೆ ಯಾಕೆ ಕಾಣಿಸುವುದಿಲ್ಲ. ಆಗ ಅವುಗಳ ರಕ್ಷಣೆಗೆ ನಾವು ಮುಂದಾಗಲೇ ಬೇಕಾಗುತ್ತದೆ. ಪ್ರೇಮಿಗಳ ದಿನ ದುಡುಕಿ ಕೆಲವು ಘಟನೆ ಆಗಿರಬಹುದು. ಅದು ಸರಿಯಲ್ಲ. ಹಲ್ಲೆಗೆ ಮುಂದಾಗದಂತೆ ಕಾರ್ಯಕರ್ತರಿಗೆ ಸೂಚಿಸಿದ್ದೇವೆ. 

* ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ ಎಂದು ಪೇಜಾವರ ಶ್ರೀಗಳು ಹೇಳಿರುವುದು ಬೇರೆಯವರಿಗೆ ಅಸ್ತ್ರ ಕೊಟ್ಟಂತಾಗಿದೆ ಎಂದಿದ್ದೀರಿ. ಹಿಂದೂಗಳ್ಯಾರೂ ಗೋಮಾಂಸ ತಿನ್ನುವುದಿಲ್ಲವೇ ?
ನೂರಕ್ಕೆ ನೂರರಷ್ಟು ಖಚಿತವಾಗಿ ಹೇಳುತ್ತೇನೆ ಹಿಂದೂಗಳು ಗೋಮಾಂಸ ತಿನ್ನುವುದಿಲ್ಲ. ಹೌದು, ದಲಿತರೂ ಹಿಂದೂಗಳೇ. ಅವರೂ ಗೋಪೂಜೆ ಮಾಡುತ್ತಾರೆ. ಅವರು ಗೋವುಗಳನ್ನು ಕೊಂದು ತಿನ್ನುವುದಿಲ್ಲ. ಹಿಂದೂಗಳೂ ತಿನ್ನುತ್ತಾರೆಂದು ಹೇಳಿ ಗೋಹತ್ಯೆ ನಿಷೇಧವನ್ನು ವಿಫಲಗೊಳಿಸುವ ಹುನ್ನಾರ ನಡೆಯುತ್ತಿದೆ.

* ಇಫ್ತಾರ್‌ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳಲ್ಲಿಯೇ ಭಿನ್ನಾಭಿಪ್ರಾಯ ಇದೆಯಲ್ಲ ?
ಭಿನ್ನಾಭಿಪ್ರಾಯವಿಲ್ಲ. ನಮ್ಮ ಹೋರಾಟವನ್ನು ನಾವು ಮಾಡುತ್ತಿದ್ದೇವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಜರಂಗ ದಳ, ಹಿಂದೂ ಜಾಗೃತಿ ವೇದಿಕೆ, ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳಿಗೆ ಸ್ವಾತಂತ್ರ್ಯ ಇಲ್ಲ. ಅಲ್ಲಿನವರು ಹಿರಿಯರ ಆದೇಶದಂತೆ ನಡೆಯುತ್ತಾರೆ. ತಪ್ಪನ್ನು ಉಲ್ಲೇಖಿಸಿ ಬಹಿರಂಗ ಹೇಳಿಕೆ ನೀಡುವ ಧೈರ್ಯ ಆ ಸಂಘಟನೆಗಳಲ್ಲಿ ಯಾರಿಗೂ ಇಲ್ಲ.

* ಪೇಜಾವರ ಶ್ರೀಗಳ ನಡೆಯ ಹಿಂದೆ ಹಿಂದುತ್ವ ಪ್ರತಿಪಾದಿಸುವವರ ಬೆಂಬಲ ಇದೆಯೇ?
ನಾಲ್ಕು ಪರ್ಯಾಯಗಳ ಸಂದರ್ಭದಲ್ಲಿ ಮಾಡದ್ದನ್ನು ಐದನೇ ಪರ್ಯಾಯ ಸಂದರ್ಭದಲ್ಲಿ ಮಾಡಿದ್ದು ಏಕೆ ಎಂಬುದು ಗೊತ್ತಾಗುತ್ತಿಲ್ಲ. ಬಿಜೆಪಿ, ಆರ್ಎಸ್‌ಎಸ್‌, ಮುಸ್ಲಿಂ, ಕಾಂಗ್ರೆಸ್‌ ಕೈವಾಡವಿದೆಯೇ ಎನ್ನುವುದೂ ಸ್ಪಷ್ಟವಾಗಿಲ್ಲ. ಆದರೆ, ಖಂಡಿತವಾಗಿ ಅವರ ಈ ನಡೆಯ ಹಿಂದೆ ಒಂದು ಲಾಬಿ ಕೆಲಸ ಮಾಡಿದೆ ಎನ್ನುವುದು ಖಚಿತ. ಲಾಬಿ ಇಲ್ಲದೆ ಇಂತಹ ಕೆಲಸವನ್ನು ಅವರು ಮಾಡಲಾರರು. ಅದು ಯಾವುದು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.

* ಹಿಂದುತ್ವ ಪ್ರತಿಪಾದಿಸುವ ನಿಮ್ಮ ಬೆಂಬಲಕ್ಕೆ ಎಷ್ಟು ಜನರು ಇದ್ದಾರೆ?
ಲಕ್ಷಾಂತರ ಜನರ ಬೆಂಬಲ ಇದೆ. ಆದರೆ, ಬಹಿರಂಗವಾಗಿ ಯಾರೂ ಹೇಳಿಕೊಳ್ಳುತ್ತಿಲ್ಲ. ನೇರವಾಗಿ ಮಾತನಾಡುವ ನನ್ನ ಸ್ವಭಾವ ನನಗೇ ಮುಳುವಾಗಿದೆ. ತಪ್ಪನ್ನು ತಪ್ಪು ಎಂದು ಹೇಳುವುದರ ಮೂಲಕ ಸಾಕಷ್ಟು ತೊಂದರೆ ಎದುರಿಸಿದ್ದೇನೆ. ಹಾಗೆಂದು ಹೋರಾಟದಿಂದ ಒಂದೇ ಒಂದು ಹೆಜ್ಜೆಯನ್ನೂ ಹಿಂದಿಟ್ಟಿಲ್ಲ.

ಹಿಂದುತ್ವದ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ವೈಯಕ್ತಿಕವಾಗಿ ನನ್ನನ್ನು ಟೀಕೆ ಮಾಡುವವರೂ ಸೇರಿದಂತೆ ಎಲ್ಲರೂ ಇದನ್ನು ಒಪ್ಪುತ್ತಾರೆ. ವಾಸ್ತವ ಸತ್ಯವನ್ನು ಹೇಳಲು ಸಾಧ್ಯವಾಗದ್ದರಿಂದ ಬಹಳಷ್ಟು ಮಂದಿಗೆ ನಮ್ಮ ಜತೆ ಬರಲಾಗುತ್ತಿಲ್ಲ. ಮಾನಸಿಕವಾಗಿ ನಮ್ಮೊಂದಿಗೆ ಇದ್ದಾರೆ. ಆದರೆ, ದೈಹಿಕವಾಗಿ ಬರಲಾರರು.

* ಹಿಂದುತ್ವ ಪ್ರತಿಪಾದಿಸುವ ಬಿಜೆಪಿಯ ಮುಖಂಡರು ಕೂಡ ಪೇಜಾವರ ಶ್ರೀಗಳ ನಡೆಯನ್ನು ಸ್ವಾಗತಿಸಿದ್ದಾರಲ್ಲಾ?
ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳ ಬೆಂಬಲದ ಹಿಂದೆ ಸ್ವಾರ್ಥ ಇದೆ. ಮುಸ್ಲಿಮರು ಹಾಗೂ ಪೇಜಾವರ ಶ್ರೀಗಳ ಮೆಚ್ಚುಗೆ ಗಳಿಸಲು ಪೈಪೋಟಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆ ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಅವರ ಮಾತಿನಲ್ಲಿ ಒಂದಿಷ್ಟೂ ರಾಷ್ಟ್ರೀಯತೆ ಇಲ್ಲ. ಬುದ್ಧಿಜೀವಿಗಳೆನಿಸಿಕೊಂಡವರು ಹಿಂದೂ ಸಮಾಜವನ್ನು ಒಡೆಯಲು ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ.

ಅಷ್ಟ ಮಠಗಳಲ್ಲಿ ಪಲಿಮಾರು ಶ್ರೀಗಳು ಮಾತ್ರ ಸ್ವಾಗತಿಸಿದ್ದಾರೆ. ಉಳಿದ ಆರು ಮಠಗಳವರು ಮೌನವಾಗಿದ್ದಾರೆ. ಪೇಜಾವರ ಶ್ರೀಗಳ ನಡೆಯ ಬಗೆಗೆ ಬಹಳಷ್ಟು ಜನರು ಅಸಮಾಧಾನ ಹೊಂದಿದ್ದಾರೆ. ಆದರೆ, ಬಹಿರಂಗವಾಗಿ ಹೇಳುತ್ತಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಹೋರಾಟದಲ್ಲಿ ಅವರೇ ಮುಂಚೂಣಿಯಲ್ಲಿದ್ದರು. ಆಗ ಇಲ್ಲದ ಸೌಹಾರ್ದದ ಮಾತು ಈಗ್ಯಾಕೆ. ಆಗಲೇ ಮಾತನಾಡಿದ್ದರೆ, ಇಂದು ನಾವು ಬೀದಿಯಲ್ಲಿ ನಿಲ್ಲುವುದು ತಪ್ಪುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.