ADVERTISEMENT

ಪ್ರೇಕ್ಷಕರಿಗೆ ಮುದ; ಸಂಘಟಕರಿಗೆ ಸಂಕಟ

ಗಣೇಶ ಅಮಿನಗಡ
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST

ಮೈಸೂರು: ಅದು ಶಿಕ್ಷಕರ ದಿನಾಚರಣೆ ಸಮಾರಂಭ. ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಿದ ನಂತರ ಗಣ್ಯರು ಮಾತನಾಡುವ ಸರದಿ. ಹಾಗೆ ಮಾತನಾಡಿದವರಲ್ಲಿ ಮಹಾನಗರ ಪಾಲಿಕೆಯ ಮೇಯರ್ ಎಂ.ಜೆ.ರವಿಕುಮಾರ್‌ ಅವರು, ‘ಶಿಕ್ಷಕರು ಶಾಲೆ– ಕಾಲೇಜುಗಳಲ್ಲಿ ಸರಿಯಾಗಿ ಪಾಠ ಮಾಡಿದರೆ ಟ್ಯೂಷನ್‌ ಹಾವಳಿ ತಪ್ಪಿಸಬಹುದು’ ಎಂದರು. ಅವರು ಮಾತನಾಡುತ್ತಿರುವಾಗಲೇ ಪ್ರೇಕ್ಷಕರ ಸಾಲಿನಲ್ಲಿದ್ದ ಶಿಕ್ಷಕಿಯೊಬ್ಬರು ಎದ್ದು ನಿಂತು ಮೇಯರ್‌ ಮಾತನಾಡದಂತೆ ಅಡ್ಡಿಪಡಿಸುತ್ತಿದ್ದರು. ಏಕೆಂದರೆ, ಮೇಯರ್‌ ವಾರ್ಡಿನ ನಿವಾಸಿಯಾದ ಅವರು, ‘ನಾವು ಸರಿಯಾಗಿ ಪಾಠ ಮಾಡ್ತೀವಿ. ಟ್ಯೂಷನ್‌ ಹೇಳುವವರಿಗೆ ಮಾತ್ರ ಸಲಹೆ ಕೊಡಿ, ಎಲ್ಲರಿಗೆ ಅಲ್ಲ’ ಎಂದು ಜೋರಾಗಿ ಹೇಳುತ್ತಲೇ ಇದ್ದರು.

ಮೇಯರ್ ಮಾತು ಮುಗಿಸಿದರೂ ಶಿಕ್ಷಕಿ ಎದ್ದು ನಿಂತು ಮಾತನಾಡುವುದನ್ನು ಮುಂದುವರಿಸಿದಾಗ ಸಂಘಟಕರು, ಶಿಕ್ಷಕಿಯರು ಅವರನ್ನು ಸಮಾಧಾನಿಸುತ್ತಿದ್ದರು. ಮನವೊಲಿಸಿ ಆಚೆಗೆ ಕರೆದುಕೊಂಡು ಹೋಗುವಾಗ ಮೀಡಿಯಾಕ್ಕೆ ಹೇಳ್ತೀನಿ ಎಂದು ಶಿಕ್ಷಕಿ ಧಮಕಿ ಹಾಕುತ್ತಲೇ ಇದ್ದರು. ಆಮೇಲೆ ಸುಮ್ಮನಾದ ಅವರು ವೇದಿಕೆಯಲ್ಲಿ ಮಾತನಾಡುತ್ತಿದ್ದವರ ಚಿತ್ರಗಳನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿಯುತ್ತಿದ್ದರು. ಅವರು ವೇದಿಕೆ ಹತ್ತಿ ಎಲ್ಲಿ ಗಲಾಟೆ ಮಾಡುತ್ತಾರೋ ಎಂದು ಇತರ ಶಿಕ್ಷಕಿಯರು ಆತಂಕದಲ್ಲಿದ್ದರು.

ಇದಕ್ಕೂ ಮೊದಲು ಆ ಶಿಕ್ಷಕಿ, ಚಿತ್ರಗಳನ್ನು ಮೊಬೈಲಿನಲ್ಲಿ ಸೆರೆ ಹಿಡಿಯುತ್ತ, ಪ್ರಶಸ್ತಿ ಪಡೆದ ಶಿಕ್ಷಕರನ್ನು ಅಭಿನಂದಿಸುತ್ತ ಓಡಾಡುತ್ತಿದ್ದರು. ಯಾಕೆ ಹೀಗೆ ಎಂದು ಸನ್ಮಾನಕ್ಕೆ ಬಂದಿದ್ದ ನಿವೃತ್ತಗೊಂಡ ಶಿಕ್ಷಕರೊಬ್ಬರು ಕೇಳಿದರು. ಇದಕ್ಕೆ ಶಿಕ್ಷಕಿಯೊಬ್ಬರು ಎಲ್ಲರ ಗಮನ ಸೆಳೆಯಲು ಎಂದರು. ಗಮನ ಸೆಳೆಯೋಕೆ ಹೀಗೆ ಮಾಡಬೇಕಾ? ಎಂದು ಕೇಳಿದ್ದಕ್ಕೆ ಟಿ.ವಿ ಯವರ ಮುಂದೆ ಹೋಗ್ತೀನಿ ಅಂತಿದ್ರು. ಸುಮ್ಮನಿರಿಸುವುದಕ್ಕೆ ಸಾಕಾಯಿತು ಎಂದು ಶಿಕ್ಷಕಿಯರು ಉತ್ತರಿಸಿದರು. ಅಂತೂ ಒಳ್ಳೆಯದರ ನಡುವೆ ಕೆಟ್ಟದ್ದೂ ಮಿಂಚಬೇಕೆಂಬ ಕಾಲ ಇದು ಎಂದು ನಿವೃತ್ತ ಶಿಕ್ಷಕರು ನಿಟ್ಟುಸಿರುಬಿಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.