ADVERTISEMENT

ಬಹುಭಾಷಾ ವಿಶಾರದೆ ಮುಸ್ಲಿಂ ಮಹಿಳೆ ಸಂಸ್ಕೃತ ವಿಭಾಗದ ಮುಖ್ಯಸ್ಥೆ

ಸಂಜಯ ಪಾಂಡೆ
Published 23 ಆಗಸ್ಟ್ 2014, 19:30 IST
Last Updated 23 ಆಗಸ್ಟ್ 2014, 19:30 IST

ದೇಶದ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ, ಹಿಂದೆ ‘ಪೂರ್ವದ ಆಕ್ಸ್‌ಫರ್ಡ್’ ಎಂದೇ ಖ್ಯಾತಿಗಳಿಸಿದ ಅಲಹಾಬಾದ್‌ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಅಧ್ಯಕ್ಷರ ಕಚೇರಿ ಮುಂದೆ ಹಾದುಹೋಗುವವರು ಎರಡೆರಡು ಸಾರಿ ನಾಮಫಲಕದ ಮೇಲೆ ಕಣ್ಣಾಡಿಸಿಯೇ ಮುಂದಡಿ ಇರಿಸುತ್ತಾರೆ.

ಇಂಗ್ಲಿಷ್‌, ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಬರೆದಿರುವ ‘ಕಿಶ್ವರ್‌ ಜಬೀನ್‌ ನಸ್ರೀನ್’ ಎಂಬ ಹೆಸರನ್ನು ಮತ್ತೆ ಮತ್ತೆ ಓದಿ ಖಾತರಿ ಪಡಿಸಿಕೊಂಡು ಅಚ್ಚರಿಗೊಳ್ಳುತ್ತಾರೆ.

ಆರನೇ ತರಗತಿಯಿಂದಲೇ ಸಂಸ್ಕೃತ ಅಭ್ಯಾಸ ಮಾಡಿರುವ ನಸ್ರೀನ್‌, ಬಹುಭಾಷಾ ವಿಶಾರದೆ. ಅವರು ಅನುಸರಿಸುವ ಧರ್ಮ ಅವರ ಭಾಷಾ ಕಲಿಕೆಗೆ ಮತ್ತು ಕಲಿಸುವಿಕೆಗೆ ಯಾವತ್ತೂ ತೊಡಕಾಗಿಲ್ಲ. 

‘ಸಂಸ್ಕೃತ ನನಗೆ ನೆಚ್ಚಿನ ವಿಷಯ, ಇದು ಯಾವತ್ತೂ ಕಠಿಣ ಎನಿಸಲಿಲ್ಲ’ ಎನ್ನುವ ನಸ್ರೀನ್‌, ಈ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲ ಮುಸ್ಲಿಂ ಮಹಿಳೆ. ಅಲಹಾಬಾದ್‌ ಸಂಸ್ಕೃತ ವಿಭಾಗಕ್ಕೆ ಬೋಧಕಿಯಾಗಿ ಸೇರುವುದಕ್ಕೂ ಕೆಲವು ಕಾಲ ಮೊದಲೇ ಅವರು ಸಂಸ್ಕೃತದಲ್ಲಿ ಪಿಎಚ್‌.ಡಿ ಪದವಿ ಗಳಿಸಿದವರು.

‘ಅನೇಕರಿಗೆ ಮುಸ್ಲಿಂ ಹುಡುಗಿಯೊಬ್ಬಳು ಸಂಸ್ಕೃತ ಕಲಿಯುತ್ತಿದ್ದದ್ದು ಕೌತಕವಾಗಿತ್ತು. ಮೊದಮೊದಲು ತರಗತಿಯಲ್ಲಿ ನನ್ನನ್ನು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು’ ಎನ್ನುತ್ತಾರೆ ನಸ್ರೀನ್‌.

‘ಸಂಸ್ಕೃತ ಕಲಿಕೆಗೆ ನನ್ನ ಕುಟುಂಬದಿಂದ ಯಾವುದೇ ಅಡ್ಡಿ ಎದುರಾಗಲಿಲ್ಲ. ನನ್ನ ಪೋಷಕರು ಸಂಸ್ಕೃತವನ್ನು ಧರ್ಮದ ದೃಷ್ಟಿಯಿಂದ ನೋಡಲೇ ಇಲ್ಲ. ಬದಲಿಗೆ, ಇದು ಅವರಿಗೆ ಹೆಮ್ಮೆಯ ವಿಚಾರವಾಗಿತ್ತು’ ಎನ್ನುತ್ತಾರೆ ನಸ್ರೀನ್‌.

‘ನಾನು ಸಂಸ್ಕೃತ ಶಿಕ್ಷಕಿಯಾಗಿರುವುದು ಸಮುದಾಯದವರಿಗೆ ಇರಿಸುಮುರಿಸು ಉಂಟು ಮಾಡಿದ್ದರೂ, ಸಂಸ್ಕೃತ ಕಲಿಕೆಗಾಗಲಿ, ಉದ್ಯೋಗಕ್ಕಾಗಲಿ ತಣ್ಣೀರು ಎರಚಲಿಲ್ಲ. ಹೀಯಾಳಿಸಲಿಲ್ಲ. ವಿದ್ಯಾರ್ಥಿಗಳಿಂದಲೂ ನನಗೆ ಯಾವುದೇ ತೊಂದರೆ ಎದುರಾಗಿಲ್ಲ’ ಎಂದು ಹೇಳುತ್ತಾರೆ ಅವರು.

ರಷ್ಯನ್‌, ಪರ್ಷಿಯನ್‌ ಹಾಗೂ ಜರ್ಮನ್‌ ಭಾಷೆಗಳಲ್ಲೂ ಪಾಂಡಿತ್ಯ ಹೊಂದಿರುವ ನಸ್ರೀನ್‌ ಅವರದ್ದು, ‘ಭಾಷೆ ಜ್ಞಾನದ ಮೂಲ. ನಾವು (ಭಾರತೀಯರು) ವಸುಧೈವ ಕುಟುಂಬಕಂ ತತ್ವವನ್ನು ಪಾಲಿಸುವವರು, ಎಲ್ಲಾ ಭಾಷೆಗಳನ್ನು ಗೌರವದಿಂದ ಕಾಣುವವರು. ಯಾವುದೇ ಭಾಷೆಗೆ ಧರ್ಮದ ಸಂಕೋಲೆ ಇರಬಾರದು’ ಎಂಬ ಸ್ಪಷ್ಟ ನುಡಿ.

‘ಸಂಸ್ಕೃತವನ್ನು ಶ್ರೇಷ್ಠ ಭಾಷೆ ಎನ್ನುತ್ತೇವೆ. ಆದರೆ, ಇದು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ. ಸಂಸ್ಕೃತ ಕಬ್ಬಿಣದ ಕಡಲೆ ಎಂದು ಇದನ್ನು ಶ್ರೀಸಾಮಾನ್ಯರು ದೂರವೇ ಇರಿಸಿದ್ದಾರೆ’ ಎಂದು ಅವರು ಕೊರಗುತ್ತಾರೆ.

ಶಾಲಾ– ಕಾಲೇಜುಗಳಲ್ಲಿ ಸಂಸ್ಕೃತದ ಪಠ್ಯಕ್ರಮದಲ್ಲಿ ಬದಲಾವಣೆ ತರುವ ಅಗತ್ಯ ಇದೆ ಎಂದು ಒತ್ತಾಯಿಸುವ ನಸ್ರೀನ್‌, ‘ಈ ಭಾಷೆಯನ್ನು ಆಸಕ್ತಿದಾಯಕವನ್ನಾಗಿ ಮಾಡಲು ಪಠ್ಯಕ್ರಮ ರಚನಾ ಮಂಡಳಿ ಚಿಂತಿಸಬೇಕು. ಪುರಾತನ ಭಾಷೆಯಾದ ಸಂಸ್ಕೃತ, ಮೃತ ಭಾಷೆಗಳ ಪಟ್ಟಿಗೆ ಸೇರಲು ಬಿಡಬಾರದು. ಹಾಗೆ ನೋಡಿದರೆ, ಕಂಪ್ಯೂಟರ್‌ಗೆ ಸೂಕ್ತವಾಗಿ ಹೊಂದಿಕೊಳ್ಳುವ ಭಾಷೆ ಸಂಸ್ಕೃತ’ ಎನ್ನುತ್ತಾರೆ ಅವರು.

‘ವಿದ್ಯಾರ್ಥಿಗಳಲ್ಲಿ ಭಾಷೆ ಬಗ್ಗೆ ಆಸಕ್ತಿ ಹುಟ್ಟಿಸುವವರು ಬೋಧಕರು. ಆದ್ದರಿಂದ ಯಾವುದೇ ಭಾಷೆ ಉಳಿಯಬೇಕಿದ್ದರೆ ಉತ್ತಮ ಬೋಧಕರೂ ಇರಬೇಕು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಸದ್ಯ ಅಂದಾಜು 200 ವಿದ್ಯಾರ್ಥಿಗಳು ಸಂಸ್ಕೃತದ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಗೆ ಸಂಸ್ಕೃತದ ಬಗ್ಗೆ ಅತೀವ ಒಲವು ಮೂಡುವಂತೆ ಮಾಡುವುದು ನನ್ನ ಗುರಿ’ ಎನ್ನುವಾಗ ಅವರ ಕಣ್ಣುಗಳು ಮಿಂಚುತ್ತವೆ.

‘ಈಗಿನ ಬಹುತೇಕ ಮಕ್ಕಳಿಗೆ ಸಂಸ್ಕೃತ ಕಲಿಕೆಯಲ್ಲಿ ಆಸಕ್ತಿ ಇಲ್ಲ. ಈ ಭಾಷೆ ಉದ್ಯೋಗ ದೊರಕಿಸಿಕೊಡದು ಎಂಬುದು ಅವರ ಅನಿಸಿಕೆ. ಇದು ಬಹಳಷ್ಟು ಮಟ್ಟಿಗೆ ಸತ್ಯ ಕೂಡ. ಸಂಸ್ಕೃತ ಕಲಿತವರಿಗೂ ವಿಪುಲ ಉದ್ಯೋಗಾವಕಾಶ ಸಿಗುವಂತೆ ಏನಾದರೂ ಮಾಡಬೇಕು’ ಎಂಬ ಕಳಕಳಿ ನಸ್ರೀನ್ ಅವರಿಗಿದೆ.

‘ದೇಶದ ವಿವಿಧೆಡೆ ಮುಸ್ಲಿಂ ಸಮುದಾಯದ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಸಂಸ್ಕೃತ ಕಲಿಯುತ್ತಿರುವುದು ಸಂತಸಕರ ಬೆಳವಣಿಗೆ’ ಎಂಬ ಸಮಾಧಾನವೂ ಅವರಿಗಿದೆ.

‘ಬೋಧನೆಯ ಜೊತೆಗೆ ವ್ಯಕ್ತಿತ್ವ ನಿರ್ಮಾಣ ಮಾಡುವುದೂ ಶಿಕ್ಷಣದ ಗುರಿಗಳಲ್ಲಿ ಒಂದು. ವಿದ್ಯಾರ್ಥಿಗಳು ವಿದ್ಯಾವಂತರಾದರಷ್ಟೇ ಸಾಲದು, ಉತ್ತಮ ಚಾರಿತ್ರ್ಯವಂತರೂ ಆಗಬೇಕು. ಅಂತಹ ಶಿಕ್ಷಣವನ್ನು ನಾವು ನೀಡಬೇಕು’ ಎನ್ನುವ ನಸ್ರೀನ್‌, ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯೂ ಹೌದು.

‘ನಾವು ಅವರನ್ನು ಎಂದೂ ಮುಸ್ಲಿಂ ಮಹಿಳೆಯೆಂದು ನೋಡಿಯೇ ಇಲ್ಲ. ಅವರು ಅತ್ಯುತ್ತಮ ಬೋಧಕಿ’ ಎಂಬ ಅವರ ಸಹೋದ್ಯೋಗಿಗಳ ಈ ಮಾತುಗಳೇ ನಸ್ರೀನ್‌ ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದನ್ನು ಸಾರುತ್ತದೆ.

ನಸ್ರೀನ್‌ ಪತಿ ಕಂಪ್ಯೂಟರ್‌ ಎಂಜಿನಿಯರ್‌, ಸದ್ಯ ಅಮೆರಿಕೆಯಲ್ಲಿದ್ದಾರೆ. ಐಎಎಸ್‌ ಅಧಿಕಾರಿಯಾಗಬೇಕು ಎಂಬುದು ಅವರ ಮಗನ ಹಂಬಲಿಕೆ. ಇದಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.

ಸಂಸ್ಕೃತದಲ್ಲಿ ಹಲವು ಪುಸ್ತಕಗಳನ್ನು ಬರೆದಿರುವ ನಸ್ರೀನ್‌ ಅವರಿಗೆ ‘ಸಾಹಿತ್ಯ ಶ್ರೀ’, ‘ಮಹಾದೇವಿ ಕಿರಣ್‌ ಸನ್ಮಾನ್‌’ ‘ಪ್ರಯಾಗ್‌ ಗೌರವ್’ ‘ರಾಷ್ಟ್ರೀಯ ಗೌರವ್‌’ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ, ಗೌರವಗಳು ಸಂದಿವೆ.
ಇತ್ತೀಚೆಗೆ ‘ಜ್ಞಾನೇಶ್ವರ್‌ ಮಿಶ್ರಾ ಸಂಸ್ಕೃತ ವಿದುಷಿ ಸನ್ಮಾನ’ವನ್ನು ಉತ್ತರ ಪ್ರದೇಶ ಸರ್ಕಾರ ಇವರಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.