ADVERTISEMENT

ಬೆಂಗಳೂರಿನ ಕೆರೆಗಳೇ ಅತಿ ಹೆಚ್ಚು ಮಲಿನ

ಆರ್‌.ಜೆ.ಯೋಗಿತಾ
Published 27 ಮೇ 2017, 19:30 IST
Last Updated 27 ಮೇ 2017, 19:30 IST
ಚಿತ್ರಗಳು: ಆನಂದ ಬಕ್ಷಿ
ಚಿತ್ರಗಳು: ಆನಂದ ಬಕ್ಷಿ   
ರಾಮನಗರ ಜಿಲ್ಲೆಯ ಕನಕಪುರ  ತಾಲ್ಲೂಕಿನವರಾದ ಲಕ್ಷ್ಮಣ್‌, 1984ರಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಮುಗಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿದರು. ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕೃಷಿ ಎಂಜಿನಿಯರ್‌ ಆಗಿ ಕೆಲ ಕಾಲ ಕಾರ್ಯನಿರ್ವಹಿಸಿದರು.  2015ರ ಡಿಸೆಂಬರ್‌ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 
 
ಬೆಳ್ಳಂದೂರು ಕೆರೆಯ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿ ಕೆರೆಯ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಬೇಕು ಎಂದು ಏಪ್ರಿಲ್‌ 18ರಂದು  ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನ್ಯಾಯಪೀಠ ನಿರ್ದೇಶಿಸಿತ್ತು. ಆ ನಂತರದ ಬೆಳವಣಿಗೆಗಳ ಕುರಿತು ಲಕ್ಷ್ಮಣ್‌, ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
 
* ಎನ್‌ಜಿಟಿ ತರಾಟೆ ತೆಗೆದುಕೊಂಡ ನಂತರ ಕೆಎಸ್‌ಪಿಸಿಬಿಗೆ ಚುರುಕು ಮುಟ್ಟಿದೆಯೇ?
ನಾನು ಅಧಿಕಾರ ವಹಿಸಿಕೊಂಡ ನಂತರ ಮಾಡಿದ ಮೊದಲ ಕೆಲಸ ಬೆಳ್ಳಂದೂರು ಕೆರೆ ಪರಿಶೀಲನೆ. ಆಗಿನಿಂದಲೇ ಕೆರೆ ಪುನಶ್ಚೇತನದ ಕುರಿತು ಅನೇಕ ಸಭೆ ನಡೆಸಿದ್ದೇನೆ. ಹಂತ ಹಂತವಾಗಿ ಅದನ್ನು ಕಾರ್ಯರೂಪಗೊಳಿಸಲಾಗುತ್ತಿದೆ. ಎನ್‌ಜಿಟಿ ಆದೇಶ ಬರುವ ಆರು ತಿಂಗಳ ಮೊದಲೇ ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದಲ್ಲಿರುವ ಅನೇಕ ಕೈಗಾರಿಕೆಗಳಿಗೆ ಭೇಟಿ ನೀಡಿದ ಮಂಡಳಿಯ ಅಧಿಕಾರಿಗಳು  ಪರಿಶೀಲನೆ ನಡೆಸಿದ್ದಾರೆ. ನಿಯಮ ಬಾಹಿರವಾಗಿ ತ್ಯಾಜ್ಯ ನೀರನ್ನು ಕೆರೆಗೆ ಹರಿಸುತ್ತಿದ್ದ ಕೈಗಾರಿಕೆಗಳಿಗೆ ನೋಟಿಸ್‌ ನೀಡಲಾಗಿದೆ. ಇಲ್ಲದಿದ್ದರೆ ಆದೇಶ ಬಂದ ಕೇವಲ ಒಂದು ತಿಂಗಳಲ್ಲಿ 488 ಕೈಗಾರಿಕೆಗಳ ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ.  
 
* ನಿಯಮಿತವಾಗಿ ಪರಿಶೀಲನೆ ನಡೆಸಿದರೂ ಕೆರೆಗಳು ಮಾತ್ರ ಮಾಲಿನ್ಯ ಮುಕ್ತವಾಗಿಲ್ಲವಲ್ಲ?
ಒಳಚರಂಡಿ ಮೂಲಕ ತ್ಯಾಜ್ಯ ಸೇರುತ್ತಿರುವುದೇ ಕೆರೆಗಳ ಮಾಲಿನ್ಯಕ್ಕೆ ಮೂಲ ಕಾರಣ. ಇದರಲ್ಲಿ ಕೈಗಾರಿಕೆಗಳ ಪಾತ್ರವೂ ಇದೆ. ಆದರೆ, ಹೆಚ್ಚಿನ ಕೊಡುಗೆ ನೀಡುತ್ತಿರುವುದು ನಗರದ ಚರಂಡಿಗಳು. ಬಹಳ ಹಿಂದಿನಿಂದಲೂ ಚರಂಡಿಯ ತ್ಯಾಜ್ಯವನ್ನು ರಾಜಕಾಲುವೆ, ನಾಲೆಗಳಲ್ಲಿ ಸುರಿಯುವ ಕೆಟ್ಟ ಚಾಳಿ ನಮ್ಮಲ್ಲಿ ಮೈಗೂಡಿದೆ. ಮಳೆ ಬಂದಾಗ ಅದು ನೇರವಾಗಿ ಕೆರೆಗೆ ಹೋಗಿ ಸೇರುತ್ತದೆ.
 
ಸ್ಥಳೀಯ ಸಂಸ್ಥೆಗಳು ರಾಜಕಾಲುವೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ, ಹೂಳು ತೆಗೆಯುವ, ಒತ್ತುವರಿ ತೆರವುಗೊಳಿಸುವ ಕೆಲಸ ಮಾಡಿದ್ದರೆ ಕೆರೆಗಳು ಈ ಸ್ಥಿತಿಗೆ ಹೋಗುತ್ತಿರಲಿಲ್ಲ. ಮಂಡಳಿ ಎಚ್ಚರಿಕೆ ನೀಡಿದ ಬಳಿಕ ಬಹಳಷ್ಟು ಕೈಗಾರಿಕೆಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಎಸ್‌ಟಿಪಿ) ಅಳವಡಿಸಿಕೊಂಡಿವೆ. ಕೇವಲ ಮಾಲಿನ್ಯ ನಿಯಂತ್ರಣ ಮಂಡಳಿಯಷ್ಟೇ ಕೆರೆಗಳ  ಸ್ವಚ್ಛತೆಗೆ ಕೆಲಸ ಮಾಡಿದರೆ ಉದ್ದೇಶ ಸಾಕಾರಗೊಳ್ಳುವುದಿಲ್ಲ. ಇದಕ್ಕೆ ಎಲ್ಲರ ಸಹಭಾಗಿತ್ವವೂ ಅಗತ್ಯ.
 
* ಬೆಂಗಳೂರಿನಲ್ಲಿರುವ ಬಟ್ಟೆಗೆ ಬಣ್ಣ ಹಾಕುವ ಘಟಕಗಳ ಮಾಲೀಕರಿಗೆ ಕೆಎಸ್‌ಪಿಸಿಬಿ ಅನುಮತಿ ಪಡೆಯಬೇಕು ಎಂಬುದೇ ತಿಳಿದಿಲ್ಲ. ಇದು ನಿಮ್ಮ ಲೋಪ ಅಲ್ಲವೇ?
ನಮ್ಮ ಅಧಿಕಾರಿಗಳಿಂದಲೂ ಲೋಪ ಆಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರವಾನಗಿ ನೀಡಿರುವ ಕೈಗಾರಿಕೆಗಳು ಹಾಗೂ ನಮ್ಮಲ್ಲಿ ಅನುಮತಿ ಪಡೆದ ಕೈಗಾರಿಕೆಗಳ ಪಟ್ಟಿಯನ್ನು ನಿಯಮಿತವಾಗಿ ತುಲನೆ ಮಾಡುವ ಕೆಲಸ ಆಗಬೇಕಿತ್ತು. ಆ ಕೆಲಸ ಸರಿಯಾಗಿ ನಡೆದಿಲ್ಲ. ಕರ್ತವ್ಯ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ತಮಿಳುನಾಡಿನಲ್ಲಿ ನಿಷೇಧ ಹೇರಿದ ಬಳಿಕ ಕರ್ನಾಟಕಕ್ಕೆ ಬಂದು ನೆಲೆಯೂರಿರುವ ಬಟ್ಟೆಗೆ ಬಣ್ಣ ಹಾಕುವ ಘಟಕಗಳ ಪರಿಶೀಲನೆ ನಡೆಸಿ, ಅನಧಿಕೃತವಾಗಿ ನಡೆಯುತ್ತಿದ್ದ 32 ಘಟಕಗಳಿಗೆ ಬೀಗ ಹಾಕಿಸಿದ್ದೇವೆ. ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸಿ ಅನೇಕ ಕೈಗಾರಿಕೆಗಳನ್ನು ಮುಚ್ಚಿಸಿದ್ದೇವೆ.
 
* ಕೆಎಸ್‌ಪಿಸಿಬಿಗೆ ಪರಿಸರಕ್ಕಿಂತ ಕೈಗಾರಿಕೆಗಳ ಮೇಲೆ ಹೆಚ್ಚು ಒಲವಿದೆ ಎನ್ನುವ ಆರೋಪ ಇದೆಯಲ್ಲಾ?
ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕೆಂದರೆ ಕೈಗಾರಿಕೀಕರಣವನ್ನೂ ನಾವು ಬೆಂಬಲಿಸಬೇಕು. ಹಾಗಂತ ಪರಿಸರ ಸಂರಕ್ಷಣೆಯಾಗಬೇಕಾದರೆ  ಕೈಗಾರಿಕೆಗಳನ್ನು ಕಡೆಗಣಿಸಬೇಕು ಎಂಬುದೂ ಸರಿಯಲ್ಲ. ಎಸ್‌ಟಿಪಿ ಪರವಾನಗಿ ನವೀಕರಿಸುವ ಅವಧಿಯನ್ನು ಎರಡು ವರ್ಷದಿಂದ ಐದು ವರ್ಷಕ್ಕೆ ವಿಸ್ತರಣೆ, ಆನ್‌ಲೈನ್‌ ಮೂಲಕವೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ನೀಡುವುದು ಸೇರಿ ಕೈಗಾರಿಕೆಗಳ ಸ್ನೇಹಿಯಾಗಿಯೂ ಕೆಎಸ್‌ಪಿಸಿಬಿ ಕೆಲಸ ಮಾಡಬೇಕಾಗುತ್ತದೆ. ಹಾಗೆಯೇ ನಿಯಮ ಮೀರುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನೂ ಕೈಗೊಂಡಿದ್ದೇವೆ.
 
* ಕೆಎಸ್‌ಪಿಸಿಬಿ ಅಧಿಕಾರ ನೋಟಿಸ್‌ ನೀಡುವುದಕ್ಕಷ್ಟೇ ಸೀಮಿತವೇ? 
ನೋಟಿಸ್‌ ನೀಡುವುದು ಮೊದಲ ಪ್ರಕ್ರಿಯೆ ಅಷ್ಟೇ. ನಿಯಮ ಉಲ್ಲಂಘನೆ ಮಾಡಿರುವುದು ತಿಳಿದ ತಕ್ಷಣ ಅವರಿಗೆ ಆ ಬಗ್ಗೆ ಮಾಹಿತಿ ನೀಡಿ, ಮೊದಲ ಅವಕಾಶ ನೀಡುತ್ತೇವೆ. ಎರಡನೇ ಬಾರಿ ಎಚ್ಚರಿಕೆ ನೀಡುತ್ತೇವೆ. ಅದಕ್ಕೂ ಜಗ್ಗಲಿಲ್ಲ ಎಂದರೆ ನೋಟಿಸ್‌ ನೀಡುತ್ತೇವೆ. ಇವೆಲ್ಲದಕ್ಕೂ ಬಗ್ಗದಿದ್ದಾಗ ಕೊನೆಯ ಹಂತವಾಗಿ ತಪ್ಪಿತಸ್ಥರ ವಿರುದ್ಧ  ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇವೆ. ಕೇವಲ ಖಾಸಗಿ ಕೈಗಾರಿಕೆಗಳಷ್ಟೆ ಅಲ್ಲ, ನಿಯಮ ಪಾಲಿಸದ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಂಡಿದ್ದೇವೆ. ಈಗಾಗಲೇ 35 ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್‌್ ಪ್ರಕರಣ ದಾಖಲಿಸಿದ್ದೇವೆ. ಕೆಲವರು ಶಿಕ್ಷೆಯನ್ನೂ ಅನುಭವಿಸಿದ್ದಾರೆ. 
 

 
* ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಮಂಡಳಿ ಏನು ಕ್ರಮ ಕೈಗೊಂಡಿದೆ?
ಪ್ರತಿ ತಿಂಗಳು ರಾಜ್ಯದ ಎಲ್ಲಾ ಕೆರೆಗಳ ನೀರಿನ ಗುಣಮಟ್ಟ ಪರೀಕ್ಷೆ ನಡೆಸುತ್ತೇವೆ. ಪಿ.ಎಚ್‌. ಪರೀಕ್ಷೆ, ನೀರಿನಲ್ಲಿ ಆಮ್ಲಜನಕದ ಪ್ರಮಾಣ ಎಷ್ಟಿದೆ ಎಂಬ ಬಗ್ಗೆ ತಪಾಸಣೆ ನಡೆಸುತ್ತೇವೆ.  ತ್ಯಾಜ್ಯ ನೀರನ್ನು ಹರಿಸುತ್ತಿರುವುದು, ಘನ ತ್ಯಾಜ್ಯ, ಕಟ್ಟಡ ತ್ಯಾಜ್ಯ ಸುರಿಯುತ್ತಿರುವುದು ನಮ್ಮ ಗಮನಕ್ಕೆ ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ  ಕ್ರಮಕೈಗೊಳ್ಳುತ್ತೇವೆ. 
 
ಕೆರೆ ಮಲಿನ ಆಗುತ್ತಿರುವ ಬಗ್ಗೆ ಸಾರ್ವಜನಿಕರೂ ದೂರು ನೀಡಬಹುದು. ಮಾಲಿನ್ಯ ನಿಯಂತ್ರಣ ಮಂಡಳಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಒಳಗೊಳ್ಳುವಿಕೆಯೂ ಅಗತ್ಯ.
 
* ರಾಜ್ಯದಲ್ಲಿನ ಕೆರೆಗಳ ಸ್ಥಿತಿಗತಿ ಹೇಗಿದೆ?
ರಾಜ್ಯದ ಎಲ್ಲಾ ಕೆರೆಗಳಿಗೂ ಭೇಟಿ ನೀಡಿ, ಅದರಲ್ಲಿನ ಆಮ್ಲಜನಕದ ಪ್ರಮಾಣ, ತ್ಯಾಜ್ಯ ವಿಲೇವಾರಿ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದ್ದೇನೆ. ಬೆಂಗಳೂರು ನಗರದ ಕೆರೆಗಳು ಮಲಿನಗೊಂಡಷ್ಟು ರಾಜ್ಯದ ಇತರೆ ಭಾಗದ ಕೆರೆಗಳು ಮಲಿನ ಆಗಿಲ್ಲ. ಬೆಂಗಳೂರಿನ 85 ಕೆರೆಗಳಲ್ಲಿ 50 ಕೆರೆಗಳ ನೀರು ಕುಡಿಯಲು ಹಾಗೂ ಮೀನುಗಾರಿಕೆಗೆ ಯೋಗ್ಯವಾಗಿಲ್ಲ ಎಂದು ಸಾಬೀತಾಗಿದೆ. ಕೇವಲ ಕೈಗಾರಿಕೆ ಹಾಗೂ ಕೃಷಿ ಬಳಕೆಗೆ ಉಪಯೋಗಿಸಬಹುದು.
 
* ಕೆಎಸ್‌ಪಿಸಿಬಿ ಸರ್ಕಾರದ ಮುಲಾಜಿಗೆ ಒಳಗಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪ ಇದೆ?
ಪರಿಸರದ ವಿಚಾರ ಬಂದಾಗ ಸರ್ಕಾರ, ಪ್ರಭಾವಿ ವ್ಯಕ್ತಿ, ಕೈಗಾರಿಕೆ ಯಾವುದನ್ನೂ ನೋಡುವುದಿಲ್ಲ. ಯಾರ ಆಮಿಷಕ್ಕೂ ಮಂಡಳಿ ಒಳಗಾಗಿಲ್ಲ, ಒಳಗಾಗುವುದೂ ಇಲ್ಲ. ಕೆರೆ ಮಾಲಿನ್ಯಕ್ಕೆ ಕಾರಣವಾದ ಬಿಬಿಎಂಪಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇವೆ. ಒಳಚರಂಡಿ ನೀರನ್ನು ಸಂಸ್ಕರಿಸದೆ ಹಾಗೆಯೇ ಕೆರೆಗೆ ಹರಿಯಿಸುತ್ತಿದ್ದ ಜಲಮಂಡಳಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದೇವೆ. ಆ ಸಂದರ್ಭದಲ್ಲಿ ಅನೇಕ ಕಡೆಯಿಂದ ಒತ್ತಡಗಳು ಬಂದಿವೆ. ಯಾವುದಕ್ಕೂ ಮಂಡಳಿ ಬಗ್ಗಿಲ್ಲ.
 
* ಬೆಳ್ಳಂದೂರು ಕೆರೆ ಸ್ವಚ್ಛಗೊಂಡ ನಂತರ ಮಂಡಳಿಯ ವೇಗ ತಗ್ಗುತ್ತದೆಯೇ?
ಎನ್‌ಜಿಟಿ ಆದೇಶದಿಂದ ನಮ್ಮ ಕೆಲಸಕ್ಕೆ ವೇಗ ದೊರೆತಿರುವುದು ನಿಜ. ಇದೇ ವೇಗದಲ್ಲಿಯೇ ಎಲ್ಲಾ ಕೆರೆಗಳ ಪುನರುಜ್ಜೀವನಕ್ಕೆ ಕ್ರಮಕೈಗೊಳ್ಳುತ್ತೇವೆ. ಬೆಳ್ಳಂದೂರು ಕೆರೆಯ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಈಗಿನ ವೇಗದಲ್ಲೇ ಕೆಲಸ ಸಾಗಿದರೆ 6–7 ತಿಂಗಳಲ್ಲಿ ಸುಂದರ ಬೆಳ್ಳಂದೂರು ಕೆರೆಯನ್ನು ಜನರು ಕಾಣಬಹುದು. ಮುಂದಿನ ಹಂತದಲ್ಲಿ ವರ್ತೂರು, ಭೈರಮಂಗಲ ಕೆರೆಗಳ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳುತ್ತೇವೆ. 
 
* ರಾಜ್ಯದಲ್ಲಿ ವಾಯುಮಾಲಿನ್ಯ  ಕಡಿಮೆಗೊಳಿಸಲು ಏನೆಲ್ಲ ಯೋಜನೆಗಳನ್ನು ಹಮ್ಮಿಕೊಂಡಿದ್ದೀರಿ?
ಬೆಂಗಳೂರು ಮತ್ತು ತುಮಕೂರು ನಗರಗಳಲ್ಲಿನ ವಾಯುಮಾಲಿನ್ಯ ಆತಂಕಕಾರಿ ಸ್ಥಿತಿ ತಲುಪಿದೆ. ಹಾಗೆಯೇ  ದಾವಣಗೆರೆ, ರಾಯಚೂರು, ಹುಬ್ಬಳ್ಳಿ  ನಗರಗಳಲ್ಲಿಯೂ ವಾಯುಮಾಲಿನ್ಯ ಪ್ರಮಾಣ ರಾಷ್ಟ್ರೀಯ ಮಿತಿಗಿಂತ ಹೆಚ್ಚಿದೆ.

ನಗರದಲ್ಲಿ ರಸ್ತೆಗಳ ತಾಳಿಕೆ ಸಾಮರ್ಥ್ಯಕ್ಕಿಂತ 2.5ರಷ್ಟು ಹೆಚ್ಚು ವಾಹನ ದಟ್ಟಣೆ ಇದೆ. ಕೇವಲ ಮಂಡಳಿಯಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ನಾವು ಜಾಗೃತಿ ಮೂಡಿಸಬಹುದು. ಆದರೆ,  ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಮಾಲಿನ್ಯ ನಿಯಂತ್ರಣ ಸಾಧ್ಯ. ಜನರು ಸಾರ್ವಜನಿಕ ಸಾರಿಕೆ ವ್ಯವಸ್ಥೆ ಬಳಕೆಗೆ ಒತ್ತು ನೀಡಬೇಕು.

ದೆಹಲಿಯ ಸಮ–ಬೆಸ ಮಾದರಿ ಯನ್ನು ಇಲ್ಲಿ ಅಳವಡಿಸಲು ಸಾಧ್ಯವಿಲ್ಲ. ಅದೊಂದು ತಾತ್ಕಾಲಿಕ ಪರಿಹಾರವಷ್ಟೇ. ಹಾಗಾಗಿ ಮಾಲಿನ್ಯ ತಗ್ಗಿಸಲು ನಮ್ಮದೆ ಆದ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.