ADVERTISEMENT

‘ಮಾಜಿ’ ಎಂದಾಗ ವಿಶ್ವನಾಥ್‌ಗೆ ಕೋಪ...

ವಾರೆಗಣ್ಣು

ಕೆ.ಓಂಕಾರ ಮೂರ್ತಿ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST

ಮೈಸೂರು: ತಮ್ಮನ್ನು ‘ಮಾಜಿ’ ಎಂದು ಸಂಬೋಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಕ್ಷಣವನ್ನು ಕಾಂಗ್ರೆಸ್‌ ತೊರೆದಿರುವ ಎಚ್‌.ವಿಶ್ವನಾಥ್‌ ಈಚೆಗೆ ಮೈಸೂರಿನಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ರಸವತ್ತಾಗಿ ವಿವರಿಸಿದರು.

‘ಸಿದ್ದರಾಮಯ್ಯ ಹಾಗೂ ನಾನು ಮುಖಾಮುಖಿಯಾಗಿ ಆರು ತಿಂಗಳಾಯಿತು. ಕೊನೆಯ ಬಾರಿ ಭೇಟಿಯಾಗಿದ್ದಾಗ ನನ್ನನ್ನು ಅವಮಾನಿಸಿದರು. ಅದನ್ನು ನಾನು ಇನ್ನೂ ಮರೆತಿಲ್ಲ’ ಎಂದರು.

ಕಚೇರಿಯಲ್ಲಿ ತಮ್ಮ ಆಪ್ತರೊಂದಿಗೆ ಕುಳಿತಿದ್ದರು. ಒಳಗಡೆ ಹೋಗುತ್ತಿದ್ದಂತೆ ‘ಏನ್‌ ಮಾಜಿ ಇಲ್ಲಿಗೆ ಬಂದೆ’ ಎಂದು ಅವರದೇ ಧಾಟಿಯಲ್ಲಿ ಎಲ್ಲರ ಮುಂದೆ ಹೀಯಾಳಿಸಿದರು. ಉಕ್ಕಿ ಬರುತ್ತಿದ್ದ ಕೋಪ ತಡೆದುಕೊಂಡು, ‘ನೀವು ಎಂದೂ ಮಾಜಿ ಆಗಿಲ್ಲವೇ? ಅಧಿಕಾರ ಶಾಶ್ವತವಲ್ಲ, ಮುಂದೆಯೂ ಮಾಜಿ ಆಗಬಹುದು. ಇನ್ಮುಂದೆ ಈ ರೀತಿ ಮಾತನಾಡಬೇಡಿ’ ಎಂದು ಹೇಳಿದ ಪ್ರಸಂಗವನ್ನು ನೆನಪಿಸಿಕೊಂಡರು.

ADVERTISEMENT

‘ನನ್ನನ್ನು ಮಾತನಾಡಿಸದಿದ್ದರೂ ಬೇಸರವಾಗುತ್ತಿರಲಿಲ್ಲ. ಆದರೆ, ಮಾಜಿ ಎಂದು ಹೀಯಾಳಿಸಿದ್ದು ತುಂಬಾ ನೋವುಂಟು ಮಾಡಿತು. ಒಬ್ಬ ಹಿರಿಯ ನಾಯಕನಿಗೆ ತೋರಿಸುವ ಗೌರವ ಇದೇನಾ’ ಎಂದು ಮತ್ತೆ ಗರಂ ಆದರು.

‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ಖುಷಿಯಿಂದ ಕಣ್ಣೀರಿಟ್ಟಿದ್ದೆ. ಕೆಲವರು ಬೆಳೆದು ಬೆಳೆಸುತ್ತಾರೆ. ಆದರೆ, ಅವರು ತಾವು ಬೆಳೆದು ಬೆಳೆಸಿದವರನ್ನು ತುಳಿಯುತ್ತಿದ್ದಾರೆ. ಈ ಬಗ್ಗೆ ನನಗೆ ಆಗ ಸ್ವಲ್ಪ ಸುಳಿವು ಲಭಿಸಿದ್ದರೂ ಅವರನ್ನು ಕಾಂಗ್ರೆಸ್‌ನೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ’ ಎಂದು ಮೌನವಾದರು.

‘ಸಿದ್ದರಾಮಯ್ಯ ಅವರಿಗೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ. ಜೀ ಹುಜೂರ್‌ ಎಂದು ಹೇಳಿಕೊಂಡಿರಲು ನಾನು ಮರೀಗೌಡ ಅಲ್ಲ’ ಎಂದು ಮಾತು ಮುಗಿಸುತ್ತಿದ್ದಂತೆ ಸಭಾಂಗಣದಲ್ಲಿ ಗುಸುಗುಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.