ADVERTISEMENT

ವಟರ್... ವಟರ್ ಕಪ್ಪೆಗಳು

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST
ಚಿತ್ರ: ವಿಜಯಕುಮಾರಿ ಆರ್.
ಚಿತ್ರ: ವಿಜಯಕುಮಾರಿ ಆರ್.   

ಮಾದ್ರೆ ರವೀಂದ್ರ

ಬಹಳ ಹಿಂದಿನ ಕಾಲದಲ್ಲಿ ಪ್ರಶಾಂತವಾದ ತೊರೆಯೊಂದು ಹರಿಯುತ್ತಿತ್ತು. ಅಲ್ಲಿ ತಾಯಿ ಕಪ್ಪೆ ಮತ್ತು ಮಗ ಕಪ್ಪೆ ವಾಸವಾಗಿದ್ದವು. ಮಗ ಕಪ್ಪೆ ಚಿಕ್ಕಂದಿನಲ್ಲಿ ಇರುವಾಗಲೇ ತಂದೆ ಕಪ್ಪೆ ಅನಾರೋಗ್ಯದಿಂದ ಸತ್ತುಹೋಗಿತ್ತು. ತಂದೆ ಇಲ್ಲದ ಮರಿಕಪ್ಪೆಯನ್ನು ತಾಯಿ ಕಪ್ಪೆ ತುಂಬ ಪ್ರೀತಿಯಿಂದ ಸಾಕುತ್ತಿತ್ತು. ಆದರೆ ಮರಿಕಪ್ಪೆ ಬಹಳ ತುಂಟ ಮತ್ತು ಹಟಮಾರಿ ಸ್ವಭಾವ ಬೆಳೆಸಿಕೊಂಡಿತ್ತು. ಅದು ತಾಯಿ ಹೇಳಿದ ಮಾತನ್ನು ಕೇಳುತ್ತಿರಲಿಲ್ಲ.

ಮನೆಯಲ್ಲಿ ಇರುವ ಕಸವನ್ನು ದಡದ ಮೇಲೆ ಹಾಕುವಂತೆ ಹೇಳಿದರೆ ತಾಯಿಗೆ ಗೊತ್ತಾಗದಂತೆ ನೀರಿಗೆ ಚೆಲ್ಲುತ್ತಿತ್ತು. ಬೇರೆ ಕಪ್ಪೆ ಮರಿಗಳೊಂದಿಗೆ ಜಗಳ ಮಾಡುತ್ತಿತ್ತು. ಹಾಗಾಗಿ ಬೇರೆ ಕಪ್ಪೆಗಳು ತಮ್ಮ ಮಕ್ಕಳಿಗೆ ಅದರ ಜೊತೆ ಸೇರದಂತೆ ತಿಳಿಹೇಳುತ್ತಿದ್ದವು. ತಾಯಿ ಕಪ್ಪೆಗೆ ಬುದ್ದಿ ಹೇಳಿ ಹೇಳಿ ಸಾಕಾಗಿತ್ತು. ಆದರೂ ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ ಮಗ ಕಪ್ಪೆಯು ದೊಡ್ಡವನಾದರೂ ಸ್ವಭಾವ ಬದಲಾಗಲಿಲ್ಲ.

ADVERTISEMENT

ಕ್ರಮೇಣ ತಾಯಿ ಕಪ್ಪೆಗೆ ವಯಸ್ಸಾಯಿತು. ತಾನು ಹೆಚ್ಚು ದಿನ ಬದುಕುವುದಿಲ್ಲವೆಂದು ತಿಳಿಯಿತು. ಒಂದು ದಿನ ಮಗ ಕಪ್ಪೆಯೊಂದಿಗೆ ‘ಮಗು, ನಾನೇನಾದರೂ ಸತ್ತುಹೋದರೆ ನನ್ನನ್ನು ದಡದ ಎದುರು ಇರುವ ದಿಬ್ಬದ ಮೇಲೆ ಹೂಳಬೇಡ... ದಡದ ಮೇಲೆಯೇ ನನ್ನನ್ನು ಹೂತುಹಾಕು’ ಎಂದು ಹೇಳಿತು. ಒಂದು ದಿನ ಅದು ಸತ್ತುಹೋಯಿತು.

ಮಗ ಕಪ್ಪೆ, ‘ಇಷ್ಟು ದಿವಸ ನಾನು ತಾಯಿ ಹೇಳಿದ ಮಾತನ್ನು ಕೇಳಲಿಲ್ಲ. ತಾಯಿಯ ಕೊನೆಯ ಆಸೆಯನ್ನಾದರೂ ನೆರವೇರಿಸೋಣ’ ಎಂದು ಆಲೋಚಿಸಿ ತಾಯಿ ಕಪ್ಪೆಯ ಮೃತದೇಹವನ್ನು ದಡದ ಮೇಲೆಯೇ ಹೂತುಹಾಕಿತು.

ಅದು ಮಳೆಗಾಲದ ಪ್ರಾರಂಭದ ದಿನಗಳು. ಕೆಲವು ದಿನಗಳಲ್ಲಿ ಮಳೆ ಜೋರಾಗಿ ಸುರಿಯಲಾರಂಭಿಸಿತು. ಮಳೆ ನೀರು ತೊರೆಯನ್ನು ತುಂಬಿ ದಡದ ಮೇಲೆಲ್ಲ ಹರಿಯಲಾರಂಭಿಸಿತು. ಮಳೆಗೆ ಕಸ, ಕಡ್ಡಿ, ಮಣ್ಣು ಹರಿದು ಬಂದಿದ್ದರಿಂದ ಕೊಳದ ನೀರು ಮಣ್ಣಿನ ಬಣ್ಣಕ್ಕೆ ತಿರುಗಿತು. ಹಾಗಾಗಿ ಎಲ್ಲ ಕಪ್ಪೆಗಳು ತಿಳಿ ನೀರು ಅರಸಿ ದಡದ ಆಚೆಗೆ ಬಂದವು.

ಒಂದು ದಿನ ಮಗ ಕಪ್ಪೆ ದಡದ ಅಂಚಿನಲ್ಲಿ ತಿರುಗಾಡುತ್ತಿದ್ದಾಗ ಸ್ವಲ್ಪ ದೂರದಲ್ಲಿ ವಾಸಿಸುತ್ತಿದ್ದ ಹಿರಿಯ ಸಂಬಂಧಿ ಕಪ್ಪೆಯೊಂದು ಸಿಕ್ಕಿತು. ಅದು, ‘ಮಗಾ, ನೀನು ಎಂಥಾ ಕೆಲಸ ಮಾಡಿಬಿಟ್ಟೆ ಗೊತ್ತಾ? ನನಗೆ ಬೇರೆ ಕಪ್ಪೆಗಳು ಹೇಳಿದವು ಇದನ್ನು. ನೀನು ನಿನ್ನ ತಾಯಿಯನ್ನು ದಡದ ಮೇಲೆಯೇ ಹಾಕಿದೆಯಂತೆ. ದಿಬ್ಬದ ಮೇಲೆ ಹೂಳದೆ ದಡದ ಮೇಲೆ ಹೂಳು ಎಂದು ನಿನ್ನ ತಾಯಿ ನಿನಗೆ ಹೇಳಿದ್ದಳು. ಆದರೆ, ನೀನು ದಿಬ್ಬದ ಮೇಲೆ ಹೂಳಲಿ ಎಂಬುದು ನಿನ್ನ ತಾಯಿಯ ಬಯಕೆಯಾಗಿತ್ತು... ನೀನು ಯಾವಾಗಲೂ ನಿನ್ನ ತಾಯಿಯ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದುದರಿಂದ ದಿಬ್ಬದ ಮೇಲೆಯೇ ಮಗ ಹೂಳುತ್ತಾನೆ ಎಂದು ನಿನ್ನ ತಾಯಿ ತಿಳಿದುಕೊಂಡಿದ್ದಳು. ಆದರೆ ನೀನು ದಡದ ಮೇಲೆಯೇ ಹೂತು ಹಾಕಿದ್ದೀಯಾ. ಮಳೆ ನೀರು ದಡದ ಮೇಲೆ ಹರಿಯುತ್ತಿರುವುದರಿಂದ ನಿನ್ನ ತಾಯಿಯ ಶವ ಕೊಚ್ಚಿ ಹೋಗಿರುವುದು ಖಂಡಿತ. ಕೊನೆಗೂ ನಿನ್ನ ತಾಯಿಯ ಆಸೆ ನೆರವೇರಲಿಲ್ಲ’ ಎಂದು ಬೇಸರದಿಂದ ಹೇಳಿತು.

ತನ್ನ ನಡತೆಯಿಂದಾಗಿ ತಾಯಿ ಕಪ್ಪೆಯ ಅಭಿಲಾಷೆ ಅರ್ಥವಾಗಲಿಲ್ಲವಲ್ಲ ಎಂದು ಮಗ ಕಪ್ಪೆಗೆ ಅಪಾರ ದುಃಖವಾಯಿತು. ಪ್ರತಿ ವರ್ಷ ಮಳೆಗಾಲ ಪ್ರಾರಂಭವಾಗುವ ದಿನಗಳಲ್ಲಿ ಮಗ ಕಪ್ಪೆಯು ತಾಯಿ ಕಪ್ಪೆಯ ಶವ ಕೊಚ್ಚಿ ಹೋದದ್ದನ್ನು ನೆನೆದು ನೋವಿನಿಂದ ಕೂಗುತ್ತಿತ್ತು. ಅಂದಿನಿಂದ ಮಳೆಗಾಲದ ಆರಂಭದ ದಿನಗಳಲ್ಲಿ ಕಪ್ಪೆಗಳು ‘ವಟರ್... ವಟರ್...’ ಎಂದು ಕೂಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.