ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2016, 19:30 IST
Last Updated 12 ನವೆಂಬರ್ 2016, 19:30 IST

ವಿದ್ಯಾಬಾಲನ್‌ ಜಾಹೀರಾತೂ, ಸ್ವಚ್ಛ ನಗರವೂ...
ಕಲಬುರ್ಗಿ: 
‘ಸ್ವಚ್ಛ ಭಾರತ ಯೋಜನೆ ವಿದ್ಯಾಬಾಲನ್‌ ಅವರ ಜಾಹೀರಾತಿಗೆ ಮಾತ್ರ ಸೀಮಿತ ಅಂದುಕೊಂಡಿದ್ದೆ. ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಿದ್ದ ‘ಸ್ವಚ್ಛ ನಗರ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಕೇಂದ್ರ ಸರ್ಕಾರದ ಈ ಯೋಜನೆ ನಿಜವಾಗಲೂ ಅತ್ಯುತ್ತಮ ಎಂಬುದು ಮನವರಿಕೆಯಾಯಿತು’.

ಅಧಿಕಾರಿಗಳ ಸಭೆಯಲ್ಲಿ ಹೀಗೆ ಮಾತು ಆರಂಭಿಸಿದ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್, ‘ಸರ್ಕಾರ ಯಾವುದೇ ಇರಲಿ. ಉತ್ತಮ ಯೋಜನೆಗಳನ್ನು ಶ್ಲಾಘಿಸಬೇಕು’ ಎಂದರು.

‘ನಾನು ರೈಲಿನಲ್ಲಿ ಬೆಳಿಗ್ಗೆ ಇಲ್ಲಿಗೆ ಬಂದಿಳಿದೆ. ರೈಲು ಹಳಿಗಳ ಅಕ್ಕಪಕ್ಕ ಜನ ಶೌಚಕ್ಕೆ ಕುಳಿತಿದ್ದರು. ನೀವೂ ಹೀಗೆ ರೈಲಿನಲ್ಲಿ ಬನ್ನಿ. ನಮ್ಮಲ್ಲಿ ಸ್ವಚ್ಛ ಭಾರತ ಆಂದೋಲನ ಹೇಗೆ ಸಾಗಿದೆ ಎಂಬುದು ನಿಮಗೂ ಗೊತ್ತಾಗುತ್ತದೆ’ ಎಂದು ಅಧಿಕಾರಿಗಳನ್ನು ಚುಚ್ಚಿದರು.

‘ಬಯಲು ಶೌಚಕ್ಕೆ ಹೋಗುವವರನ್ನು ತಡೆದು, ಅವರಿಗೆ ಹೂಮಾಲೆ ಹಾಕಿ ಒಂದೇ ದಿನದಲ್ಲಿ 22 ಶೌಚಾಲಯ ನಿರ್ಮಿಸಿಕೊಟ್ಟಿದ್ದೇವೆ’ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದಾಗ, ‘ಶೌಚ ಮುಗಿಸಿ ಬಂದ ನಂತರ ಹೂಮಾಲೆ ಹಾಕಿದ್ದಿರಾ? ಅದು ಬಹಳ ಕಷ್ಟದ ಕೆಲಸ ಅಲ್ಲವೇ’ ಎಂದು ಪ್ರಶ್ನಿಸಿದರು. ಆಗ ಸಭೆಯಲ್ಲಿ ನಗೆಯ ಅಲೆ ಎದ್ದಿತು.

‘ಶೌಚಾಲಯ ನಿರ್ಮಿಸಿ ಬಯಲು ಬಹಿರ್ದೆಸೆ ತಡೆಯಬೇಕು. ವಿದ್ಯಾಬಾಲನ್‌ ಅವರ ಜಾಹೀರಾತಿಗೆ ಮಾತ್ರ ಈ ಯೋಜನೆ ಸೀಮಿತ ಆಗಬಾರದು’ ಎಂದು ತಾಕೀತು ಮಾಡುವುದನ್ನು ಅವರು ಮರೆಯಲಿಲ್ಲ.
-ಗಣೇಶ ಚಂದನಶಿವ

***
ಸಚಿವರಿಗೇ ಆಸೆ ಹುಟ್ಟಿಸಿದ ಡಿಡಿಪಿಐ!

ವಿಜಯಪುರ:  ‘ನೀವಿಲ್ಲಿಂದ ಹೋಗೋ ಕಾಲ ಬಂದೈತಿ. ಬ್ಯಾಗ್‌ ರೆಡಿ ಮಾಡ್ಕೊರ್ರಿ. ನಿಮ್‌ ಫರ್‌ಫಾರ್ಮೆನ್ಸ್‌ ಚಲೋ ಇಲ್ಲ. ಸಾಲಿ ಎಲ್ಲೆಲ್ಲಿ ಅದಾವು ಅನ್ನೋದ ನಿಮಗ ಗೊತ್ತಿಲ್ಲ. ಇಲ್ಲಿಗ್‌ ಬಂದ್‌ ಯಾಡ್‌ ವರ್ಸ್‌ ಆತ ಅಂತೀರಿ. ಆದ್ರೂ ಸಾರ್ವಜನಿಕ ಶಿಕ್ಷಣ ಇಲಾಖೆಯೊಳಗ ಯಾವ್ದ ಸುಧಾರಣಿ ಕಾಣವಲ್ದು. ಎಸ್ಸೆಸ್ಸೆಲ್ಸಿ ರಿಸಲ್ಟೂ ಸುಧಾರಿಸಿಲ್ಲ. ನೀವಿನ್ನ ಹೊಂಡಾಕ ತಯಾರಾಗ್ರಿ...’

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸಚಿವರು ಡಿಡಿಪಿಐಗೆ ಪರೋಕ್ಷವಾಗಿ ನೀಡಿದ ವರ್ಗಾವಣೆಯ ಎಚ್ಚರಿಕೆ ಇದು.

ವರ್ಗಾವಣೆಯ ಸುಳಿವು ದೊರೆಯುತ್ತಿದ್ದಂತೆ ಡಿಡಿಪಿಐ ಶ್ರೀಶೈಲ ಎಸ್‌. ಬಿರಾದಾರ, ಸಚಿವರ ಎಲ್ಲ ಪ್ರಶ್ನೆಗಳಿಗೂ ‘ಹ್ಞೂಂ ಸರ್‌, ಯಸ್‌ ಸರ್’ ಎಂದರು. ಆ ಬಳಿಕ, ‘2016–17ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ರಾಜ್ಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆಯನ್ನು 20ನೇ ಸ್ಥಾನದೊಳಗೆ ತರಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಸರ್‌. ಖಂಡಿತ ಈ ಬಾರಿ ಗುರಿ ತಲುಪುತ್ತೇವೆ’ ಎಂದು ಉತ್ತರಿಸಿದರು. 

ಡಿಡಿಪಿಐ ಉತ್ತರದಿಂದ ಸುಸ್ತಾದ ಸಚಿವ ಎಂ.ಬಿ.ಪಾಟೀಲ, ‘ನಿನ್ನ ಇಲ್ಲಿಂದ ಕಳಿಸಿದ್ರಾತು ಅಂತ ನಾ ಮಾಡಿದ್ರ, ನೀ ನಂಗ ಆಸೆ ಹುಟ್ಟಿಸಿ, ಇಲ್ಲೇ ಉಳ್ಯಾಕ ಗಾಳ ಹಾಕ್ತೀಯಲ್ಲಪಾ...’ ಎನ್ನುತ್ತಿದ್ದಂತೆ ಗಂಭೀರವಾಗಿದ್ದ ಸಭಾಂಗಣದಲ್ಲಿ ನಗೆಯ ಬುಗ್ಗೆ ಚಿಮ್ಮಿತು.
- ಡಿ.ಬಿ.ನಾಗರಾಜ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT