ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 28 ಮೇ 2016, 20:10 IST
Last Updated 28 ಮೇ 2016, 20:10 IST

ಬೆಂಗಳೂರು: ನಮ್ಮ ಸಚಿವರು ಕೆಲಸ ಮಾಡುವುದಿಲ್ಲ, ನೀಡಿದ ಭರವಸೆ ಈಡೇರಿಸುವುದಿಲ್ಲ ಎಂದು ಅವರಿಗೆ ಪದೇ ಪದೇ ಹಿಡಿಶಾಪ ಹಾಕುವುದನ್ನು ಅರೆಕ್ಷಣ ಪಕ್ಕಕ್ಕೆ ಇಡೋಣ. ಅಧಿಕಾರಿಗಳಿಂದ ಅವರು ಅನುಭವಿಸುವ ಸಮಸ್ಯೆಗಳತ್ತ ಒಮ್ಮೆ ನೋಡೋಣ!

ಈಚೆಗೆ ಪತ್ರಿಕಾಗೋಷ್ಠಿ ಕರೆದಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ‘ರಾಜ್ಯದಲ್ಲಿ ಅವೈಜ್ಞಾನಿಕ ಲೋಡ್‌ ಶೆಡ್ಡಿಂಗ್‌ ಇಲ್ಲವೇ ಇಲ್ಲ’ ಎಂದು ಹೇಳುತ್ತಿದ್ದರು. ಅದೇ ಹೊತ್ತಿನಲ್ಲಿ ವಿಧಾನಸೌಧದಲ್ಲೇ ವಿದ್ಯುತ್‌ ಕಡಿತವಾಗಿ ಸಚಿವರು ಕಕ್ಕಾಬಿಕ್ಕಿಯಾದರು. ‘ಇದೇನು ವೈಜ್ಞಾನಿಕ ಲೋಡ್‌ ಶೆಡ್ಡಿಂಗಾ ಸಚಿವರೇ?’ ಎಂದು ಪ್ರಶ್ನಿಸಿದರೆ, ನಕ್ಕು ಸುಮ್ಮನಾಗಿದ್ದರು.

ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಅವರು ಮೊನ್ನೆ, ತಮ್ಮ ಸಚಿವಾಲಯದ ಎರಡು ವರ್ಷಗಳ ಸಾಧನೆ ಬಗ್ಗೆ ಹೇಳಲು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ವಿಡಿಯೊ ಕಾನ್ಫರೆನ್ಸ್‌ ಮೂಲಕ ಬೆಂಗಳೂರಿನ ಸುದ್ದಿಮಿತ್ರರನ್ನು ಉದ್ದೇಶಿಸಿ ಮಾತನಾಡಿದರು.

‘ದೇಶದಲ್ಲಿ ಈಗ ವಿದ್ಯುತ್‌ ಕೊರತೆ ಇಲ್ಲವೇ ಇಲ್ಲ. ನಮ್ಮದು ಈಗ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಲಭ್ಯವಿರುವ ದೇಶ’ ಎನ್ನುತ್ತಿದ್ದಾಗ ದೆಹಲಿಯ ಸಭಾಂಗಣದಲ್ಲಿ ಎರಡು ಬಾರಿ ವಿದ್ಯುತ್‌ ಕೈಕೊಟ್ಟಿತು. ಸಚಿವರೇ ಖುದ್ದಾಗಿ ‘ದೀಪ ಆರಿಸಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಬೇಕಾಯಿತು!

ರಾಜ್ಯ ಮತ್ತು ರಾಷ್ಟ್ರದ ಇಂಧನ ಸಚಿವರಿಗೆ ಕಾಟ ಕೊಟ್ಟಿದ್ದ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಬಿಟ್ಟಿಲ್ಲ. ಸಿದ್ದರಾಮಯ್ಯ ಅವರು ಬಜೆಟ್‌ ಮಂಡಿಸುವಾಗಲೇ ವಿಧಾನಸಭೆಯಲ್ಲಿ ವಿದ್ಯುತ್‌ ಕೈಕೊಟ್ಟು,

ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ಅವರು ಬಜೆಟ್‌ನ ಒಂದಿಷ್ಟು ಸಾಲುಗಳನ್ನು ಓದಿದ್ದು ಚರಿತ್ರೆಯ ಪುಟಗಳಲ್ಲಿ ಈಗಾಗಲೇ ಸೇರಿಹೋಗಿರುವುದನ್ನು ಮರೆಯಲಾದೀತೇ? ಮುಖ್ಯಮಂತ್ರಿ, ಸಚಿವರಿಗೇ ಕಿರಿಕಿರಿ ಉಂಟು ಮಾಡುವ ಅಧಿಕಾರಿಗಳ ತಾಕತ್ತು, ಕರಾಮತ್ತನ್ನು ಕಡೆಗಣಿಸಲಾದೀತೇ?
-ವಿಜಯ್ ಜೋಷಿ

ತೋಟಕ್ಕೇ ನುಗ್ಗಿದ ಸಚಿವರ ಕಾರು!
ದಾವಣಗೆರೆ: ಈಚೆಗೆ ಸುರಿದ ಮಳೆ ಗಾಳಿಗೆ ಜಿಲ್ಲೆಯಾದ್ಯಂತ ಬಾಳೆ, ಅಡಿಕೆ ತೋಟಗಳಿಗೆ ಸಾಕಷ್ಟು ಹಾನಿಯಾಗಿತ್ತು. ಇದಾಗಿ ಮೂರು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳಕ್ಕೆ ಹೋಗಿ ಹಾನಿ ಪರಿಶೀಲಿಸಬೇಕೆಂದು ಅನಿಸಿತೇನೊ. ಎಲ್ಲಿಗೆ ಹೋಗಬೇಕು ಎಂದುಕೊಳ್ಳುತ್ತಿದ್ದಾಗಲೆ ನಗರದಿಂದ ನಾಲ್ಕು ಕಿ.ಮೀ. ದೂರದ ಎಲೆಬೇತೂರು ಗ್ರಾಮವನ್ನು ಗೊತ್ತು ಮಾಡಲಾಯಿತು.

ಮಾಧ್ಯಮದವರಿಗೆ ಬುಲಾವ್‌ ನೀಡಲಾಯಿತು. ಸಂಜೆಗತ್ತಲಿನ ಸುಮಾರಿಗೆ ಸಚಿವರ ಕಾರು ಬಾಳೆ ತೋಟದತ್ತ ಧಾವಿಸಿತು. ರಸ್ತೆ ಇಲ್ಲದ ಜಾಗದಲ್ಲೇ ಹರಸಾಹಸ ಮಾಡಿ ಚಾಲಕ ಕಾರನ್ನು ನುಗ್ಗಿಸಿದ. ಗಾಳಿಗೆ ಬಿದ್ದ ಬಾಳೆ ಗಿಡದ ಪಕ್ಕದಲ್ಲೇ ಕಾರು ನಿಂತಿತು.

ಅಲ್ಲೇ ಇಳಿದು ಎರಡು ಹೆಜ್ಜೆ ಹಾಕಿದ ಸಚಿವರು ಅದೇ ಬಾಳೆ ಗಿಡ ಹಿಡಿದು ಮಾಧ್ಯಮಗಳಿಗೆ ಪೋಸು ನೀಡಿದರು. ನೂರಾರು ಹಿಂಬಾಲಕರು, ಟಿ.ವಿ ಹಾಗೂ ಪತ್ರಿಕಾ ಮಾಧ್ಯಮದ 50ಕ್ಕೂ ಹೆಚ್ಚು ಪ್ರತಿನಿಧಿಗಳ ನೂಕುನುಗ್ಗಲಿನಿಂದಾಗಿ ತೋಟ ಇನ್ನಷ್ಟು ಹಾಳಾಯಿತು.

‘ಸರ್ಕಾರದ ಪರಿಹಾರ ಸಿಗುವುದು ಯಾವಾಗಲೋ; ಆದರೆ, ಸಚಿವರು ನಮ್ಮ ತೋಟಕ್ಕೆ ಬರದಿದ್ದರೆ ಅಲ್ಪಸ್ವಲ್ಪ ಗಿಡಗಳಾದರೂ ಬದುಕುಳಿಯುತ್ತಿದ್ದವು’ ಎಂಬ ಸಂತ್ರಸ್ತ ರೈತನ ಮಾತು ಅಲ್ಲಿದ್ದವರಿಗೆ ಕೇಳಲೇ ಇಲ್ಲ!

ADVERTISEMENT

-ಪ್ರಕಾಶ ಕುಗ್ವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.