ADVERTISEMENT

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2017, 19:30 IST
Last Updated 1 ಏಪ್ರಿಲ್ 2017, 19:30 IST

ಅಂತೂ ಇಂತೂ ಮುಗಿಯಿತು...

ಬೀದರ್‌: ಮಾರ್ಚ್‌ ಮುಗಿಯಲು ಒಂದು ವಾರ ಮಾತ್ರ ಬಾಕಿ ಇತ್ತು. ಅದರಲ್ಲಿ ಎರಡು ರಜೆ ಬೇರೆ ಬಂದಿತ್ತು. ಹೀಗಾಗಿ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಒಂದೇ ದಿನ ಬಿಡುವಿಲ್ಲದಂತೆ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮ ಜವಾಬ್ದಾರಿಯಿಂದ ಕೈತೊಳೆದುಕೊಂಡರು.

ಮಾರ್ಚ್‌ 24 ಕ್ಷಯರೋಗ ಜಾಗೃತಿ ದಿನ. ಕ್ಷಯರೋಗ ನಿಯಂತ್ರಣ ಅಧಿಕಾರಿಗಳು ಗಾಳಿ, ಬೆಳಕು ಇಲ್ಲದ ಸಭಾಂಗಣದಲ್ಲಿ ಕ್ಷಯರೋಗ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಅಚಾತುರ್ಯ ಪ್ರದರ್ಶಿಸಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕೆಲ ಸಿಬ್ಬಂದಿ, ಡಿಎಚ್‌ಒ ಕಚೇರಿ ಆವರಣದಲ್ಲೇ ತಂಬಾಕು ಸೇವಿಸಿ ಉಗಿದು, ಜಿಲ್ಲೆಯ ಪಿಡಿಒಗಳಿಗಾಗಿ ಕಾರ್ಯಕ್ರಮ ಸಂಘಟಿಸಿ ತಂಬಾಕು ಸೇವಿಸದಂತೆ ತಿಳಿವಳಿಕೆ ನೀಡಿದರು.

ADVERTISEMENT

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಿಲ್ಲಾ ರಂಗಮಂದಿರದಲ್ಲಿ ಆಶಾ ಕಾರ್ಯಕರ್ತೆಯರಿಗೆ ತರಾತುರಿಯಲ್ಲಿ ತರಬೇತಿ ಕಾರ್ಯಕ್ರಮ ನಡೆಸಿದರು. ಮಾಧ್ಯಮಗಳಿಗೆ ಆಹ್ವಾನವನ್ನು ಸಹ ನೀಡಲಿಲ್ಲ.

ಕುಷ್ಠರೋಗ ಜಾಗೃತಿ ಕಾರ್ಯಕ್ರಮದಲ್ಲಿ ಜನರೇ ಇಲ್ಲದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಈ ರೀತಿ ಕಾರ್ಯಕ್ರಮ ಆಯೋಜಿಸಿದರೆ ಏನು ಪ್ರಯೋಜನ ಎಂದು ಆಯೋಜಕರನ್ನು ನಯವಾಗಿಯೇ ತರಾಟೆಗೆ ತೆಗೆದುಕೊಂಡರು.

ಆಶಾ ಕಾರ್ಯಕರ್ತೆಯರ ತರಬೇತಿ ಕಾರ್ಯಕ್ರಮದಲ್ಲೂ ಇಂತಹದ್ದೇ ಸ್ಥಿತಿ ಇತ್ತು. ಅಲ್ಲಿ ಸರಿಯಾಗಿ ಸಿದ್ಧತೆಯನ್ನೇ ಮಾಡಿಕೊಂಡಿರಲಿಲ್ಲ. ಬ್ಯಾನರ್‌ ಕೂಡ ಹಾಕಿರಲಿಲ್ಲ. ಎಷ್ಟೋ  ಕಾರ್ಯಕರ್ತೆಯರಿಗೇ ಸರಿಯಾದ ಮಾಹಿತಿ ಇರಲಿಲ್ಲ. ಅತಿಥಿಗಳು ಕಾರ್ಯಕ್ರಮಕ್ಕೆ ಬಂದು ಭಾಷಣ ಮಾಡಿ ಹೊರಟು ಹೋಗಿದ್ದರು.

ಬ್ಯಾನರ್‌ ಇಲ್ಲದಿದ್ದರೆ ಹಣ ಬಿಡುಗಡೆಯಾಗುವುದು ಕಷ್ಟ ಎಂದು ಮನವರಿಕೆಯಾದಾಗ, ಅಧಿಕಾರಿಯೊಬ್ಬರು ಕೊನೆಯ ಗಳಿಗೆಯಲ್ಲಿ ಬ್ಯಾನರ್‌ ತಯಾರಿಸಲು ಆದೇಶ ನೀಡಿದರು.

ಇನ್ನೇನು ಕಾರ್ಯಕ್ರಮ ಮುಗಿಯಲಿದೆ ಎನ್ನುವಷ್ಟರಲ್ಲಿ ಯುವಕನೊಬ್ಬ ಬ್ಯಾನರ್‌ ಹಿಡಿದುಕೊಂಡು ಸಭಾಂಗಣಕ್ಕೆ ಧಾವಿಸಿ ಬಂದ. ಆರೋಗ್ಯ ಇಲಾಖೆ ಸಿಬ್ಬಂದಿ ತಕ್ಷಣ ಬ್ಯಾನರ್‌ ಅನ್ನು ವೇದಿಕೆ ಹಿಂಭಾಗದಲ್ಲಿ ತೂಗು ಹಾಕಿದರು. ಅಧಿಕಾರಿಗಳು ಫೋಟೊ ಕ್ಲಿಕ್ಕಿಸಿಕೊಂಡು ಕಾರ್ಯಕ್ರಮ ಮುಗಿಸಿದ ಶಾಸ್ತ್ರ ಮಾಡಿದರು.

-ಚಂದ್ರಕಾಂತ ಮಸಾನಿ

*

ಎಚ್ಚರ... ಹೀಗೂ ‘ಕೊಲ್ಲುವವರಿದ್ದಾರೆ’!

ಕೊಪ್ಪಳ: ‘ನನ್ನ ಪತ್ನಿ ತೀರಿಕೊಂಡಿದ್ದಾಳೆ. ದಯವಿಟ್ಟು ನಿಧನ ವಾರ್ತೆ ಪ್ರಕಟಿಸಿ’ ಎಂದು ಪತಿರಾಯನೇ ಸುದ್ದಿ ತಂದುಕೊಟ್ಟರೆ ನಂಬದಿರಲು ಸಾಧ್ಯವೇ? ಆತ ಪತ್ರಿಕೆಯ ನಿತ್ಯ ಓದುಗ ಮತ್ತು ಮಾಹಿತಿದಾರ ಬೇರೆ. ಸಂಜೆ ವೇಳೆ ಪತ್ನಿಯ ಅಂತ್ಯಸಂಸ್ಕಾರ ನಡೆಯಿತೆಂದೂ ಫೋನಾಯಿಸಿದ. ಸರಿ ಸುದ್ದಿ ಪ್ರಕಟವೂ ಆಯಿತು.

ಆದರೆ ಬದುಕಿಯೇ ಇದ್ದ ಪತ್ನಿ ಮತ್ತು ಆಕೆಯ ತವರಿನವರಿಗೆಲ್ಲಾ ಮರುದಿನ ಪತ್ರಿಕೆ ನೋಡಿ ಆಘಾತ. ಗೋಳೋ ಎಂದು ಅಳುವ ದೃಶ್ಯವೂ ನಿರ್ಮಾಣವಾಯಿತು. ಆಕೆ  ಅನಾರೋಗ್ಯದಿಂದ ನಿಧನರಾದರು ಎಂದು ಸುದ್ದಿ ಪ್ರಕಟವಾಗಿತ್ತು. ಬಂಧುವರ್ಗದವರಿಗೆಲ್ಲಾ ಅನಿರೀಕ್ಷಿತ ಆಘಾತ, ಗೊಂದಲ, ದುಃಖ. ‘ನಿಧನ’ರಾದವರ ಕುಟುಂಬದ ಆಕ್ರೋಶಕ್ಕೆ ಮೊದಲು ತುತ್ತಾಗಿದ್ದು ಮಾತ್ರ ಪತ್ರಿಕೆ. ಮಾಧ್ಯಮ ಪ್ರತಿನಿಧಿಗೂ ಜೋರಾಗಿ ಧಮಕಿ  ಬಂತೆನ್ನಿ. ಇಷ್ಟೆಲ್ಲಾ ರಾದ್ದಾಂತ ಆಗಿ ಉಭಯ ಕುಟುಂಬದವರೂ ಅವರ ಸಮುದಾಯದ ಸ್ವಾಮೀಜಿಯೊಬ್ಬರ ನೇತೃತ್ವದಲ್ಲಿ ಪಂಚಾಯಿತಿ ಮಾಡುವವರೆಗೂ ವಿಷಯ ಮುಂದುವರಿಯಿತು. ಈ ಸಂದರ್ಭದಲ್ಲಿ, ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಪತಿರಾಯನೇ ನಾಪತ್ತೆ. ಪರಸ್ಪರರನ್ನು ಸಮಾಧಾನಪಡಿಸುವುದೊಂದೇ ಮಾರ್ಗ ಉಳಿದಿತ್ತು. ಹೇಗೋ ವಿವಾದ ತಣ್ಣಗಾಯಿತು.

ಘಟನೆಯ ಹಿಂದೆ ಇದ್ದದ್ದು ಗಂಡ ಹೆಂಡತಿಯ ಜಗಳ. ಗಂಡ ವೀರಯ್ಯ ಗುಂಡು ಏರಿಸಿಕೊಂಡು ಹೆಂಡತಿಯ ಮೇಲೆ ವೀರಾವೇಶ ತೋರಿಸಿದ್ದ. ಮುನಿಸಿಕೊಂಡ ಹೆಂಡತಿ, ಮಕ್ಕಳೊಡನೆ ತವರು ಸೇರಿದ್ದರು. ಹೆಂಡತಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡ ಗಂಡನಿಗೆ ಹೊಳೆದದ್ದು ಆಕೆಯನ್ನು ಜೀವಂತ ‘ಸಾಯಿಸುವ’ ಯೋಜನೆ.

ಈಗ ನಿಧನ ವಾರ್ತೆ ಹಿಡಿದುಕೊಂಡು ಬರುವವರನ್ನು ಭೂತಗನ್ನಡಿ ಹಿಡಿದು ಪರೀಕ್ಷೆಗೊಳಪಡಿಸಬೇಕಾದ ಪರಿಸ್ಥಿತಿ ಪತ್ರಕರ್ತರದು!

-ಶರತ್‌ ಹೆಗ್ಡೆ

*

ಯಾರ ಕೈವಾಡ ಇರಬಹುದು...?

ಯಾದಗಿರಿ: ಯಾವುದಾದರೂ ಸಮಿತಿಗಳಲ್ಲಿ ಬೆಂಬಲಿಗರಿಗೆ ಅಧಿಕಾರ ಕೊಡಿಸಬೇಕು ಎಂದುಕೊಂಡು ಶತಾಯಗತಾಯ ಪ್ರಯತ್ನಿಸಿ ವಿಫಲರಾದ ನಗರಸಭೆ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದರು!

ಏನೇ ಆದರೂ ಮೊದಲು ಪತ್ರಿಕಾಗೋಷ್ಠಿ ನಡೆಸುವ ರೂಢಿ ಇಟ್ಟುಕೊಂಡಿರುವ ಅಧ್ಯಕ್ಷರು ಅಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲು ನಿರ್ಧರಿಸಿದರು. ಆದರೆ, ಪ್ರವಾಸಿ ಮಂದಿರದ ಸಿಬ್ಬಂದಿ ಗೇಟಿಗೆ ದಿಢೀರ್ ಬೀಗ ಹಾಕಿದ್ದರು! ಎಲ್ಲದಕ್ಕೂ ಪ್ರವಾಸಿ ಮಂದಿರವನ್ನೇ ಆಶ್ರಯಿಸಿದ್ದ ಅಧ್ಯಕ್ಷರು ಸಿಟ್ಟಿಗೆದ್ದು ಪತ್ರಿಕಾಗೋಷ್ಠಿಯನ್ನು ನಗರದ ನೀರು ಶುದ್ಧೀಕರಣ ಘಟಕಕ್ಕೆ ವರ್ಗಾಯಿಸಿದರು. ಅಧ್ಯಕ್ಷರ ದಿಢೀರ್‌ ರಾಜೀನಾಮೆ, ಶುದ್ಧೀಕರಣ ಘಟಕದಲ್ಲಿ ದಿಢೀರ್‌ ಪತ್ರಿಕಾಗೋಷ್ಠಿ ವಿಷಯ ತಿಳಿದ ಪತ್ರಕರ್ತರು ಶುದ್ಧೀಕರಣ ಘಟಕದ ಶಿಥಿಲ ಕಟ್ಟಡದತ್ತ ದೌಡಾಯಿಸಿದರು.

‘ಎಂಎಲ್‌ಎ ನಮ್‌ ತಾತ (ಶಾಸಕ ಮಾಲಕರೆಡ್ಡಿ). ಯುಡಾ ಅಧ್ಯಕ್ಷ ನಮ್‌ ಕಾಕ, ನಾನ್‌ ನಗರಸಭೆ ಅಧ್ಯಕ್ಷ ಅದಿನಿ. ಆದ್ರೂ ನನ್‌ ಬೆಂಬಲಿಗ್ರಿಗೆ ಅಧಿಕಾರ ಸಿಕ್ಕಿಲ್ರಿ. ನನಗ್‌ ಭಾಳ್‌ ಬ್ಯಾಸ್ರಾ ಆಗೇದ. ಅದಕ್ಕಾ ರಾಜೀನಾಮೆ ಕೊಡಾಕಹತ್ತಿನಿ’ ಎಂದು ಅಧ್ಯಕ್ಷರು ಮಾತಿಗೆ ಶುರುವಿಟ್ಟರು.

‘ಎಲ್ಲಾ ಅಧಿಕಾರದಲ್ಲೂ ನಿಮ್‌ ಮಂದಿನೇ ಇದ್ರೂ ನಿಮ್ಮ ಶಿಫಾರಸಿಗೆ ಬೆಲೆ ಸಿಗಲಿಲ್ಲ ಯಾಕೆ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಅಲ್ರಿ ಮಂದಿಗಾಗಿನೇ ಇರೊ ಐ.ಬಿನಲ್ಲೂ ಪ್ರೆಸ್‌ಮೀಟ್‌ ಮಾಡ್ಲಿಕ್ಕೆ ಜಾಗ ಸಿಕ್ಕಿಲ್ರಿ. ಇದ್ರಲ್ಲಿ ಯಾರ ಕೈವಾಡ ಐತಿ ಅಂತೀರಿ. ಹಂಗ ಇದುನೂ’ ಅಂದರು. ಅಧ್ಯಕ್ಷರ ಒಗಟಿನಂತಹ ಉತ್ತರ, ರಾಜೀನಾಮೆಗಿಂತ ಐ.ಬಿಯಲ್ಲಿ ಜಾಗ ಸಿಗಲಿಲ್ಲ ಎಂಬುದೇ ಅವರ ದುಃಖಕ್ಕೆ ಕಾರಣವೇನೋ ಎನ್ನುವಂತಿತ್ತು!

-ಮಲ್ಲೇಶ್ ನಾಯಕನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.