ADVERTISEMENT

ವೇಗಿಯ ವಿದಾಯ

ವ್ಯಕ್ತಿ

ನಾಗೇಶ್ ಶೆಣೈ ಪಿ.
Published 17 ಅಕ್ಟೋಬರ್ 2015, 19:38 IST
Last Updated 17 ಅಕ್ಟೋಬರ್ 2015, 19:38 IST

ಕಳೆದ ಮತ್ತು ಈ ದಶಕದ ಆರಂಭದಲ್ಲಿ ಭಾರತದ ವೇಗದ ದಾಳಿಗೆ ಹೆಗಲು ನೀಡಿದ್ದ ಜಹೀರ್ ಖಾನ್‌ ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಅವರಿಗೆ ಭುಜದ ನೋವು ಕಾಡತೊಡಗಿತ್ತು. 37ರ ವಯಸ್ಸಿನಲ್ಲಿ, ಅದೂ ವೇಗದ ಬೌಲರ್‌ ಒಬ್ಬರು ರಾಷ್ಟ್ರೀಯ ತಂಡಕ್ಕೆ ಪುನರಾಗಮಿಸುವುದು ಕಷ್ಟ ಎಂಬುದು ಅವರಿಗೂ ಮನವರಿಕೆಯಾಗಿತ್ತೇನೊ. ಮೂರು ದಿನಗಳ ಹಿಂದೆಯಷ್ಟೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಭಾರತದ ಕ್ರಿಕೆಟ್ ರಂಗದಲ್ಲಿ ಕಪಿಲ್‌ ದೇವ್‌, ಜಾವಗಲ್‌ ಶ್ರೀನಾಥ್‌ ಅವರ ನಂತರ ವೇಗದ ದಾಳಿಯ ನೇತೃತ್ವವನ್ನು ಸಮರ್ಥವಾಗಿ ನಿಭಾಯಿಸಿದವರು ಜಹೀರ್‌ ಖಾನ್‌. ದೇಶದ ವೇಗದ ಬೌಲರ್‌ಗಳಲ್ಲಿ ಕಪಿಲ್‌ ದೇವ್‌ (431 ವಿಕೆಟ್‌) ಅವರನ್ನು ಬಿಟ್ಟರೆ ಎರಡನೇ ಅತಿ ಹೆಚ್ಚು ಟೆಸ್ಟ್‌ ವಿಕೆಟ್ (311) ಪಡೆದ ಶ್ರೇಯ ಅವರದು. ಒಟ್ಟಾರೆ, ಅನಿಲ್‌ ಕುಂಬ್ಳೆ, ಕಪಿಲ್‌ ದೇವ್‌, ಹರಭಜನ್‌ ಸಿಂಗ್‌ ನಂತರ ಭಾರತದ ನಾಲ್ಕನೇ ಯಶಸ್ವಿ ಟೆಸ್ಟ್‌ ಬೌಲರ್‌ ಅವರು. ಬರೋಬ್ಬರಿ 200 ಒಂದು ದಿನದ ಪಂದ್ಯಗಳಲ್ಲಿ ಅವರ ಗಳಿಕೆ 282 ವಿಕೆಟ್‌. ಇದೂ ಕಡಿಮೆ ಸಾಧನೆಯೇನಲ್ಲ. ಕಳೆದ ವರ್ಷದ ಫೆಬ್ರುವರಿಯಲ್ಲಿ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಅವರು ನ್ಯೂಜಿಲೆಂಡ್‌ ವಿರುದ್ಧ ಆಡಿದ್ದರು. ನಂತರ ಅವರು ಆಡಿದ್ದು, ಈ ವರ್ಷದ ಐಪಿಎಲ್‌ನಲ್ಲಿ. ಅಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಡಿದ 7 ಪಂದ್ಯಗಳಿಂದ ಗಮನ ಸೆಳೆಯಲು ವಿಫಲರಾದರು. ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ ಅಭಿಮಾನಿಗಳು ಅವರನ್ನು ಮರೆತೇಬಿಟ್ಟಂತಿತ್ತು.

ಗಾಯಾಳಾಗುವುದು, ಪುನರಾಗಮನ... ಇದು ಜಹೀರ್‌ ಖಾನ್‌ ಕ್ರಿಕೆಟ್‌ ಬದುಕಿನಲ್ಲಿ ನಡೆದುಕೊಂಡು ಬಂದಿತ್ತು. ಈ ಏರಿಳಿತಗಳ ನಡುವೆ ಅವರು ಸಂಭ್ರಮದ ಕ್ಷಣಗಳನ್ನೂ ಅನುಭವಿಸಿದರು. 2011ರಲ್ಲಿ ತವರು ನೆಲದಲ್ಲಿ ನಡೆದ ವಿಶ್ವಕಪ್‌ನಲ್ಲಿ ಪ್ರಚಂಡ ಗೆಲುವು, ಭಾರತಕ್ಕೆ ಮೊದಲ ಬಾರಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಪಟ್ಟ, ವಿದೇಶಿ ನೆಲಗಳಲ್ಲಿ ತಂಡಕ್ಕೆ ದೊರೆತ ಅಪರೂಪದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇಂಥ ಕೆಲವು ಕ್ಷಣಗಳು.

ಕ್ರಿಕೆಟ್‌ ಜೀವನದ ಆರಂಭದಲ್ಲಿ ಜಹೀರ್‌ ಖಾನ್‌ ಕಷ್ಟಗಳನ್ನು ಎದುರಿಸಿದವರೇ. ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ಶ್ರೀರಾಮಪುರದಲ್ಲಿ ಜನಿಸಿದ (ಅಕ್ಟೋಬರ್‌ 7, 1978) ಅವರ ಕ್ರಿಕೆಟ್‌ ಜೀವನ ಅರಳಿದ್ದು ಮುಂಬೈ ಮಹಾನಗರಿಯಲ್ಲಿ. ಫೋಟೊಗ್ರಾಫರ್‌ ಆಗಿದ್ದ ತಂದೆಗೆ ಮಗ ಎಂಜಿನಿಯರ್‌ ಆಗಬೇಕೆಂಬ ಆಸೆಯಿತ್ತು. ಆದರೆ,  ಕ್ರಿಕೆಟಿಗನಾಗಬೇಕು ಎಂಬ ಹಂಬಲ ಹೊತ್ತಿದ್ದ ಮಗನನ್ನು ತಂದೆ ಬಕ್ತಿಯಾರ್‌ ಖಾನ್‌ ಮುಂಬೈಗೆ ಕರೆದುಕೊಂಡು ಬಂದರು (1996). ಅಲ್ಲಿ ನ್ಯಾಷನಲ್‌ ಕ್ರಿಕೆಟ್‌ ಕ್ಲಬ್‌ ತರಬೇತುದಾರ ಸುಧೀರ್‌ ನಾಯಕ್‌, ಜಹೀರ್‌ ಖಾನ್‌ ಪ್ರತಿಭೆ ಗುರುತಿಸಿದರು. ಮುಂಬೈ 19 ವರ್ಷದೊಳಗಿನವರ, ನಂತರ ಪಶ್ಚಿಮ ವಲಯ ತಂಡದಲ್ಲಿ ಆಡಿದ ಜಹೀರ್‌, ಎಂಆರ್‌ಎಫ್‌ ಪೇಸ್‌ ಫೌಂಡೇಷನ್‌ನ ಟಿ.ಎ.ಶೇಖರ್‌ ಕಣ್ಣಿಗೆ ಬಿದ್ದರು. ನಂತರ, ಡೆನಿಸ್‌ ಲಿಲಿ, ಚೆನ್ನೈನಲ್ಲಿ ಈ ಎಡಗೈ ವೇಗಿಯ ಸಾಮರ್ಥ್ಯ ಗುರುತಿಸಿ ರಾಷ್ಟ್ರೀಯ ತಂಡಕ್ಕೆ ಸಜ್ಜುಗೊಳಿಸಿದರು.

ಜಹೀರ್‌ ಖಾನ್‌, ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ನೈರೋಬಿಯಲ್ಲಿ ನಡೆದ ಐಸಿಸಿ ನಾಕೌಟ್‌ ಟೂರ್ನಿಯಲ್ಲಿ (2000 ಅಕ್ಟೋಬರ್‌). ಕೀನ್ಯಾ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್‌ ಪಡೆದಿದ್ದರು. ಭಾರತದ ಇನ್ನೊಬ್ಬ ಶ್ರೇಷ್ಠ ಆಟಗಾರ ಯುವರಾಜ್‌ ಸಿಂಗ್‌ ಕೂಡ ಅದೇ ಪಂದ್ಯದ ಮೂಲಕ ಕ್ರಿಕೆಟ್‌ ಜೀವನ ಆರಂಭಿಸಿದ್ದರು. ಜಾವಗಲ್‌ ಶ್ರೀನಾಥ್‌ ಆ ಟೂರ್ನಿಗೆ ಮೊದಲು ಗಾಯಾಳಾಗಿದ್ದರಿಂದ, ಜಹೀರ್‌ಗೆ ಅವಕಾಶದ ಬಾಗಿಲು ತೆರೆಯಿತು. ಭಾರತ ಮ್ಯಾಚ್‌ ಫಿಕ್ಸಿಂಗ್ ಕರಾಳ ಛಾಯೆಯಿಂದ ಹೊರಬಂದು ಸುಧಾರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅವರು ತಂಡಕ್ಕೆ ಆಯ್ಕೆಯಾಗಿದ್ದರು. ಅಗತ್ಯವಿದ್ದ ಮನೋಬಲ ತುಂಬಲೂ ಹೊಸಬರಿಂದ ಉತ್ತಮ ಪ್ರದರ್ಶನ ಅಗತ್ಯವಿತ್ತು. ಅದರಲ್ಲಿ ಅವರು ಯಶಸ್ವಿಯೂ ಆದರು. ಭಾರತ ತಂಡದಲ್ಲಿ ಆಗ ಎಡಗೈ ವೇಗದ ಬೌಲರ್‌ಗಳೇ ಇಲ್ಲವೆನ್ನುವ ಪರಿಸ್ಥಿತಿಯಿತ್ತು. ಅಂಥದ್ದರಲ್ಲಿ ವೇಗದ ಜೊತೆಗೆ ಸ್ವಿಂಗ್‌, ರಿವರ್ಸ್‌ ಸ್ವಿಂಗ್‌, ಯಾರ್ಕರ್‌ಗಳ ಮೂಲಕ ಅವರು ಬೇಗನೇ ತಂಡದಲ್ಲಿ ನೆಲೆಯೂರಿದರು.

ಶ್ರೀನಾಥ್‌–ಜಹೀರ್‌ ಮುಂದಿನ ಕೆಲವು ವರ್ಷ ಭಾರತ ತಂಡದ ವೇಗದ ದಾಳಿ ಹಂಚಿಕೊಂಡಿದ್ದರು. 2003ರ (ದಕ್ಷಿಣ ಆಫ್ರಿಕಾ ಆತಿಥ್ಯ) ವಿಶ್ವಕಪ್‌ನಲ್ಲಿ ಇವರಿಬ್ಬರ ಜೊತೆ ಇನ್ನೊಬ್ಬ ಎಡಗೈ ವೇಗದ ಬೌಲರ್‌ ಆಶಿಷ್‌ ನೆಹ್ರಾ ಅವರು ಭಾರತದ ದಾಳಿಗೆ ಬಲತುಂಬಿದ್ದರು. ಆಸ್ಟ್ರೇಲಿಯಾ ತಂಡ ವಿಶ್ವಕಪ್‌ ಗೆದ್ದರೂ, ಭಾರತ ನಿರೀಕ್ಷೆ ಮೀರಿ ಫೈನಲ್‌ ಹಂತಕ್ಕೆ ತಲುಪಿತ್ತು. 2003–04ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅವರಿಗೆ ಮೀನಖಂಡದ ಸ್ನಾಯು ನೋವು ಬಾಧಿಸಿತ್ತು. ನಂತರ ಎರಡು ವರ್ಷ ಆಡಿದರೂ ಅವರ ನಿರ್ವಹಣೆ ನಿರೀಕ್ಷಿತ ಮಟ್ಟಕ್ಕೆ ಏರಲಿಲ್ಲ. ಅದೇ ಸಮಯದಲ್ಲಿ ಎಸ್‌.ಶ್ರೀಶಾಂತ್‌ ಮತ್ತು ರುದ್ರಪ್ರತಾಪ ಸಿಂಗ್‌ ಅವರಿಂದ ಪೈಪೋಟಿ ಎದುರಾಯಿತು. 2006ರಲ್ಲಿ ಜಹೀರ್‌ ತಂಡದಿಂದ ಸ್ಥಾನ ಕಳೆದುಕೊಂಡರು.

ಅದೇ ವರ್ಷ ಅವರು ಇಂಗ್ಲೆಂಡ್‌ನ ಕೌಂಟಿ ತಂಡ ವೂರ್ಸ್ಟರ್‌ಷೈರ್‌ ಸೇರಿಕೊಂಡರು. ಈ ಸಂದರ್ಭದಲ್ಲಿ ಬೌಲಿಂಗ್‌ನಲ್ಲಿ ಮಾಡಿಕೊಂಡ ಕೆಲವು ಬದಲಾವಣೆಗಳು ಅವರ ಪುನರಾಗಮನಕ್ಕೆ ನೆರವಾಯಿತು. ತಮ್ಮ ರನ್‌ಅಪ್‌ (ಬೌಲಿಂಗ್‌ ಓಟ) ಮೊಟಕುಗೊಳಿಸಿದರು. ವೇಗ ಕಡಿಮೆ ಮಾಡಿಕೊಂಡರೂ ಬೌಲಿಂಗ್‌ನ ಇತರ ಸೂಕ್ಷ್ಮಗಳತ್ತ ಗಮನ ನೀಡಿದರು. ಆ ಕೌಂಟಿ ಋತು ಅವರ ಪಾಲಿಗೆ ಮಹತ್ವದ್ದಾಯಿತು. ಅಲ್ಲಿನ ವಾತಾವರಣವೂ ಅವರಿಗೆ ಅನುಕೂಲಕರವಾಯಿತು. ಜಹೀರ್‌ 16 ಪಂದ್ಯಗಳಿಂದ 78 ವಿಕೆಟ್‌ ಬಾಚಿಕೊಂಡಿದ್ದರು! ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಲು ತಂಡಕ್ಕೆ ಮರಳಿದ ಮೇಲೆ ಅವರು ತಂಡದ ಅಗ್ರಮಾನ್ಯ ಬೌಲರ್‌ ಆಗಿ ರೂಪುಗೊಂಡರು.

2007ರ ಇಂಗ್ಲೆಂಡ್‌ ಪ್ರವಾಸದ ವೇಳೆ ಅವರ ಪ್ರದರ್ಶನ ಗಮನಾರ್ಹ. ಅಲ್ಲಿ ಅವರು 20.33 ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಪಡೆದರು. ಭಾರತ, ಆಂಗ್ಲರ ನಾಡಿನಲ್ಲಿ ಅಪರೂಪದ 1–0 ಸರಣಿ ಗೆಲುವನ್ನು ದಾಖಲಿಸಿತ್ತು. ಶ್ರೀನಾಥ್‌ ನಿವೃತ್ತಿ, ನೆಹ್ರಾ ವೈಫಲ್ಯ ಜಹೀರ್‌ ಮೇಲಿನ ಹೊಣೆಯನ್ನು ಹೆಚ್ಚಿಸಿತು. ಆದರೆ, ಅವರು ತಮ್ಮ ಮೇಲಿಟ್ಟ ಭರವಸೆ ಹುಸಿಗೊಳಿಸಲಿಲ್ಲ. ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌, ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌ ಅವರನ್ನು ತಲಾ ಏಳು ಬಾರಿ, ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರನ್ನು ಆರು ಬಾರಿ ‘ಬಲಿ’ ಪಡೆದವರು ಜಹೀರ್‌. ಒಂದು ದಿನದ ಪಂದ್ಯಗಳಲ್ಲಿ ಅಬ್ಬರಿಸುತ್ತಿದ್ದ ಸನತ್‌ ಜಯಸೂರ್ಯ ಅವರನ್ನು ಎಂಟು ಬಾರಿ ಪೆವಿಲಿಯನ್‌ಗೆ ಮರಳಿಸಿದ್ದೂ ಜಹೀರ್‌ ಹೆಗ್ಗಳಿಕೆ.

ಭಾರತ ಎರಡನೇ ಬಾರಿ, 2011ರಲ್ಲಿ ವಿಶ್ವಕಪ್‌ ಮುಡಿಗೇರಿಸಿಕೊಂಡಾಗ ಅವರು 21 ವಿಕೆಟ್‌ ಕಬಳಿಸಿ, ಮಿಂಚಿದ್ದರು. ‘ಗಾಯಾಳಾದ ನಂತರ ಚಿಕಿತ್ಸೆಗೆ ಸ್ಪಂದಿಸಿ ಪುನರಾಗಮಿಸುವುದು ಬೌಲರ್‌ಗೆ ಸವಾಲು. ಇದನ್ನು ಯಶಸ್ವಿಯಾಗಿ ನಿಭಾಯಿಸಿ ತಂಡಕ್ಕೆ ವಾಪಸಾಗುತ್ತಿದ್ದುದು ನನಗೆ ಖುಷಿಯ ಅನುಭವ ಉಂಟು ಮಾಡುತ್ತಿತ್ತು’ ಎನ್ನುತ್ತಾರೆ ಜಹೀರ್‌ ಖಾನ್‌. ಬಹುಶಃ  ಗಾಯಗಳ ಸಮಸ್ಯೆಗಳಿಲ್ಲದಿದ್ದರೆ ಅವರಿಂದ ಇನ್ನಷ್ಟು ಸಾಧನೆ ನಿರೀಕ್ಷಿಸಬಹುದಿತ್ತು ಎನ್ನುವುದು ಅವರ ಕೆಲವು ಸಮಕಾಲೀನ ಆಟಗಾರರ ಮಾತು. ಇದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.