ADVERTISEMENT

ಸಂಪತ್ತೆಲ್ಲ ಜನಸೇವೆಗೆ ಕೊಟ್ಟ ಕುಬೇರ

ವ್ಯಕ್ತಿ

ಹಮೀದ್ ಕೆ.
Published 4 ಜುಲೈ 2015, 19:30 IST
Last Updated 4 ಜುಲೈ 2015, 19:30 IST

ಮುಸ್ಲಿಮರು ಅತ್ಯಂತ ಪವಿತ್ರ ಎಂದು ಪರಿಗಣಿಸುವ ರಮ್ಜಾನ್ ತಿಂಗಳಲ್ಲಿ ತ್ಯಾಗ ಮತ್ತು ದಾನಕ್ಕೆ ಅಪಾರ ಮಹತ್ವ ಇದೆ. ಸೌದಿಯ ರಾಜಕುಮಾರ ಅಲಾವಲೀದ್ ಬಿನ್ ತಲಾಲ್ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಯಷ್ಟು ಮೌಲ್ಯದ (3200 ಕೋಟಿ ಡಾಲರ್) ತಮ್ಮ ಎಲ್ಲ ಆಸ್ತಿಯನ್ನು ಸಮಾಜಸೇವೆಗೆ ದಾನ ಮಾಡುತ್ತೇನೆ ಎಂದು ಘೋಷಿಸಲು ಇದೇ ತಿಂಗಳನ್ನು ಆಯ್ಕೆ ಮಾಡಿಕೊಂಡಿರುವುದು ಕಾಕತಾಳೀಯವೇನೂ ಆಗಿರಲಾರದು.

ಫೋಬ್ಸ್ ಪಟ್ಟಿಯ ಪ್ರಕಾರ ಅಲಾವಲೀದ್ ಈಗ ಜಗತ್ತಿನ 34ನೇ ಅತ್ಯಂತ ಸಿರಿವಂತ ವ್ಯಕ್ತಿ. ಮಧ್ಯಪ್ರಾಚ್ಯದಲ್ಲಿ ಅವರಿಗಿಂತ ಹೆಚ್ಚು ಶ್ರೀಮಂತರು ಬೇರೆ ಯಾರೂ ಇಲ್ಲ. ಸೌದಿಯ ಸ್ಥಾಪಕ ಇಬ್‌ನ್ ಸೌದ್ ತಂದೆಯ ತಂದೆಯಾದರೆ, ಲೆಬನಾನ್‌ನ ಮೊದಲ ಪ್ರಧಾನಿ ರಿಯಾದ್ ಅಲ್ ಸೊಲ್ ತಾಯಿಯ ತಂದೆ. ಸೌದಿ ಅರೇಬಿಯಾದಲ್ಲಿ ರಾಜ ಕುಟುಂಬದ ಪ್ರತಿಯೊಬ್ಬರಿಗೂ ಸರ್ಕಾರದಲ್ಲಿ ಒಂದು ಉನ್ನತ ಸ್ಥಾನ ನೀಡಲಾಗುತ್ತದೆ. ಆದರೆ ಅಲಾವಲೀದ್‌ಗೆ ಸರ್ಕಾರದಲ್ಲಿ ಯಾವ ಸ್ಥಾನವೂ ಇಲ್ಲ.

ಗಳಿಸಿದ್ದೆಲ್ಲವೂ ಸ್ವಂತ ದುಡಿಮೆಯಿಂದ ಎಂಬ ಸಕಾರಣ ಅಹಂ ಅಲಾವಲೀದ್‌ಗೆ ಇದೆ. ಯಾಕೆಂದರೆ 1979ರಲ್ಲಿ ಕ್ಯಾಲಿಫೋರ್ನಿಯಾದ ಮೆನ್ಲೊ ಕಾಲೇಜಿನಿಂದ ವ್ಯಾಪಾರ ಆಡಳಿತದಲ್ಲಿ ಪದವಿ (ನಂತರ ಅವರು 1985ರಲ್ಲಿ ಸಿರಾಕ್ಯೂಸ್ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು) ಪಡೆದ ನಂತರ ಅಪ್ಪ ತಲಾಲ್ ಮಗನಿಗೆ 30 ಸಾವಿರ ಡಾಲರ್ (ಈಗಿನ ಮೌಲ್ಯದಲ್ಲಿ ಸುಮಾರು 20 ಲಕ್ಷ ರೂಪಾಯಿ) ಉಡುಗೊರೆಯಾಗಿ ನೀಡುತ್ತಾರೆ.

ಈ ಹಣದಲ್ಲಿಯೇ ಅಲಾವಲೀದ್ ವ್ಯಾಪಾರ ಆರಂಭಿಸುತ್ತಾರೆ. ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಮಾಡಿದ ಹೂಡಿಕೆ ಯುವಕ ಅಲಾವಲೀದ್ ಕೈಹಿಡಿಯಲಿಲ್ಲ. ನಂತರ ಸಾಲ ಮಾಡಿ ಯುನೈಟೆಡ್ ಸೌದಿ ಕಮರ್ಷಿಯಲ್ ಬ್ಯಾಂಕನ್ನು ಅಲಾವಲೀದ್ ಸ್ವಾಧೀನ ಮಾಡಿಕೊಳ್ಳುತ್ತಾರೆ. ಈ ಬ್ಯಾಂಕ್ ಆಗ ಮುಚ್ಚುವ ಹಾದಿಯಲ್ಲಿತ್ತು. ಸೌದಿ ಕೈರೊ ಬ್ಯಾಂಕ್, ಸಾಂಬಾ ಮುಂತಾದ ಬ್ಯಾಂಕುಗಳನ್ನು ವಿಲೀನ ಮಾಡಿಕೊಂಡ ನಂತರ ಯುನೈಟೆಡ್ ಸೌದಿ ಕಮರ್ಷಿಯಲ್ ಬ್ಯಾಂಕ್, ಗಲ್ಫ್ ರಾಷ್ಟ್ರಗಳ ಅತ್ಯಂತ ದೊಡ್ಡ ಬ್ಯಾಂಕಾಗಿ ಹೊರಹೊಮ್ಮುತ್ತದೆ.

1991ರಲ್ಲಿ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದ ಸಿಟಿ ಬ್ಯಾಂಕ್‌ನಲ್ಲಿ ಅಲಾವಲೀದ್ ಮಾಡಿದ 55 ಕೋಟಿ ಡಾಲರ್ (ಸುಮಾರು 3500 ಕೋಟಿ ರೂಪಾಯಿ) ಹೂಡಿಕೆ ಅವರ ದೆಸೆಯನ್ನೇ ತಿರುಗಿಸುತ್ತದೆ. ಹೂಡಿಕೆ ವಲಯದ ಎಲ್ಲರೂ ಅವರತ್ತ ತಿರುಗಿ ನೋಡಿದ್ದಲ್ಲದೆ ನಂತರ ಆ ಹೂಡಿಕೆ ಸಾವಿರಾರು ಕೋಟಿ ಡಾಲರುಗಳಾಗಿ ಪರಿವರ್ತನೆಯಾಗುತ್ತದೆ. ಈಗ ಅವರ ಮಾಲೀಕತ್ವದ ಕಿಂಗ್‌ಡಮ್ ಹೋಲ್ಡಿಂಗ್ ಕಂಪೆನಿ ಜಗತ್ತಿನ ಪ್ರಮುಖ ಮಾಧ್ಯಮ ಸಂಸ್ಥೆಗಳು, ಮನರಂಜನಾ ಸಂಸ್ಥೆಗಳು, ಬ್ಯಾಂಕುಗಳು, ಹೋಟೆಲುಗಳಲ್ಲಿ ಗಣನೀಯ ಪ್ರಮಾಣದ ಹೂಡಿಕೆ ಹೊಂದಿದೆ.

ಬಾಲಕನಾಗಿದ್ದಾಗಲೇ ಅಲಾವಲೀದ್ ಸ್ವಲ್ಪ ವಿಚಿತ್ರ ಸ್ವಭಾವದವನಾಗಿದ್ದ. ಆಗಾಗ ಮನೆಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಹುಡುಗ ಲಾಕ್ ಮಾಡದೇ ಇದ್ದ ಕಾರಿನ ಹಿಂದಿನ ಸೀಟಿನಲ್ಲಿ ಒಂದೆರಡು ದಿನ ಮಲಗಿ ಬಿಡುತ್ತಿದ್ದ. ನಂತರ ಈತನನ್ನು ರಿಯಾದ್‌ನ ಸೇನಾ ಶಾಲೆಗೆ ಸೇರಿಸಿದರು. 1960ರ ದಶಕದಲ್ಲಿ ಅಪ್ಪ ತಲಾಲ್ ಸೌದಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆಡಳಿತದಲ್ಲಿ ಸುಧಾರಣೆ ತರಬೇಕು ಎಂಬುದರ ಪ್ರಬಲ ಪ್ರತಿಪಾದಕರಾಗಿದ್ದರು. ಆದರೆ ಅವರ ಮಾತಿಗೆ ಮನ್ನಣೆ ಸಿಗಲಿಲ್ಲ.

ಹಾಗಾಗಿಯೇ ಸಚಿವ ಸ್ಥಾನದ ಜೊತೆ ದೇಶವನ್ನೂ ತ್ಯಜಿಸಿ ಹೋದರು. ಬಹುಶಃ ಸುಧಾರಣೆ ಮತ್ತು ಮಾನವೀಯತೆಯೆಡೆಗಿನ ತುಡಿತ ಅಲಾವಲೀದ್‌ಗೆ ಅಪ್ಪನಿಂದಲೇ ಬಂದಿರಬೇಕು. ಹಾಗಾಗಿಯೇ ಮಹಿಳೆಯರ ಅಭಿವೃದ್ಧಿ, ಆರೋಗ್ಯ ರಕ್ಷಣೆ ಮತ್ತು ಪ್ರಕೃತಿ ವಿಕೋಪ ಪರಿಹಾರಕ್ಕೆ ತನ್ನ ಸಂಪತ್ತನ್ನೆಲ್ಲ ನೀಡುತ್ತೇನೆ ಎಂದು ಹೇಳಿದ್ದಾರೆ.

ಅಲಾವಲೀದ್ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಇರುವ ಶ್ರೀಮಂತಿಕೆಯನ್ನು ಪ್ರದರ್ಶಿಸಬೇಕು ಎಂಬುದು ಅವರ ನಿಲುವು. ಹಾಗಾಗಿಯೇ 1988ರಲ್ಲಿ ಫೋಬ್ಸ್ ನಿಯತಕಾಲಿಕವನ್ನು ಸಂಪರ್ಕಿಸಿ ಜಗತ್ತಿನ ಶ್ರೀಮಂತ ಪಟ್ಟಿಯಲ್ಲಿ ತಮ್ಮ ಹೆಸರನ್ನೂ ಸೇರಿಸಬೇಕು ಎಂದು ಕೋರಿದ್ದರು. ನಂತರ ಫೋಬ್ಸ್ ಅವರನ್ನು ಅರೇಬಿಯಾದ ‘ವಾರನ್ ಬಫೆಟ್’ ಎಂದು ಬಣ್ಣಿಸಿತ್ತು. 2013ರಲ್ಲಿ ಫೋಬ್ಸ್ ಸಮೀಕ್ಷೆಯಲ್ಲಿ ತಮ್ಮ ಸಂಪತ್ತನ್ನು ಸರಿಯಾಗಿ ಲೆಕ್ಕ ಹಾಕಿಲ್ಲ ಎಂದು ಅಲಾವಲೀದ್ ಕೋಪಿಸಿಕೊಂಡಿದ್ದರು. ತಾನು ಜಗತ್ತಿನ 10ನೇ ಅತ್ಯಂತ ದೊಡ್ಡ ಶ್ರೀಮಂತ.

ಆದರೆ ಸುಮಾರು 70 ಸಾವಿರ ಕೋಟಿ ರೂಪಾಯಿಯಷ್ಟು ಕಡಿಮೆ ಲೆಕ್ಕ ಹಾಕಿದ್ದರಿಂದ ತಮ್ಮ ರ್‍ಯಾಂಕ್ ಕೆಳಗಿಳಿದಿದೆ ಎಂದು ಲಂಡನ್‌ನಲ್ಲಿ ಫೋಬ್ಸ್ ನಿಯತಕಾಲಿಕದ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. ಅವರಲ್ಲಿ ಅತ್ಯಂತ ದುಬಾರಿಯಾದ 200ಕ್ಕೂ ಹೆಚ್ಚು ಕಾರುಗಳಿವೆ. ಐಷಾರಾಮಿ ವಿಹಾರದೋಣಿ ಇದೆ. ಅವರಲ್ಲಿರುವ ಎರಡು ವಿಮಾನಗಳಲ್ಲಿ ಬೋಯಿಂಗ್ 747 ಜಗತ್ತಿನ ಅತ್ಯಂತ ದೊಡ್ಡ ಖಾಸಗಿ ವಿಮಾನ. ಇದನ್ನು ಹಾರುವ ಅರಮನೆ ಎಂದೇ ಕರೆಯುತ್ತಾರೆ. ಇದರಲ್ಲಿ ಅವರಿಗೆ ಕೂರುವುದಕ್ಕಾಗಿ ಚಿನ್ನದಿಂದ ಅಲಂಕರಿಸಿದ ದೊಡ್ಡ ಸಿಂಹಾಸನದಂತಹ ಆಸನ ಇದೆ.

ಹಿಂದೊಮ್ಮೆ ಅವರು ಸೌದಿಯ ಫುಟ್ಬಾಲ್ ತಂಡದ ಸದಸ್ಯರಿಗೆ 25 ದುಬಾರಿ ಬೆಂಟ್ಲಿ ಕಾರುಗಳನ್ನು ನೀಡಿದ್ದರು. ಹಾಗೆಯೇ ಯೆಮನ್ ವಾಯುದಾಳಿಯಲ್ಲಿ ಭಾಗವಹಿಸುವ ಸೌದಿಯ ಪ್ರತಿ ಪೈಲಟ್‌ಗೆ ಬೆಂಟ್ಲಿ ಕಾರು ಉಡುಗೊರೆ ನೀಡುವುದಾಗಿಯೂ ಭರವಸೆ ನೀಡಿದ್ದಾರೆ. ಅಲಾವಲೀದ್ ಸೇನಾ ಶಾಲೆಯಲ್ಲಿ ರೂಢಿಸಿಕೊಂಡ ಶಿಸ್ತನ್ನು ಈಗಲೂ ಪಾಲಿಸುತ್ತಿದ್ದಾರೆ. ತನ್ನ ಮುಂದೆ ಕುಳಿತ ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಸಿದ್ಧತೆ ಮಾಡದೇ ಮಾತನಾಡುತ್ತಿದ್ದಾನೆ ಎನಿಸಿದರೆ ತಕ್ಷಣ ಮಾತು ನಿಲ್ಲಿಸಿ ಎದ್ದು ಹೋಗುವಷ್ಟು ನಿಷ್ಠುರ ವ್ಯಕ್ತಿ.

ಜೊತೆಗೆ ಯಶಸ್ಸಿಗೆ ಕಠಿಣ ದುಡಿಮೆ ಅಗತ್ಯ, ಯಶಸ್ಸಿನಿಂದಾಗಿಯೇ ಮತ್ತಷ್ಟು ಯಶಸ್ಸು ಸಾಧ್ಯವಾಗುತ್ತದೆ, ಅದುವೇ ನನ್ನ ಚಾಲಕ ಶಕ್ತಿ ಎಂದು ಅವರು ಹೇಳುತ್ತಾರೆ. ಅಷ್ಟೇ ಶ್ರದ್ಧೆಯಿಂದ ದುಡಿಯುತ್ತಾರೆ. ಬೆಳಿಗ್ಗೆ 11ಕ್ಕೆ ಏಳುವ ಈ ವ್ಯಕ್ತಿ ಮಲಗುವುದು ಬೆಳಿಗ್ಗೆ 6 ಗಂಟೆಗೆ. ಅವರ ಅಷ್ಟು ದೊಡ್ಡ ಸಾಮ್ರಾಜ್ಯವನ್ನು ನೋಡಿಕೊಳ್ಳಲು ಅಷ್ಟು ಕೆಲಸ ಮಾಡುವ ಅಗತ್ಯವೂ ಇದೆ. ಮಹಿಳೆಯರು ಕಾರು ಚಾಲನೆ ಮಾಡುವುದು ಕೂಡ ಸೌದಿಯಲ್ಲಿ ದುಸ್ತರ.

ಆದರೆ ಅಲ್ಲಿ ಹನದಿ ಅಲ್ ಹಿಂದಿ ಎಂಬ ಮಹಿಳೆಗೆ ಸಂಪೂರ್ಣ ನೆರವು ನೀಡಿ ಆಕೆಯನ್ನು ಪೈಲಟ್ ಆಗಿಸಿದ್ದು ಮಾತ್ರವಲ್ಲದೆ ತಮ್ಮ ಖಾಸಗಿ ವಿಮಾನದ ಪೈಲಟ್ ಆಗಿ ಕೂಡ ಅಲಾವಲೀದ್ ನೇಮಿಸಿಕೊಂಡಿದ್ದಾರೆ. ಅಲಾವಲೀದ್ ಅವರ ಸಂಪೂರ್ಣ ಮಾಲೀಕತ್ವದ ಕಿಂಗ್‌ಡಮ್ ಹೋಲ್ಡಿಂಗ್ ಕಂಪೆನಿಯ ಮೂರನೇ ಎರಡರಷ್ಟು ನೌಕರರು ಮಹಿಳೆಯರು. ಹಾಗಾಗಿಯೇ ಇರಬೇಕು ತಾವು ದಾನ ನೀಡುವ ಸಂಪತ್ತಿನ ಒಂದು ಭಾಗ ಮಹಿಳೆಯರ ಅಭ್ಯುದಯಕ್ಕೆ ಖರ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ಕಳೆದ 35 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದು, 350 ಕೋಟಿ ಡಾಲರ್ (ಸುಮಾರು 22 ಸಾವಿರ ಕೋಟಿ) ಮೊತ್ತವನ್ನು ನೀಡಿರುವುದಾಗಿಯೂ ಅವರು ಹೇಳಿದ್ದಾರೆ. ಅದರಲ್ಲಿಯೂ ಮಹಿಳೆಯರ ಅಭ್ಯುದಯಕ್ಕೇ ಹೆಚ್ಚಿನ ಹಣ ವೆಚ್ಚವಾಗಿದೆ. ಈಗ ಘೋಷಿಸಲಾಗಿರುವ ದಾನದ ಮೊತ್ತವನ್ನು ಅತ್ಯಂತ ಯೋಜಿತ ರೀತಿಯಲ್ಲಿ ವೆಚ್ಚ ಮಾಡಲಾಗುವುದು ಎಂಬುದು ಅವರ ಮಾತು. ಅಲಾವಲೀದ್ ಅವರೇ ಅಧ್ಯಕ್ಷರಾಗಿರುವ ಅಲಾವಲೀದ್ ಫಿಲಾಂತ್ರಫೀಸ್ ಸಂಸ್ಥೆ ಈ ಯೋಜನೆಗಳನ್ನು ನಿರ್ವಹಿಸಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.