ADVERTISEMENT

ಸಮಚಿತ್ತದ ಸರದಾರ ದೀಪಕ್‌ ಮಿಶ್ರಾ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2017, 19:30 IST
Last Updated 26 ಆಗಸ್ಟ್ 2017, 19:30 IST
ಸಮಚಿತ್ತದ ಸರದಾರ  ದೀಪಕ್‌ ಮಿಶ್ರಾ
ಸಮಚಿತ್ತದ ಸರದಾರ ದೀಪಕ್‌ ಮಿಶ್ರಾ   

–ಕೃಷ್ಣ ಎಸ್‌.ದೀಕ್ಷಿತ್

ಅಜಮಾಸು 64 ಕೆ.ಜಿ.ತೂಕ, ಐದಡಿ ನಾಲ್ಕಿಂಚಿನ ಶರೀರ. ಕೊಂಚ ಚೂಪು ಮೂತಿ. ಒತ್ತಾಗಿ ಪೇರಿಸಿದ ತುಸು ಹಳದಿ ಬಣ್ಣದ ದಂತಪಕ್ತಿ. ಎಡಕ್ಕೆ ಬೈತಲೆ ತೆಗೆದು ಬಾಚಿದ ಕೂದಲಿನಲ್ಲಿ ಕಪ್ಪು ಬಣ್ಣದ ಮೆರುಗು. ಮೀಸೆಯಿಲ್ಲದ ದುಂಡನೆಯ ಮುಖಾರವಿಂದ. ನೀಳ ಮೂಗಿನ ಮೇಲೆ ಫ್ರೇಮಿಲ್ಲದ ಕನ್ನಡಕ. ನಡಿಗೆಯಲ್ಲಿ ಯಾವತ್ತೂ ಗಜಗಾಂಭೀರ್ಯ. ನೋಡಿದಾಕ್ಷಣ ಯುರೋಪಿಯನ್ನರ ನೆನಪು ತರುವಂತಹ, ಕೆನ್ನೆ ಚಿವುಟಿದರೆ ರಕ್ತ ಚಿಮ್ಮುತ್ತದೇನೊ ಎಂಬಂತಹ ಆಕರ್ಷಕ ಮೈಬಣ್ಣ. ಠಾಕುಠೀಕಿನ ಸೂಟು ಬೂಟುಧಾರಿ...

ಇವೆಲ್ಲಾ ಇಂದು (ಆ.27) ಸುಪ್ರೀಂ ಕೋರ್ಟ್‌ನ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ 62ರ ಹರೆಯದ ದೀಪಕ್‌ ಮಿಶ್ರಾ ಅವರ ಬಾಹ್ಯರೂಪದ ಕೆಲ ಝಲಕುಗಳು. 14 ತಿಂಗಳ ಸೇವಾವಧಿ ಹೊಂದಿರುವ ಮಿಶ್ರಾ ಅವರು ಒಡಿಶಾದ ಕಟಕ್ ನಗರದಿಂದ ಏಳು ಕಿ.ಮೀ ದೂರದ ತುಳಸಿಪುರದವರು. ಹುಟ್ಟಿದ್ದು 1953ರ ಅಕ್ಟೋಬರ್ 3ರಂದು.

ADVERTISEMENT

ಒಡಿಶಾ ರಾಜ್ಯದಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸುತ್ತಿರುವ ಮೂರನೇ ವ್ಯಕ್ತಿ ಇವರು. ಈ ಮೊದಲು ರಂಗನಾಥ ಮಿಶ್ರಾ ಮತ್ತು ಜಿ.ಬಿ.ಪಟ್ನಾಯಕ್‌ ಈ ಕೀರ್ತಿಗೆ ಪಾತ್ರರಾಗಿದ್ದರು. 1990–91ರ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಗನಾಥ ಮಿಶ್ರಾ ಅವರು ದೀಪಕ್‌ ಮಿಶ್ರಾ ಅವರ ಚಿಕ್ಕಪ್ಪ. ದೀಪಕ್‌ ಅವರ ತಂದೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದವರು.

ಸೀದಾ ಮತ್ತು ಸಾಚಾತನಕ್ಕೆ ಹೆಸರಾಗಿರುವ ಮೃದುಭಾಷಿ ದೀಪಕ್‌ ಮಿಶ್ರಾ, ಆದಿ ಶಂಕರಾಚಾರ್ಯರ ಪರಮ ಭಕ್ತ. ಇವರ ಪತ್ನಿ ಸುಪ್ರಮಾ ಮಿಶ್ರಾ. ಕಾಜಲ್ ಹಾಗೂ ಶೀತಲ್‌ ಎಂಬ ಇಬ್ಬರು ಹೆಣ್ಣು ಮಕ್ಕಳು. ಸಾಹಿತ್ಯ, ಇತಿಹಾಸ ಮತ್ತು ತತ್ವಶಾಸ್ತ್ರ ವಿಷಯಗಳಲ್ಲಿ ವಿಶೇಷ ಆಸಕ್ತಿ. ಇಂಗ್ಲಿಷ್‌ ಭಾಷೆ ಬಳಕೆಯಲ್ಲಿ ಎತ್ತಿದ ಕೈ. ನಿರ್ಭಯಾ ಪ್ರಕರಣದಲ್ಲಿ ಇವರು ನೀಡಿದ ತೀರ್ಪಿನ ಭಾಷಾ ಶೈಲಿಯನ್ನು ದೇಶ–ವಿದೇಶಗಳ ಕಾನೂನು ನಿಯತಕಾಲಿಕೆಗಳು ಬಿಚ್ಚುಮನಸ್ಸಿನಿಂದ ಹಾಡಿ ಹೊಗಳಿವೆ. ‘ಕೃಷ್ಣ ಅಯ್ಯರ್‌ ಅವರ ನಂತರ ಇವರೊಬ್ಬರೇ ಈ ಮಟ್ಟದ ಇಂಗ್ಲಿಷ್‌ ಬಳಸಿದ ಮೇಧಾವಿ’ ಎಂದು ಬಣ್ಣಿಸಿವೆ.

ದೀಪಕ್ ಮಿಶ್ರಾ 1977ರ ಫೆಬ್ರುವರಿಯಲ್ಲಿ ವಕೀಲಿಕೆ ಆರಂಭಿಸಿದರು. ಒಡಿಶಾ ಹೈಕೋರ್ಟ್‌ ಮತ್ತು ನ್ಯಾಯಮಂಡಳಿಗಳಲ್ಲಿ ವೃತ್ತಿ ಅನುಭವ. ಸಾಂವಿಧಾನಿಕ, ಸಿವಿಲ್‌, ಕ್ರಿಮಿನಲ್‌, ಕಂದಾಯ, ಮಾರಾಟ ಮತ್ತು ಸೇವಾ ತೆರಿಗೆ ವಿಷಯಗಳಲ್ಲಿ ಪರಿಣತ. 1996ರಲ್ಲಿ ಒಡಿಶಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ. ಮರು ವರ್ಷದಲ್ಲೇ ಮಧ್ಯಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆ. 2009ರಲ್ಲಿ ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪದನ್ನೋತಿ. 2010ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗ. 2011ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದ‌ನ್ನೋತಿ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆದ ಮೇಲೆ ಇವರ ಮುಂದೆ ವಿಚಾರಣೆಗೆ ಬಂದ ಪ್ರಕರಣಗಳಲ್ಲಿ 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಅಪರಾಧಿ ಯಾಕೂಬ್‌ ಮೆಮನ್‌ ಮೇಲ್ಮನವಿ ಒಂದು. ಗಲ್ಲುಶಿಕ್ಷೆಗೆ ತಡೆ ಕೋರಿದ್ದ ಯಾಕೂಬ್‌ ಮನವಿಯನ್ನು ಮಿಶ್ರಾ ತಿರಸ್ಕರಿಸಿದ್ದರು. ಇದರಿಂದಾಗಿ ಅವರಿಗೆ ಉಗ್ರರ ಸಂಘಟನೆಗಳಿಂದ ಸಾಕಷ್ಟು ಬೆದರಿಕೆ ಪತ್ರಗಳು ಬಂದಿದ್ದವು. ‘ಸರ್ಕಾರ ನಿಮಗೆ ಎಷ್ಟೇ ಭದ್ರತೆ ನೀಡಿದರೂ ನಾವು ನಿಮ್ಮ ಮೇಲೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂಬ ಧಮಕಿ ಹಾಕಲಾಗಿತ್ತು. ಆದರೆ ಇವ್ಯಾವ ಬೆದರಿಕೆಗಳಿಗೂ ಅವರು ಜಗ್ಗಲಿಲ್ಲ. ಅಂದಿನಿಂದಲೂ ಮಿಶ್ರಾ ಅತ್ಯಂತ ಬಿಗಿ ಭದ್ರತೆ ಹೊಂದಿರುವ ನ್ಯಾಯಮೂರ್ತಿ.

ಮಹಿಳೆಯ ಸ್ವಾತಂತ್ರ್ಯ ಮತ್ತು ಘನತೆಯ ಬಗ್ಗೆ ಮಿಶ್ರಾ ಅವರ ಮಮಕಾರ ಸದಾ ಮುಂದು. ನಿರ್ಭಯಾ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತೀರ್ಪು ನೀಡಿದ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠದಲ್ಲಿ ಮಿಶ್ರಾ ಕೂಡ ಒಬ್ಬರಾಗಿದ್ದವರು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.

ಓನ್‌ ಮೋಷನ್‌ ವರ್ಸಸ್‌ ದೆಹಲಿ ರಾಜ್ಯ ಸರ್ಕಾರದ ಪ್ರಕರಣದಲ್ಲಿ, ‘ಪೊಲೀಸರು ಎಫ್‌ಐಆರ್‌ ದಾಖಲಿಸಿದ 24 ಗಂಟೆಯೊಳಗೆ ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು’ ಎಂಬ ಮಹತ್ವದ ಆದೇಶ ನೀಡಿದ ಹೆಗ್ಗಳಿಕೆ ಮಿಶ್ರಾ ಅವರ ಪಾಲಿಗಿದೆ. ‘ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಹೇಳುವ ಮೂಲಕ ಅವರು, ಸಾರ್ವಜನಿಕ ದಾಖಲೆಗಳ ಲಭ್ಯತೆಯನ್ನು ಸರಳಗೊಳಿಸಿದವರು.

ಮೀಸಲಾತಿಯ ಬಗ್ಗೆ ಒಂದಷ್ಟು ಬಿಗಿ ನಿಲುವನ್ನೇ ಹೊಂದಿದವರಂತೆ ಕಾಣುವ ಮಿಶ್ರಾ, ಮೀಸಲಾತಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರಿ ನೌಕರರ ಪ್ರಕರಣದಲ್ಲಿ ‘ಸರ್ಕಾರಿ ನೌಕರ ಮೀಸಲಾತಿ ಪಡೆಯಬೇಕಾದರೆ ಬಡ್ತಿ ಹುದ್ದೆಯ ಸಂಪೂರ್ಣ ಅಂಕಿ ಅಂಶ ಒದಗಿಸಬೇಕು ಮತ್ತು ತನ್ನ ಮೀಸಲು ಹಕ್ಕುಪ್ರತಿಪಾದಿಸುವ ಸಾಕ್ಷ್ಯವನ್ನು ಒದಗಿಸಬೇಕು’ ಎಂದು ಹೇಳಿದ್ದರು.

ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದ ಅವಧಿಯಲ್ಲಿ ಅವರು ಸರಿಸುಮಾರು ಐದು ಸಾವಿರ ಪ್ರಕರಣಗಳ ವಿಲೇವಾರಿ ಮಾಡಿದ್ದರು. ಕೋರ್ಟ್‌ ಆವರಣದಲ್ಲಿ ನಡೆಯುವ ಮಧ್ಯಸ್ಥಿಕೆ ಕೇಂದ್ರಗಳು, ಲೋಕ ಅದಾಲತ್‌ ಮತ್ತು ಉಚಿತ ಕಾನೂನು ನೆರವಿನ ಬೆಳವಣಿಗೆಯಲ್ಲಿ ದೀಪಕ್‌ ಮಿಶ್ರಾ ಅವರ ಪಾತ್ರ ಬಹುದೊಡ್ಡದು.

‘ಬಾಂಬೆ ಹೈಕೋರ್ಟ್‌ನಲ್ಲಿ ನನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ರದ್ದುಗೊಳಿಸಬೇಕು’ ಎಂದು ಕೋರಿ ಕಾಂಗ್ರೆಸ್‌ ನೇತಾರ ರಾಹುಲ್‌ ಗಾಂಧಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಪ್ರಕರಣವದು. ಪ್ರಕರಣ ದೀಪಕ್‌ ಮಿಶ್ರಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈಗಿನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಯು.ಯು.ಲಲಿತ್‌ ಅವರ ತಂದೆ ಹಿರಿಯ ವಕೀಲ ಯು.ಆರ್.ಲಲಿತ್‌, ರಾಹುಲ್‌ ಗಾಂಧಿ ಪರ ವಾದ ಮಂಡಿಸುತ್ತಿದ್ದರು. ಇವರಿಗೆ ಮತ್ತೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್‌ ಸಹಾಯ ಮಾಡುತ್ತಿದ್ದರು. ವಾದ ಮಂಡನೆ ಮಧ್ಯದಲ್ಲಿ ಒಮ್ಮೆಲೇ ದೀಪಕ್‌ ಮಿಶ್ರಾ ಅವರು ಯು.ಆರ್.ಲಲಿತ್‌ ಅವರಿಗೆ,  ‘ನಿಮಗೆ ಅಪರಾಧಿಕ ನ್ಯಾಯಶಾಸ್ತ್ರ ಗೊತ್ತಿದೆಯೇ’ ಎಂದು ಪ್ರಶ್ನಿಸಿಬಿಟ್ಟರು. ತಕ್ಷಣವೇ ಮಧ್ಯ ಪ್ರವೇಶಿಸಿದ ಕಪಿಲ್‌ ಸಿಬಲ್‌, ‘ಸ್ವಾಮಿ ಇವರು ತಮ್ಮ ವಯಸ್ಸಿಗಿಂತ ನಾಲ್ಕು ಪಟ್ಟು ಹೆಚ್ಚಿನ ಕ್ರಿಮಿನಲ್‌ ಪ್ರಕರಣ

ಗಳನ್ನು ನಡೆಸಿದ್ದಾರೆ’ ಎಂದು ಅವರು ಯಾರು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ತಕ್ಷಣವೇ ದೀಪಕ್‌ ಮಿಶ್ರಾ ತೆರೆದ ಕೋರ್ಟ್‌ನಲ್ಲಿಯೇ ಯು.ಆರ್. ಲಲಿತ್‌ ಕ್ಷಮೆ ಕೋರಿದ್ದರು.

ದೀಪಕ್‌ ಮಿಶ್ರಾ ಅವರನ್ನು ಮುಖ್ಯ ನ್ಯಾಯಮೂರ್ತಿ ಎಂದು ಘೋಷಿಸಿದ ಕೂಡಲೇ ಸುಪ್ರೀಂ ಕೋರ್ಟ್‌ನಲ್ಲಿ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ‘ನಿರ್ಗಮಿಸುತ್ತಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್‌ ಅವರು, ದೀಪಕ್‌ ಮಿಶ್ರಾ ಅವರ ಹೆಸರನ್ನು ತಮ್ಮ ಸ್ಥಾನಕ್ಕೆ ಸೂಚಿಸಿರುವುದು ಸಂವಿಧಾನ ವಿರೋಧಿಯಾಗಿದೆ’ ಎಂದು ಬಾಬಾ ಸ್ವಾಮಿ ಓಮ್‌ಜಿ ಹಾಗೂ ದೆಹಲಿಯ ಎಂಜಿನಿಯರ್ ಮಹೇಂದ್ರ ಜೈನ್‌ ಎಂಬುವರು ಆಕ್ಷೇಪಿಸಿದ್ದರು. ಇದನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಖೇಹರ್‌ ನೇತೃತ್ವದ ನ್ಯಾಯಪೀಠ, ‘ಇದೊಂದು ಪ್ರಚಾರದ ಹುಚ್ಚಿನ ಜುಜುಬಿ ಅರ್ಜಿ’ ಎಂದು ಹೇಳಿ ಅರ್ಜಿದಾರರಿಗೆ ತಲಾ ₹ 10 ಲಕ್ಷ ದಂಡ ವಿಧಿಸಿತ್ತು.

ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಕಡ್ಡಾಯವಾಗಿ ಹಾಡಬೇಕೆಂದು ಆದೇಶಿಸಿದವರು ಮಿಶ್ರಾ. ಅಯೋಧ್ಯೆಯ ರಾಮಮಂದಿರ ವಿವಾದ ಸದ್ಯ ಇವರ ಮುಂದಿರುವ ಬಹುದೊಡ್ಡ ಪ್ರಕರಣ.

ಸೌಂದರ್ಯ ಪ್ರಿಯರೂ ಆದ ದೀಪಕ್‌ ಮಿಶ್ರಾಗೆ ಮೀನಿನ ಊಟ ಎಂದರೆ ತುಂಬಾ ಇಷ್ಟವಂತೆ! ಒಂದೊಮ್ಮೆ ಅವರೇ ನನಗೆ ಈ ಮಾತು ಹೇಳಿದ್ದರು. ಯಾವುದೇ ಪ್ರಕರಣದ ತಿರುಳನ್ನು ತೀಕ್ಷ್ಣವಾಗಿ ಗ್ರಹಿಸಬಲ್ಲ ಮೇಧಾವಿಯೂ ಆದ ಮಿಶ್ರಾ ಸಂಕೀರ್ಣ ಸಂದರ್ಭಗಳನ್ನು ನಿಭಾಯಿಸುವುದರಲ್ಲಿ ಚಾಣಾಕ್ಷರು!

(ಲೇಖಕ: ಸಹಾಯಕ ಸಾಲಿಸಿಟರ್‌ ಜನರಲ್‌)

ನಿರೂಪಣೆ: ಬಿ.ಎಸ್‌. ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.