ADVERTISEMENT

‘ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ’

ಚಿದಂಬರ ಪ್ರಸಾದ್
Published 29 ಜುಲೈ 2017, 19:30 IST
Last Updated 29 ಜುಲೈ 2017, 19:30 IST
‘ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ’
‘ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ’   

ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳು ಬಂದ್‌ ಆಗಿವೆ. ಸುಪ್ರೀಂಕೋರ್ಟ್‌ ತೀರ್ಪಿನ ನಂತರ ಉದ್ಭವಿಸಿರುವ ಸ್ಥಿತಿ, ಇದರಿಂದ ಆಗಿರುವ ಪರಿಣಾಮಗಳು, ನಷ್ಟದ ಪ್ರಮಾಣ, ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗೋಪಾಯಗಳು, ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಫೆಡರೇಶನ್‌ ಆಫ್‌ ವೈನ್‌ ಮರ್ಚೆಂಟ್ಸ್ ಅಸೋಸಿಯೇಶನ್‌ ಆಫ್‌ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್‌ ಹೆಗ್ಡೆ ಅವರು, ‘ಪ್ರಜಾವಾಣಿ’ ಜತೆ ಮುಕ್ತವಾಗಿ ಮಾತನಾಡಿದ್ದಾರೆ.

* ರಾಜ್ಯದಾದ್ಯಂತ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳು ಬಂದ್‌ ಆಗಿವೆ. ಅದರ ಪರಿಣಾಮ ಏನು?
ರಾಜ್ಯದಲ್ಲಿ ಸುಮಾರು 3,500 ಮದ್ಯದಂಗಡಿಗಳು ಬಾಗಿಲು ಮುಚ್ಚಿವೆ. ಮದ್ಯದಂಗಡಿ ಮಾಲೀಕರು ಸಾಕಷ್ಟು ಬಂಡವಾಳ ಹೂಡಿದ್ದಾರೆ. ರಾಜ್ಯದಲ್ಲಿ ಸಾರಾಯಿ ಮಾರಾಟ ಬಂದ್ ಆದ ನಂತರ, ಮದ್ಯದ ವ್ಯಾಪಾರಿಗಳು  ಈ ಉದ್ಯಮವನ್ನೇ ನಂಬಿಕೊಂಡಿದ್ದಾರೆ.  ಲೈಸೆನ್ಸ್‌ ನವೀಕರಣ ಆಗದೇ ಇದ್ದರೆ, ಸಾಲ ಕೊಟ್ಟಿರುವ ಬ್ಯಾಂಕ್‌ಗಳಿಂದ ವಸೂಲಾತಿಗೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಮದ್ಯದ ವ್ಯಾಪಾರಿಗಳು ಮಾನಸಿಕ ಒತ್ತಡ ಹಾಗೂ ಹಣಕಾಸಿನ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. 

ಮದ್ಯದ ವ್ಯಾಪಾರ ಸ್ಥಗಿತ ಆಗುವುದರಿಂದ ಕೇವಲ ನಮಗಷ್ಟೇ ನಷ್ಟವಿಲ್ಲ. ಬಾರ್‌ಗಳಲ್ಲಿ ಬಳಸುವ ಮೀನು, ಮಾಂಸ, ಸ್ನ್ಯಾಕ್ಸ್‌, ತರಕಾರಿ ವ್ಯಾಪಾರಿಗಳಿಗೂ ತೊಂದರೆ ಎದುರಾಗಲಿದೆ. ಪಾನ್ ಶಾಪ್‌ಗಳೂ ಬಾಗಿಲು ಮುಚ್ಚಬೇಕಾಗುತ್ತದೆ. ಜತೆಗೆ, ರಾತ್ರಿ ವೇಳೆ ಆಟೊ, ಟ್ಯಾಕ್ಸಿಗಳಿಗೆ ಸಿಗುತ್ತಿದ್ದ ಬಾಡಿಗೆಯೂ ಇಲ್ಲದಂತಾಗುತ್ತದೆ. ಬಾರ್‌, ಮದ್ಯದಂಗಡಿಗಳಲ್ಲಿ ದುಡಿಯುತ್ತಿರುವ 1 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಒಟ್ಟಾರೆ ವ್ಯವಸ್ಥೆಯೇ ಬುಡಮೇಲಾಗುವ ಆತಂಕ ಎದುರಾಗಿದೆ.

ADVERTISEMENT

* ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗಗಳೇನು?
ಮೊದಲಿಗೆ ಹೇಳಬೇಕೆಂದರೆ ಸುಪ್ರೀಂಕೋರ್ಟ್ ನೀಡಿರುವುದು ‘ಒಂದು ಭಾವನಾತ್ಮಕವಾದ ತೀರ್ಮಾನ’. ಸದ್ಯದ ಪರಿಸ್ಥಿತಿಯಲ್ಲಿ ಸಮಸ್ಯೆ ಪರಿಹರಿಸಲು ಉಳಿದಿರುವುದು ಎರಡೇ ಮಾರ್ಗ. ಒಂದು, ರಾಜ್ಯ ಸರ್ಕಾರವೇ ಇದಕ್ಕೊಂದು ಶಾಸನ ರೂಪಿಸಬೇಕು. ಇಲ್ಲವೆ, ಸುಪ್ರೀಂಕೋರ್ಟ್‌ನಿಂದ ಪರಿಹಾರ ಪಡೆದುಕೊಳ್ಳಬೇಕು.

ಮದ್ಯ ವ್ಯಾಪಾರ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು, ರಾಜ್ಯ ಸರ್ಕಾರವೇ ಕಾನೂನಿಗೆ ತಿದ್ದುಪಡಿ ಮಾಡಲು ಸಾಧ್ಯವಿದೆ. ಆಗ ಸುಪ್ರೀಂಕೋರ್ಟಿನಿಂದ ಯಾವುದೇ ತೊಂದರೆ ಆಗುವುದಿಲ್ಲ. ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಈಗಾಗಲೇ ಈ ವಿಷಯದಲ್ಲಿ ಕ್ರಮ ಕೈಗೊಂಡಿವೆ. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವು ನಿರ್ಣಯ  ಕೈಗೊಳ್ಳಬೇಕೆಂಬುದು ನಮ್ಮ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದೇವೆ. ಆದರೆ ಈ ಬಗ್ಗೆ ವಿಸ್ತೃತ ಚರ್ಚೆ ಮಾಡಲು ಅವಕಾಶ ಸಿಕ್ಕಿಲ್ಲ. ಇದರಿಂದಾಗಿ ಈ ವಿಷಯದಲ್ಲಿ ಯಾವುದೇ ಪ್ರಗತಿ ಕೂಡ ಆಗುತ್ತಿಲ್ಲ.

ನಾವೂ ಸುಪ್ರೀಂಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು  ಈಗಾಗಲೇ ತಯಾರಿ ನಡೆಸಿದ್ದೇವೆ. ಆಗಲೂ ನ್ಯಾಯ ಸಿಗದೇ ಇದ್ದರೆ ಕ್ಯುರೇಟಿವ್ ಅರ್ಜಿ ಹಾಕಬೇಕಾಗುತ್ತದೆ. ಅದು ಕೋರ್ಟ್‌ನ ಸಂವಿಧಾನ ಪೀಠದ ಎದುರು ಬರಲಿದ್ದು, ನಮ್ಮ ವಾದವನ್ನು ಪ್ರಬಲವಾಗಿ ಮಂಡಿಸುತ್ತೇವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಸುಪ್ರೀಂಕೋರ್ಟ್‌ ನಿಲುವು ಸ್ವಲ್ಪಮಟ್ಟಿಗೆ ಸಡಿಲವಾಗಿದೆ. ಡಿಸೆಂಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ ಹೆದ್ದಾರಿ ಬದಿಯ ಎಲ್ಲ ಮದ್ಯದಂಗಡಿಗಳನ್ನು ತೆರವು ಮಾಡಲು ಸೂಚಿಸಿತ್ತು.

ಇದೀಗ ಮಾರ್ಚ್‌ನಲ್ಲಿ ನೀಡಿರುವ ತೀರ್ಪಿನಲ್ಲಿ ಸ್ವಲ್ಪ ಸಡಿಲಿಕೆ ಮಾಡಿದೆ. ಮೇಘಾಲಯ, ಸಿಕ್ಕಿಂಗೆ ಸಂಪೂರ್ಣ ವಿನಾಯಿತಿ ನೀಡಿದೆ. 20 ಸಾವಿರ ಜನಸಂಖ್ಯೆ ಇರುವ ಪ್ರದೇಶಗಳಿಗೆ 220 ಮೀಟರ್‌ ಅಂತರ ನಿಗದಿಪಡಿಸಿದೆ. ಜುಲೈ 12ರ ತೀರ್ಪಿನಲ್ಲಿ ಅರುಣಾಚಲ ಪ್ರದೇಶ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ಗಳಿಗೂ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಅರೈವ್ ಸೇಫ್‌ ಸೊಸೈಟಿ ಸಲ್ಲಿಸಿದ್ದ ಎಸ್‌ಎಲ್‌ಪಿಯ ವಿಚಾರಣೆಯ ಸಂದರ್ಭದಲ್ಲಿ ಡಿ-ನೋಟಿಫಿಕೇಶನ್ ಮಾಡುವುದು ಸರ್ಕಾರಗಳ ಅಧಿಕಾರ ಎನ್ನುವ ವಿಚಾರವನ್ನು  ಕೋರ್ಟ್‌ ಸ್ಪಷ್ಟ ಪಡಿಸಿದೆ. ಈ ಪರಿಸ್ಥಿತಿಗಳನ್ನು ಅವಲೋಕನ ಮಾಡಿದಾಗ ಪುನರ್ ಪರಿಶೀಲನಾ ಅರ್ಜಿಯಲ್ಲಿಯೇ ನಮಗೆ ನ್ಯಾಯ ಸಿಗಬಹುದು ಎನ್ನುವ ಆಶಾವಾದ ಮೂಡಿದೆ. ಸುಪ್ರೀಂಕೋರ್ಟ್‌ನಲ್ಲಿ 2012ರಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ದಾಖಲಾದ ರಿಟ್ ಪಿಟಿಷನ್‌ನಲ್ಲಿ ನ್ಯಾಯಮೂರ್ತಿ ಕೆ.ಎಸ್.ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿರುತ್ತದೆ. ಈ ಪ್ರಕರಣದ ತೀರ್ಪು ಇನ್ನೂ ಪ್ರಕಟವಾಗಿಲ್ಲ.

*  ಸುಪ್ರೀಂಕೋರ್ಟ್‌ ಮೂರು ತಿಂಗಳ ಮುಂಚೆಯೇ (ಮಾರ್ಚ್‌) ಹೇಳಿತ್ತು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರ ಎಡವಿದ್ದು ಎಲ್ಲಿ?
ಸುಪ್ರೀಂಕೋರ್ಟ್‌ನ ಮೊದಲ ತೀರ್ಪು ಬಂದಿದ್ದು ಡಿಸೆಂಬರ್‌ನಲ್ಲಿ. ಮಾರ್ಚ್‌ನಲ್ಲಿ ಅವಧಿ ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ಮೇಲೆ ತೀರ್ಪು ನೀಡಲಾಗಿದೆ. ಈಗಾಗಲೇ 6–7 ತಿಂಗಳು ಕಳೆದು ಹೋಗಿವೆ. ಸರ್ಕಾರ ಈ ಕುರಿತು ಮುಂಚೆಯೇ ಚಿಂತನೆ ಮಾಡಬೇಕಿತ್ತು. ಈ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದೆ ಎಂದು ಅನಿಸುತ್ತಿದೆ.

ಪರ್ಯಾಯ ವ್ಯವಸ್ಥೆಗೆ ಚಿಂತನೆ ಮಾಡದೆ, ಸುಪ್ರೀಂಕೋರ್ಟ್‌ನಿಂದ ಕಾಲಾವಕಾಶ ಪಡೆಯುವುದರಿಂದ ಏನು ಪ್ರಯೋಜನ. ಕೇವಲ ಸರ್ಕಾರ ತನ್ನ ವರಮಾನ ದೃಷ್ಟಿಯಲ್ಲಿ ಇಟ್ಟುಕೊಂಡು ಕಾಲಾವಕಾಶ ಕೇಳಿತೇ ಎನ್ನುವ ಪ್ರಶ್ನೆಯೂ ಮೂಡುತ್ತಿದೆ. ಈಗಾಗಲೇ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರವೂ ಹೆದ್ದಾರಿ ಡಿನೋಟಿಫೈ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆದು ಪ್ರಯತ್ನಿಸಿದೆ.

ರಾಜ್ಯ ಹೆದ್ದಾರಿ ಡಿನೋಟಿಫೈ ಮಾಡುವ ಮೂಲಕ ಸುಮಾರು 1,800 ಮದ್ಯದಂಗಡಿಗಳನ್ನು ಉಳಿಸಿಕೊಂಡಿದೆ. ಆದರೆ, ಇದು ಶಾಶ್ವತ ಪರಿಹಾರವಲ್ಲ ಎನ್ನುವುದು ನಮ್ಮ ಅನಿಸಿಕೆ. ಈ ನಿಟ್ಟಿನಲ್ಲಿ ನಿರ್ದಿಷ್ಟ ಕಾನೂನು ರೂಪಿಸುವ ಅಗತ್ಯವಿದೆ. ಹಾಗಾಗಿ ರಾಜ್ಯ ಸರ್ಕಾರ ಕಾನೂನಿಗೆ ತಿದ್ದುಪಡಿ ಮಾಡಿ ಇಂತಹ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ.

*  ಸಮಸ್ಯೆ ಬಗೆಹರಿಸಲು ಯಾರಾದರೂ ಹಣ ಕೇಳುತ್ತಿದ್ದಾರೆಯೇ?
– ಇಂತಹ ಯಾವುದೇ ಬೇಡಿಕೆ ಬಂದಿಲ್ಲ. ಬಂದಿದ್ದರೆ, ಮೊದಲು ನಮಗೇ ತಿಳಿಯುತ್ತಿತ್ತು. ಆದರೆ, ನಮಗೆ ಸರ್ಕಾರದ ಜತೆ ಕಾನೂನಾತ್ಮಕ ವಿಷಯಗಳನ್ನು ಚರ್ಚಿಸಲು ಅವಕಾಶ ಸಿಗುತ್ತಿಲ್ಲ. ಅಬಕಾರಿ ಖಾತೆ ಮುಖ್ಯಮಂತ್ರಿ ಬಳಿಯೇ ಇರುವುದರಿಂದ ಸಮಯ ಸಿಗುತ್ತಿಲ್ಲವೇನೋ ಎನಿಸುತ್ತಿದೆ. ಅಬಕಾರಿ ಖಾತೆಗೆ ಪ್ರತ್ಯೇಕ ಸಚಿವರು ಇದ್ದರೆ, ಈವರೆಗೆ ಯಾವುದಾದರೂ ಒಂದು ನಿರ್ಧಾರಕ್ಕೆ ಬರಬಹುದಿತ್ತು. ಇನ್ನೊಂದೆಡೆ, ಪ್ರಸ್ತುತ ಪರಿಸ್ಥಿತಿಯಿಂದಾಗಿ ಸರ್ಕಾರ  ಕಾನೂನು ತಿದ್ದುಪಡಿ ತರಲು ಹಿಂದೇಟು ಹಾಕುತ್ತಿದೆಯೇ ಎನ್ನುವ ಭಾವನೆ ಬಂದಿದೆ.

ನಾವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಮತ್ತೊಂದು ಪತ್ರ ಬರೆದಿದ್ದು, ಅಬಕಾರಿ, ಹಣಕಾಸು ಮತ್ತು ಕಾನೂನು ಇಲಾಖೆಗಳ ಜತೆಗೂಡಿ,  ಸಭೆ ಏರ್ಪಡಿಸಬೇಕು. ಈ ಸಭೆಗೆ ನಮ್ಮ ಒಕ್ಕೂಟದ ಅಧ್ಯಕ್ಷ ಎಸ್‌.ಗುರುಸ್ವಾಮಿ,  ಖಜಾಂಚಿ ಟಿ.ಎಂ. ಮೆಹರ್‌ವಾಡೆ ಮತ್ತಿತರ ಪದಾಧಿಕಾರಿಗಳನ್ನು ಆಹ್ವಾನಿಸಬೇಕು. ನಾವು ಚರ್ಚೆಯಲ್ಲಿ ಏನು ವಿಷಯ ಮಂಡಿಸುತ್ತೇವೆ ಎಂದು ಕೇಳುವ ವ್ಯವಧಾನವನ್ನಾದರೂ ಇಟ್ಟುಕೊಳ್ಳದಿದ್ದರೆ ಹೇಗೆ. ಸನ್ನದುದಾರರನ್ನು ಉಳಿಸಿಕೊಳ್ಳಲು ಸರ್ಕಾರ ಏನು ಚಿಂತನೆ ನಡೆಸಿದೆ ಎಂಬುದು ಇದುವರೆಗೆ ನಮಗೆ ಗೊತ್ತಾಗಿಲ್ಲ.

ನಮ್ಮ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಏಪ್ರಿಲ್‌ 20 ಹಾಗೂ ಜುಲೈ 10ರಂದು ಎರಡು ಬಾರಿ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮೌನ ಮೆರವಣಿಗೆ ನಡೆಸಿದ್ದರೂ ಪ್ರಯೋಜನವಾಗಿಲ್ಲ. 

* ಒಂದು ತಿಂಗಳಿಂದ ಎಷ್ಟು ನಷ್ಟ ಆಗಿದೆ?
ರಾಜ್ಯದಲ್ಲಿ ಒಟ್ಟಾರೆ ಶೇ 5.23 ರಷ್ಟು ಮದ್ಯದ ವ್ಯಾಪಾರ ಕುಸಿತವಾಗಿದೆ. ಸುಮಾರು ₹ 45–50 ಕೋಟಿ ನಷ್ಟವಾಗಿದೆ. ಲೈಸೆನ್ಸ್‌ ನವೀಕರಣ ಆಗದೇ ಇರುವುದರಿಂದ ರಾಜ್ಯ ಸರ್ಕಾರಕ್ಕೆ ₹200 ಕೋಟಿಯಷ್ಟು ಆದಾಯ ಖೋತಾ ಆಗಿದೆ.

* ಡಾನ್ಸ್‌ ಬಾರ್‌ಗಳಲ್ಲಿ ಡಾನ್ಸ್ ಮಾಡುವ ಹೆಣ್ಣುಮಕ್ಕಳ ಪರಿಸ್ಥಿತಿ ಏನು?
ಡಾನ್ಸ್‌ ಬಾರ್‌ಗಳಲ್ಲಿ ದುಡಿಯುತ್ತಿರುವ ಹೆಣ್ಣುಮಕ್ಕಳ ಸ್ಥಿತಿ ಅಧೋಗತಿಗೆ ಇಳಿದಿದೆ. ಇದು ಕೇವಲ ಅವರಿಗಷ್ಟೇ ಅಲ್ಲ. ಬಾರ್‌ ಮತ್ತು ಮದ್ಯದಂಗಡಿಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ನೌಕರರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ನ್ಯಾಯಾಲಯಗಳಾಗಲಿ ಉದ್ಯೋಗ  ಸೃಷ್ಟಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಜನರ ಉದ್ಯೋಗ ಕಸಿದುಕೊಳ್ಳಬಾರದು.

* ಗ್ರಾಮೀಣ ಪ್ರದೇಶದ ಅಂಗಡಿಗಳ ಸ್ಥಿತಿ ಏನು?
ಹೆದ್ದಾರಿ ಬದಿಯಲ್ಲಿದ್ದ ಅಂಗಡಿಗಳು ಈಗ ಗ್ರಾಮೀಣ ಪ್ರದೇಶಗಳಿಗೆ ಸ್ಥಳಾಂತರ ಆಗುತ್ತಿವೆ. ಈಗಾಗಲೇ ಶೇ 12–14 ರಷ್ಟು ಅಂಗಡಿಗಳು ಹಳ್ಳಿಗಳಿಗೆ ಹೋಗಿವೆ. ಹೀಗಾಗಿ ಅಲ್ಲಿಯೂ ವ್ಯಾಪಾರ ಕಡಿಮೆ ಆಗುತ್ತಿದೆ. 

* ಹೆದ್ದಾರಿಯಲ್ಲಿ ಬಾರ್ ಮುಚ್ಚಿ ಬೇರೆಡೆ ತೆರೆಯಲು ಮಾಲೀಕರಿಗೆ ಹಣದ ಹೊರೆ ಎಷ್ಟಾಗುತ್ತದೆ?
ಒಂದು ಅಂಗಡಿ ಸ್ಥಳಾಂತರ ಆದರೆ, ಕನಿಷ್ಠ ₹30 ಲಕ್ಷ ಖರ್ಚು ಮಾಡಬೇಕು. ಒಳ್ಳೆಯ ಜಾಗ ಇರಬೇಕು. ಅದರ ವ್ಯಾಪ್ತಿಯಲ್ಲಿ ಶಾಲೆ, ಪ್ರಾರ್ಥನಾ ಮಂದಿರಗಳು ಇರಬಾರದು. ಅಷ್ಟೇ ಅಲ್ಲ, ಸಾರ್ವಜನಿಕರ ವಿರೋಧವೂ ಇರಬಾರದು. ಇಂತಹ ಸ್ಥಳ ಸಿಕ್ಕರೆ, ಅದಕ್ಕೆ ಬಾಡಿಗೆಯೂ ದುಬಾರಿ ಆಗುತ್ತದೆ. ಮದ್ಯದಂಗಡಿಗಳಾದರೆ, ಹೇಗೋ ಮಾಡಬಹುದು. ಆದರೆ, ಬಾರ್‌ಗಳ ಸ್ಥಳಾಂತರ ಆಗಬೇಕಾದರೆ, ಎಲ್ಲವೂ ಹೊಸತಾಗಿಯೇ ಆಗಬೇಕು. ಒಳಾಂಗಣ ವಿನ್ಯಾಸ ಮಾಡಬೇಕು. ಗ್ರಾಹಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಹೀಗಾಗಿ ಒಂದು ಅಂಗಡಿ ಸ್ಥಳಾಂತರವೆಂದರೆ, ಹೊಸದಾಗಿ ಅಂಗಡಿ  ಆರಂಭಿಸಿದಂತೆಯೇ.

* ಪಂಜಾಬ್ ಮಾದರಿಯಲ್ಲಿ ಸಮಸ್ಯೆ ಪರಿಹಾರ ಎಂದರೇನು?
ಪಂಜಾಬ್‌ನಲ್ಲಿ ರಾಜ್ಯ ಸರ್ಕಾರವೇ ಕಾನೂನಿಗೆ ತಿದ್ದುಪಡಿ ತಂದಿವೆ. ಮದ್ಯದಂಗಡಿ (ಸಿಎಲ್‌–2) ಮಾತ್ರ ಹೆದ್ದಾರಿ ಬದಿಯಿಂದ ಸ್ಥಳಾಂತರ ಆಗಿವೆ. ಉಳಿದೆಲ್ಲ ಮದ್ಯದ ಕೇಂದ್ರಗಳನ್ನು ಉಳಿಸಿಕೊಳ್ಳುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿವೆ.

ನಮ್ಮ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರದ ಹೊಣೆಗಾರಿಕೆಯೂ ಇದೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ. ಈ ವಿಷಯದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು.

* ಲೈಸೆನ್ಸ್‌ ನವೀಕರಣದ ಸಂದರ್ಭದಲ್ಲಿ ಕೇಳಿದಷ್ಟು ಹಣ ನೀಡಲಾಗುತ್ತದೆ. ಇದರಿಂದ ಪರೋಕ್ಷವಾಗಿ ಭ್ರಷ್ಟಾಚಾರವನ್ನು ಬೆಂಬಲಿಸಿದಂತಾಗುವುದಿಲ್ಲವೇ?
ಇದು ಇಂದಿನ ಒಂದು ಕೆಟ್ಟ ಸಂಪ್ರದಾಯ. ಆದರೆ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುವ ಅನಿವಾರ್ಯತೆ ಉದ್ಭವಿಸಿದೆ. ಯಾವುದೇ ಮದ್ಯದ ಅಂಗಡಿಗಳಲ್ಲಿ ಸಣ್ಣ ಪುಟ್ಟ ನಿಯಮ ಉಲ್ಲಂಘನೆ ಮಾಡದೇ ಇದ್ದರೆ, ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ.

ಅಲ್ಪಸ್ವಲ್ಪ ಲೋಪದೋಷಗಳು ಇರುವುದರಿಂದ ಹೀಗಾಗುತ್ತಿದೆ. ಹಾಗಂತ ನಾವು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿಲ್ಲ. ಆದರೆ, ಹೆಚ್ಚಿನ ಅಬಕಾರಿ ಅಧಿಕಾರಿಗಳು ಬ್ಲ್ಯಾಕ್ ಮೇಲ್ ತಂತ್ರ  ಮಾಡುತ್ತಿರುವುದು ದೊಡ್ಡ ದುರಂತ. ಮದ್ಯದಂಗಡಿ ಸ್ಥಳಾಂತರದ ವಿಷಯದಲ್ಲಿ ದೂರುಗಳಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ.
ಚಿತ್ರಗಳು: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.