ADVERTISEMENT

ಹದವಾದ ರೋಚಕತೆ–ಭಾವುಕತೆ

ಪದ್ಮನಾಭ ಭಟ್ಟ‌
Published 15 ಮೇ 2017, 19:30 IST
Last Updated 15 ಮೇ 2017, 19:30 IST
‘ರೆಡ್‌ ಡಾಗ್: ಟ್ರೂ ಬ್ಲ್ಯೂ’  ಚಿತ್ರದ ದೃಶ್ಯ
‘ರೆಡ್‌ ಡಾಗ್: ಟ್ರೂ ಬ್ಲ್ಯೂ’ ಚಿತ್ರದ ದೃಶ್ಯ   

2011ರಲ್ಲಿ ಆಸ್ಟ್ರೇಲಿಯಾದಲ್ಲಿ ತೆರೆಕಂಡು ಭಾರೀ ಯಶಸ್ಸು ಕಂಡಿದ್ದ ಸಿನಿಮಾ ‘ರೆಡ್‌ ಡಾಗ್‌.’ ಕ್ರೀವ್‌ ಸ್ಟಾರ್ಡಂರ್ಡ್ಸ್‌ ನಿರ್ದೇಶನದ ಈ ಸಿನಿಮಾ ಸಿನಿವಿಶ್ಲೇಷಕರ ಮೆಚ್ಚುಗೆ ಗಳಿಸಿದ್ದಷ್ಟೇ  ಅಲ್ಲದೇ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಗಳಿಕೆಯನ್ನೂ ಮಾಡಿತ್ತು. ತನ್ನ ಒಡೆಯನನ್ನು ಹುಡುಕಿಕೊಂಡು ಸುತ್ತುವ ಕೆಂಪು ಬಣ್ಣದ ನಾಯಿಯ ಕಥೆಯನ್ನು ಜನರು ಮುಗಿಬಿದ್ದು ನೋಡಿದ್ದರು. ಈ ಸಿನಿಮಾದ ಪೂರ್ವಕಥನವನ್ನು ಇಟ್ಟುಕೊಂಡು 2016ರಲ್ಲಿ ಮಾಡಲಾದ ಸಿನಿಮಾ ‘ರೆಡ್‌ ಡಾಗ್‌: ಟ್ರೂ ಬ್ಲ್ಯೂ’.
ನಗರದಲ್ಲಿ ನಡೆಯುತ್ತಿರುವ ‘ಆಸ್ಟ್ರೇಲಿಯಾ ಸಿನಿಮೋತ್ಸವ’ದ ಉದ್ಘಾಟನಾ ಚಿತ್ರವಾಗಿ  ‘ರೆಡ್‌ ಡಾಗ್‌: ಟ್ರೂ ಬ್ಲ್ಯೂ’ ಸಿನಿಮಾವನ್ನು ಶುಕ್ರವಾರ ಪ್ರದರ್ಶಿಸಲಾಯಿತು.
ತಂದೆಯನ್ನು ಕಳೆದುಕೊಂಡು ಅಜ್ಜನ ಮನೆಗೆ ಬರುವ ಬಾಲಕ ಮೈಕ್‌ ಮತ್ತು ಅಲ್ಲಿ ಅವನಿಗೆ ಸಿಗುವ ನಾಯಿಮರಿ ಬ್ಲ್ಯೂ ಸುತ್ತ ಸಿನಿಮಾದ ಕಥೆ ಹೆಣೆಯಲಾಗಿದೆ.
ಹಾಗೆ ನೋಡಿದರೆ ಇದೊಂದು ಮಕ್ಕಳ ಸಿನಿಮಾ ಎನ್ನಬಹುದು. ಯಾವುದೇ ಒಳ್ಳೆಯ ಮಕ್ಕಳ ಚಿತ್ರ ದೊಡ್ಡವರೂ ಮೈಮರೆತು ನೋಡುವಂತಿರುತ್ತದೆ ಎನ್ನುವುದಕ್ಕೂ ಈ ಸಿನಿಮಾ ಒಂದು ಉದಾಹರಣೆ.

ಹನ್ನೊಂದು ವರ್ಷದ ಮೈಕ್‌ಗೆ ತನ್ನ ನೆಚ್ಚಿನ ನಾಯಿ ಬ್ಲ್ಯೂ ಎಂದರೆ ಪ್ರಾಣ. ಒಬ್ಬರನ್ನು ಬಿಟ್ಟು ಇನ್ನೊಬ್ಬರನ್ನು ನೋಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಅನ್ಯೋನ್ಯತೆ.

ಅವರ ಮನೆಯ ಆವರಣದ ಬೇಲಿಯಾಚೆ ಒಂದು ಕುದುರೆ ಇದೆ. ಒಕ್ಕಣ್ಣನಾಗಿರುವ ಆ ಕುದುರೆಗೆ ತನ್ನನ್ನು ತಾನು ಗೂಳಿ ಎಂದುಕೊಳ್ಳುವ ಭ್ರಮಾರೋಗ ಅಂಟಿಕೊಂಡಿದೆ. ಆ ವಿಶಾಲ ಕೆಮ್ಮಣ್ಣಿನ ಬಯಲ ಒಂದು ಮೂಲೆಯಲ್ಲಿ ದೊಡ್ಡದೊಂದು ಗುಹೆ ಇದೆ. ಆ ಕಗ್ಗತ್ತಲ ಗುಹೆಯ ಗರ್ಭದಲ್ಲೊಂದು ತಿಳಿನೀರ ಕೊಳ. ಆ ಕೊಳದಲ್ಲೊಂದು ಬೆಣಚುಗಲ್ಲು. ಆ ಗುಹೆಯಲ್ಲಿ ಅತೀಂದ್ರಿಯ ಶಕ್ತಿ ಅಡಗಿದೆ ಎಂಬ ಕಥೆಗಳೂ ಇವೆ.

ADVERTISEMENT

ಹೀಗೆ ಕಥೆ ನಡೆಯುವ ವಾತಾವರಣದಲ್ಲಿಯೇ ಮೈಮರೆಸಲು ಬೇಕಾದ ರೋಚಕತೆ ಮತ್ತು ಸಿನಿಮಾ ಮುಗಿದ ಮೇಲೂ ನೆನಪಿನಲ್ಲುಳಿಯುವಂತೆ ಮಾಡುವ ಭಾವುಕತೆ ಎರಡೂ ಅಂಶಗಳನ್ನು ಅಡಕಗೊಳಿಸಿದ್ದಾರೆ ನಿರ್ದೇಶಕರು. ಹನ್ನೊಂದು ವರ್ಷದ ಬಾಲಕನ ಮುಗ್ಧ ಮನಸ್ಸಿನೊಳಗೆ ಹರೆಯ ಪ್ರವೇಶಿಸುವ ಬಗೆಯನ್ನು ಚಿತ್ರಿಸುವಾಗ ಬಳಸಿಕೊಂಡಿರುವ ಸೂಕ್ಷ್ಮ ವಿಡಂಬನೆಯೂ ಆ ದೃಶ್ಯವನ್ನು ಇನ್ನಷ್ಟು ಆಪ್ತವಾಗಿಸಿವೆ.

ಸಾಮಾನ್ಯವಾಗಿ ಇಂಥ ಸಿನಿಮಾಗಳನ್ನು ಮಾಡುವಾಗ ಮೈಮರೆಸುವ ರೋಚಕತೆಯೇ ಮುಖ್ಯವಾಗಿ ಅದಕ್ಕೆ ಬೇಕಾದ ಎಲ್ಲ ಅಂಶಗಳನ್ನೆಲ್ಲ ಯಾವುದೇ ನೈತಿಕ ಜವಾಬ್ದಾರಿಯೂ ಇಲ್ಲದೇ ಬಳಸಿಕೊಂಡು ಬಿಡಲಾಗುತ್ತದೆ. ಆದರೆ ಈ ಸಿನಿಮಾದಲ್ಲಿ ಅತೀಂದ್ರಿಯ ಶಕ್ತಿಯ ರೋಚಕತೆಯನ್ನು ಬಳಸಿಕೊಂಡೂ ಅದನ್ನು ಪ್ರತಿಪಾದಿಸಲು ಹೋಗುವುದಿಲ್ಲ. ಬಯಲ ತುದಿಯ ಗುಹೆಯಲ್ಲಿನ ತಿಳಿನೀರ ಕೊಳದಲ್ಲಿನ ಬೆಣಚುಗಲ್ಲನ್ನು ತರುವ ಮೈಕ್‌ ಅದರ ಶಕ್ತಿಯಿಂದಲೇ ಹುಚ್ಚು ಕುದುರೆ ಸತ್ತಿದ್ದು ಎಂದುಕೊಳ್ಳುತ್ತಾನೆ. ಆದರೆ ಇದೇ ಪ್ರಯೋಗವನ್ನು ಅವನ ಸ್ಪರ್ಧಿ ಸ್ಟಿಂಪಲ್‌ನ ಮೇಲೆ ಮಾಡಹೊರಟಾಗ ಯಶಸ್ವಿಯೇ ಆಗುವುದಿಲ್ಲ. ಬಯಲಿಗೆ ಬೆಂಕಿ ಬಿದ್ದಾಗ ಆ ಬೆಣಚುಗಲ್ಲನ್ನು ಮತ್ತದೇ ಕೊಳದಲ್ಲಿ ಹಾಕಿ ಕ್ಷಮೆ ಕೋರಿ ಬರುತ್ತಾನೆ. ಆದರೆ ಅದರಿಂದಾಗಿಯೇ ಬೆಂಕಿ ಆರಿತು ಎಂಬುದನ್ನು ನಿರ್ದೇಶಕರು ಎಲ್ಲಿಯೂ ಪ್ರತಿಪಾದಿಸುವುದಿಲ್ಲ. ಇದು ಒಬ್ಬ ನಿರ್ದೇಶಕನಿಗಿರುವ ನೈತಿಕ ಮೌಲ್ಯಗಳ ಮಹತ್ವವನ್ನೂ ಸೂಕ್ಷ್ಮವಾಗಿ ಹೇಳುವಂತಿದೆ. ‘ರೆಡ್‌ ಡಾಗ್: ಟ್ರೂ ಬ್ಲ್ಯೂ’ ಮಹಾನ್‌ ಅದ್ದೂರಿ ಸಿನಿಮಾ ಏನೂ ಅಲ್ಲ.

ಹಾಗೆಯೇ ಯಾವುದೋ ದೊಡ್ಡ ಸತ್ಯವೊಂದನ್ನು ಅನಾವರಣ ಮಾಡುತ್ತೇನೆ ಎಂಬ ಮಹತ್ವಾಕಾಂಕ್ಷೆ ಇರಿಸಿಕೊಂಡ ಸಿನಿಮಾವೂ ಅಲ್ಲ.  ಆದರೆ ಗಟ್ಟಿಯಾದ ಕಥೆ ಮತ್ತು ಅದನ್ನು ದೃಶ್ಯರೂಪಕ್ಕೆ ಅಳವಡಿಸುವ ಜಾಣ್ಮೆ ಇದ್ದರೆ ಹೇಗೆ ಒಂದು ಒಳ್ಳೆಯ ಸಿನಿಮಾ ರೂಪುಗೊಳ್ಳಬಹುದು ಎಂಬುದಕ್ಕೆ ಒಳ್ಳೆಯ ಉದಾಹರಣೆ. ಕಥೆಯೊಳಗಿನ ಕಥೆ ಹೇಳುವ ರೀತಿಯ ನಿರೂಪಣಾ ವಿಧಾನವೂ ಯಶಸ್ಸಿಗೆ ಪೂರಕವಾಗಿಯೇ ಪರಿಣಮಿಸಿದೆ.  ಇಡೀ ಸಿನಿಮಾದಲ್ಲಿನ ಒಂದೊಂದು ಪಾತ್ರಗಳೂ –ಅಷ್ಟೇ ಏಕೆ, ಮೈಕ್‌ನ ಬೈಕ್‌ ಕೂಡ ಮನಸಲ್ಲಿ ಅಚ್ಚೊತ್ತಿಬಿಡುತ್ತವೆ. ತಮಾಷೆ, ರೊಮ್ಯಾನ್ಸ್‌, ಭಾವುಕತೆ, ಕೌತುಕ, ಕಲ್ಪನೆ ಎಲ್ಲ ಭಾವಗಳ ಹದವಾಗಿ ಬೆರೆಸಿದ ಸಿನಿಖಾದ್ಯವಿದು.

ಜಿಯೊಫ್ರೇರಿ ಹಾಲ್‌ ಅವರು ಕೆಮ್ಮಣ್ಣ ಬಯಲು, ಕೆಂಬಣ್ಣದ ಆಕಾಶವನ್ನು ತೋರಿಸಿದಷ್ಟೇ ಸಮರ್ಥವಾಗಿ ಪಾತ್ರಗಳ ಚಹರೆಯ ಭಾವಗಳ ಬದಲಾವಣೆಯನ್ನೂ ಕಟ್ಟಿಕೊಟ್ಟಿದ್ದಾರೆ. ಸಿಝರಿ ಸ್ಕುಬಿಸ್ಜೆವ್‌ಸ್ಕಿ ಅವರ ಹಿನ್ನೆಲೆ ಸಂಗೀತ ತೆರೆಯ ಮೇಲಿನ ಹರ್ಷದ ಪುಳಕ ಮತ್ತು ಭಾವದ ಸೆಳೆತ ಎರಡನ್ನೂ ನೋಡುಗರ ಎದೆಗೆ ನೇರವಾಗಿ ದಾಟಿಸುವ ವಾಹಕದಂತಿದೆ.

ಕೊನೆಯ ದೃಶ್ಯದಲ್ಲಿ ರಸ್ತೆಯ ಮೇಲೆ ಕೂತು ಬರುವ ವಾಹನವನ್ನೇ ದಿಟ್ಟಿಸುತ್ತಿರುವ ಬ್ಲ್ಯೂವಿನ ಮುಗ್ಧ ಭಾವದ ಹಸಿ ಕಣ್ಣುಗಳು ಬಹುದಿನಗಳವರೆಗೆ ಕಾಡುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.