ADVERTISEMENT

ಭಾನುವಾರ, 4–2–1968

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST

ಮಂಗಳೂರಿನಲ್ಲಿ ಉದ್ರಿಕ್ತ ಗುಂಪು ಚದುರಿಸಲು ಗೋಳಿಬಾರ್ (ಪ್ರಜಾವಾಣಿ ಪ್ರತಿನಿಧಿಯಿಂದ)
ಮಂಗಳೂರು, ಫೆ. 3–
ಹಿಂದೀ ವಿರುದ್ಧ ಚಳವಳಿಯ ಸಂಬಂಧದಲ್ಲಿ ಸ್ಥಳೀಯ ಕೈಗಾರಿಕಾ ತರಪೇತು ಸಂಸ್ಥೆಯ ಬಳಿ ಈ ದಿನ ಬೆಳಿಗ್ಗೆ ಸೇರಿದ್ದ ಉದ್ರಿಕ್ತ ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಪೋಲೀಸರು ಗುಂಡು ಹಾರಿಸಿದರು.

ಗೋಲೀಬಾರ್‌ನಲ್ಲಿ ಅದೃಷ್ಟವಶಾತ್ ಯಾರೂ ಗಾಯಗೊಳ್ಳಲಿಲ್ಲವೆಂದು ವರದಿಯಾಗಿದೆ. ಎರಡು ದಿನಗಳ ಬಿಡುವಿನ ನಂತರ ಮಂಗಳೂರಿನಲ್ಲಿ ಈ ದಿನ ಬೆಳಿಗ್ಗೆ ಹಿಂದೀ ವಿರೋಧಿ ಚಳವಳಿ ತೀವ್ರ ಸ್ವರೂಪವನ್ನು ತಾಳಿತು.

ಪಶ್ಚಿಮ ಬಂಗಾಳ ಸಮ್ಮಿಶ್ರ ಸರ್ಕಾರ ಅಭದ್ರ ಸ್ಥಿತಿಯಲ್ಲಿ (ಪ್ರಜಾವಾಣಿ ಪ್ರತಿನಿಧಿಯಿಂದ)
ಕಲ್ಕತ್ತ, ಫೆ. 3–
ಕೇವಲ ಎರಡು ವಾರಗಳ ಹಿಂದೆ ಅಸ್ತಿತ್ವಕ್ಕೆ ಬಂದ ಪಶ್ಚಿಮ ಬಂಗಾಳದಲ್ಲಿನ ಕಾಂಗ್ರೆಸ್ ಹಾಗೂ ಪ್ರಗತಿಪರ ಪ್ರಜಾಸತ್ತಾತ್ಮಕ ರಂಗದ ಸಮ್ಮಿಶ್ರ ಸರ್ಕಾರ ಇನ್ನೂ ಸುಭದ್ರವಾಗಿಲ್ಲ. ಅದು ಎದುರಿಸುತ್ತಿರುವ ಬಿಕ್ಕಟ್ಟು ಇನ್ನೂ ಪರಿಹಾರವಾಗಿಲ್ಲ.

ADVERTISEMENT

ರಾಷ್ಟ್ರೈಕ್ಯಕ್ಕೆ ಭಂಗಬಾರದಂತೆ ಭಾಷಾ ಪ್ರಶ್ನೆಗೆ ಪರಿಹಾರ ಅಗತ್ಯ: ಪ್ರಧಾನಿ ಇಂದಿರಾ
ಮದ್ರಾಸ್, ಫೆ. 3–
ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಜನಾಂಗ ಭಾಗವಹಿಸಲು ಹೆಚ್ಚಿನ ಅವಕಾಶ ದೊರಕುವಂತೆ ಹಾಗೂ ರಾಷ್ಟ್ರದ ಐಕ್ಯವನ್ನು ಹಾಗೆಯೇ ಉಳಿಸಲು ಅನುಕೂಲವಾಗುವಂತೆ ಭಾಷಾ ಪ್ರಶ್ನೆಗೆ ಯಾವುದಾದರೂ ಪರಿಹಾರ ಕಾಣಬೇಕಾಗಿದೆ ಎಂದು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ಇಂದು ಇಲ್ಲಿ ವರದಿಗಾರರಿಗೆ ಹೇಳಿದರು.

ಸೈಗಾನಿನಲ್ಲಿ ಇನ್ನೂ ಪ್ರಕ್ಷುಬ್ದ ಪರಿಸ್ಥಿತಿ: ಕೆಲವೆಡೆ ಕದನ
ಸೈಗಾನ್, ಫೆ. 3–
ವಿಯಟ್ಕಾಂಗ್ ಗೆರಿಲ್ಲಾಗಳ ಬೆನ್ನು ಮೂಳೆ ಮುರಿದಿರುವುದಾಗಿ ಅಧ್ಯಕ್ಷ ಎನ್‌ಗುಯೆನ್‌ವಾನ್‌ಥಿಯೂ ಮತ್ತು ಜ. ವಿಲಿಯಂ ವೆಸ್ಟ್ ಮೋರ್‌ಲಾಂಡ್ ಹೇಳಿದ್ದರೂ ಸೈಗಾನಿನಲ್ಲಿನ್ನೂ ಪ್ರಕ್ಷುಬದ್ಧ ಪರಿಸ್ಥಿತಿಯೇ ಇದೆ.

ಮುಖ್ಯ ರಸ್ತೆಗಳಲ್ಲಿ ಕದನವೇನೋ ನಿಂತಿದೆ. ಆದರೆ ಸಮೀಪದಲ್ಲಿನ್ನೂ, ಹೋರಾಟವಾಗುತ್ತಿರುವುದರಿಂದ ಗುಂಡು ಹೊಡೆತದಿಂದ ನಗರದ ಮೂರು ದಿಕ್ಕುಗಳಲ್ಲಿ ಹೊಗೆ ಮೇಲೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.