ADVERTISEMENT

ಕಠಿಣ ನಿಯಮ ನಿರೀಕ್ಷೆ

ಪ್ರಜಾವಾಣಿ ವಿಶೇಷ
Published 24 ಏಪ್ರಿಲ್ 2015, 19:30 IST
Last Updated 24 ಏಪ್ರಿಲ್ 2015, 19:30 IST
ಕಠಿಣ ನಿಯಮ ನಿರೀಕ್ಷೆ
ಕಠಿಣ ನಿಯಮ ನಿರೀಕ್ಷೆ   

ರಾಜ್ಯದಲ್ಲಿ ಬಾಲಕಾರ್ಮಿಕರ ಸ್ಥಿತಿಗತಿ ಕುರಿತು ಜಂಟಿ ಕಾರ್ಮಿಕ ಆಯುಕ್ತ  ಶ್ರೀನಿವಾಸ್‌ ಮಾತನಾಡಿದ್ದಾರೆ.

ಬಾಲಕಾರ್ಮಿಕರ ಸಮಸ್ಯೆಗೆ ಸರ್ಕಾರ ಕೈಗೊಂಡ ಕ್ರಮಗಳೇನು?
ಕೇಂದ್ರ ಸರ್ಕಾರದ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮಾರ್ಗಸೂಚಿಯ ಪ್ರಕಾರ, ರಾಜ್ಯ ಕಾರ್ಮಿಕ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿರುವ ಕಾರ್ಮಿಕ ಅಧಿಕಾರಿಗಳು, ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಉದ್ಯಮ, ಹೋಟೆಲು ಮುಂತಾದ ಜಾಗಗಳಲ್ಲಿ ತಪಾಸಣೆ ನಡೆಸುತ್ತಾರೆ. ಮಕ್ಕಳನ್ನು ರಕ್ಷಿಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಕೋರ್ಟ್ ತೀರ್ಪಿನಂತೆ ದಂಡ ವಸೂಲಿ ಮಾಡಲಾಗುತ್ತದೆ. ‘ಮುಂದಿನ ಸೆಪ್ಟೆಂಬರ್ 30ರವರೆಗೂ ಹಳೆಯ ಮಾರ್ಗಸೂಚಿ ಮುಂದುವರಿಯಲಿದೆ. ನಂತರ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು’ ಎಂದು ಕೇಂದ್ರ ಸರ್ಕಾರ ಸೂಚನೆಯಲ್ಲಿ ತಿಳಿಸಿದೆ. ಹೊಸ ಮಾರ್ಗಸೂಚಿಯಲ್ಲಿ ಒಂದಷ್ಟು ಕಠಿಣ ನಿಯಮಗಳನ್ನು ನಿರೀಕ್ಷಿಸಲಾಗುತ್ತಿದೆ.

ಇಲಾಖೆ ರಕ್ಷಣೆ ಮಾಡಿದ ಬಾಲಕಾರ್ಮಿಕರನ್ನು ಎಲ್ಲಿ ಇಡಲಾಗುತ್ತದೆ, ಅವರ ರಕ್ಷಣೆ ಹೇಗೆ?
ಅದಕ್ಕಾಗಿ ಹಲವಾರು ಸುರಕ್ಷಿತ ಜಾಗಗಳಿವೆ. ರಾಜ್ಯ ಕ್ರಿಯಾ ಯೋಜನೆಯ ಶಾಲೆಗಳಲ್ಲಿ, ಸಮಾಜ ಕಲ್ಯಾಣ  ಇಲಾಖೆಯ ವಸತಿನಿಲಯಗಳು, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಇರಿಸಲಾಗುತ್ತದೆ. ನಂಬಿಕೆಗೆ ಅರ್ಹವಾಗಿರುವ ಕೆಲ ಸ್ವಯಂಸೇವಾ ಸಂಸ್ಥೆಗಳಲ್ಲೂ ಮಕ್ಕಳನ್ನು ಇರಿಸಲಾಗುತ್ತದೆ. 14 ವರ್ಷದೊಳಗಿನ ಮಕ್ಕಳನ್ನು ವಿಶೇಷ ಶಾಲೆಗಳಿಗೆ ಸೇರಿಸುತ್ತೇವೆ. ನಂತರ ಮುಖ್ಯ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಮೊದಲು ಒಂದೆರಡು ದಿನಗಳ ಮಟ್ಟಿಗಷ್ಟೇ ಬಾಲಮಂದಿರಗಳಲ್ಲಿ ಇಡಲಾಗುತ್ತದೆ.

ಸಣ್ಣ ಮಕ್ಕಳನ್ನು ದುಡಿಸಿಕೊಂಡವರಿಗೆ ಶಿಕ್ಷೆಯ ಪ್ರಮಾಣ ಏನು?
ತಪ್ಪಿತಸ್ಥರಿಗೆ ಪ್ರತಿ ತಪ್ಪಿಗೆ ₨10 ಸಾವಿರ ದಂಡ ವಿಧಿಸಲಾಗುತ್ತದೆ. ಸುಪ್ರೀಂ ಕೋರ್ಟಿನ ಆದೇಶದಂತೆ ಮಕ್ಕಳ ಪುನರ್ವಸತಿಗಾಗಿ ಸ್ಥಾಪಿಸಲಾಗಿರುವ ಕಾರ್ಪಸ್ ನಿಧಿಗೆ, ಅಪಾಯಕಾರಿ ಕಾರ್ಖಾನೆಗಳಲ್ಲಿ ಮಕ್ಕಳನ್ನು ದುಡಿಸಿಕೊಂಡವರಿಂದ ಪ್ರತಿ ಮಕ್ಕಳಿಗೆ ₨ 20 ಸಾವಿರದಂತೆ ದಂಡ ವಸೂಲಿ ಮಾಡಲಾಗುತ್ತದೆ.

ಇದುವರೆಗೆ ಎಷ್ಟು ಮಕ್ಕಳನ್ನು ರಕ್ಷಿಸಲಾಗಿದೆ?
2001ರಿಂದ 2014ರ ಫೆಬ್ರುವರಿವರೆಗೆ 1.10 ಲಕ್ಷ  ಮಕ್ಕಳನ್ನು ರಕ್ಷಿಸಿ ಪುನರ್ವಸತಿಗೊಳಿಸಿ ಶಾಲೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ ಬೇರೆ ರಾಜ್ಯದವರೂ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.