ADVERTISEMENT

ಬಲವರ್ಧನೆ ಹೆಸರಲ್ಲಿ ಶಕ್ತಿಹರಣ

ಲೋಕಾಯುಕ್ತ ಕಾಯ್ದೆ ತಿದ್ದುಪಡಿ ವಿವಾದ

ಎನ್‌.ಸಂತೋಷ್‌ ಹೆಗ್ಡೆ
Published 28 ಫೆಬ್ರುವರಿ 2014, 19:30 IST
Last Updated 28 ಫೆಬ್ರುವರಿ 2014, 19:30 IST

ಭ್ರಷ್ಟಾಚಾರ ಮತ್ತು ದುರಾಡಳಿತದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯದಲ್ಲಿ ಹಿಂದೆ ರಾಜ್ಯ ಜಾಗೃತ ಆಯೋಗ ಹಾಗೂ ಭ್ರಷ್ಟಾಚಾರ ನಿಯಂತ್ರಣ ಘಟಕಗಳು ಅಸ್ತಿತ್ವದಲ್ಲಿದ್ದವು. ಈ ಎರಡೂ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆಕ್ಷೇಪ 1980ರ ದಶಕದಲ್ಲಿ ಬಲವಾಗಿ ಕೇಳಿಬಂದಿತ್ತು. 1983ರ ವಿಧಾನಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ತರುವ ಭರವಸೆ ನೀಡಿದ್ದ ಜನತಾ ಪಕ್ಷ ಅಧಿಕಾರಕ್ಕೆ ಬಂತು.

ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪಕ್ಷದ ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ 1984ರಲ್ಲಿ ಕರ್ನಾಟಕ ಲೋಕಾಯುಕ್ತ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ, ಅಂಗೀಕಾರ ಪಡೆದಿದ್ದರು. ರಾಷ್ಟ್ರಪತಿಯವರ ಒಪ್ಪಿಗೆ ಬಳಿಕ 1986ರಲ್ಲಿ ಈ ಕಾಯ್ದೆ ಜಾರಿಗೆ ಬಂತು. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂದು 28 ವರ್ಷಗಳು ಕಳೆದಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಲೋಕಪಾಲ ಕಾಯ್ದೆಯನ್ನು ಆಧಾರವಾಗಿ ಇಟ್ಟುಕೊಂಡು ‘ಕರ್ನಾಟಕ ಲೋಕಾಯುಕ್ತ ಕಾಯ್ದೆ’ಗೆ ತಿದ್ದುಪಡಿ ತರುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ಫೆಬ್ರುವರಿ 21ರಂದು ಸಚಿವ ಸಂಪುಟದ ಒಪ್ಪಿಗೆ ಪಡೆದಿರುವ ‘ಕರ್ನಾಟಕ ಲೋಕಾಯುಕ್ತ ಮಸೂದೆ–2014’ ಅನ್ನು ಗಮನಿಸಿದರೆ, ಇದು ಲೋಕಾಯುಕ್ತದ ಬಲವರ್ಧನೆ ಯತ್ನವಲ್ಲ, ಅಧಿಕಾರ ಹರಣದ ಪ್ರಯತ್ನ ಎಂದು ಸ್ಪಷ್ಟವಾಗಿ ಹೇಳಬಹುದು.

ದೇಶದ ಅತ್ಯಂತ ಪ್ರಬಲ ಲೋಕಾಯುಕ್ತ ಸಂಸ್ಥೆ ಎಂಬ ಹೆಸರು ಕರ್ನಾಟಕ ಲೋಕಾಯುಕ್ತಕ್ಕೆ ಇದೆ. ಲೋಕಾಯುಕ್ತ ಮತ್ತು ಲೋಕಾ­ಯುಕ್ತ ಪೊಲೀಸ್‌ ವಿಭಾಗ ಮಾಡಿರುವ ಕೆಲಸಗಳ ಬಗ್ಗೆ ದೇಶದಾದ್ಯಂತ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ‘ಕರ್ನಾಟಕ ಲೋಕಾಯುಕ್ತ ಕಾಯ್ದೆ–1984’ ಬಲಿಷ್ಠವಾಗಿರುವುದು ಮತ್ತು ಲೋಕಾಯುಕ್ತ ಪೊಲೀಸ್‌ ವಿಭಾಗವು ಸ್ವತಂತ್ರವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಿರುವುದು ಇದಕ್ಕೆ ಕಾರಣ. ಇತ್ತೀಚಿನ ವರ್ಷಗಳಲ್ಲಿ ಲೋಕಾಯುಕ್ತ ಕಾಯ್ದೆಯನ್ನು ರೂಪಿಸಿದ ಹಲವು ರಾಜ್ಯಗಳು ಕರ್ನಾಟಕದ ಕಾಯ್ದೆಯನ್ನು ಮಾದರಿಯಾಗಿ ಇರಿಸಿಕೊಂಡಿದ್ದವು. ಆದರೂ, ನಮ್ಮ ಕಾಯ್ದೆಯಲ್ಲಿ ಒಂದಷ್ಟು ತೊಡಕುಗಳು ಇರುವುದು ನಿಜ. ಅವುಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಹೆಚ್ಚಿನ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿತ್ತು. ಆದರೆ, ಈಗ ಲೋಕಾಯುಕ್ತರು ಮತ್ತು ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಇರುವ ಅಧಿಕಾರವನ್ನು ಪೂರ್ಣವಾಗಿ ಕಿತ್ತುಕೊಳ್ಳುವ ಪ್ರಯತ್ನ ಕರಡು ಮಸೂದೆಯಲ್ಲಿದೆ.

ಲೋಕಪಾಲದ ಮಾದರಿಯಲ್ಲಿ ಲೋಕಾಯುಕ್ತವನ್ನೂ ಒಂಬತ್ತು ಸದಸ್ಯರ ಸಂಸ್ಥೆಯನ್ನಾಗಿ ಪರಿವರ್ತಿಸುವ ಪ್ರಸ್ತಾವ ಈ ಕರಡಿನಲ್ಲಿದೆ. ನಾನು ಐದು ವರ್ಷಗಳ ಕಾಲ ರಾಜ್ಯದ ಲೋಕಾಯುಕ್ತನಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ದುರಾಡಳಿತಕ್ಕೆ ಸಂಬಂಧಿಸಿದ 22,458 ದೂರುಗಳು ಸಲ್ಲಿಕೆಯಾಗಿದ್ದವು. ನಾನು ಅಧಿಕಾರ ಸ್ವೀಕರಿಸುವ ಮುಂಚೆ ಕೆಲವು ಸಾವಿರ ದೂರುಗಳು ಬಾಕಿ ಇದ್ದವು. ನಾನು ಅಧಿಕಾರದಿಂದ ನಿರ್ಗಮಿಸುವ ಹೊತ್ತಿಗೆ ಸುಮಾರು 24,000 ದೂರುಗಳನ್ನು ವಿಲೇವಾರಿ ಮಾಡಿದ್ದೆ. ದೂರುಗಳ ತ್ವರಿತ ವಿಲೇವಾರಿಗೆ ಲೋಕಾಯುಕ್ತಕ್ಕೆ ಒಂಬತ್ತು ಸದಸ್ಯರು ಬೇಕು ಎಂಬುದು ಅರ್ಥಹೀನವಾದುದು. ಲೋಕಪಾಲ ಇಡೀ ರಾಷ್ಟ್ರವ್ಯಾಪಿ ಅಧಿಕಾರ ಹೊಂದಿರುವ ಸಂಸ್ಥೆ. ಅಲ್ಲಿಗೆ ಒಂಬತ್ತು ಸದಸ್ಯರು ಬೇಕಾಗಬಹುದು. ಆದರೆ, ರಾಜ್ಯಕ್ಕೆ ಸೀಮಿತವಾದ ಲೋಕಾಯುಕ್ತಕ್ಕೆ ಅಷ್ಟು ಸದಸ್ಯರ ಅಗತ್ಯ ಇಲ್ಲ.

ದೂರು ಕೊಡುವುದು ಯಾರಿಗೆ?
ಭ್ರಷ್ಟಾಚಾರ ನಿಯಂತ್ರಣ ಮತ್ತು ಒಳ್ಳೆಯ ಆಡಳಿತವನ್ನು ಖಾತರಿಪಡಿಸುವುದು ರಾಜ್ಯದ ಲೋಕಾಯುಕ್ತ ಕಾಯ್ದೆಯ ಮೂಲ ಆಶಯಗಳು. ಈಗ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿರುವ ಲೋಕಾಯುಕ್ತ ಕಾಯ್ದೆಯು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿನ ಮೊಕದ್ದಮೆಗಳ ತನಿಖೆಗೆ ಮಾತ್ರ ಸೀಮಿತವಾಗಿಲ್ಲ.  ರಾಜ್ಯ ಸರ್ಕಾರದಲ್ಲಿನ ಸಾರ್ವಜನಿಕ ನೌಕರರ ವಿರುದ್ಧದ ದುರಾಡಳಿತ, ಸ್ವಜನ ಪಕ್ಷಪಾತ, ಸ್ವೇಚ್ಛಾಚಾರ ಮತ್ತಿತರ ಆರೋಪಗಳ ಬಗ್ಗೆಯೂ ವಿಚಾರಣೆ ನಡೆಸುವ ಅಧಿಕಾರವನ್ನು ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರಿಗೆ ಈಗ ಜಾರಿಯಲ್ಲಿರುವ ಕಾಯ್ದೆ ನೀಡಿದೆ.

ಆದರೆ, ಈ ಅಧಿಕಾರವನ್ನೇ ಕಿತ್ತುಕೊಳ್ಳುವ ಪ್ರಸ್ತಾವ ಕರಡು ಮಸೂದೆಯಲ್ಲಿದೆ. ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರ ಅಧಿಕಾರ ವ್ಯಾಪ್ತಿಯನ್ನು ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯ ಪ್ರಕರಣಗಳಿಗೆ ಸೀಮಿತಗೊಳಿಸಲಾಗಿದೆ. ಕರಡು ಮಸೂದೆ ಜಾರಿಗೆ ಬಂದರೆ, ಸಾರ್ವಜನಿಕರು ದುರಾಡಳಿತದ ವಿರುದ್ಧ ದೂರುಗಳನ್ನು ಹೊತ್ತು ಲೋಕಾಯುಕ್ತಕ್ಕೆ ಹೋಗಲು ಸಾಧ್ಯವೇ ಇಲ್ಲ. ಇದು ರಾಜ್ಯ ಸರ್ಕಾರವು ಲೋಕಾಯುಕ್ತ ಸಂಸ್ಥೆ ಮತ್ತು ರಾಜ್ಯದ ಜನರ ಮೇಲೆ ಮಾಡುತ್ತಿರುವ ದೊಡ್ಡ ಪ್ರಹಾರ.

ಯಾವುದೇ ಸಾರ್ವಜನಿಕ ನೌಕರನ ವಿರುದ್ಧ ಪ್ರಾಥಮಿಕ ವಿಚಾರಣೆ ಅಗತ್ಯ ಎಂದು ಲೋಕಾಯುಕ್ತವು ಭಾವಿಸಿದಲ್ಲಿ ಅದನ್ನು ನೇರವಾಗಿ ಕೈಗೆತ್ತಿಕೊಳ್ಳಲು ಅವಕಾಶ ಇರುವುದಿಲ್ಲ. ಲೋಕಾಯುಕ್ತರ ಸೂಚನೆ ಮೇರೆ ಜಾಗೃತ ಆಯೋಗವೇ ಪ್ರಾಥಮಿಕ ವಿಚಾರಣೆ ನಡೆಸಬೇಕು ಎಂಬ ಪ್ರಸ್ತಾವ ಕರಡಿನಲ್ಲಿದೆ. ಇದಲ್ಲದೇ ಲೋಕಾಯುಕ್ತದಲ್ಲಿ ವಿಚಾರಣಾ ನಿರ್ದೇಶಕರು (ಡೈರೆಕ್ಟರ್‌ ಆಫ್‌ ಎನ್‌ಕ್ವಯರಿ) ಎಂಬ ಹುದ್ದೆಯನ್ನು ಸೃಷ್ಟಿಸಿ, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತರ ಅಧಿಕಾರಕ್ಕೆ ಕತ್ತರಿ ಹಾಕುವ ಉದ್ದೇಶವಿದೆ.

ಅಧಿಕಾರಕ್ಕೆ ಕತ್ತರಿ
ಲೋಕಾಯುಕ್ತರು ಮತ್ತು ಲೋಕಾಯುಕ್ತ ಪೊಲೀಸರ ಅಧಿಕಾರಕ್ಕೆ ಸಂಪೂರ್ಣವಾಗಿ ಕತ್ತರಿ ಹಾಕುವ ಪ್ರಸ್ತಾವ ಕರಡು ಮಸೂದೆಯಲ್ಲಿದೆ. ಈ ಮಸೂದೆ ಪ್ರಕಾರ, ಲೋಕಾಯುಕ್ತಕ್ಕೆ ಸರಿಸಮನಾಗಿ ರಾಜ್ಯ ಜಾಗೃತ ಆಯೋಗವನ್ನು ಅಸ್ತಿತ್ವಕ್ಕೆ ತರಲಾಗುತ್ತದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಕೆಲಸ ಮಾಡಿದ ಅಥವಾ ಅದಕ್ಕೆ ಸಮನಾದ ಹುದ್ದೆಯಲ್ಲಿ ಕೆಲಸ ಮಾಡಿದವರು ಈ ಆಯೋಗದ ಅಧ್ಯಕ್ಷ, ಸದಸ್ಯರ ಹುದ್ದೆಗೆ ನೇಮಕವಾಗುತ್ತಾರೆ.
ಕರಡು ಮಸೂದೆ ಪ್ರಕಾರ, ಲೋಕಾಯುಕ್ತ ಪೊಲೀಸ್‌ ವಿಭಾಗದ ಮೇಲೆ ಜಾಗೃತ ಆಯೋಗ ಸಂಪೂರ್ಣವಾದ ಹಿಡಿತ ಹೊಂದಿರುತ್ತದೆ.

ಈಗಿನಂತೆ ಸ್ವಯಂಪ್ರೇರಿತವಾಗಿ ಮತ್ತು ಸ್ವತಂತ್ರವಾಗಿ ಕೆಲಸ ಮಾಡುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರು ಕಳೆದುಕೊಳ್ಳುತ್ತಾರೆ. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲಿಸುವುದು, ತನಿಖೆ ನಡೆಸುವುದು, ಆರೋಪಪಟ್ಟಿ ಸಲ್ಲಿಸುವುದು ಮತ್ತಿತರ ಪ್ರಮುಖ ಕೆಲಸಗಳಲ್ಲಿ ಜಾಗೃತ ಆಯೋಗದ ಸೂಚನೆಯಂತೆಯೇ ಮುಂದುವರಿಯಬೇಕಾಗುತ್ತದೆ. ಎಲ್ಲ ಪ್ರಕರಣಗಳಲ್ಲೂ ಲೋಕಾಯುಕ್ತ ಪೊಲೀಸರು ತನಿಖಾ ವರದಿಯನ್ನು ಜಾಗೃತ ಆಯೋಗದ ಮುಂದೆ ಮಂಡಿಸಬೇಕಾಗುತ್ತದೆ. ಆಪಾದಿತರ ವಿರುದ್ಧ ವಿಚಾರಣೆ ಆರಂಭಿಸುವ, ಪ್ರಕರಣ ಕೈಬಿಡುವ ಅಥವಾ ಇಲಾಖಾ ವಿಚಾರಣೆಗೆ ಶಿಫಾರಸು ಮಾಡುವ ವಿಷಯದಲ್ಲಿ ಆಯೋಗವೇ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ.

ಜಾಗೃತ ಆಯೋಗದ ಅಧೀನಕ್ಕೆ ಲೋಕಾಯುಕ್ತ ಪೊಲೀಸ್‌ ವಿಭಾಗವನ್ನು ತರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರ ವಿರುದ್ಧದ ದೂರುಗಳ ತನಿಖೆಗೆ ಸಂಬಂಧಿಸಿದಂತೆ ಪೊಲೀಸರು, ಅಧಿಕಾರಿಗಳ ವರ್ಗದಿಂದ ಬಂದವರ ಆದೇಶ ಪಾಲಿಸಬೇಕಾಗುತ್ತದೆ. ಇದು ತನಿಖಾ ಸಂಸ್ಥೆಯ ಮೇಲಿನ ವಿಶ್ವಾಸವನ್ನು ಕುಗ್ಗಿಸಬಹುದು.

ಕರಡು ಮಸೂದೆ ಜಾರಿಯಾದಲ್ಲಿ, ಲೋಕಾಯುಕ್ತ ಪೊಲೀಸರು ದಾಖಲಿಸುವ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆಯೂ ಗೊಂದಲ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಮಸೂದೆಯ ಪ್ರಕಾರ ಲೋಕಾಯುಕ್ತ ದಾಖಲಿಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಭಿಯೋಜನಾ ವಿಭಾಗ (Prosecution wing)  ಅಸ್ತಿತ್ವಕ್ಕೆ ಬರುತ್ತದೆ. ರಾಜ್ಯ ಸರ್ಕಾರದ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯೊಬ್ಬರು ಈ ವಿಭಾಗದ ಮುಖ್ಯಸ್ಥರಾಗುತ್ತಾರೆ. ಈಗ ಇರುವ ವ್ಯವಸ್ಥೆಯಲ್ಲಿ ಲೋಕಾಯುಕ್ತ ಪೊಲೀಸ್‌ ವಿಭಾಗವೇ ತಮ್ಮ ಪ್ರಕರಣಗಳಿಗೆ ವಕೀಲರನ್ನು ನೇಮಕ ಮಾಡಿಕೊಳ್ಳುತ್ತದೆ. ಮುಂದೆ ಅಭಿಯೋಜನಾ ವಿಭಾಗ ಆ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಸರ್ಕಾರದಿಂದ ನೇಮಕವಾಗುವ ಅಭಿಯೋಜನಾ ನಿರ್ದೇಶಕರು ಲೋಕಾಯುಕ್ತ ಪೊಲೀಸರ ಮಾತಿಗೆ ಬೆಲೆ ಕೊಡದೆ ಇರಬಹುದು. ಆಗ, ಪ್ರಕರಣಗಳ ವಿಚಾರಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ.

ಕಾಯ್ದೆಗಳ ಸಂಘರ್ಷ?
‘ಕರ್ನಾಟಕ ಲೋಕಾಯುಕ್ತ ಮಸೂದೆ–2014’ರ ಕರಡಿನಲ್ಲಿ ಲೋಕಾಯುಕ್ತರು ಮತ್ತು ಲೋಕಾಯುಕ್ತದ ಸದಸ್ಯರು ಹಾಗೂ ಜಾಗೃತ ಆಯೋಗದ ಅಧ್ಯಕ್ಷ, ಸದಸ್ಯರಿಗೆ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯ ಅಡಿಯಲ್ಲಿ ತನಿಖೆ ನಡೆಸುವ ಅಧಿಕಾರ ನೀಡುವ ಪ್ರಸ್ತಾವವಿದೆ. ಇದು ಸಂಪೂರ್ಣವಾಗಿ ತಪ್ಪು ನಿರ್ಧಾರ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಮೂಲ ಆಶಯಕ್ಕೆ ವಿರುದ್ಧವಾದುದು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ದಾಖಲಿಸುವ ಪ್ರಕರಣಗಳ ತನಿಖೆಯನ್ನು ಡಿವೈಎಸ್‌ಪಿ ದರ್ಜೆಯ ಪೊಲೀಸ್‌ ಅಧಿಕಾರಿ ಅಥವಾ ಸರ್ಕಾರದಿಂದ ಅಧಿಸೂಚಿತವಾದ ಪೊಲೀಸ್‌ ಅಧಿಕಾರಿಯೇ ನಡೆಸಬೇಕು ಎಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರ ಪ್ರಕಾರವೇ ಈಗ ಲೋಕಾಯುಕ್ತ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಲೋಕಾಯುಕ್ತ ಪೊಲೀಸರ ಅಧಿಕಾರವನ್ನು ಲೋಕಾಯುಕ್ತರು, ಲೋಕಾಯುಕ್ತದ ಸದಸ್ಯರು, ಜಾಗೃತ ಆಯೋಗ, ಲೋಕಾಯುಕ್ತದ ವಿಚಾರಣಾ ನಿರ್ದೇಶಕರಿಗೂ ನೀಡುವ ಪ್ರಸ್ತಾವ ಕರಡು ಮಸೂದೆಯಲ್ಲಿದೆ. ಹಾಗೆ ಆದರೆ, ಖಚಿತವಾಗಿಯೂ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ.

ರಾಜ್ಯ ಸರ್ಕಾರದ ನಿವೃತ್ತ ಹಿರಿಯ ಅಧಿಕಾರಿಗಳು ಲೋಕಾಯುಕ್ತದ ಒಳ ಪ್ರವೇಶಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಪೂರಕವಾಗಿ ಈ ಕರಡು ಮಸೂದೆಯನ್ನು ರೂಪಿಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸು­ತ್ತದೆ. ಎಲ್ಲವನ್ನೂ ಮರೆಮಾಚುತ್ತಿರುವ ಸರ್ಕಾರ, ಲೋಕಾಯುಕ್ತದ ಬಲವರ್ಧನೆಗಾಗಿ ಮಸೂದೆ ರೂಪಿಸಿರುವುದಾಗಿ ಹೇಳುತ್ತಿದೆ. ಇಂತಹ ಅಭಿಪ್ರಾಯ ನಮ್ಮ ಕಾನೂನು ಸಚಿವರಿಗೆ ಹೇಗೆ ಬಂತು ಎಂಬುದು ನನಗೆ ಇನ್ನೂ ಅರ್ಥವಾಗಿಲ್ಲ. ಈ ಮಸೂದೆ ಜಾರಿಯಾದಲ್ಲಿ ಲೋಕಾಯುಕ್ತ ಸಂಸ್ಥೆ ಸಂಪೂರ್ಣವಾಗಿ ನಿತ್ರಾಣಗೊಳ್ಳಲಿದೆ.

ಆಪಾದಿತರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವುದನ್ನು ಲೋಕಾಯುಕ್ತರ ಅಧಿಕಾರ ವ್ಯಾಪ್ತಿಗೆ ತರುವುದು, ಆಪಾದಿತರು ಮತ್ತು ಆರೋಪಿತರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವುದು ಸೇರಿದಂತೆ ಕೆಲವು ಉತ್ತಮ ಅಂಶಗಳು ಕರಡಿನಲ್ಲಿವೆ. ಆದರೆ, ಇಡೀ ಸಂಸ್ಥೆಯನ್ನು ಬಲಹೀನಗೊಳಿಸಿ ಇಂತಹ ಕೆಲವು ಅಧಿಕಾರಗಳನ್ನು ನೀಡಿದರೆ ಯಾವ ಉದ್ದೇಶವೂ ಈಡೇರುವುದಿಲ್ಲ. ಲೋಕಾಯುಕ್ತವನ್ನು ಬಲಪಡಿಸುವ ಇಚ್ಛೆ ಸರ್ಕಾರಕ್ಕೆ ಇರುವುದು ನಿಜವಾದಲ್ಲಿ ಈ ಬಗ್ಗೆ ಸಾರ್ವಜನಿಕ ಚರ್ಚೆಯ ಮೂಲಕ ಅಭಿಪ್ರಾಯ ಸಂಗ್ರಹಿಸಲಿ. ಪೊಲೀಸ್‌ ವಿಭಾಗದ ಸ್ವಾತಂತ್ರ್ಯಹರಣ ಮಾಡದೇ ಮತ್ತಷ್ಟು ಅಧಿಕಾರ ಕೊಡಲಿ.
(ಲೇಖಕರು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ,
ನಿವೃತ್ತ ಲೋಕಾಯುಕ್ತ)

ADVERTISEMENT

******************************

ಮುಖ್ಯಮಂತ್ರಿಗೆ ರಕ್ಷಣೆ
ಮುಖ್ಯಮಂತ್ರಿಯವರನ್ನೂ ಲೋಕಾಯುಕ್ತ ಕಾಯ್ದೆ ವ್ಯಾಪ್ತಿಗೆ ತರಲು ಕರಡು ಮಸೂದೆ ರೂಪಿಸಿರುವುದಾಗಿ ಸರ್ಕಾರ ಹೇಳಿದೆ. ಇದು ಶುದ್ಧ ಸುಳ್ಳು. 1984ರ ಕಾಯ್ದೆಯಲ್ಲಿ ಮುಖ್ಯಮಂತ್ರಿಯಿಂದ ಗ್ರಾಮ ಪಂಚಾಯಿತಿ ಸದಸ್ಯನವರೆಗೆ, ಮುಖ್ಯ ಕಾರ್ಯದರ್ಶಿಯಿಂದ ‘ಡಿ’ ಗುಂಪಿನ ನೌಕರನವರೆಗೆ ಎಲ್ಲರೂ ಲೋಕಾಯುಕ್ತದ ವ್ಯಾಪ್ತಿ­ಯಲ್ಲಿದ್ದರು.

ಮಧ್ಯದಲ್ಲಿ ಮುಖ್ಯಮಂತ್ರಿಯನ್ನು ಲೋಕಾಯುಕ್ತರ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈಗ ಮುಖ್ಯಮಂತ್ರಿ ವಿರುದ್ಧ ದೂರು ಬಂದರೆ ವಿಚಾರಣೆ ನಡೆಸುವ ಅಧಿಕಾರ ಲೋಕಾಯುಕ್ತರಿಗೆ ಇದೆ. ಆದರೆ, ಮುಖ್ಯಮಂತ್ರಿ ವಿರುದ್ಧ ವಿಚಾರಣೆ ಆರಂಭಿಸಲು ಲೋಕಾಯುಕ್ತದ ಮೂರನೇ ಎರಡರಷ್ಟು (ಆರು) ಸದಸ್ಯರ ಸಮ್ಮತಿ ಅಗತ್ಯ ಎನ್ನುತ್ತದೆ ಕರಡು ಮಸೂದೆ. ಇದು, ಮುಖ್ಯಮಂತ್ರಿಗೆ ರಕ್ಷಣೆ ನೀಡುವ ಯತ್ನವೇ ಹೊರತು, ಲೋಕಾಯುಕ್ತವನ್ನು ಬಲಪಡಿಸುವ ಪ್ರಯತ್ನವಲ್ಲ.

************************************

ಸಂಘರ್ಷಕ್ಕೆ ದಾರಿ
ಲೋಕಾಯುಕ್ತ ಪೊಲೀಸರ ಮೇಲೆ ಲೋಕಾಯುಕ್ತರಿ­ಗಿಂತಲೂ ಜಾಗೃತ ಆಯೋಗ ಹೆಚ್ಚಿನ ಅಧಿಕಾರ ಹೊಂದಿ­ರುತ್ತದೆ. ಲೋಕಾಯುಕ್ತರು ನೇರವಾಗಿ ತನಿಖೆಗೆ ಒಪ್ಪಿಸಿದ ಪ್ರಕರಣಗಳಲ್ಲೂ ಜಾಗೃತ ಆಯೋಗ ಹಸ್ತಕ್ಷೇಪ ಮಾಡುವಂತಹ ಅವಕಾಶ ಇರುತ್ತದೆ. ಇದರಿಂದ ಲೋಕಾಯುಕ್ತ ಮತ್ತು ಜಾಗೃತ ಆಯೋಗದ ನಡುವೆ ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.