ADVERTISEMENT

ವಿವಾಹದ ಮುನ್ನವೇ ಇದರ ಹುಟ್ಟು...

ವೇಶ್ಯಾವೃತ್ತಿ ಅಂಕಿತವೋ? ಅಂಕುಶವೋ?

ಕೃಷ್ಣ ದೀಕ್ಷಿತ್
Published 12 ಸೆಪ್ಟೆಂಬರ್ 2014, 19:56 IST
Last Updated 12 ಸೆಪ್ಟೆಂಬರ್ 2014, 19:56 IST

ವೇಶ್ಯಾವಾಟಿಕೆ ಅನಾದಿ ಕಾಲ­ದಿಂದಲೂ ನಡೆದು­ ಬಂದಿರುವ ಒಂದು ಪದ್ಧತಿ. ಆದರೆ ರಾಜ­ಮಹಾರಾಜರ ಕಾಲ­ದಿಂದ ಇಂದಿನ ಪ್ರಜಾ­ಪ್ರಭುತ್ವ­ದವರೆಗೂ ಮನ್ನಣೆ, ನಿರ್ಲಕ್ಷ್ಯ, ನಿಂದನೆ, ಅನುಕಂಪ... ಹೀಗೆ ಒಂದೊಂದು ಘಟ್ಟದಲ್ಲಿ ಒಂದೊಂದು ಬಗೆಯ ಸಾಮಾಜಿಕ ಸ್ಥಿತ್ಯಂತರ­ಗಳನ್ನು ಅದು ಕಂಡಿದೆ. ಇದೀಗ, ವೇಶ್ಯಾ­ವೃತ್ತಿ­ಯನ್ನು ಕಾನೂನು­ಬದ್ಧ­ಗೊಳಿಸಿ ಅದರಲ್ಲಿ ತೊಡಗಿರುವವರೂ ಘನತೆಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂಬ ಬೇಡಿಕೆಯನ್ನು ಕೆಲವು ಲೇಖಕರು, ಬುದ್ಧಿಜೀವಿಗಳು ಸರ್ಕಾರದ ಮುಂದೆ ಇಟ್ಟಿದ್ದಾರೆ. ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪರ ವಿರೋಧ ನಿಲುವುಗಳು ವ್ಯಕ್ತವಾಗಿವೆ. ಅಂತಹ ಭಿನ್ನ ನಿಲುವುಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನ ಇಲ್ಲಿದೆ.


ನಾಗರಿಕತೆ ಹುಟ್ಟಿದಾಗಿನಿಂದಲೇ ಅದರ ಜೊತೆಯಲ್ಲೇ ಹುಟ್ಟಿ ಬಂದದ್ದು ವೇಶ್ಯಾವಾಟಿಕೆ. ಒಂದರ್ಥದಲ್ಲಿ ವಿವಾಹ ಎಂಬ ಕಲ್ಪನೆಯ ಹುಟ್ಟಿಗೂ ಪೂರ್ವದಲ್ಲಿಯೇ ಜನ್ಮತಾಳಿದ್ದು ಈ  ಕಾಯಕ. ಗ್ರೀಕ್, ರೋಮ್‌ ಸಾಮ್ರಾಜ್ಯದಲ್ಲಿ ವೇಶ್ಯೆಯರ ಸಂಖ್ಯೆ ಹೇರಳ­ವಾಗಿತ್ತು. ಕೌಟಿಲ್ಯನ ಅರ್ಥಶಾಸ್ತ್ರ­ದಲ್ಲೂ ಇವರ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಆದರೆ ಆಗ ಇದೊಂದು ಶಿಕ್ಷಾರ್ಹ ಅಪರಾಧ ಎಂದಾಗಲೀ, ಕಾನೂನುಬಾಹಿರ ಕೃತ್ಯ ಎಂಬ ಯೋಚನೆಯಾಗಲೀ ಇದ್ದಿರಲಿಲ್ಲ. ಎಲ್ಲ ಕಾರ್ಯಗಳಂತೆ ಇದೂ ಒಂದು ಕೆಲಸ ಆಗಿತ್ತು ಅಷ್ಟೇ. ಆದರೆ ಆಗಲೇ ವೇಶ್ಯೆಯರ ಸಾಮಾಜಿಕ ಸ್ಥಿತಿಗತಿ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದ ಕೌಟಿಲ್ಯ, ವೇಶ್ಯಾವಾಟಿಕೆ ಕಾರ್ಯದಲ್ಲಿ ತೊಡಗಿಸಿಕೊಂಡವರು ಮರ್ಯಾದೆಯಿಂದ ಬಾಳಬೇಕೆಂದರೆ ಅವರು ದುಡಿದ ಹಣಕ್ಕೆ ವಿಧಿಸುವ ತೆರಿಗೆಯನ್ನು ಸೈನಿಕರ ಸಂಬಳಕ್ಕಾಗಿ ಬಳಸಿಕೊಳ್ಳಬೇಕು. ಇದರಿಂದ ತಾವು ಯಾವುದೋ ಸತ್ಕಾರ್ಯ ಮಾಡುತ್ತಿದ್ದೇವೆ ಎಂಬ ಭಾವನೆ ಅವರಲ್ಲಿಯೂ ಮೂಡುತ್ತದೆ, ಅದೇ ರೀತಿ ಇವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ಜನಸಾಮಾನ್ಯರಲ್ಲೂ ಉಂಟಾಗುತ್ತದೆ ಎಂದಿದ್ದ.

ಅದೇನೇ ಇದ್ದರೂ, ವಿವಾಹದ ಪರಿಕಲ್ಪನೆ ಆರಂಭ ಆಗುತ್ತಿದ್ದಂತೆ ವೇಶ್ಯಾವಾಟಿಕೆ ಶಬ್ದ ವಿಭಿನ್ನ ರೂಪ ತಾಳಿತು. ಮದುವೆ ಎಂಬುದು ‘ಪವಿತ್ರ ಬಂಧನ’ ಎಂದು ಯಾವಾಗ ಶುರುವಾಯಿತೋ, ಅದಕ್ಕೂ ಮೀರಿದ ಸಂಬಂಧಕ್ಕೆ  ಅಕ್ರಮ ಎಂಬ ‘ಬಂಧನ’ ಶುರುವಾಯಿತು. ದಂಪತಿ ಹೊರತಾದ ಲೈಂಗಿಕ ಸಂಬಂಧ ವೇಶ್ಯಾವಾಟಿಕೆ ಎಂದು ವ್ಯಾಖ್ಯಾನಗೊಂಡಿತು. ಅಲ್ಲಿಂದಲೇ ತಪ್ಪು-- ಸರಿ, ಕಾನೂನುಬದ್ಧ-, ಕಾನೂನುಬಾಹಿರ, ಅಪರಾಧ-, ಶಿಕ್ಷೆ  ಎಂಬೆಲ್ಲ ಶಬ್ದಗಳು ಹುಟ್ಟು ಪಡೆದವು. ಅಪರಾಧ ಎಂದಾಕ್ಷಣ ಅದಕ್ಕೊಂದು ಕಾಯ್ದೆ-, ಕಾನೂನು ಬೇಕಲ್ಲವೇ? ಹಾಗೆಯೇ ವೇಶ್ಯಾವಾಟಿಕೆಯೂ ‘ಅಕ್ರಮ’ ಎಂದು ಬಿಂಬಿಸುವಂಥ ಒಂದು ಕಾಯ್ದೆ ಹುಟ್ಟುಪಡೆದು ಅದನ್ನು ಕಾನೂನಿನ ಚೌಕಟ್ಟಿನೊಳಕ್ಕೆ ಬಂಧಿಸಿ ಇಡಲಾಯಿತು.

ಈ ಹಿನ್ನೆಲೆಯಲ್ಲಿ 1956ರಲ್ಲಿ ಜಾರಿಗೊಂಡಿದ್ದೇ ‘ಮಹಿಳೆ ಮತ್ತು ಬಾಲಕಿಯರ ಅಕ್ರಮ ಸಾಗಾಣಿಕೆ ತಡೆ ಕಾಯ್ದೆ’. ‘ವೇಶ್ಯಾವಾಟಿಕೆ­ಯನ್ನು ಅಪರಾಧ ಎಂದು ಪರಿಗಣಿಸಬೇಕು ಹಾಗೂ ಈ ಕೃತ್ಯದಲ್ಲಿ ತೊಡಗಿಸಿಕೊಂಡ ಮಹಿಳೆಗೆ ಹುಟ್ಟುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕು’ ಎಂದು ಈ ಕಾಯ್ದೆಯಲ್ಲಿ ಉಲ್ಲೇಖಿಸ­ಲಾಗಿದೆ.  ಸಾಮಾನ್ಯ­ವಾಗಿ ಸಂಸತ್ತು ಯಾವುದೇ ಕಾಯ್ದೆ ರೂಪಿಸಿ­ದರೂ ‘ಈ ಕಾಯ್ದೆ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಭಾರತದ ಎಲ್ಲ ರಾಜ್ಯಗಳಿಗೂ’ ಎಂದೇ ಉಲ್ಲೇಖಗೊಳ್ಳುತ್ತದೆ. ಆದರೆ ಈ ಕಾಯ್ದೆಯ ವಿಶೇಷ ಎಂದರೆ ಇದರಲ್ಲಿ ‘ಜಮ್ಮು ಮತ್ತು ಕಾಶ್ಮೀರವನ್ನೂ  ಒಳಗೊಂಡಂತೆ’ ಎಂದು ಉಲ್ಲೇಖಿಸಿರುವುದು. ಇದೇ ವೇಶ್ಯಾವಾ­ಟಿಕೆಯ ಗಂಭೀರತೆ, ಅದರಿಂದ ಆಗುವ ದುಷ್ಪರಿ­ಣಾಮವನ್ನು ಎತ್ತಿ ತೋರಿಸುತ್ತದೆ.

ಈ ಕಾಯ್ದೆಯಲ್ಲಿದ್ದ ಒಂದೇ ಒಂದು ಲೋಪವೆಂದರೆ ಅದರಲ್ಲಿ ಕೇವಲ ‘ಮಹಿಳೆ ಮತ್ತು ಬಾಲಕಿ’ ಎಂಬುದಾಗಿ ವ್ಯಾಖ್ಯಾನಿಸಿದ್ದು. ಆದರೆ ವೇಶ್ಯಾವಾಟಿಕೆಯನ್ನು ಕೇವಲ ಮಹಿಳೆಯರು ಮಾಡುವುದಿಲ್ಲ, ಪುರುಷರೂ ಇದರಲ್ಲಿ ತೊಡಗಿಸಿಕೊಳ್ಳುತ್ತಾರೆ, ಆದ್ದರಿಂದ ಪುರುಷ­ರನ್ನೂ ಇದರಲ್ಲಿ ಸೇರಿಸಬೇಕು ಎಂಬ  ಹಿನ್ನೆಲೆಯಲ್ಲಿ ಈ ಕಾಯ್ದೆಗೆ 1986ರಲ್ಲಿ ತಿದ್ದುಪಡಿ ತರಲಾಯಿತು.  ಈ ತಿದ್ದುಪಡಿ ಕಾಯ್ದೆಯಲ್ಲಿ ‘ಮಹಿಳೆ ಮತ್ತು ಪುರುಷನ ನಡುವೆ ಒಪ್ಪಂದ ಏರ್ಪಟ್ಟು ನಡೆದ ಲೈಂಗಿಕ ಕ್ರಿಯೆ ವ್ಯಭಿಚಾರ ಆಗಲಾರದು. ಮಹಿಳೆ ಮತ್ತು ಪುರುಷ ತಮ್ಮ ಮನೆಯಲ್ಲಿ ಈ ಕ್ರಿಯೆಯಲ್ಲಿ ತೊಡಗಿದರೂ, ಅದು ದುಡ್ಡಿಗಾಗಿ ಮಾಡಿದರೂ ವೇಶ್ಯಾವಾಟಿಕೆ ಅಲ್ಲ. ಆದರೆ ಇದನ್ನು ವಾಣಿಜ್ಯದ ಉದ್ದೇಶದಿಂದ ಮಾಡಿದರೆ ಮಾತ್ರ ವೇಶ್ಯಾವಾಟಿಕೆ ಆಗುತ್ತದೆ. ವಾಣಿಜ್ಯದ ಉದ್ದೇಶದಿಂದ ಲೈಂಗಿಕ ಚಟುವಟಿಕೆ ನಡೆಸಿದರೆ ಮಾತ್ರ, ಗಂಡಾಗಲೀ, ಹೆಣ್ಣಾಗಲಿ ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಈ ಕಾಯ್ದೆಯ 2ನೇ ಕಲಮಿನಲ್ಲಿ ವಿಶದಪಡಿಸಲಾಯಿತು.

ಸಾಮಾಜಿಕ ಪಿಡುಗು...
ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ 1904, 1910, 1933 ಹಾಗೂ 1950ರಲ್ಲಿ ನಾಲ್ಕು ಅಂತರರಾಷ್ಟ್ರೀಯ ಸಮ್ಮೇ­ಳ­ನಗಳು ಕೂಡ ನಡೆದಿವೆ. ಅಲ್ಲಿ ಇದೊಂದು ಸಾಮಾ­ಜಿಕ ಪಿಡುಗು ಎಂಬ ಭಾವನೆ ವ್ಯಕ್ತವಾಗಿದೆ. 32 ದೇಶಗಳು ಭಾಗ­­ವಹಿಸಿದ್ದ ಈ ಸಮ್ಮೇಳನದಲ್ಲಿ ಎಲ್ಲ  ದೇಶಗಳೂ ಒಕ್ಕೊರಲಿನಿಂದ ಹೇಳಿದ್ದು ಕೂಡ ಇದನ್ನೇ.
ವೇಶ್ಯೆಯರಿಗೆ ಹುಟ್ಟುವ ಮಕ್ಕಳಿಗೆ ತಮ್ಮ ತಂದೆ ಯಾರು ಎಂಬ ಅರಿವು ಇರುವುದಿಲ್ಲ. ಅವರಿಗೆ ಸಾಮಾಜಿಕ ಸ್ಥಾನ­ಮಾನ ಸಿಗು­ವು­ದಿಲ್ಲ. ಅಸ್ಪೃಶ್ಯತೆ ಎಂದೇನು ಈಗ ಹೇಳಲಾಗು­ತ್ತ­­ದೆಯೋ, ಅದಕ್ಕಿಂತಲೂ ಕೀಳಾಗಿ ಅವರ ಸಾಮಾಜಿಕ ಸ್ಥಿತಿ ಇರು­ತ್ತದೆ. ಕೆಟ್ಟ ಪರಿಸರ­ದಲ್ಲೇ ಬೆಳೆಯುವ ಕಾರಣ, ಆ ಮಕ್ಕಳ ಮನಸ್ಸು ಕೆಟ್ಟು ಹೋಗುತ್ತದೆ. ಅದೇ ರೀತಿಯ ಮನೋ­­ಭಾವ­ವನ್ನು ಮೈದಳೆದುಕೊಂಡೇ ಮಕ್ಕಳು ಬೆಳೆಯು­ತ್ತಾರೆ, ಇದು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡಹುತ್ತದೆ. ಅಷ್ಟೇ ಅಲ್ಲದೆ, ವೇಶ್ಯಾವಾಟಿಕೆಯ ಇನ್ನೊಂದು ಕರಾಳ ರೂಪ ಕಂಡು ಕೇಳರಿ­ಯದ ರೋಗ ರುಜಿನಗಳು. ಈ ರೀತಿ ಆದರೆ ವೇಶ್ಯಾವಾಟಿಕೆ ನಡೆಸುವವರು, ಅವರ ಮಕ್ಕಳು, ವೇಶ್ಯೆ­ಯರ ಜೊತೆ ಸಂಬಂಧ ಬೆಳೆಸುವವರು ಎಲ್ಲರೂ ಇಂಥ ಭೀಕರ ರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂಬ ಅಂಶಗಳಿಂದ ಇದನ್ನು ಕಾನೂನು­ಬದ್ಧ ಮಾಡುವುದು ಬೇಡ ಎಂಬ ವಿಷಯ ಅಲ್ಲಿ ಮಹತ್ವ ಪಡೆಯಿತು.
ಆದ್ದರಿಂದ ವೇಶ್ಯಾವಾಟಿಕೆಯನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ವಿವಿಧ ರೀತಿಯ ಶಿಕ್ಷೆಯನ್ನು ಕಾಯ್ದೆಯಲ್ಲಿ ಉಲ್ಲೇ­ಖಿಸ­ಲಾ­ಗಿದೆ. ವೇಶ್ಯಾವಾಟಿಕೆ ನಡೆಸುವವರು, ಅವ­ರನ್ನು ಆ ವೃತ್ತಿಗೆ ತಳ್ಳಿದವರು, ವ್ಯಭಿಚಾರ ನಡೆಸುವ ಸಂಬಂಧ ಮನೆ ಬಾಡಿಗೆಗೆ ನೀಡಿ­ದವರು, ಗ್ರಾಹಕರನ್ನು ಕರೆಸಿ ದುಡ್ಡು ವಸೂಲಿ ಮಾಡುವವರು, ಚಿಕ್ಕ ವಯಸ್ಸಿನವರನ್ನು ಈ ವೃತ್ತಿಗೆ ನೂಕು­ವ­ವರು, ಸಾರ್ವಜನಿಕ ಸ್ಥಳ­ಗಳಲ್ಲಿ ವೇಶ್ಯಾ­ವಾಟಿಕೆ ನಡೆ­ಸಲು ಅನುವು ಮಾಡಿಕೊಡುವವರು, ಪೊಲೀಸ್ ವಶದಲ್ಲಿದ್ದ ಮಹಿಳೆ­­ಯನ್ನು ಇದಕ್ಕಾಗಿ ಬಳಸಿ­ಕೊಳ್ಳುವುದು–ಹೀಗೆ ಪ್ರಕರ­ಣ­ಗಳ ಗಂಭೀರತೆ ಆಧರಿಸಿ ಒಂದು ತಿಂಗಳಿನಿಂದ ಜೀವಾ­ವಧಿ ಶಿಕ್ಷೆಯವರೆಗೂ ಅಪರಾಧಿಗಳು ಅರ್ಹ­ರಾಗಿರುತ್ತಾರೆ.

ವೇಶ್ಯೆ, ಅನೈತಿಕವಾಗಿ ಇಟ್ಟುಕೊಂಡವಳು ಹಾಗೂ ಉಪಪತ್ನಿ  ಈ ಮೂರು ಪದಗಳಿಗೆ ಬೇರೆಬೇರೆ ವ್ಯಾಖ್ಯಾನವನ್ನು ಅಲ್ಲಿ ಉಲ್ಲೇಖಿಸ­ಲಾಗಿತ್ತು. ಉಪಪತ್ನಿ ಹಾಗೂ ಅನೈತಿಕವಾಗಿ ಇಟ್ಟುಕೊಂಡ ಮಹಿಳೆ­ಯಿಂದ ಹುಟ್ಟಿದ ಮಕ್ಕಳಿಗೆ ‘ಕಾನೀನ ಪುತ್ರ’ ಎಂದು ಕರೆಯು­ತ್ತಿದ್ದು, ಅವರಿಗೂ ಆಸ್ತಿಯಲ್ಲಿ ಹಕ್ಕು ಕಲ್ಪಿಸಲಾಗಿತ್ತು. ಏಕೆಂದರೆ ಇಂತಹ ಸಂಬಂಧದಲ್ಲಿ ಒಬ್ಬ ಪುರುಷನ ಜೊತೆ ಮಾತ್ರ ಅವರು ಸಂಬಂಧ ಇಟ್ಟುಕೊಳ್ಳುವ ಕಾರಣ ಅವರನ್ನು ವೇಶ್ಯೆಯರು ಎನ್ನಲಾ­ಗದು ಎಂಬುದು ಅಲ್ಲಿದ್ದ ಸ್ಪಷ್ಟನೆ. ಅದೇ ರೀತಿ, ‘ಸಂತೋಷ’ಕ್ಕಾಗಿ ವೇಶ್ಯೆಯರ ಸಂಗ ಮಾಡುವವರೂ ಅಲ್ಲಿ ಅಪರಾಧಿಗಳಾಗಿರಲಿಲ್ಲ. ವೇಶ್ಯಾವಾಟಿಕೆ­ಯಿಂದ ಹಣ ಗಳಿಸುತ್ತಿರುವವರು, ಈ ಕೃತ್ಯಕ್ಕೆ ಮಹಿಳೆ ಯರನ್ನು ತಳ್ಳಿದವರು ಮಾತ್ರ ಅಪರಾಧಿಗಳಾದರು. ಆದರೆ ‘ಸಂತೋಷ’ಕ್ಕಾಗಿ ವೇಶ್ಯೆಯರ ಸಂಗ ಮಾಡುವವರು ಕೂಡ ಅಪರಾಧಿಗಳು ಎಂದು 2007ರಲ್ಲಿ ಕಾನೂನು ರೂಪಿಸಲಾಯಿತು.

ಈ ಹಿಂದೆ ಯುದ್ಧದ ಸಂದರ್ಭಗಳಲ್ಲಿ ಅನೇಕ ವರ್ಷಗಳ ಕಾಲ ಸೈನಿಕರು ಪತ್ನಿಯಿಂದ ದೂರ ಇರುತ್ತಾರೆ ಎಂಬ ಕಾರಣಕ್ಕೆ ಉಪಪತ್ನಿ­ಯನ್ನು ಇಟ್ಟುಕೊಳ್ಳಲು ಅವಕಾಶ ಇತ್ತು. ಏಕೆಂದರೆ ಅದು ಸೈನಿಕರ ‘ಅಗತ್ಯ’ ಎಂಬ ವ್ಯಾಖ್ಯಾನ ಇತ್ತು. (ಈಗಿನ ವಿಚಾರಕ್ಕೆ ಬಂದರೂ ಇದೇ ‘ಅಗತ್ಯ’ಕ್ಕಾಗಿ ಸೇನೆಯಲ್ಲಿ ಇರುವವರಿಗೂ ಈ ರೀತಿಯ ಅವಕಾಶ ಕಲ್ಪಿಸಲಾಗುತ್ತದೆ). ಅದು ಅಪರಾಧ ಎನ್ನಲಾಗದು ಅಥವಾ ಅದನ್ನು ವೇಶ್ಯಾವಾಟಿಕೆ ಎನ್ನಲೂ ಆಗದು ಎಂಬುದು ಅಲ್ಲಿದ್ದ ಸ್ಪಷ್ಟನೆ.

ಕೋರ್ಟ್ ಮೆಟ್ಟಿಲಿಗೆ ವೇಶ್ಯಾವಾಟಿಕೆ: 60ರ ದಶಕದಿಂದಲೇ ವೇಶ್ಯಾ­ವಾಟಿಕೆಗೆ ಸಂಬಂಧಿಸಿದಂತೆ ಒಂದೊಂದು ಕೋರ್ಟ್, ಒಂದೊಂದು ರೀತಿಯ ವ್ಯಾಖ್ಯಾನ ನೀಡುತ್ತಲೇ ಬಂದಿವೆ. 1956ರಲ್ಲಿ ಕಾಯ್ದೆ ಜಾರಿಗೊಳಿಸಿ ವೇಶ್ಯಾವಾಟಿಕೆ ಅಪರಾಧ ಎಂದು ಬಣ್ಣಿಸಿದ್ದಾಗ ಇದರ ವಿರುದ್ಧ ಸಿಡಿದೆದ್ದ ಕೆಲವು ವೇಶ್ಯೆಯರು ಕೋರ್ಟ್ ಮೆಟ್ಟಿಲೇರಿದ್ದರು. ‘ಸಂವಿಧಾನ ನಮಗೂ ಬದುಕುವ ಹಕ್ಕನ್ನು ಕೊಟ್ಟಿದೆ. ನಾವೂ ಉಳಿದ ಕೆಲಸದಂತೆ ದುಡ್ಡಿಗಾಗಿ ಈ ಕೆಲಸ ಮಾಡುತ್ತೇವೆ. ಇದನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ’ ಎಂಬುದು ಅವರ ವಾದವಾಗಿತ್ತು. ಆದರೆ ಈ ವಾದವನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ವೇಶ್ಯಾವಾಟಿಕೆ­ಯಿಂದ ಸಮಾಜದ ಮೇಲೆ ದುಷ್ಪರಿಣಾಮ ಆಗುತ್ತಿದ್ದು, ಇದು ಉಳಿದ ಕೆಲಸದಂತೆ ಅಲ್ಲ, ಇದರಲ್ಲಿ ತೊಡಗಿಸಿಕೊಂಡವರು ಅಪರಾಧಿಗಳೇ ಎಂದಿತ್ತು.

ಅದೇ ರೀತಿ, 1966ರಲ್ಲಿ ಇನ್ನೊಂದು ಹೈಕೋರ್ಟ್, ಗಂಡ­ನನ್ನು ಹೆಂಡತಿ ಹಾಗೂ ಹೆಂಡತಿಯನ್ನು ಗಂಡ ವೇಶ್ಯಾ­ವಾಟಿಕೆಗೆ ನೂಕಿದರೆ ಇಬ್ಬರೂ ಶಿಕ್ಷಾರ್ಹರು. ಆದರೆ ಇವರು ಇನ್ನೊಬ್ಬರ ಜೊತೆ ಒಂದೇ ಬಾರಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ವ್ಯಭಿಚಾರ ಎನ್ನಲಾಗದು, ಆದರೆ ಅನೇಕ ಬಾರಿ ನಡೆದರೆ ಮಾತ್ರ ಅದು ಅನೈತಿಕವಾಗುತ್ತದೆ ಎಂದಿತ್ತು. ಹೀಗೆ ಒಂದೊಂದು ತೆರನಾದ ತೀರ್ಪುಗಳು ಒಂದೊಂದು ಕೋರ್ಟ್‌ನಿಂದ ಬಂದವು. ಅದು 90ರ ದಶಕ, ವೇಶ್ಯಾ­ವಾಟಿಕೆಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಸುಪ್ರೀಂ­ಕೋರ್ಟ್‌ವರೆಗೂ ಹೋದಾಗ, ಕಾನೂನಿನ ಲೋಪ ನ್ಯಾಯಾಲಯದ ಅರಿವಿಗೆ ಬಂತು. ಈ ಕಾಯ್ದೆಯಲ್ಲಿನ ಅಂಶ­ಗಳು ಬಹಳ ಹಳೆಯದಾಗಿದ್ದು, ಅದಕ್ಕೆ ಸೂಕ್ತ ತಿದ್ದುಪಡಿ ಆಗಲೇ­ಬೇಕಾದ ಅವಶ್ಯಕತೆ ಇದೆ ಎಂಬುದು ಈ ಎಲ್ಲ ಪ್ರಕರಣಗಳಿಂದ ಕೋರ್ಟ್‌ಗೆ ಮನವರಿಕೆಯಾಯಿತು.

ಇಂಥದ್ದೇ ಒಂದು ಪ್ರಕರಣದ ವಿಚಾರಣೆ ವೇಳೆ (ವಿಶಾಲ್ ಜಿ. ವರ್ಸಸ್‌್ ಯೂನಿಯನ್ ಆಫ್ ಇಂಡಿಯಾ) ಸುಪ್ರೀಂ­ಕೋರ್ಟ್ ವೇಶ್ಯಾವಾಟಿಕೆಯ ಸಾಧಕ ಬಾಧಕಗಳ ಚರ್ಚೆ­ಗೆಂದು ಸಮಿತಿಯೊಂದರ ರಚನೆಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸ ಬಹುದೇ ಇತ್ಯಾದಿಗಳ ಸಂಬಂಧ ಅಧ್ಯಯನ ನಡೆಸಿ ವರದಿ ನೀಡುವಂತೆ ಅದು ತಿಳಿಸಿತು. ಇದೇ ಹೊತ್ತಿನಲ್ಲಿ ವಿವಿಧ ಕಾರಣ­ಗಳಿಂದಾಗಿ ಈ ವೃತ್ತಿಯನ್ನು ಆಯ್ದುಕೊಳ್ಳುತ್ತಿರುವ ಮಹಿಳೆ­ಯರ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಕೋರ್ಟ್ 1997ರಲ್ಲಿ ಎಲ್ಲ ರಾಜ್ಯ­ಗಳಿಗೂ ನೋಟಿಸ್ ನೀಡಿ, ಇಂಥವರನ್ನು ವೇಶ್ಯೆ ಎನ್ನ­ಬೇಡಿ, ಬದಲಿಗೆ ಫಾಲನ್ ವುಮನ್ (ಜಾರಿ ಬಿದ್ದವಳು) ಎಂದು ಹೇಳಿ ಎಂದೂ ನಿರ್ದೇಶಿಸಿದೆ.

ಅಧ್ಯಯನ ನಡೆಸುವ ಸಂಬಂಧ ನೀಡಿರುವ ಆದೇಶದ ಅನ್ವಯ, ತಜ್ಞ ವಕೀಲರಾಗಿದ್ದ  ವಿ.ಸಿ.ಮಹಾಜನ್ ಅವರ ಅಧ್ಯಕ್ಷತೆ­ಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿತು. ಸಮಿತಿಯು ಸಮಾಜ ಕಲ್ಯಾಣ ಇಲಾಖೆಯ ತಜ್ಞರು, ಮನಶಾಸ್ತ್ರಜ್ಞರು, ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ಸ್ವತಃ ವೇಶ್ಯೆಯರು, ಅವರ ಮಕ್ಕಳು, ವೇಶ್ಯಾಗೃಹ ನಡೆಸುವವರು, ಪೊಲೀಸರು, ವಕೀಲರು ಹೀಗೆ  ವೇಶ್ಯಾವಾಟಿಕೆ ವೃತ್ತಿಯ ಬಗ್ಗೆ ಸಾಕಷ್ಟು ಅಧ್ಯ­ಯನ ನಡೆಸಿರುವ ತಜ್ಞರು ಹಾಗೂ ಇದರಲ್ಲಿ ತೊಡಗಿಸಿ­ಕೊಂಡಿ­ರುವ ಜನರಿಂದ ಮಾಹಿತಿ ಸಂಗ್ರಹಿಸಿ  ವರದಿ ನೀಡಿತು.

ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವುದೇ ವೇಶ್ಯಾವಾಟಿಕೆಗೆ ಬರಲು ಮುಖ್ಯ ಕಾರಣ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ‘ಆದ್ದರಿಂದ ವೇಶ್ಯಾ­ವಾಟಿಕೆ ನಿರ್ಮೂಲನ ಆಗಬೇಕು, ಏಕೆಂದರೆ ಇದು ಸಾಮಾಜಿಕ ಪಿಡುಗು, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು­ಗೆಡ­ಹು­ವುದಲ್ಲದೇ, ಸಂಸಾರದ ಮೇಲೂ ಗಂಭೀರ ಪರಿಣಾಮ ಉಂಟು ಮಾಡುತ್ತದೆ’ ಎಂದೂ ವರದಿಯಲ್ಲಿ ಉಲ್ಲೇಖಿಸ-­ಲಾಗಿತ್ತು. ಈ ವರದಿಯ ನಂತರ ವೇಶ್ಯಾವಾಟಿಕೆಗೆ ಸಂಬಂಧಿಸಿ­ದಂತೆ ಕರ್ನಾಟಕ, ಅಲಹಾಬಾದ್, ಕೇರಳ, ಆಂಧ್ರಪ್ರದೇಶ, ಗುಜರಾತ್ ಹಾಗೂ ಬಾಂಬೆ ಹೈಕೋರ್ಟ್‌ಗಳು ತಮ್ಮ ಮುಂದೆ ಬಂದ ಬಹುತೇಕ ಪ್ರಕರಣಗಳಲ್ಲಿ ಇದನ್ನು ‘ಸಾಮಾಜಿಕ ಪಿಡುಗು’  ಎಂದೇ ಬಿಂಬಿಸಿವೆ. 

ಇನ್ನು, ಈಗಿರುವ ವಿಷಯ ಎಂದರೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಏನಾಗುತ್ತದೆ ಎಂಬುದು. ಇಲ್ಲಿ ಒಂದು ಮಾತು ಹೇಳಲೇಬೇಕು. ಇಲ್ಲಿ ಕಷ್ಟ ಆಗುತ್ತಿರುವುದು ವೇಶ್ಯೆಯರಿಗಿಂತ ಹೆಚ್ಚಾಗಿ, ಈ ಪಿಡುಗಿಗೆ ಮೂಲ ಕಾರಣ­ವಾಗಿರುವ ಅಲ್ಲಿಗೆ ಹೋಗುವ ಜನರದ್ದು. ಕಾನೂನುಬದ್ಧ­ವಾಗಿ­ಲ್ಲದ ವೇಳೆಯೇ ಗುಟ್ಟು­ಗುಟ್ಟಾಗಿ ಎಲ್ಲೆಡೆ ಇದು ಅವ್ಯಾ­ಹತ­­ವಾಗಿ ನಡೆದೇ ಇದೆ. ಇನ್ನು ಕಾನೂನುಬದ್ಧ ಮಾಡಿದರೆ ಅಷ್ಟೇ ಗತಿ.

ಒಂದು ವೇಳೆ ಕಾನೂನುಬದ್ಧ ಮಾಡಿದರು ಎಂದಿಟ್ಟುಕೊಳ್ಳಿ. ಆಗ ಒಬ್ಬ ಪುರುಷ, ಒಂಟಿ ಮಹಿಳೆಯ ಮನೆಗೆ ಹೋಗುತ್ತಾನೆ. ಆಕೆ ಅವನ ಬಗ್ಗೆ ದೂರು ದಾಖಲು ಮಾಡಿದರೆ, ‘ನನಗೇನು ಗೊತ್ತಿತ್ತು, ಇವಳು ವೇಶ್ಯೆ ಎಂದು ಯಾರೋ ಹೇಳಿದರು, ಅದಕ್ಕೆ ಹೀಗೆ ಹೋದೆ’ ಎಂದು ಹೇಳುವ ಸಾಧ್ಯತೆ ಇದೆ. ವೇಶ್ಯಾ­ವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಸಮಸ್ಯೆ ಬಗೆಹರಿ­ಯು­ವುದಿಲ್ಲ ಅಥವಾ ಇಂದು ಇಷ್ಟೆಲ್ಲ ಸಮಸ್ಯೆಗಳು ಆಗುತ್ತಿ­ರುವುದು ಅದನ್ನು ಕಾನೂನುಬದ್ಧಗೊಳಿಸದೇ ಇರುವುದಕ್ಕೆ ಎಂಬ ವಾದದಲ್ಲಿಯೂ ಹುರುಳಿಲ್ಲ. ಕೆಲವು ವಿದೇಶಗಳಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ‘ಆರ್ ಯು ರೆಡಿ ಟು ಕಮ್ ವಿತ್ ಮೀ?’ (ನೀವು ನನ್ನ ಜೊತೆ ಬರಲು ತಯಾ­ರಿದ್ದೀರಾ?) ಎಂದು ಕೇಳುತ್ತಾರೆ. ನಮ್ಮಲ್ಲೂ ಹಾಗೇ ಆಗಬೇಕಾ?

ADVERTISEMENT

(ಲೇಖಕರು ಹೈಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್‌ ಜನರಲ್)
ನಿರೂಪಣೆ: ಸುಚೇತನಾ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.