ADVERTISEMENT

ಶಾಸನಸಭೆ ಆಶಯ ಈಡೇರಿದೆ

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2016, 11:29 IST
Last Updated 22 ಅಕ್ಟೋಬರ್ 2016, 11:29 IST
ವೈಶಾಲಿ ಹೆಗ್ಡೆ
ವೈಶಾಲಿ ಹೆಗ್ಡೆ   

-ವೈಶಾಲಿ ಹೆಗ್ಡೆ

ಕೌಟುಂಬಿಕ ಹಿಂಸೆಯು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ವಿಚಾರ. ಇಂತಹ ಹಿಂಸೆಯು ಅಭಿವೃದ್ಧಿಗೆ ಮಾರಕ ಎಂಬುದರಲ್ಲಿ ಅನುಮಾನ ಇಲ್ಲ. ಕೌಟುಂಬಿಕ ಹಿಂಸೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಆದರೆ, ಅದು ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಕೌಟುಂಬಿಕ ಹಿಂಸೆಗೆ ಗುರಿಯಾದ ಮಹಿಳೆಯರಿಗೆ ಕಾನೂನಿನಲ್ಲಿ ಇದ್ದ ಪರಿಹಾರ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498(ಎ) ಅಡಿ ದೂರು ದಾಖಲಿಸುವುದು.

ಕೌಟುಂಬಿಕ ಹಿಂಸೆಯನ್ನು ಸಮಗ್ರವಾಗಿ ನಿಗ್ರಹಿಸಲು, ನೊಂದ ಹೆಣ್ಣಿಗೆ ಸಾಂತ್ವನ ಹೇಳಲು ಸಿವಿಲ್ ಪರಿಹಾರವೊಂದರ ಅಗತ್ಯ ಕಂಡುಬಂತು. ಕಾನೂನಿನ ಎದುರು ಎಲ್ಲರೂ ಸಮಾನರು ಎನ್ನುವ ಸಂವಿಧಾನದ 14ನೇ ವಿಧಿ, ಧರ್ಮ, ಜನಾಂಗ, ಲಿಂಗ, ಜಾತಿಯ ಆಧಾರದಲ್ಲಿ ನಡೆಯುವ ತಾರತಮ್ಯ ನಿಷೇಧಿಸುವ ಸಂವಿಧಾನದ 15ನೇ ವಿಧಿ ಹಾಗೂ ಜೀವಿಸುವ ಹಕ್ಕನ್ನು ಖಾತರಿಪಡಿಸುವ 21ನೇ ವಿಧಿಯ ಆಶಯಗಳನ್ನು ಈಡೇರಿಸುವ, ಸಮಾಜದಲ್ಲಿ ಕೌಟುಂಬಿಕ ಹಿಂಸೆ ನಡೆಯದಂತೆ ತಡೆಯುವ ಕಾನೂನೊಂದನ್ನು ಜಾರಿಗೆ ತರುವುದು ಅನಿವಾರ್ಯ ಆಗಿತ್ತು.

ADVERTISEMENT

‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ- 2005’ ಇಂಥದ್ದೊಂದು ಉದ್ದೇಶದಿಂದ ಜಾರಿಗೆ ಬಂತು. ಈ ಕಾಯ್ದೆಯ ಹಲವು ಸೆಕ್ಷನ್‌ಗಳು ಲಿಂಗ ನಿರಪೇಕ್ಷವಾಗಿವೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಕೌಟುಂಬಿಕ ಸಂಬಂಧಗಳಲ್ಲಿ, ಪುರುಷ ಎಸಗುವ ದೌರ್ಜನ್ಯಗಳ ವಿರುದ್ಧ ಮಾತ್ರ ಬಳಸಬೇಕು ಎಂದು ಈ ಕಾಯ್ದೆಯ ಬಹುತೇಕ ಸೆಕ್ಷನ್‌ಗಳು ಹೇಳುವುದಿಲ್ಲ. ಪುರುಷ ಎಷ್ಟರಮಟ್ಟಿಗೆ ದೌರ್ಜನ್ಯ ನಡೆಸಬಲ್ಲನೋ, ಅಷ್ಟೇ ಪ್ರಮಾಣದ ದೌರ್ಜನ್ಯವನ್ನು ಮಹಿಳೆಯೂ ನಡೆಸಬಲ್ಲಳು ಎನ್ನುವುದನ್ನು ಈ ಕಾಯ್ದೆ ಒಪ್ಪುತ್ತದೆ. ಹಾಗಾಗಿ, ಕೌಟುಂಬಿಕ ಬಂಧನದಲ್ಲಿರುವ ಪ್ರತಿ ಮಹಿಳೆಗೂ ರಕ್ಷಣೆ ಒದಗಿಸುವ ಜೊತೆಗೆ ಈ ಕಾಯ್ದೆಯು, ‘ವಯಸ್ಕ ಪುರುಷ’ ಮಾತ್ರ ಕೌಟುಂಬಿಕ ಸಂಬಂಧಗಳಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಬಲ್ಲ ಎಂದು ಹೇಳುವುದಿಲ್ಲ. ವಯಸ್ಕ ಪುರುಷ ಅಲ್ಲದ ವ್ಯಕ್ತಿಯ ವಿರುದ್ಧ ಈ ಕಾಯ್ದೆಯ ಅಡಿ ದೂರು ದಾಖಲಿಸಲು ಅಡೆತಡೆ ಇಲ್ಲ.

ಆದರೆ, ಕಾಯ್ದೆಯ ಸೆಕ್ಷನ್ 2(ಕ್ಯೂ)ನಲ್ಲಿ, ‘ವಯಸ್ಕ ಪುರುಷ’ ಎಂಬ ಪದಗಳನ್ನು ಬಳಸಲಾಗಿದೆ. ನೊಂದ ಮಹಿಳೆ ಜೊತೆ ಈ ಹಿಂದೆ ಅಥವಾ ಈಗ ಕೌಟುಂಬಿಕ ಸಂಬಂಧ ಹೊಂದಿರಬೇಕು. ಇಂಥ ವ್ಯಕ್ತಿಯ ವಿರುದ್ಧ ದೂರು ಸಲ್ಲಿಸಿ ಮಹಿಳೆ ನ್ಯಾಯ ಕೇಳಬಹುದು. ಪುರುಷನ ಜೊತೆ ವೈವಾಹಿಕ ಸಂಬಂಧ ಹೊಂದಿರುವ ಮಹಿಳೆ, ಪತಿಯ ವಿರುದ್ಧ ಅಥವಾ ಪತಿಯ ಸಂಬಂಧಿಕರ ವಿರುದ್ಧ ದೂರು ದಾಖಲಿಸಬಹುದು.

ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ರೊಹಿಂಟನ್ ನಾರಿಮನ್ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠವು ಈಚೆಗೆ ಈ ಕಾಯ್ದೆಯ ಸೆಕ್ಷನ್ 2(ಕ್ಯೂ)ನ ಸಾಂವಿಧಾನಿಕ ಮಾನ್ಯತೆಯನ್ನು ಪರಿಶೀಲನೆಗೆ ಒಳಪಡಿಸಿತು.

ಒಬ್ಬಳು ತಾಯಿ ಮತ್ತು ಆಕೆಯ ಮಗಳು ಬಾಂಬೆ ಹೈಕೋರ್ಟ್‌ನಲ್ಲಿ, ಸೆಕ್ಷನ್ 2(ಕ್ಯೂ)ನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ತಾಯಿ, ಮಗಳು ಕೆಲವು ಮಹಿಳೆಯರ ವಿರುದ್ಧ ದಾಖಲಿಸಿದ್ದ ದೂರನ್ನು, ‘ದೂರಿನಲ್ಲಿ ವಯಸ್ಕ ಪುರುಷರನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ’ ಎಂಬ ಕಾರಣಕ್ಕೆ ರದ್ದು ಮಾಡಲಾಗಿತ್ತು. ಇವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಇದನ್ನು ಪ್ರಶ್ನಿಸಿ. ಇದೇ ಪ್ರಕರಣ ಮುಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೀಗೆ ಹೇಳಿದೆ: ‘ಕಾಯ್ದೆಯ ಸೆಕ್ಷನ್ 2(ಎಫ್)ನಲ್ಲಿ ಕೌಟುಂಬಿಕ ಸಂಬಂಧ ಎಂದರೆ ಏನೆಂಬುದನ್ನು ವಿವರಿಸಲಾಗಿದೆ. ಇದು ವಿಸ್ತೃತ ವ್ಯಾಪ್ತಿಯನ್ನು ಹೊಂದಿದೆ. ಕೌಟುಂಬಿಕ ಸಂಬಂಧ ಎಂದರೆ, ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸಿದ/ ವಾಸಿಸುವ ವ್ಯಕ್ತಿಗಳ ನಡುವಿನ ಸಂಬಂಧ. ಹೀಗೆ ಒಂದೇ ಮನೆಯಲ್ಲಿ ವಾಸಿಸಿದ ಅಥವಾ ವಾಸಿಸುತ್ತಿರುವ ವ್ಯಕ್ತಿಗಳು ಕೌಟುಂಬಿಕ ಸಂಬಂಧ ಹೊಂದಿದ್ದಾರೆ ಎನ್ನಲು ಅವರು ರಕ್ತ ಸಂಬಂಧಿ ಆಗಿರಬೇಕು ಅಥವಾ ವಿವಾಹ ಸಂಬಂಧ ಹೊಂದಿರಬೇಕು, ದತ್ತು ಸ್ವೀಕಾರದ ಮೂಲಕ ಸಂಬಂಧ ಬೆಳೆದಿರಬೇಕು ಅಥವಾ ಅವಿಭಕ್ತ ಕುಟುಂಬದ ಸದಸ್ಯರಾಗಿರಬೇಕು. ಈ ವ್ಯಾಖ್ಯಾನ ಗಮನಿಸಿದರೆ, ಕೌಟುಂಬಿಕ ಸಂಬಂಧದಲ್ಲಿ ಪುರುಷನೂ ಇರುತ್ತಾನೆ, ಮಹಿಳೆಯೂ ಇರುತ್ತಾಳೆ’.

ಕಾಯ್ದೆಯ ಸೆಕ್ಷನ್ 3ರಲ್ಲಿ ಕೌಟುಂಬಿಕ ಹಿಂಸೆ ಎಂದರೆ ಏನು ಎಂಬುದನ್ನು ವ್ಯಾಖ್ಯಾನಿಸಲಾಗಿದೆ. ಈ ವ್ಯಾಖ್ಯಾನ ಲಿಂಗ ನಿರಪೇಕ್ಷ. ದೈಹಿಕ ದೌರ್ಜನ್ಯ, ನಿಂದನೆ, ಭಾವನಾತ್ಮಕ ದೌರ್ಜನ್ಯ ಹಾಗೂ ಆರ್ಥಿಕ ಕಿರುಕುಳವನ್ನು ಒಬ್ಬಳು ಮಹಿಳೆ ಇನ್ನೊಬ್ಬಳು ಮಹಿಳೆಯ ವಿರುದ್ಧ ನಡೆಸಬಲ್ಲಳು ಎಂಬುದು ಸ್ಪಷ್ಟ. ಕೆಲವು ಸಂದರ್ಭಗಳಲ್ಲಿ ಮಹಿಳೆ ಇನ್ನೊಬ್ಬಳು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸಬಲ್ಲಳು. ಕಾಯ್ದೆಯ ಸೆಕ್ಷನ್ 3, ಕಾಯ್ದೆಯ ಒಟ್ಟಾರೆ ಆಶಯಕ್ಕೆ ಪೂರಕವಾಗಿದೆ. ಅಂದರೆ, ಇದು ಮಹಿಳೆಯ ವಿರುದ್ಧದ ಯಾವುದೇ ಬಗೆಯ ಹಿಂಸೆಯನ್ನು ಕಾನೂನು ಬಾಹಿರಗೊಳಿಸುತ್ತದೆ. ಹಾಗಾಗಿ ಈ ಸೆಕ್ಷನ್ ಲಿಂಗ ನಿರಪೇಕ್ಷವಾಗಿದೆ.

ಕುಟುಂಬದ ಒಳಗೆ ಯಾವುದೇ ಬಗೆಯ ಹಿಂಸೆಗೆ ಗುರಿಯಾಗುವ ಹೆಣ್ಣಿಗೆ ಪರಿಣಾಮಕಾರಿ ರಕ್ಷಣೆ ನೀಡುವುದು, ಆಕೆಯ ಹಕ್ಕುಗಳನ್ನು ರಕ್ಷಿಸುವುದು 2005ರ ಕಾಯ್ದೆಯ ಗುರಿ. ದೈಹಿಕ, ಲೈಂಗಿಕ, ಭಾವನಾತ್ಮಕ, ಆರ್ಥಿಕ ಸೇರಿದಂತೆ ಎಲ್ಲ ಬಗೆಯ ಹಿಂಸೆಗಳಿಂದ ಮಹಿಳೆಗೆ ರಕ್ಷಣೆ ಒದಗಿಸುವುದು ಕಾಯ್ದೆಯ ಉದ್ದೇಶ ಎಂದು ಪೀಠಿಕೆಯಲ್ಲೇ ಹೇಳಲಾಗಿದೆ. ಅಂದರೆ, ಮಹಿಳೆಯನ್ನು ಈ ಬಗೆಯ ಹಿಂಸೆಗಳಿಗೆ ಗುರಿಪಡಿಸುವವರು ಕೆಲವು ಸಂದರ್ಭಗಳಲ್ಲಿ ಮಹಿಳೆಯರೇ ಆಗಿರಬಹುದು ಎಂಬುದು ಸ್ಪಷ್ಟ.

ಈ ವಿಚಾರಗಳನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು, ಕಾಯ್ದೆಯ ಸೆಕ್ಷನ್ 2 (ಕ್ಯೂ)ನಲ್ಲಿ ‘ವಯಸ್ಕ ಪುರುಷ’ ಎಂಬ ಪದ ಸೇರಿಸಿದ್ದರ ಹಿಂದಿನ ವಿವೇಕ ಏನು ಎಂಬುದನ್ನು ನ್ಯಾಯಪೀಠ ಪರಿಶೀಲನೆಗೆ ಒಳಪಡಿಸಿತು.

ಕುಟುಂಬದ ವ್ಯವಸ್ಥೆಯೊಳಗೆ ಮಹಿಳೆ– ಆ ಮಹಿಳೆ ಪತ್ನಿ, ತಾಯಿ, ತಂಗಿ, ಮಗಳು ಹೀಗೆ ಯಾರೇ ಆಗಿರಬಹುದು– ಪುರುಷನಿಂದಲೇ ಹಿಂಸೆಗೆ ಗುರಿಯಾಗಬೇಕು ಎಂದೇನೂ ಇಲ್ಲ, ಮಹಿಳೆಯಿಂದಲೂ ಹಿಂಸೆಗೆ ಒಳಗಾಗಬಹುದು ಎಂದು ಪೀಠ ಹೇಳಿತು. ಇಡೀ ಕಾಯ್ದೆಯು ಲಿಂಗ ನಿರಪೇಕ್ಷ ಆಗಿರುವಾಗ, ಪುರುಷ ಮಾತ್ರ ದೌರ್ಜನ್ಯ ಎಸಗಬಲ್ಲ ಎಂದು ಹೇಳದಿರುವಾಗ, ಕಾಯ್ದೆಯ ಸೆಕ್ಷನ್‌ 2(ಕ್ಯೂ)ನಲ್ಲಿ ಇರುವ ‘ವಯಸ್ಕ ಪುರುಷ’ ಎಂಬ ಪದವನ್ನು ತೆಗೆದುಹಾಕಿತು. ಈ ಪದಗಳು ಸಂವಿಧಾನದ 14ನೇ ವಿಧಿಯ ಆಶಯಗಳಿಗೆ ಪೂರಕವಾಗಿ ಇಲ್ಲ ಎಂದು ಸಾರಿತು.

ಈ ತೀರ್ಪು ಒಂದು ಮೈಲುಗಲ್ಲು.  ಕಾಯ್ದೆಯ ಆಶಯದ ಈಡೇರಿಕೆಗೆ ಇಂಥದ್ದೊಂದು ತೀರ್ಪಿನ ಅವಶ್ಯಕತೆ ಇತ್ತು. ತೀರ್ಪು ದೂರಗಾಮಿ ಪರಿಣಾಮಗಳನ್ನು ಹೊಂದಿದೆ ಎಂಬುದರಲ್ಲಿ ಅನುಮಾನ ಇಲ್ಲ. ಇಲ್ಲಿಯವರೆಗೆ ‘ವಯಸ್ಕ ಪುರುಷ’ ಎಸಗುವ ದೌರ್ಜನ್ಯಗಳಿಗೆ ಮಾತ್ರ ಮಹಿಳೆ ಈ ಕಾಯ್ದೆಯ ಅಡಿ ಸಿವಿಲ್‌ ಪರಿಹಾರ ಕೋರಲು ಅವಕಾಶ ಇತ್ತು. ಇನ್ನು ಮುಂದೆ ಅಂತಹ ನಿರ್ಬಂಧ ಇರುವುದಿಲ್ಲ. ‘ವಯಸ್ಕ ಪುರುಷ’ ಎಂಬ ಪದವನ್ನು ತೆಗೆದುಹಾಕಿದ್ದರಿಂದ, ನಮ್ಮ ಶಾಸನಸಭೆಯ ಇಂಗಿತದಂತೆ ಈ ಕಾಯ್ದೆ ಸಂಪೂರ್ಣವಾಗಿ ಲಿಂಗ ನಿರಪೇಕ್ಷವಾಯಿತು.

ಈ ತೀರ್ಪಿನಿಂದಾಗಿ, ದೌರ್ಜನ್ಯಕ್ಕೆ ಸಿವಿಲ್ ಪರಿಹಾರ ಕೋರಿ ದೂರು ಸಲ್ಲಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಬಹುದು. ಮಹಿಳೆಯರ ವಿರುದ್ಧವೂ ಸಾಕಷ್ಟು ದೂರುಗಳು ದಾಖಲಾಗಬಹುದು. ಮಹಿಳೆಯನ್ನು ಹಿಂಸಿಸಲು ಇನ್ನೊಬ್ಬಳು ಮಹಿಳೆಯನ್ನು ಬಳಸಿಕೊಳ್ಳುವ ಪುರುಷರಿಗೂ ಇದೊಂದು ಎಚ್ಚರಿಕೆಯ ಗಂಟೆ.

ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ನಮ್ಮ ಶಾಸನಸಭೆ ಒಳ್ಳೆಯ ಕಾಯ್ದೆಯನ್ನು ಜಾರಿಗೆ ತಂದಿದ್ದರೂ, ಅದರ ಫಲ ಸಿಗುವುದು ಪರಿಣಾಮಕಾರಿ ಅನುಷ್ಠಾನದಿಂದ ಮಾತ್ರ. ಆದರೆ, ಅನುಷ್ಠಾನ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಕಾಯ್ದೆಯ ದುರ್ಬಳಕೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.