ADVERTISEMENT

ಸ್ವಾಸ್ಥ್ಯವೊ, ಮರಣವೊ?: ಆಯ್ಕೆ ನಿಮ್ಮದು

ಮಾಂಸ ನಿಷೇಧದ ಸುತ್ತ...

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2015, 19:30 IST
Last Updated 18 ಸೆಪ್ಟೆಂಬರ್ 2015, 19:30 IST

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಜೈನ ಧರ್ಮದ ಪರ್ಯೂಷಣ ಉಪವಾಸದ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಜ್ಞಾವಂತ ಭಾರತೀಯರು ವಿವೇಚನಾಶೀಲರಾಗಿ ವಿಚಾರ ಮಾಡುವುದು ಸಮಂಜಸ. ಇದು ಕೇವಲ ಧಾರ್ಮಿಕ, ಆರ್ಥಿಕ, ವೈಚಾರಿಕ ಸ್ವಾತಂತ್ರ್ಯದ ವಿಚಾರವಲ್ಲ. ವೈಜ್ಞಾನಿಕ ಮತ್ತು ವೈಯಕ್ತಿಕ ಆರೋಗ್ಯ, ಮೇಲಾಗಿ ಸಮಾಜದ ಸ್ವಾಸ್ಥ್ಯದ ವಿಚಾರ ಕೂಡ.

ಅಥರ್ವ ವೇದದಲ್ಲಿ (8.6.23) ‘ನಾನು ಮಾಂಸ, ಮೊಟ್ಟೆ ತಿನ್ನುವವರನ್ನು ನಾಶ ಮಾಡುತ್ತೇನೆ!’ ಎಂಬ ಉಲ್ಲೇಖವಿದೆ. ಮನುಸ್ಮೃತಿ (9/73 ಪುಟ 964) ಪ್ರಕಾರ ‘ಯಾರು ಮಾಂಸಾಹಾರ ಸೇವಿಸಲು ಪ್ರಚೋದಿಸುತ್ತಾರೋ, ಕಟುಕರು, ಕೊಂಡುಕೊಳ್ಳುವವರು, ಮಾರುವವರು, ಅಡುಗೆ ಮಾಡುವವರು ಮಾಂಸ ತರುವವರು ಮತ್ತು ತಿನ್ನುವವರು ಎಲ್ಲರೂ ಅಪಾಯಕಾರಿ, ಕೊಲೆಗಾರರು ಮತ್ತು ಪಾಪಿಗಳು’. ಇನ್ನು ಪವಿತ್ರ ಕುರಾನ್‌ನ  ಪ್ರಕಾರ ಸತ್ತ ಪ್ರಾಣಿಯ ಮಾಂಸ, ರಕ್ತ ತಿನ್ನುವುದಕ್ಕೆ ನಿಷೇಧವಿದೆ.

ಆದ್ದರಿಂದ ಅವರು ಹಲಾಲ ಮಾಂಸವನ್ನೇ ತಿನ್ನುತ್ತಾರೆ. ಆದರೆ ಹಲಾಲ ಮಾಂಸಕ್ಕಾಗಿ ಬದುಕಿದ ಪ್ರಾಣಿಗಳ ಕತ್ತಿನ ರಕ್ತನಾಳ ಕತ್ತರಿಸಿ ರಕ್ತವನ್ನೆಲ್ಲ ತೆಗೆದು ಪ್ರಾಣಿಗಳಿಗೆ ಚಿತ್ರಹಿಂಸೆ ಕೊಡುವುದು ರೂಢಿಯಾಗಿದೆ. ಆದ್ದರಿಂದ ಹಲವು ಮುಸಲ್ಮಾನರು ಹಲಾಲ ಮಾಂಸ ಸಿಗದಿದ್ದರೆ ಸಸ್ಯಾಹಾರ ಇಲ್ಲವೇ ಮೀನು ತಿನ್ನುತ್ತಾರೆ.

ಇದು ನನಗೆ ಅರ್ಥವಾಗಿದ್ದು ನಾನು ವಿಶ್ವ ಮಕ್ಕಳ ಹೃದ್ರೋಗ ಸಮ್ಮೇಳನಕ್ಕೆ ಟೊರಾಂಟೊಗೆ ಹೋದಾಗ. ನನ್ನ ಇಬ್ಬರು ಪಾಕಿಸ್ತಾನಿ ಸ್ನೇಹಿತೆಯರು ಪ್ರತಿ ದಿನ ತಪ್ಪದೇ ಭಾರತೀಯ ಸಸ್ಯಾಹಾರಿ ಹೋಟೆಲಿಗೆ ಹೋಗಲು ನನಗಾಗಿ ಕಾಯುತ್ತಿದ್ದರು. ನನಗೆ ವಿಚಿತ್ರ ಎನ್ನಿಸಿದ್ದೆಂದರೆ, ನಮ್ಮ ಭಾರತದ ಹಿಂದೂಗಳು ಸಿಕ್ಕಸಿಕ್ಕಿದ್ದನ್ನು ತಿನ್ನುತ್ತಿದ್ದರು.

ಆದರೆ ಪಾಕಿಸ್ತಾನದ ಡಾ. ನಜಮಾ ಮತ್ತು ಮೆಹರುನ್ನೀಸಾ ನನ್ನೊಂದಿಗೆ ಸಸ್ಯಾಹಾರ ಸೇವಿಸುತ್ತಿದ್ದರು. ಎಷ್ಟರಮಟ್ಟಿಗೆ ಎಂದರೆ, ಒಂದು ದಿನ ಹೊಟ್ಟೆ ಹಸಿದಿದ್ದಕ್ಕೆ ನಾನು ಆಲೂಗಡ್ಡೆ ಚಿಪ್‌್ಸ ಮಾರುವ ಗಾಡಿಯ ಹತ್ತಿರ ಹೋಗಿ ಚಿಪ್‌್ಸ ಕೊಂಡುಕೊಳ್ಳಲು ಮುಂದಾದಾಗ ಆ ಇಬ್ಬರೂ ಜೋರಾಗಿ ‘ವಿಜಯ್‌ ಮತ್‌ ಲೋ, ಮತ್‌ ಲೋ’ ಎಂದು ಕೂಗಿಕೊಂಡರು. ನಾನು ಗಾಬರಿಯಾಗಿ ಅವರತ್ತ ತಿರುಗಿದಾಗ ಅವರು ಹೇಳಿದ್ದು ಕೇಳಿ ಅವಾಕ್ಕಾದೆ! ‘ಓ ದೇಖೋ ವಹಿ ಸ್ಪ್ಯಾಚುಲಾಸೆ ವೊ ಪೋರ್ಕ್‌ಭೀ ತಲರಹಾಹೈ ಔರ್‌ ಚಿಪ್‌್ಸ ಭೀ ತಲರಹಾಹೈ’. ನಮ್ಮಲ್ಲಿ ತಿನ್ನುವಾಗ ಎಷ್ಟು ಜನ ಇಷ್ಟೆಲ್ಲ ವಿಚಾರ ಮಾಡುತ್ತೇವೆ?

ಇನ್ನು ಪವಿತ್ರ ಬೈಬಲ್‌ ಪ್ರಕಾರ ‘ದೇವವಾಣಿಯು ಹೇಳುತ್ತದೆ, ನಾನು ತಿನ್ನಲು ನಿಮಗಾಗಿ ಎಲ್ಲ ಬಗೆಯ ಧಾನ್ಯಗಳು ಮತ್ತು ಹಣ್ಣುಗಳನ್ನು ಒದಗಿಸಿದ್ದೇನೆ. (Genesis 1: 29) ರಕ್ತದಿಂದ ಒಡಗೂಡಿದ ಮಾಂಸವನ್ನು ನೀವು ತಿನ್ನಬಾರದು, ಏಕೆಂದರೆ ಜೀವ ಇರುವುದೇ ರಕ್ತದಲ್ಲಿ (Genesis 9:4). ಸ್ವತಃ ಜೀಸಸ್‌ ಅವರ ಪರಮಾಪ್ತ ಶಿಷ್ಯ ಸೇಂಟ್‌ ಪಾಲ್‌ ಹೇಳುತ್ತಾರೆ ‘ಮಾಂಸ ಅಥವಾ ವೈನ್‌ ಸೇವಿಸದಿರುವುದು ಒಳ್ಳೆಯದು  (Romans 14:21). ಇನ್ನು ಹಲವು ಶತಕದ ನಂತರ ಬೈಬಲ್‌ ಕ್ರಿಶ್ಚಿಯನ್‌ ಚರ್ಚ್‌ ಸಂಸ್ಥಾಪಕರೂ ಸಸ್ಯಾಹಾರವನ್ನು ಪ್ರತಿಪಾದಿಸಿದರು.

ಜೈನ ಧರ್ಮಕ್ಕೆ ಬಂದರಂತೂ ಅವರೂ ಪರಿಪೂರ್ಣ ಸಸ್ಯಾಹಾರ ಪ್ರತಿಪಾದಿಸುವುದಲ್ಲದೆ ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ನಾವು ವಿಮಾನಯಾನ ಮಾಡುವಾಗ ‘ಜೈನ ಸಸ್ಯಾಹಾರ’ ತಪ್ಪದೇ ಸಿಗುತ್ತದೆ.

ಹಾಗೇ ಸಾಂಸ್ಕೃತಿಕವಾಗಿ ನೋಡಿದಾಗ ಜೈನ ಸಮುದಾಯದ ಸಸ್ಯಾಹಾರ ಪದ್ಧತಿ ಮತ್ತು ಅಹಿಂಸೆಯು ಅನುಕರಣೀಯ. ಅವರಲ್ಲಿಯ ಸ್ನೇಹ,  ಸಂಘಟನೆ ಎಂದೂ ಯಾವ ಗಲಭೆ, ಗೊಂದಲಗಳಲ್ಲಿ ಭಾಗವಹಿಸದೆ ಶಾಂತಿಪ್ರಿಯರಾಗಿರುವುದು ವಿಶಿಷ್ಟ. ಸಸ್ಯಾಹಾರಿಗಳಾದ ಜೈನರ ಶಾಂತ ಸ್ವಭಾವ, ಒಗ್ಗಟ್ಟು ಮತ್ತು ಸಂಘಟಿತ ಬದುಕಿಗೆ ಪ್ರಬಲ ಕಾರಣ ಅವರ ಸಾತ್ವಿಕ ಸಸ್ಯಾಹಾರ ಎಂದರೆ ಅತಿಶಯವಲ್ಲ.
ಇಂದಿನ ಅಶಾಂತಿ ಮತ್ತು ಕ್ರೂರ ಸ್ವಭಾವದ ಹೆಚ್ಚಳಕ್ಕೆ  ಮಾಂಸಾಹಾರವೇ ಕಾರಣವೆಂದು ವಿಜ್ಞಾನದಿಂದ ತಿಳಿದುಬಂದಿದೆ.

ಮಾಂಸಾಹಾರದಿಂದ ಕೋಪ, ತಾಪ, ಕಾಮನೆ, ವಿಕೃತ ಮನೋಭಾವ ಹೆಚ್ಚುತ್ತದೆ ಎಂದು ವಿಶ್ವವಿಖ್ಯಾತ ಜಪಾನಿ ವಿಜ್ಞಾನಿ ಪ್ರೊಫೆಸರ್‌ ವೆನ್‌ಝ್‌ ಹೇಳಿದ್ದಾರೆ. ಹಲವಾರು ದಶಲಕ್ಷ ಜನರಿಗೆ ಆಹಾರ ಸಿಗದೇ ಹಸಿವಿನಿಂದ ಸಾಯಲು ಮುಖ್ಯ ಕಾರಣ ಕೆಲವರು ಮಾಂಸಾಹಾರಿಗಳಾಗಿರುವುದು ಎಂದು ಘಂಟಾಘೋಷವಾಗಿ ಅಂಕಿ ಅಂಶಗಳೊಂದಿಗೆ ಹೇಳುತ್ತಾರೆ ವಿಜ್ಞಾನಿ ಬೋರ್ಗ್‌ ಸ್ಟೊರ್ಮ!
ಒಂದು ಕೆ.ಜಿ. ಮಾಂಸಕ್ಕಾಗಿ ಆ ಪ್ರಾಣಿಗೆ 8 ಕೆ.ಜಿ. ಸಸ್ಯಾಹಾರ ಕೊಡಬೇಕಾಗುತ್ತದೆ. ಆದ್ದರಿಂದ ಬ್ರಿಟನ್ನಿನ ಬರ್ನಾರ್ಡ್‌ ‘ಹಲವರು ಹಸಿವಿನಿಂದ ಸಾಯಲು ಕೆಲವರು ಮಾಂಸ ತಿಂದು ಮಜಾ ಮಾಡಬೇಕೆ’ ಎಂದು ಕೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಣೆ ಪ್ರಕಾರ, ಮಾಂಸಾಹಾರಿಗಳಿಗೆ 159 ಬಗೆಯ ಕಾಯಿಲೆಗಳು ಬರುತ್ತವೆ! ಅದರಲ್ಲೂ ಸಾವಿಗೆ ಪ್ರಮುಖ ಕಾರಣಗಳಾದ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್‌ ಮಾಂಸಾಹಾರಿಗಳಲ್ಲಿ ಹೆಚ್ಚು ಪ್ರಚಲಿತವೆಂದು ತಿಳಿದು ಬಂದಿದೆ. ಮಾಂಸವನ್ನು ಸುಡುವುದರಿಂದ ಮೀಥೈಲ್‌ಕೊಲಾಂತ್ರಿನ್‌ ಎಂಬ ಅತ್ಯಂತ ಪ್ರಭಾವಶಾಲಿ ಕ್ಯಾನ್ಸರ್‌ಜನಕ ವಿನಾಶಕಾರಿ ರಸಾಯನ ಉತ್ಪತ್ತಿ ಆಗುತ್ತದೆ. ಇದರಿಂದ ಇಲಿಗಳು ಮೂಳೆ, ಹೊಟ್ಟೆ ಹಾಗೂ ರಕ್ತದ ಕ್ಯಾನ್ಸರ್‌ಗೆ ತುತ್ತಾದುದು ಪರೀಕ್ಷೆಗಳಿಂದ ಸಾಬೀತಾಗಿದೆ. ಇದಲ್ಲದೇ ಹಸುವಿನ ಹಾಲು ಹೆಚ್ಚಿಸಲು ಕೊಡುವ ಸ್ಟೀರಾಯ್ಡ್‌್ಸ ಮತ್ತು ಹಾರ್ಮೋನ್‌ಗಳು ಅವುಗಳ ಶರೀರದಲ್ಲಿ ಉಳಿದುಕೊಳ್ಳುವುದರಿಂದ ಅಂಥ ಹಸುವಿನ ಮಾಂಸ ತಿಂದವರ ಆರೋಗ್ಯ ಹಾಳಾಗುತ್ತದೆ.

ಮನುಷ್ಯರ ಹೊಟ್ಟೆ ಮತ್ತು ಕರುಳು ಸಸ್ಯಾಹಾರಕ್ಕಾಗಿ ನಿರ್ಮಿತವಾಗಿದೆ. ನಮ್ಮ ಚಿಕ್ಕ ಮತ್ತು ದೊಡ್ಡ ಕರುಳು 8.5 ಮೀಟರ್‌ ಉದ್ದ ಇದ್ದು ಸಸ್ಯಾಹಾರ ಅರಗಿಸಿಕೊಳ್ಳಲು ಸರಿಯಾಗಿದೆ. ಮಾಂಸಾಹಾರ ಸೇವಿಸಿದಾಗ ಅದು ಕರುಳಿನಲ್ಲಿ ಕೊಳೆತು ಉತ್ಪತ್ತಿ ಆಗುವ ವಿಷಕಾರಿ ಅಂಶವು ಜೀವಕ್ಕೆ ಕುತ್ತು ತರುತ್ತದೆ, ವಿಷದ ಅಂಶವನ್ನು ತೆಗೆದುಹಾಕುವ ಯಕೃತ್ತನ್ನು ನಾಶ ಮಾಡುತ್ತದೆ. ಯಕೃತ್‌ನಲ್ಲಿನ ಜೀವಕಣಗಳು ಸತ್ತು ಯಕೃತ್ತಿನ ರೋಗಕ್ಕೆ ಕಾರಣವಾಗುತ್ತದೆ.

ಮಾಂಸದಲ್ಲಿರುವ ಯುರೋಕಿನೇಸ್‌ ಎಂಬ ಪ್ರೊಟೀನ್‌ನಿಂದ ನಮ್ಮ ಮೂತ್ರಪಿಂಡ ನಾಶವಾಗುತ್ತದೆ. ಅದಲ್ಲದೆ ಮಾಂಸಾಹಾರದಲ್ಲಿ ನಾರಿನ ಅಂಶ ಇಲ್ಲದಿರುವುದರಿಂದ ಮಲಬದ್ಧತೆ ಉಂಟಾಗಿ ಮೂಲವ್ಯಾಧಿ, ದೊಡ್ಡ ಕರುಳಿನ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಮಾಂಸಾಹಾರಿಗಳು ಗಟ್ಟಿಯಾಗುತ್ತಾರೆ, ಆರೋಗ್ಯವಂತರಾಗುತ್ತಾರೆ ಎನ್ನುವುದು ಶುದ್ಧ ಸುಳ್ಳು. ಅಮೆರಿಕನ್ನರು ವಿಯೆಟ್ನಾಂ ಯುದ್ಧದಿಂದ ದೊಡ್ಡ ಪಾಠ ಕಲಿತರು. ಅವರ 19–20 ವರ್ಷದ ಸೈನಿಕರ ಶರೀರದ ತಪಾಸಣೆ ನಡೆಸಿದಾಗ ಎಲ್ಲ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಶೇಖರಗೊಂಡಿತ್ತು.

ಆದರೆ ವಿಯೆಟ್ನಾಂ ಸೈನಿಕರ ರಕ್ತನಾಳಗಳು ಆರೋಗ್ಯಕರವಾಗಿದ್ದವು! ಕಾರಣ ಹುಡುಕಿದಾಗ ಅಮೆರಿಕನ್ನರು ಮೂರು ಹೊತ್ತೂ ತಿನ್ನುತ್ತಿದ್ದ ಮೊಟ್ಟೆ ಮತ್ತು ಮಾಂಸದಲ್ಲಿನ ಕೊಬ್ಬಿನಂಶ ಎಂಬುದು ತಿಳಿದುಬಂತು! ಆದರೆ ವಿಯೆಟ್ನಾಂ ಸೈನಿಕರು ತಿನ್ನುತ್ತಿದ್ದ ಹಣ್ಣು, ತರಕಾರಿಯಲ್ಲಿನ ಆ್ಯಂಟಿ ಆಕ್ಸಿಡೆಂಟ್‌ಗಳು ಜಾಡಮಾಲಿಗಳಂತೆ  ಅವರ ರಕ್ತನಾಳಗಳನ್ನು ಶುಚಿಗೊಳಿಸುತ್ತಿದ್ದವು ಎಂಬ ಅತ್ಯಂತ ಮುಖ್ಯ ಅಂಶದ ಅರಿವಾಯಿತು.

ಆದ್ದರಿಂದ ಇಂದು ಪಾಶ್ಚಾತ್ಯರು ಹಣ್ಣು, ಹಣ್ಣಿನ ರಸ, ತಟ್ಟೆ ತುಂಬ ತರಕಾರಿ ತಿಂದು ತಮ್ಮ ಸಾವುನೋವಿನ ಸಂಖ್ಯೆಯನ್ನು ಶೇ 32ರಷ್ಟು ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ನಮ್ಮ ಭಾರತೀಯರು ಪಾಶ್ಚಾತ್ಯರಂತೆ ಮಾಂಸಾಹಾರ ತಿನ್ನಲು ಪ್ರಾರಂಭಿಸಿ ಸಾವಿನ ಸಂಖ್ಯೆಯನ್ನು ಶೇ 50ರಷ್ಟು ಹೆಚ್ಚಿಸಿಕೊಂಡಿದ್ದಾರೆ!

ಮಾಂಸ ನಿಷೇಧದ ವಿರೋಧಿಗಳು ವೈಜ್ಞಾನಿಕವಾಗಿ ಚಿಂತಿಸಿದಾಗ ಸಮಾಜದ ಸ್ವಾಸ್ಥ್ಯ ಮತ್ತು ದೇಶದ ಸಮೃದ್ಧಿ ಸಸ್ಯಾಹಾರದಿಂದ ಸಾಧ್ಯ ಎಂಬ ವಿವೇಕ  ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.