ADVERTISEMENT

‘ಅಂತ್ಯದಲ್ಲೊಂದು ಆರಂಭ’ ಅಸಲಿ ಕಲಾಕೃತಿ

ಹರವು ಸ್ಫೂರ್ತಿ
Published 21 ಮೇ 2018, 19:30 IST
Last Updated 21 ಮೇ 2018, 19:30 IST
ಟೇಮ್‌ ಅವರ ಕಲಾಕೃತಿ
ಟೇಮ್‌ ಅವರ ಕಲಾಕೃತಿ   

ಮುಟ್ಟಿನ ರಕ್ತವೇ ಬಣ್ಣವಾಗಿ, ಟ್ಯಾಂಪೂನ್ಸ್‌ ತುಂಡು ಕುಂಚವಾಗಿ ಕ್ಯಾನ್ವಾಸ್‌ ಮೇಲೆ ಮೂಡಿ ಬಂತೊಂದು ಕೂಸು..

‘ಅಂತ್ಯದಲ್ಲೊಂದು ಆರಂಭ ಸೃಷ್ಟಿಸಿ’ ಹೀಗೊಂದು ಅಡಿ ಬರಹ ಇಟ್ಟು ತನ್ನ ಮುಟ್ಟಿನ ರಕ್ತದಲ್ಲಿ ಭ್ರೂಣದ ಕಲಾಕೃತಿ ರಚಿಸಿದ್ದಾರೆ ರೊಮಾನಿಯಾ ಕಲಾವಿದೆ ಟೇಮ್ ಪಾಲ್. ಇವರು ಈ ಕಲಾಕೃತಿ ರಚಿಸಿ ವರ್ಷವಾದರು ಈ ಚಿತ್ರ ವೈರಲ್‌ ಆಗಿ ಟ್ವೀಟರ್‌ ಹಾಗೂ ಬ್ಲಾಗ್‌ಗಳಲ್ಲಿ ಇನ್ನೂ ಹರಿದಾಡುತ್ತಿದೆ.

ಒಂಬತ್ತು ತಿಂಗಳು ಗರ್ಭದೊಳಗೆ ಕೂಸು ಚಿಗುರೊಡೆದು ಬೆಳೆಯುವ ಪರಿಯನ್ನು ಕಲಾಕೃತಿಯೊಳಗೆ ಕಟ್ಟಿಡುವ ಯತ್ನ ಮಾಡಿದ್ದಾರೆ. ಒಂಬತ್ತು ತಿಂಗಳ ಮುಟ್ಟಿನ ರಕ್ತದಿಂದ ಒಂಬತ್ತು ಹಂತದಲ್ಲಿ ಕಲಾಕೃತಿ ರಚಿಸಿದ್ದಾರೆ. ಒಟ್ಟಾರೆ ಈ ಒಂಬತ್ತು ತುಂಡಿನ ಕಲಾಕೃತಿ ಸೇರಿಸಿದರೆ ಗರ್ಭದೊಳಗೆ ನಸುನಗುತ್ತಾ ಮಲಗಿರುವ ಭ್ರೂಣ ಕಾಣುತ್ತದೆ.

ADVERTISEMENT

ಗ್ರಾಫಿಕ್‌ ವಿನ್ಯಾಸಕಿ ಹಾಗೂ ಸಂಗೀತ ಸಂಯೋಜಕಿಯಾದ ಟೇಮ್ ‘The Diary of My Period' ಎಂಬ ಒಂಬತ್ತು ಸರಣಿ ಕಲಾ ಪ್ರಯೋಗ ಮಾಡಿದ್ದಾರೆ.

ತಮ್ಮ ಕಲಾಕೃತಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಟೇಮ್‌ ‘ಒಂದು ಹನಿ ಪ್ರಯೋಗದಿಂದ ನೋವಿನ ಸೌಂದರ್ಯ ಅರ್ಥಮಾಡಿಕೊಂಡೆ. ಮುಟ್ಟಿನ ಮೌಲ್ಯ ದೊಡ್ಡದು ಎನಿಸಿತು. ರಕ್ತದೊಂದಿಗೆ ಅಂಡಾಣು ಹೊರಹಾಕುವಾಗ ಅಲ್ಲೊಂದು ಜೈವಿಕ ಕ್ರಿಯೆ ಅಂತ್ಯವಾಗಿತ್ತು. ಈ ಅಂತ್ಯದಿಂದ ಕಲಾಕೃತಿಯೊಂದಕ್ಕೆ ಜನ್ಮ ನೀಡಿದೆ. ಅಂತ್ಯವೊಂದರಿಂದ ಆರಂಭ ಸೃಷ್ಟಿಸಿದೆ’ ಎಂದು ಕಲಾಕೃತಿ ಸೃಷ್ಟಿಸಿದ ತಮ್ಮ ತಾಯ್ತನದ ಅನುಭವ ಹಂಚಿಕೊಂಡಿದ್ದಾರೆ.

ತಮ್ಮ ಪ್ರಯೋಗದ ಅನುಭವ ಹಂಚಿಕೊಂಡ ಟೇಮ್ ‘ಈ ಪ್ರಯೋಗ ಮಾಡಬೇಕು ಎಂದುಕೊಂಡಾಗ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡಿತು.
ಮೊದಲು ನನ್ನದೇ ಒಂದು ಭಾವಚಿತ್ರ ಬರೆದು ಪ್ರಯೋಗ ಮಾಡಿದೆ. ಇದಕ್ಕೆ ಟ್ಯಾಂಪೂನ್ಸ್‌ ತುಂಡುಗಳನ್ನು ಬ್ರಷ್‌ನಂತೆ ಬಳಸಿಕೊಂಡೆ. ನನ್ನ ಮುಟ್ಟಿನ ಒಂದೊಂದು ರಕ್ತದ ಹನಿಯೂ ಒಂದೊಂದು ಕಥೆ ಹೇಳ ತೊಡಗಿದವು’ ಎನ್ನುತ್ತಾರೆ.

ಈ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಹಲವರು ‘ಇದು ಅಸಹ್ಯಕರ, ಹುಚ್ಚುತನ, ವಿಲಕ್ಷಣ’ ಎಂದಿದ್ದಾರೆ. ಇಂಥ ಕಮೆಂಟ್‌ಗಳಿಗೆ ಪ್ರತಿಕ್ರಿಯಿಸಿರುವ ಟೇಮ್‌ ‘ಕ್ಯಾನ್ವಾಸಿನ ಮೇಲೆ ರಕ್ತ ಹರವಿಕೊಂಡಂತೆ ಇದಕ್ಕೊಂದು ಭಾವ ತುಂಬಿಕೊಂಡಿತು. ಆಕಾರ ಸಿಕ್ಕಿತ್ತು. ಇದು ಅಸಲಿ ಕಲಾಕೃತಿ’ ಎಂದು ಹೆಮ್ಮೆಯಿಂದ ಬೀಗಿದ್ದಾರೆ.

ಈ ಕಲಾಕೃತಿಯ ಪ್ರದರ್ಶನವನ್ನು ವಿಶ್ವದಾದ್ಯಂತ ಆಯೋಜಿಸುವ ಆಸೆ ಇಟ್ಟುಕೊಂಡ ಟೇಮ್‌ ‘ಈ ಕಲಾಕೃತಿಗೊಂದು ಗುರಿ ಇದೆ. ಈ ಚಿತ್ರಕ್ಕೆ ಕಣ್ಣಿಲ್ಲ... ಕಿವಿಯಿಲ್ಲ ಮತ್ತು ಇದು ಮಾತನಾಡುವುದಿಲ್ಲ ಆದರೆ ಇದರಲ್ಲೊಂದು ಸಂವಹನ ಇದೆ. ಧರ್ಮದ ದ್ವೇಷರಾಗವಿಲ್ಲದೆ, ವರ್ಣಬೇಧವಿಲ್ಲದೆ ಇದು ಹಲವಾರು ವಿಚಾರಗಳನ್ನು ಸ್ವತಂತ್ರವಾಗಿ ಮಾತನಾಡುತ್ತದೆ. ಒಂದು ಅಂಡಾಣು ಸತ್ತಾಗ ಒಂದು ಕಲಾಕೃತಿ ಮಾತನಾಡುತ್ತದೆ’ ಎಂದು ತಮ್ಮ ಕಲಾಕೃತಿಯ ಉದ್ದೇಶವನ್ನು ವಿವರಿಸುತ್ತಾರೆ.

ಟೇಮ್ ಪಾಲ್ ಫೇಸ್‌ಬುಕ್‌ ಕೊಂಡಿ– https://bit.ly/2Iy0ZXa

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.