ADVERTISEMENT

ಅಪ್ಪನ ನೆನಪಿನಲ್ಲಿ…

ಪ್ರೇರಣೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಅಪ್ಪನ ನೆನಪಿನಲ್ಲಿ…
ಅಪ್ಪನ ನೆನಪಿನಲ್ಲಿ…   
-ಎನ್ವಿ
 
*
ತಂದೆ ಚಿತ್ರರಂಗದಲ್ಲಿಯೇ ಸಿನಿಮಾಟೊಗ್ರಫರ್ ಆಗಿ ಹೆಸರು ಮಾಡಿದ್ದವರು. ವೃತ್ತಿಬದುಕಿನ ಮೊದಲ ಹಂತದಲ್ಲಿದ್ದ ಎಷ್ಟೋ ನಿರ್ದೇಶಕರಿಗೆ ಅವರು ದೃಶ್ಯ ಸಂಯೋಜನೆಯ ಪಾಠ ಹೇಳಿದ್ದೂ ಉಂಟು. ಗೌರಿಶಂಕರ್ ಅಂದರೆ ಈಗಲೂ ಚಿತ್ರರಂಗದ ಅನೇಕ ನಿರ್ದೇಶಕರಿಗೆ ಪುಳಕ. ಅವರು ತೀರಿಕೊಳ್ಳುವ ಹೊತ್ತಿಗೆ ಅವರ ಮಗಳು ರಕ್ಷಿತಾ ನಟಿಯಾಗಿ ನೆಲೆ ಕಂಡುಕೊಳ್ಳುತ್ತಿದ್ದರು. 
 
ರಕ್ಷಿತಾ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಗೌರಿಶಂಕರ್ ಶಿಫಾರಸೇನೂ ಹೆಚ್ಚು ಕೆಲಸ ಮಾಡಿರಲಿಲ್ಲ. ‘ಅಪ್ಪು’ ಚಿತ್ರಕ್ಕೆ ನಾಯಕಿ ಎಂದು ರಾಜಕುಮಾರ್ ಕುಟುಂಬದವರೆಲ್ಲ ಆಯ್ಕೆ ಮಾಡಿದ ಮೇಲೆ, ಅದನ್ನು ಅವರು ಚಿಮ್ಮುಹಲಗೆಯಾಗಿಸಿಕೊಂಡಿದ್ದರು. 
 
ಗೌರಿಶಂಕರ್ ಬದುಕಿನ ಏರಿಳಿತಗಳನ್ನು ಹತ್ತಿರದಿಂದ ಕಂಡಿದ್ದರು ಮಗಳು ರಕ್ಷಿತಾ. ಅಪ್ಪನ ಖಿನ್ನತೆ, ಸಂತೋಷ, ಹೊಯ್ದಾಟ ಎಲ್ಲಕ್ಕೂ ಸಾಕ್ಷಿಯಾಗಿದ್ದ ಅವರಿಗೆ ತಂದೆಯ ಮನೋನಂದನವೆಂದರೆ ಬೆರಗು. ತಂದೆ ಮೃತಪಟ್ಟು ಮೂರು ದಿನಗಳಾಗಿತ್ತಷ್ಟೆ. ಚಿತ್ರ ನಿರ್ಮಾಪಕರೊಬ್ಬರು ಚಿತ್ರೀಕರಣಕ್ಕೆ ಬರಲೇಬೇಕು ಎಂದು ತಾಕೀತು ಮಾಡಿದರು. ಶಾಕ್‌ನಿಂದ ಹೊರಬರಲು ಒಂದಿಷ್ಟು ಕಾಲಾವಕಾಶ ಕೊಡಿ ಎಂದು ರಕ್ಷಿತಾ ಅಂಗಲಾಚಿದರೂ ಆ ಆಸಾಮಿ ಕರಗಲಿಲ್ಲ. 
 
ಸಿನಿಮಾ ರಸಿಕರ ಪಾಲಿಗೆ ‘ಬಬ್ಲಿ ಗರ್ಲ್’ ತರಹ ಕಾಣುತ್ತಿದ್ದ ರಕ್ಷಿತಾ, ಆ ಸಂದರ್ಭದಲ್ಲಿ ಅನುಭವಿಸಿದ ಮಾನಸಿಕ ತೊಳಲಾಟ ಅವರಿಗಷ್ಟೇ ಗೊತ್ತಿತ್ತು. ಸಂಭಾವನೆಯ ಒಂದಿಷ್ಟು ಮೊತ್ತವನ್ನು ಮುಂಗಡವಾಗಿ ಪಡೆದಿದ್ದರಿಂದ ಕೆಲಸ ಮಾಡದೇ ವಿಧಿ ಇರಲಿಲ್ಲ. ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋದರು. ಮೇಕಪ್ ಮನ್ ಟಚಪ್ ಮಾಡಿ, ಕೆನ್ನೆಗಳನ್ನೇನೋ ಹೊಳೆಯುವಂತೆ ಮಾಡಿದರು. ಆದರೆ, ಮನಸ್ಸನ್ನು ಹೊಳೆಯುವಂತೆ ಮಾಡಲು ಅವರಿಂದ ಆಗಲಿಲ್ಲ. ಸ್ಕ್ರಿಪ್ಟ್‌ನಲ್ಲಿದ್ದ ಅಕ್ಷರಗಳ ಮೇಲೆ ಕಣ್ಣಾಡಿಸುವಾಗ, ಎದುರಲ್ಲಿ ನಿಲ್ಲುವ ನಟನ ಸಂಭಾಷಣೆಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದು ಅರಿಯುವಾಗ, ಹಾಡೊಂದಕ್ಕೆ ಬಳುಕಬೇಕಾದಾಗ ರಕ್ಷಿತಾ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲೇಬೇಕಾಯಿತು. ಕೆಲವೇ ನಿಮಿಷ ಏಕಾಂತ ಸಿಕ್ಕರೂ ಅಪ್ಪನ ಚಿತ್ರವೇ ಕಣ್ಮುಂದೆ ಬರುತ್ತಿತ್ತು. ಅದನ್ನು ಮೀರಿ ಒಪ್ಪಿಕೊಂಡ ಕೆಲಸ ಮಾಡಿಕೊಟ್ಟು ರಕ್ಷಿತಾ ಮನೆಗೆ ಬರುತ್ತಿದ್ದರು. ಬಂದಮೇಲೆ ಅದೇ ಏಕಾಂತ; ಅತ್ತು ಮನಸ್ಸು ಹಗುರಾಗುವಂಥ ಏಕಾಂತ. ಆಗ ಮನಸ್ಸಿನ ಮಾತುಗಳ ಸ್ವಗತ. ಚಿತ್ರರಂಗದವರ ಗೋಸುಂಬೆತನದ ಕುರಿತು ಹೇವರಿಕೆ. ಹಣವೇ ಮುಂದಾದಾಗ ಭಾವಸೂಕ್ಷ್ಮಗಳು ಇಲ್ಲವಾಗುತ್ತವಲ್ಲ ಎಂಬ ಜ್ಞಾನೋದಯ. 
 
ರಕ್ಷಿತಾ ಮನಸ್ಸನ್ನು ಗಟ್ಟಿಗೊಳಿಸಿದ ದಿನಗಳವು. ಅಪ್ಪ ಹೇಳುತ್ತಿದ್ದ ಧೈರ್ಯದ ಮಾತುಗಳ ನೆನಕೆಯೇ ಆಗ ಕೈಹಿಡಿದದ್ದು. ಅದಾಗಿ ಕೆಲವು ದಿನಗಳಾಗಿತ್ತಷ್ಟೆ. ಚಾಲ್ತಿಯಲ್ಲಿದ್ದ ಇನ್ನೊಬ್ಬ ನಟಿಯ ಕೆಣಕು ಮಾತುಗಳು ಚುಚ್ಚತೊಡಗಿದವು. ಅದನ್ನೂ ಮೀರಿ ಅವರು ಅಭಿನಯ ಮುಂದುವರಿಸಿದ್ದೂ ಮನೋಬಲದಿಂದಲೇ. 
‘ಬಬ್ಲಿ ಗರ್ಲ್’ ರಕ್ಷಿತಾ ಒರಟೊರಟಾಗಿದ್ದ ಪ್ರೇಮ್ ಅವರನ್ನು ಇಷ್ಟಪಟ್ಟಿದ್ದು ಇನ್ನೊಂದು ಅಚ್ಚರಿ. ಆ ಜನಪ್ರಿಯ ನಿರ್ದೇಶಕನಲ್ಲಿ ತಂದೆಯ ಕೆಲವು ಗುಣಗಳನ್ನೇ ಕಂಡ ನಾಯಕಿ, ಅವರನ್ನೇ ಬಾಳಸಂಗಾತಿಯಾಗಿ ಒಪ್ಪಿಕೊಂಡರು. ದಾಂಪತ್ಯ ಬದುಕಿನಲ್ಲಿ ಅಪಸ್ವರ ಎದ್ದಿದೆ ಎಂಬ ಸುದ್ದಿ ಗಾಳಿಯಲ್ಲಿ ಬೆರೆತಾಗ ಅವರು ನಟಿಯಾಗಿ ಉಳಿದಿರಲಿಲ್ಲ. ಆ ಸುದ್ದಿ ದಟ್ಟವಾಗಲು ಬಿಡದಂತೆ ಎಚ್ಚರ ವಹಿಸಿದರು. 
 
ಈಗ ರಿಯಾಲಿಟಿ ಶೋ ಒಂದರ ತೀರ್ಪುಗಾರರ ಕುರ್ಚಿ ಮೇಲೆ ಕುಳಿತು, ಅಗಲವಾದ ಮುಖದಲ್ಲಿ ನಗು ತುಳುಕಿಸುವ ರಕ್ಷಿತಾಗೆ ಬಾಲ್ಯದಲ್ಲಿ ತಾನು ಕಂಡ ಅಪ್ಪನೇ ಪ್ರೇರಣೆ. ಒತ್ತಡ, ಖಿನ್ನತೆ ಮೀರಿ ವೃತ್ತಿಬದುಕಿನಲ್ಲಿ ಒಂದು ದಶಕ ಛಾಪು ಮೂಡಿಸಿದ ಅವರ ಬದುಕಿನಲ್ಲಿ ಕೆಲವು ಪ್ರೇರಕ ಸಂಗತಿಗಳಿವೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.