ADVERTISEMENT

ಏರ್‌ ಇಂಡಿಯಾ ಮಹಾರಾಜ!

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ಏರ್‌ ಇಂಡಿಯಾ ಮಹಾರಾಜ!
ಏರ್‌ ಇಂಡಿಯಾ ಮಹಾರಾಜ!   

ನಮ್ಮ ‘ಏರ್‌ ಇಂಡಿಯಾ ಮಹಾರಾಜ’ ಯಾರಿಗೆ ಗೊತ್ತಿಲ್ಲ? ಸರ್ಕಾರಿ ಸ್ವಾಮ್ಯದ ಈ ವಿಮಾನಯಾನ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿದ್ದೇ ‘ಮಹಾರಾಜ’!  ಅಂದಹಾಗೆ, ಈ ಮಹಾರಾಜನಿಗೆ 1946ರಲ್ಲಿ ಜನ್ಮ ನೀಡಿದವರು ಏರ್‌ ಇಂಡಿಯಾದ ವಾಣಿಜ್ಯ ವಿಭಾಗದ ನಿರ್ದೇಶಕರಾಗಿದ್ದ ಬಾಬಿ ಕೂಕಾ ಮತ್ತು ಜೆ.ವಾಲ್ಟರ್‌ ಥಾಮ್ಸನ್‌ ಲಿಮಿಟೆಡ್‌ನಲ್ಲಿ ಕಲಾವಿದರಾಗಿದ್ದ ಉಮೇಶ್‌ ರಾವ್‌. ತಲೆ ಮೇಲೊಂದು ಪೇಟಾ, ಗಿಣಿ ಮೂಗು, ಅದರ ಅಡಿಯಲ್ಲಿನ ಕಲ್ಲಿಮೀಸೆಯಿಂದ ಈ ಮಹಾರಾಜ ತಟ್ಟಂಥ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ. ಜಾಹೀರಾತುಗಳಲ್ಲಿ ಈಗಲೂ ಬದುಕಿದ್ದರೆ ಆತನಿಗೆ 71 ವರ್ಷ ಆಗಿರುತ್ತಿತ್ತು!

ಏರ್‌ ಇಂಡಿಯಾ ಪರಿಚಯಿಸುತ್ತಿದ್ದ ವಿಮಾನಗಳಿಗೆ ತಕ್ಕಂತೆ ಈ ಮಹಾರಾಜ ತನ್ನ ಪಾತ್ರವನ್ನೂ ಬದಲಿಸುತ್ತಿದ್ದ. ಉದಾಹರಣೆಗೆ, ಪ್ಯಾರಿಸ್‌ಗೆ ವಿಮಾನ ಹಾರಾಟ ಆರಂಭಿಸಿದಾಗ ಏರ್‌ ಇಂಡಿಯಾ ಕೊಟ್ಟ ಜಾಹೀರಾತಿನಲ್ಲಿ ನಮ್ಮ ಮಹಾರಾಜ, ಪ್ಯಾರಿಸ್‌ನ ‘ಲವರ್‌ ಬಾಯ್‌’ ಆಗಿದ್ದ! ಟೋಕಿಯೊದತ್ತ ವಿಮಾನ ಯಾತ್ರೆ ಆರಂಭಿಸಿದ ಸಂದೇಶ ಸಾರುವಾಗ ಆತ ಸುಮೊ ಪೈಲ್ವಾನನಾಗಿ ಬದಲಾಗಿದ್ದ. ಮತ್ತೊಂದು ಜಾಹೀರಾತಿನಲ್ಲಿ ಹೊರಸಿನ ಮೇಲೆ ಕುಳಿತ ಮಹಾರಾಜ, ಪಕ್ಕದಲ್ಲಿದ್ದ ವ್ಯಕ್ತಿಗೆ ಹೇಳುತ್ತಿದ್ದ: ‘ಅರೇ ಅಣ್ಣಾ, ನಾನು ಹೇಳುತ್ತಿರುವುದು ಯುನೈಟೆಡ್‌ ಸ್ಟೇಟ್ಸ್‌ (ಅಮೆರಿಕ) ಕುರಿತು. ಉತ್ತರ, ಮಧ್ಯ, ಆಂಧ್ರ ಪ್ರದೇಶಗಳಿಗೆ (ಇವೂ ದೇಶದ ಯುನೈಟೆಡ್‌ ಸ್ಟೇಟ್ಸ್‌ ಅಲ್ಲವೆ?!) ನೀನು ರೈಲನ್ನು ಬಳಸಬಹುದು’!

ಈ ಜಾಹೀರಾತಿಗೊಂದು ಅಡಿಬರಹ: ‘ನ್ಯೂಯಾರ್ಕ್‌ಗೆ ನಾನೀಗ ವಾರದಲ್ಲಿ ಏಳು ದಿನ ಹಾರುತ್ತೇನೆ’ ಎಂದು. ಮತ್ತೊಂದು ಪ್ರಕಟಣೆಯಲ್ಲಿ ಅದೇ ನ್ಯೂಯಾರ್ಕ್‌ ನಗರದಲ್ಲಿ ಮಹಾರಾಜ ಮುಂದೆ, ಮುಂದೆ ಹೊರಟಿದ್ದರೆ, ಸರ್ದಾರ್‌ಜಿ ಸೇರಿದಂತೆ ಭಾರತದ ವಿವಿಧ ಸಮುದಾಯದ ಜನ ಹಿಂದೆ, ಹಿಂದೆ ಬರುತ್ತಿದ್ದರು. ಏರ್‌ ಇಂಡಿಯಾ ವಿಮಾನ ನ್ಯೂಯಾರ್ಕ್‌ ತಲುಪಿದ ಸಂಕೇತ ಅದಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.