ADVERTISEMENT

ಏಳು ದಶಕಗಳ ಭಾರತೀಯ ಫ್ಯಾಷನ್

ಹರವು ಸ್ಫೂರ್ತಿ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ಮಹಾರಾಣಿ ಗಾಯತ್ರಿ ದೇವಿ
ಮಹಾರಾಣಿ ಗಾಯತ್ರಿ ದೇವಿ   

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ತಿನಿಸು, ಸಂಸ್ಕೃತಿ, ನೃತ್ಯ ಮತ್ತು ಜನಪದ ಕಲೆಗೆ ವಿಶೇಷ ಸ್ಥಾನವಿದೆ. ಹಾಗೇ ಇಲ್ಲಿನ ಫ್ಯಾಷನ್ ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡ್ ಸೃಷ್ಟಿಸಿದೆ.

1940: ಜೈಪುರದ ಮಹಾರಾಣಿ ಗಾಯತ್ರಿ ದೇವಿ 40 ದಶಕದಲ್ಲಿ ವಿಲಾಸಿ ಬದುಕು ಕಂಡವರು. ದುಬಾರಿ ಸೀರೆ ಮತ್ತು ಒಡವೆಗಳಿಂದ ಹೆಸರಾದವರು ಅವರು. ಆಗಿನ ಕಾಲದಲ್ಲೇ ಮನೆ ಒಳಗೂ ಚಪ್ಪಲಿ ಧರಿಸುತ್ತಿದ್ದವರು. ಇವರ ಗ್ಲಾಮರ್ ವಿಶ್ವದೆಲ್ಲಡೆ ಜನಪ್ರಿಯವಾಗಿತ್ತು. ಯಾವುದೇ ರಾಜಕೂಟಗಳು ನಡೆದರೆ ಇವರಿಗೆ ವಿಶೇಷ ಆಹ್ವಾನವಿರುತ್ತಿತ್ತು. ಕುದುರೆ ಓಡಿಸಲು ಅವರು ಧರಿಸುತ್ತಿದ್ದ ಜೋಧ್‌ಪುರ್ಸ್ (ಒಂದು ಬಗೆಯ ಪ್ಯಾಂಟ್) ಹಾಗೂ ಕಸೂತಿ ಮಾಡಿದ ಶಿಫಾನ್ ಸೀರೆ ಹೆಚ್ಚು ಜನಪ್ರಿಯವಾಗಿತ್ತು. ಸಿನಿಮಾಗಳಲ್ಲಿ ರಾಣಿಯರನ್ನು ಅಲಂಕರಿಸಲು ಗಾಯತ್ರಿದೇವಿಯವರನ್ನೇ ಅನುಕರಿಸುತ್ತಿದ್ದರು.

*

ADVERTISEMENT

1950: ಇಂಗ್ಲೆಂಡ್‌ನ ಪ್ರಭಾವ ಹೆಚ್ಚಿದ 50ರ ದಶಕದಲ್ಲಿ ಅಲ್ಲಿನವರ ಹಾಗೇ ಸರಳವಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಬಾಲಿವುಡ್ ನಟರಾದ ದಿಲೀಪ್ ಕುಮಾರ್, ದೇವ್ ಆನಂದ್, ನರ್ಗಿಸ್‌, ಮಧುಬಾಲಾ ಅವರು ಕ್ಲಾಸಿಕ್ ಉದಾಹರಣೆ. ಅಂದಿನ ಕಾಲಕ್ಕೆ ತುಂಬು ತೋಳಿನ ಉಣ್ಣೆ ಸ್ವೆಟರ್‌, ಶರ್ಟ್‌, ಏಕ ಬಣ್ಣದ ಪ್ಯಾಂಟ್ ಪ್ರಚಲಿತದಲ್ಲಿ ಇದ್ದವೂ. ಮಹಿಳೆಯರು ಫ್ರೆಂಚ್‌ ಕಟ್‌ (ಹಣೆಮೇಲೆ ಬೀಳುವ ಕೂದಲು) ಮಾಡಿಸಿಕೊಳ್ಳುವುದು ಆರಂಭವಾಯಿತು.

*

1960: ಬಾಲಿವುಡ್‌ ಬೆಡಗಿಯರು ಈಜುಡುಗೆ ತೊಟ್ಟು ಬಿಂದಾಸ್‌ ಆಗಿ ಸಂಭ್ರಮಿಸಿದ ಕಾಲವದು. ಬಾಲಿವುಡ್‌ನಲ್ಲಿ ಮೊದಲ ಬಾರಿಗೆ ಈಜುಡುಗೆ ತೊಟ್ಟು ಕಡಲತಡಿಯಲ್ಲಿ ಅಡ್ಡಾಡಿದವರು ಶರ್ಮಿಳಾ ಟ್ಯಾಗೋರ್. ಅಲ್ಲಿಂದ ಸಾರ್ವಜನಿಕವಾಗಿ ಅಲ್ಲದಿದ್ದರೂ ಖಾಸಗಿ ಈಜುಕೊಳಗಳಲ್ಲಿ ಈಜುಡುಗೆ ತೊಟ್ಟ ಮಹಿಳಾಮಣಿಯರು ಪ್ರತ್ಯಕ್ಷವಾಗ ತೊಡಗಿದರು. ಇದೇ ದಶಕದಲ್ಲಿ ಕೂದಲನ್ನು ಎತ್ತರಿಸಿ ಬನ್‌ ಕಟ್ಟಿಕೊಳ್ಳುವ ಫ್ಯಾಷನ್ ಕೂಡ ಆರಂಭವಾಯಿತು. ಆಶಾ ಪಾರೇಖ್ ಅವರು ಮಾಡಿಕೊಳ್ಳುತ್ತಿದ್ದ ಕೇಶವಿನ್ಯಾಸ, ಹೈ ಬನ್‌ ಸಾರ್ವಕಾಲಿಕ ಫ್ಯಾಷನ್‌ ಆಯ್ತು.

*

1970: ಇದು ಬಾಲಿವುಡ್‌ನ ಬಣ್ಣದ ಲೋಕ ಆರಂಭವಾದ ದಿನಗಳು. ಬೆಲ್‌ ಬಾಟಮ್‌ ಪ್ಯಾಂಟ್‌, ಸೊಂಟ ಕಾಣಿಸುವಂತೆ ತೊಡ್ಡುತ್ತಿದ್ದ ಕ್ರಾಪ್‌ ಶರ್ಟ್‌ಗಳು ಪ್ರಚಲಿತಕ್ಕೆ ಬಂದವು. ಬಣ್ಣದ ಸಿನಿಮಾಗಳ ಜತೆ ಸಿನಿ ಮಂದಿಯ ಬಟ್ಟೆಗಳೂ ರಂಗಿನಿಂದ ತುಂಬಿಕೊಂಡವು. ಉದ್ದ ಕಾಲರ್‌ನ ಶರ್ಟ್‌, ಹೂವಿನ ದೊಡ್ಡ ಪ್ರಿಂಟ್‌ ಇರುವ ಶರ್ಟ್‌ಗಳು ದೇಶದೆಲ್ಲೆಡೆ ಹೆಣ್ನು ಮಕ್ಕಳನ್ನು ಆಕರ್ಷಿಸಿದ ದಿನಗಳವು. ತುಂಡು ಸೆರಗು ಬಿಟ್ಟು ತೋಳು ರಹಿತ ರವಿಕೆ ತೊಟ್ಟು, ಮಿಂಚುವ ದೊಡ್ಡ ಕೆಂಪು ಬಿಂದಿ ಇಟ್ಟುಕೊಂಡು ನಲಿಯುವ ಮಹಿಳೆಯರು ಹೆಚ್ಚಾದರು. 70ರ ದಶಕ ಇಂತಹ ರಂಗಿನಿಂದ ತುಂಬಿಹೋಯ್ತು. ಅಮಿತಾಭ್‌ ಬಚ್ಚನ್ ಹಾಗೂ ‘ಸತ್ಯಂ ಶಿವಂ ಸುಂದರಂ..’ ಎಂದು ಹಾಡುತ್ತಾ ಬಳುಕಿದ ಜೀನತ್ ಅಮಾನ್ ಅಂದಿಗೆ ಟ್ರೆಂಡ್‌ ಸೃಷ್ಟಿಸಿದ್ದರು. ಈ ಬಣ್ಣಮಯ ಅಮಲಿನಲ್ಲಿ ಸಾಕಷ್ಟು ರೊಮ್ಯಾಂಟಿಕ್‌ ಸಿನಿಮಾಗಳೂ ಬಂದವು. ‘ಬಾಬಿ’ ಸಿನಿಮಾವಂತೂ ಎಲ್ಲಾ ಯುವ ಪ್ರೇಮಿಗಳ ಆರಾಧ್ಯದೈವದಂತಾಯ್ತು.

*

1980: ಸಿನಿಮಾದೊಂದಿಗೆ ಟೀವಿ ಕಾಲವೂ ಆರಂಭವಾಯ್ತು. ಜನ ಡಿಸ್ಕೊ, ಕ್ರಿಕೆಟ್‌ ಹುಚ್ಚು ಹತ್ತಿಸಿಕೊಂಡಿದ್ದರು. ಸಿನಿಮಾ ಮಂದಿಯಂತೂ ಒಂದು ರೀತಿ ಫ್ಯಾಷನ್ ಹುಚ್ಚುತನದೊಂದಿಗೆ ಬದುಕಿಬಿಟ್ಟರು. ಸಿನಿಮಾ ಮಂದಿಯಲ್ಲದೇ ಶ್ರೀಮಂತ ಕುಟುಂಬಗಳೂ ಹೈ ಎಂಡ್‌ ಫ್ಯಾಷನ್‌ ಜೀವನ ತಮ್ಮದಾಗಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಬ್ರ್ಯಾಂಡ್‌ ಬಟ್ಟೆಗಳು ದೇಶದ ಮಾರುಕಟ್ಟೆಯಲ್ಲಿ ಸಿಗಲಾರಂಭಿಸಿದವು. ಸಾಮಾನ್ಯ ಜನರು ಕೂಡ ವಿಚಿತ್ರವಾಗಿ ಅಲಂಕಾರ ಮಾಡಿಕೊಳ್ಳುವುದನ್ನೇ ಫ್ಯಾಷನ್‌ ಎಂದು ನಂಬುತ್ತಿದ್ದರು.

*

1990: ಹಿಂದಿನ ದಶಕಗಳಲ್ಲಿ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತೀಯ ಯುವತಿಯರು ಭಾಗವಹಿಸಿದ್ದರೂ 90 ದಶಕದ ಸೌಂದರ್ಯ ಸ್ಪರ್ಧೆ ದೇಶದೆಲ್ಲೆಡೆ ಚರ್ಚೆಗೆ ವಸ್ತುವಾಯ್ತು. ಸುಶ್ಮಿತಾ ಸೇನ್, ಐಶ್ವರ್ಯಾ ರೈ ಭಾರತದ ಸೌಂದರ್ಯದೇವತೆಗಳಾದರು. ಹಳ್ಳಿಹಳ್ಳಿಯಲ್ಲೂ ಮಾಡೆಲಿಂಗ್‌ ಎಂದರೆ ಏನು ಎಂಬುದನ್ನು ಚರ್ಚಿಸಲು ಶುರು ಮಾಡಿದರು. ಸಿಂಗಲ್‌ ಪೀಸ್‌ ಉಡುಗೆ ತೊಡುವುದು ಪಟ್ಟಣದ ಯುವತಿಯರಲ್ಲಿ ಸಾಮಾನ್ಯ ಸಂಗತಿ ಆಯ್ತು. ಯುವ ಕಂಗಳು ನಾನೂ ‘ಮಿಸ್‌ ವರ್ಲ್ಡ್‌, ಮಿಸ್‌ ಯುನಿವರ್ಸ್‌’ ಆಗಬೇಕು ಎಂದು ಕನಸು ಕಾಣಲು ಶುರುಮಾಡಿದವು. ವಸ್ತ್ರ ವಿನ್ಯಾಸಕರು ಪ್ರಚಲಿತಕ್ಕೆ ಬಂದರು. ಇದೇ ಸಮಯದಲ್ಲಿ ಬಂದ ‘ರಂಗೀಲಾ’ ಸಿನಿಮಾ ಭಾರತೀಯ ಫ್ಯಾಷನ್ ಅಭಿರುಚಿಯನ್ನೇ ಬದಲಾಯಿಸಿತು. ಮನಿಶ್ ಮಲ್ಹೋತ್ರಾದಂಥ ವಿನ್ಯಾಸಗಾರರು ಫ್ಯಾಷನ್ ಎಂದರೆ ಸಾಮಾನ್ಯ ಜನರಿಗೂ ತಲುಪಬೇಕು ಎನ್ನುವ ಪರಿಕಲ್ಪನೆ ನೀಡಿದರು. ‘ಫೆಮಿನಾ’ದಂತಹ ಮಾಸಪತ್ರಿಕೆಗಳು ಭಾರತೀಯ ಫ್ಯಾಷನ್‌ಗೆ ಮಿಂಚಿನ ಸ್ಪರ್ಶ ನೀಡಿದವು.

*

2000: ಫ್ಯಾಷನ್‌ ಎಂದರೆ ಸಿನಿಲೋಕವಷ್ಟೆ ಅಲ್ಲ ಎನ್ನುವ ಮನಸ್ಥಿತಿ ಭಾರತೀಯರಲ್ಲಿ ಬೆಳೆಯಿತು. 20ದಶಕದ ಆರಂಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದವರು ಸಾನಿಯಾ ಮಿರ್ಜಾ. ಕ್ರೀಡಾ ಉಡುಗೆಯಲ್ಲೂ ಗ್ಲಾಮರ್ ಆಗಿ ಕಂಗೊಳಿಸಿದವರು ಈಕೆ. ಇವರೊಂದಿಗೆ ಅಮೃತ್‌ರಾಜ್ ಸಹೋದರರು, ಲಿಯಾಂಡರ್ ಫೇಸ್, ಮಹೇಶ್ ಭೂಪತಿ ತಮ್ಮ ಸ್ಪೋರ್ಟ್‌ ಲುಕ್‌ನಿಂದ ಹಾಟ್‌ ಐಕಾನ್‌ಗಳಾದರು. ಹೀಲ್ಡ್‌ ಚಪ್ಪಲಿಗಳೊಂದಿಗೆ, ಸ್ನೀಕರ್‌ ಶೂಗಳು, ಕಾಟನ್‌ ಸ್ಕರ್ಟ್‌ಗಳು ಜನಪ್ರಿಯಗೊಂಡವು.

*

2010: 2010ರಿಂದ ಇಂದಿನವರೆಗೂ ಫ್ಯಾಷನ್‌ ಲೋಕದಲ್ಲಿ ಹಲವು ಬಾರಿ ಕಾಲಚಕ್ರ ಉರುಳಿದೆ. ಗಾಯತ್ರಿ ದೇವಿಯವರ ಶಿಫಾನ್ ಸೀರೆಯಿಂದ ಹಿಡಿದು ಗಡಸು ವಿನ್ಯಾಸದ ಸೇನಾ ವಿನ್ಯಾಸದ ಬಟ್ಟೆಯೂ ಯುವಕರ ಫ್ಯಾಷನ್. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ಮಾಡುತ್ತಿರುವ ಫ್ಯಾಷನ್‌ ಅನುಕರಣಿಯ. ಕಾನ್, ಆಸ್ಕರ್‌ನಂಥ ವೇದಿಕೆಯಲ್ಲಿ ವಿಶೇಷ ಗಮನ ಸೆಳೆಯುತ್ತಾರೆ ನಮ್ಮವರು. ಸೋನಂ ಕಪೂರ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ, ರಣ್‌ವೀರ್ ಸಿಂಗ್‌ ಅವರು ಫ್ಯಾಷನ್‌ ಟ್ರೆಂಡ್‌ ಸೃಷ್ಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.