ADVERTISEMENT

ಐಯ್ಯರ್‌ ದಿ ಗ್ರೇಟ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:30 IST
Last Updated 21 ಜೂನ್ 2017, 19:30 IST
ಐಯ್ಯರ್‌ ದಿ ಗ್ರೇಟ್‌
ಐಯ್ಯರ್‌ ದಿ ಗ್ರೇಟ್‌   

ಇದೊಂದು ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ. ಸಾಮಾನ್ಯ ಮನುಷ್ಯನೊಬ್ಬನಿಗೆ ಭವಿಷ್ಯದಲ್ಲಿ ಘಟಿಸುವ ಸಂಗತಿಗಳು ತಿಳಿಯುವಂತಾದರೆ ಏನಾಗಬಹುದು ಎಂಬುದೇ ಇದರ ಕಥಾವಸ್ತು. ಮಲಯಾಳಿ ಭಾಷೆಯಲ್ಲಿ ಭದ್ರನ್‌ ನಿರ್ದೇಶಿಸಿರುವ ಈ ಸಿನಿಮಾ ತೆರೆಕಂಡಿದ್ದು 1990ರಲ್ಲಿ.
ಮುಮ್ಮುಟ್ಟಿ ಮತ್ತು ಗೀತಾ ಪ್ರಧಾನ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಸಂಕಲನಕ್ಕಾಗಿ ಎಂ.ಎಸ್‌.ಮಣಿ ಅವರಿಗೆ ರಾಷ್ಟ್ರಪ್ರಶಸ್ತಿಯೂ ಬಂದಿತ್ತು.

ವಿಕ್ರಮ್‌ ಸೂರ್ಯನಾರಾಯಣ ಐಯ್ಯರ್‌ ಕಂಪೆನಿಯೊಂದರಲ್ಲಿ ಬ್ಯುಸಿನೆಸ್‌ ಎಕ್ಸಿಕ್ಯೂಟಿವ್‌ ಆಗಿ ಕಾರ್ಯನಿರ್ವಹಿಸುತ್ತಿರುವವನು. ಅವನ ಹೆಂಡತಿ ಮತ್ತು ತಾಯಿಯೊಟ್ಟಿಗೆ ಸಮಾಧಾನದ ಬದುಕು ಬದುಕುತ್ತಿರುವವ. ಮಹಾನ್‌ ಶಿಸ್ತಿನ ಮನುಷ್ಯ. ಮಕ್ಕಳಾಗಿಲ್ಲ ಎಂಬ ಸಣ್ಣ ಕೊರಗೊಂದು ಬಿಟ್ಟರೆ ಸಂತೃಪ್ತಿಯ ಬದುಕು ಅವನದು.

ಇಂತಿಪ್ಪ ಅಯ್ಯರ್‌ ತನ್ನ ನೆಚ್ಚಿನ ಗಿಣಿಯನ್ನು ಹಿಡಿಯಲು ಮನೆಯಂಗಳದಲ್ಲಿದ್ದ ದೊಡ್ಡ ಮರದ ತುದಿಯನ್ನು ಏರಿಬಿಡುತ್ತಾನೆ. ಅಲ್ಲಿಂದ ಕೆಳಗೆ ಇಳಿಯಲಾಗದೇ ಭಯಬಿದ್ದು ಒದ್ದಾಡುತ್ತಿರುವಾಗ ಅವನೊಳಗೆ ಭವಿಷ್ಯವನ್ನು ಕಾಣುವ ಸುಪ್ತ ಶಕ್ತಿಯೊಂದು ಜಾಗೃತವಾಗಿಬಿಡುತ್ತದೆ. ಈ ಶಕ್ತಿಯ ಕಾರಣದಿಂದಲೇ ಅವನು  ರೈಲು ಅಪಘಾತವನ್ನೂ, ವಿಮಾನದ ಉಡಾಯಿಸುವ ಉಗ್ರರ ಸಂಚನ್ನೂ ಮುಂಚಿತವಾಗಿ ಗ್ರಹಿಸಿ ಹೇಳಿಬಿಡುತ್ತಾನೆ.
ತನ್ನ ಅತೀಂದ್ರಿಯ ಶಕ್ತಿಯ ಕಾರಣದಿಂದ ಅಯ್ಯರ್‌ ಭಗವಂತನ ಅವತಾರ ಎಂಬ ನಂಬಿಕೆಯೂ ಹುಟ್ಟಿಕೊಳ್ಳುತ್ತದೆ.

ADVERTISEMENT

ಸಹಜವಾಗಿದ್ದ ಅಯ್ಯರ್‌ನ ಬದುಕನ್ನು ನಾಳೆಯನ್ನು ಕಾಣಬಲ್ಲ ಅವನ ಶಕ್ತಿಯೇ ಕದಡುತ್ತದೆ. ಪ್ರೇಮದಿಂದ ಕಾಣುವ ಹೆಂಡತಿ, ವಾತ್ಸಲ್ಯದ ಪ್ರತಿರೂಪದಂತಿದ್ದ ಅಮ್ಮ ಇವರೇ ಅವನನ್ನು ದೇವರ ಅವತಾರವೆಂಬಂತೆ ಅಂತರದಲ್ಲಿಟ್ಟುಕೊಂಡೇ ಕಾಣಲು ಶುರುಮಾಡುತ್ತಾರೆ. ಕೊನೆಗೆ ಅವನ ಈ ಭವಿಷ್ಯ ಕಾಣ್ಕೆಯ ಗುಣದ ಪರಿಣಾಮವಾಗಿಯೇ ಕುಟುಂಬವನ್ನೂ ಕಳೆದುಕೊಳ್ಳಬೇಕಾಗುತ್ತದೆ.

ವಿಜ್ಞಾನವೋ, ಅತೀಂದ್ರಿಯವೋ ಎಂಬೆಲ್ಲ ಜಿಜ್ಞಾಸೆಗಳನ್ನು ಬಿಟ್ಟು, ಸಹಜವಾಗಿರುವ ನಿಸರ್ಗದ ನಿಯಮಗಳನ್ನು ಮೀರಿದರೆ ಆಗುವ ಅನಾಹುತಗಳನ್ನೇ ಇಟ್ಟುಕೊಂಡು ಸಿನಿಮಾ ಕಟ್ಟಲಾಗಿದೆ.

ತನಗೆ ಸಿಗುವ ಮಾನಸಿಕ ಸೂಚನೆಗಳ ಮೂಲಕ ಅವಘಡಗಳನ್ನು ಅರಿತು ಹೇಳುವ ಅಯ್ಯರ್‌ಗೆ ಕೊನೆಗೊಂದು ದಿನ ತನ್ನ ಸಾವಿನ ಗಳಿಗೆಯೂ ಹೊಳೆದುಬಿಡುತ್ತದೆ! ತನ್ನ ಸಾವಿನ ಕುರಿತು ತಾನೇ ಹೇಳುವ ವಿಚಿತ್ರ ಪರಿಸ್ಥಿತಿ ಅವನದು. ಆ ವಿಧಿಲಿಖಿತದ ವಿರುದ್ಧ ಹೋರಾಡಲು ಮನುಷ್ಯಪ್ರಯತ್ನಗಳೂ ನಡೆಯುತ್ತವೆ. ಆದರೆ ಕೊನೆಗೆ ವಿಧಿಯನ್ನೇ ಗೆಲ್ಲಿಸಿದ್ದಾರೆ ನಿರ್ದೇಶಕರು.

ಈ ಚಿತ್ರ ಗಮನ ಸೆಳೆಯುವುದು ಬಿಗಿಯಾದ ಕಥಾಹಂದರ ಮತ್ತು ಮುಮ್ಮುಟ್ಟಿ ಪ್ರಬುದ್ಧ ಅಭಿನಯದ ಮೂಲಕ. ಮುಗ್ಧ ಹೆಂಡತಿಯಾಗಿ ಗೀತಾ, ತಾಯಿಯಾಗಿ  ಸುಕುಮಾರಿ ಕೂಡ ಗಮನ ಸೆಳೆಯುತ್ತಾರೆ.

ಇಂಥದ್ದೊಂದು ಸಾಧ್ಯಸಾಧ್ಯತೆಯನ್ನು ಪ್ರಶ್ನಿಸದೇ ಒಂದೊಳ್ಳೆ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ನೋಡುವ ಮನಸ್ಸು ನಿಮ್ಮದಾಗಿದ್ದರೆ ಈ ಯೂ ಟ್ಯೂಬ್‌ ಕೊಂಡಿ goo.gl/hYTCwo ಮೂಲಕ ಸಿನಿಮಾ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.