ADVERTISEMENT

ಕಪ್ಪು ಬಣ್ಣದ ಸೊಗಸು

ಸುರೇಖಾ ಹೆಗಡೆ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ಕಪ್ಪು ಬಣ್ಣದ ಸೊಗಸು
ಕಪ್ಪು ಬಣ್ಣದ ಸೊಗಸು   

ವಸ್ತ್ರ ವಿನ್ಯಾಸಕರನೇಕರ ನೆಚ್ಚಿನ ಬಣ್ಣ ಕಪ್ಪು. ಸಾಂಪ್ರದಾಯಿಕ ದಿರಿಸಿನಿಂದ ಹಿಡಿದು ಆಧುನಿಕ, ಸಮಕಾಲೀನ ಫ್ಯಾಷನ್‌ಗೂ ಒಪ್ಪುವ ಬಣ್ಣ ಇದಾಗಿದ್ದರಿಂದ ಎಲ್ಲ ಉಡುಪಿನಲ್ಲಿ ಕಪ್ಪು ಬಣ್ಣ ವಿಶೇಷ ಸ್ಥಾನ ಪಡೆದುಕೊಂಡಿದೆ.

ಹಿಂದೆಲ್ಲಾ ಕಪ್ಪು ಎಂದರೆ ಅಶುಭ ಎನ್ನುವ ಪರಿಕಲ್ಪನೆಯಿತ್ತು. ಶುಭ ಸಮಾರಂಭಗಳಲ್ಲಿ, ವಿಶೇಷ ಕಾರ್ಯಕ್ರಮಗಳಲ್ಲಿ ಕಪ್ಪು ಬಣ್ಣವನ್ನು ಪ್ರಜ್ಞಾಪೂರ್ವಕವಾಗಿ ಧರಿಸುತ್ತಿರಲಿಲ್ಲ. ಆದರೆ ಬದಲಾಗುತ್ತಿರುವ ಫ್ಯಾಷನ್‌ ಲೋಕದಲ್ಲಿ ಕಪ್ಪು ಬಣ್ಣವೇ ಆದ್ಯತೆಯ ಟ್ರೆಂಡ್‌ ಆಗಿದೆ.

ದೇಶಿ ಅಥವಾ ಪಾಶ್ಚಾತ್ಯ ನೋಟ ಹೊಂದಿರುವ ಉಡುಪುಗಳಲ್ಲಿ ಕಪ್ಪು ಬಣ್ಣದ ಛಾಯೆ ಇದ್ದೇ ಇರುತ್ತದೆ. ಇತ್ತೀಚೆಗಂತೂ ಸೆಲೆಬ್ರಿಟಿಗಳ ಆಯ್ಕೆಯೂ ಕಪ್ಪು ಬಣ್ಣದ ದಿರಿಸೇ ಆಗಿದೆ. ಸಿನಿಮಾ ಪ್ರಚಾರ ಕಾರ್ಯಕ್ರಮವಿರಲಿ, ಪ್ರಶಸ್ತಿ ಪ್ರದಾನ ಸಮಾರಂಭವೇ ಇರಲಿ ಅಲ್ಲಿಗೆ ಬರುವ ಬಹುತೇಕ ಲಲನೆಯರ ಉಡುಪು ಕಪ್ಪೇ.

ADVERTISEMENT

ಸೀರೆ, ಜೀನ್ಸ್‌, ಚೂಡಿ, ಗೌನ್‌, ಪಲಾಜೊ, ಅನಾರ್ಕಲಿ, ಕೋಲ್ಡ್‌, ಕೂಲ್‌ ಶೋಲ್ಡರ್‌, ಮಿನಿ ಹೀಗೆ ಎಲ್ಲೆಲ್ಲಿಯೂ ಕಪ್ಪು ನಳನಳಿಸುತ್ತಿದೆ. ಮದುವೆ ಸಮಾರಂಭಗಳಲ್ಲಿಯೂ ಕಪ್ಪು ಬಣ್ಣದ ಘಾಗ್ರಾ ಮದುವಣಗಿತ್ತಿಯ ಆಯ್ಕೆಯಾಗುತ್ತಿದೆ. ಕಪ್ಪು ಬಣ್ಣದ ದಿರಿಸಿನ ಮೇಲೆ ಬಂಗಾರದ ಬಣ್ಣ ಅಥವಾ ಬೆಳ್ಳಿ ಬಣ್ಣದ ವಿನ್ಯಾಸವಿದ್ದರೆ ಅದು ಎದ್ದು ಕಾಣುವುದರ ಇನ್ನಷ್ಟು ಜನಪ್ರಿಯತೆ ಪಡೆದಿದೆ. ಇತ್ತೀಚೆಗೆ ಟ್ರೆಂಡ್‌ ಆಗಿರುವ ಕೇಪ್‌ ವಿನ್ಯಾಸ ಕೂಡ ಕಪ್ಪು ಬಣ್ಣದಲ್ಲಿ ಹೆಚ್ಚು ಪ್ರಚಲಿತವಾಗಿದೆ.

‘ಭಾರತೀಯ ಸಂಸ್ಕೃತಿಯಲ್ಲಿ ಮದುವೆಯಂಥ ಶುಭ ಸಮಾರಂಭಗಳಲ್ಲಿ ಕಪ್ಪು ಬಣ್ಣ ಧರಿಸುವುದು ತುಸು ಕಡಿಮೆಯೇ. ಆದರೆ ಪಾರ್ಟಿ ವಿಷಯಕ್ಕೆ ಬಂದರೆ ಕಪ್ಪು ಬಣ್ಣದ ದಿರಿಸು ಹಾಟ್‌ ಫೇವರಿಟ್‌. ಪಾಶ್ಚಾತ್ಯ ಶೈಲಿಯ ಎಲ್ಲ ದಿರಿಸುಗಳಲ್ಲಿಯೂ ಹೆಚ್ಚಾಗಿ ಕಪ್ಪು ಬಣ್ಣ ಮುಂಚೂಣಿಯಲ್ಲಿರುತ್ತದೆ. ಚಳಿಗಾಲ ಬಂತೆಂದರೆ ಕಪ್ಪು ಹಾಗೂ ಕಪ್ಪು ಬಣ್ಣದ ಶೇಡ್‌ ಇರುವ ಬಟ್ಟೆಗಳಿಗೆ ಬೇಡಿಕೆ ಹೆಚ್ಚುತ್ತದೆ’ ಎನ್ನುತ್ತಾರೆ ವಿನ್ಯಾಸಕಿ ಶಿಲ್ಪಿ ಚೌಧರಿ.

ಕಪ್ಪು ಬಣ್ಣ ಎಲ್ಲಾ ಕಾಲದಲ್ಲೂ ಎಲ್ಲ ವಯೋಮಾನದವರಿಗೂ ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಕಪ್ಪು ಬಣ್ಣದ ಬಟ್ಟೆಯ ಮೇಲೆ ಯಾವುದೇ ರೀತಿಯ ವಿನ್ಯಾಸ ಮಾಡಿದರೂ ಎದ್ದು ಕಾಣುತ್ತದೆ ಎನ್ನುವುದು ಇದರ ಹೆಚ್ಚುಗಾರಿಕೆ. ಎಲ್ಲ ಬಗೆಯ ಮೈಬಣ್ಣಕ್ಕೆ ಹೊಂದಿಕೊಳ್ಳುವ ಗುಣ ಕಪ್ಪು ಬಣ್ಣಕ್ಕಿದೆ. ದಪ್ಪಗಿರುವವರು ಕಪ್ಪು ಬಣ್ಣದ ದಿರಿಸಿನಲ್ಲಿ ಸಣ್ಣಗೆ ಕಾಣುತ್ತಾರೆ.

ಕಪ್ಪು ಬಣ್ಣದೊಂದಿಗೆ ಯಾವುದೇ ಬಣ್ಣವನ್ನು ಬೇಕಾದರೂ ಮ್ಯಾಚ್‌ ಮಾಡಿಕೊಳ್ಳಬಹುದು. ಬಿಳಿ, ಹಳದಿ, ಕೆಂಪು, ನೀಲಿ, ಕೇಸರಿ ಯಾವುದೇ ಬಣ್ಣವನ್ನು ಇದರೊಂದಿಗೆ ಜೋಡಿಸಿದರೂ ವಿಶೇಷ ಚೆಲುವು ನೀಡುವ ಶಕ್ತಿ ಇದಕ್ಕಿದೆ. ಕಪ್ಪು ದಿರಿಸಿನ ಮೇಲೆ ಧರಿಸುವ ಆಕ್ಸಸರೀಸ್‌ಗಳಿಗೂ ಶ್ರೀಮಂತ ನೋಟ ದಕ್ಕುತ್ತದೆ. ಹೀಗೆ ಈ ಬಣ್ಣ ಅನೇಕರ ನೆಚ್ಚಿನ ಬಣ್ಣವಾಗಿ ಟ್ರೆಂಡ್‌ ಸೃಷ್ಟಿಸುತ್ತಲೇ ಇದೆ.

ಮಹಿಳೆಯರಷ್ಟೇ ಅಲ್ಲ, ಪುರುಷರ ಆದ್ಯತೆಯಾಗಿಯೂ ಈ ಬಣ್ಣ ಮೆರೆಯುತ್ತಿದೆ. ಜಾಕೆಟ್‌ ಎಂದಾಕ್ಷಣ ನೆನಪಿಗೆ ಬರುವುದು ಕಪ್ಪು ಬಣ್ಣವೇ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಬಣ್ಣಗಳಲ್ಲಿ ಜಾಕೆಟ್‌ ಲಭ್ಯವಿದ್ದರೂ ಕಪ್ಪು ಬಣ್ಣದ ಜಾಕೆಟ್‌ ತನ್ನ ಬೇಡಿಕೆ ಕಳೆದುಕೊಂಡಿಲ್ಲ. ಅದರಲ್ಲೂ ಚಳಿಗಾಲ ಬಂತೆಂದರೆ ಎಲ್ಲರ ಮೊದಲ ಆಯ್ಕೆ ಕಪ್ಪು ಬಣ್ಣವೇ ಆಗಿರುತ್ತದೆ. ದೇಹವನ್ನು ಬೆಚ್ಚಗಿರಿಸುವ ಈ ಬಟ್ಟೆ ಸೌಂದರ್ಯ ವರ್ಧಿಸುತ್ತದೆ.

*


ಕಪ್ಪು ಬಣ್ಣ ಯಾವಾಗಲೂ ಫ್ಯಾಷನ್‌ನಿಂದ ಹೊರಗುಳಿದ ಉದಾಹರಣೆಯೇ ಇಲ್ಲ. ಎಲ್ಲ ಕಾಲದ, ಎಲ್ಲಾ ವಿನ್ಯಾಸಕಾರರ ಮೆಚ್ಚಿನ ಬಣ್ಣ ಕಪ್ಪು. ಈ ಬಣ್ಣದ ಉಡುಗೆ ತೊಟ್ಟವರು ತೆಳ್ಳಗೆ ಕಾಣುವಂತೆ ಮಾಡುತ್ತವಾದ್ದರಿಂದ ಎಲ್ಲರ ನೆಚ್ಚಿನ ಆಯ್ಕೆ ಆಗಿದೆ. ಪಾರ್ಟಿಗಳಲ್ಲಿ ಧರಿಸಲು ಕಪ್ಪು ಬಣ್ಣ ಮೊದಲ ಆಯ್ಕೆ.
-ಶಿಲ್ಪಿ ಚೌಧರಿ, ವಸ್ತ್ರ ವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.