ADVERTISEMENT

ಕೂದಲ ಆರೋಗ್ಯಕ್ಕೆ ನೈಸರ್ಗಿಕ ವಿಧಾನಗಳು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2017, 19:30 IST
Last Updated 12 ನವೆಂಬರ್ 2017, 19:30 IST
ಕೂದಲ ಆರೋಗ್ಯಕ್ಕೆ ನೈಸರ್ಗಿಕ ವಿಧಾನಗಳು
ಕೂದಲ ಆರೋಗ್ಯಕ್ಕೆ ನೈಸರ್ಗಿಕ ವಿಧಾನಗಳು   

ಕೂದಲು ಬೆಳ್ಳಗಾಗಿರುವುದನ್ನು ನೋಡಿ ವಯಸ್ಸಾಯಿತು ಎಂದುಕೊಳ್ಳುವ ಕಾಲ ಈಗಿಲ್ಲ. ಸಣ್ಣ ವಯಸ್ಸಿಗೇ ಬಿಳಿಕೂದಲು ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಾಗುತ್ತಿದೆ. ಹೆಚ್ಚಿನವರು ಇದಕ್ಕಾಗಿ ಹೇರ್ ಡೈ ಬಳಸುತ್ತಾರೆ. ಬಹುತೇಕ ಹೇರ್‌ ಡೈಗಳಲ್ಲಿ ಅಮೊನಿಯಾ ಸೇರಿದಂತೆ ಹಲವು ರಾಸಾಯನಿಕಗಳ ಸಂಯೋಜನೆ ಇರುತ್ತದೆ.

ಕೆಲವರಿಗೆ ಮನೆಯಲ್ಲಿಯೇ ಸುಲಭವಾಗಿ ದೊರೆಯುವ ನೈಸರ್ಗಿಕ ವಸ್ತುಗಳಿಂದಲೇ ಕೂದಲ ಬಣ್ಣ ತಯಾರಿಸುವ ಆಸೆ ಇರುತ್ತದೆ. ಅಂಥವರಿಗಾಗಿ ಒಂದಿಷ್ಟು ಸಲಹೆಗಳು ಇಲ್ಲಿವೆ.

ಕಪ್ಪು ಆಕ್ರೋಟು: ಇದರಲ್ಲಿ ವಿಟಮಿನ್‌ ‘ಇ’ ಮತ್ತು ಹಲವು ಖನಿಜ ಅಂಶಗಳಿವೆ. ಕಪ್ಪು ಆಕ್ರೋಟು ಸಿಪ್ಪೆಯನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿ, ಕುದಿಸಿ. ನಂತರ ಅದನ್ನು ಪೇಸ್ಟ್‌ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆಯ ನಂತರ ತಣ್ಣೀರಿನಿಂದ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡಿದರೆ ಕೂದಲು ಕೋಮಲವಾಗುತ್ತದೆ, ಕಪ್ಪುಬಣ್ಣಕ್ಕೂ ತಿರುಗುತ್ತದೆ.

ADVERTISEMENT

ಸೀಗೇಕಾಯಿ, ಅಂಟವಾಳಕಾಯಿ ಮತ್ತು ನೆಲ್ಲಿಕಾಯಿ: ಕೂದಲಿನ ಬಣ್ಣ ಕಪ್ಪಾಗಲು ಈ ಸಂಯೋಜನೆಯನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಮೂರರ ಸಮ ಮಿಶ್ರಣವನ್ನು ಮೂರು ದಿನಗಳ ಕಾಲ ಲೋಹದ ಪಾತ್ರೆಯಲ್ಲಿ ಇಡಿ. ನಂತರ ಅದನ್ನು ಕುದಿಸಿ, ಸೋಸಿ. ಈ ನೀರಿಗೆ ಮೆಹೆಂದಿ ಪುಡಿ ಹಾಕಿ ಕೂದಲಿಗೆ ಹಚ್ಚಿ. ಅರ್ಧ ಗಂಟೆಯ ನಂತರ ಕೂದಲು ತೊಳೆಯಿರಿ.

ಮೆಂತ್ಯ: ಇದು ಕೂದಲು ಬಿಳಿಯಾಗುವುದು ಮತ್ತು ಉದುರುವುದನ್ನು ತಡೆಯುತ್ತದೆ. ತೆಂಗಿನೆಣ್ಣೆಗೆ ನಾಲ್ಕೈದು ನೆಲ್ಲಿಕಾಯಿ ಮತ್ತು ಒಂದು ಚಮಚ ಮೆಂತೆ ಪುಡಿ ಬೆರೆಸಿ. 10 ನಿಮಿಷ ಬಿಸಿ ಮಾಡಿ. ರಾತ್ರಿ ಮಲಗುವ ಮುನ್ನ ಕೂದಲಿಗೆ ಹಚ್ಚಿ. ಮರುದಿನ ಬೆಳಗ್ಗೆ ತುಸುವೇ ಬೆಚ್ಚಗಿರುವ ನೀರಿನಿಂದ ತೊಳೆಯಿರಿ.

ಕಪ್ಪುಎಳ್ಳು: ಕೂದಲಿಗೆ ಬಣ್ಣ ನೀಡುವ ಮೆಲನಿನ್‌ ಅಂಶ ಕಪ್ಪುಎಳ್ಳಿನಲ್ಲಿದೆ. ಕೂದಲಿನ ಬುಡಕ್ಕೆ ಕಪ್ಪುಎಳ್ಳಿನ ಎಣ್ಣೆ ಹಾಕಿ ನಿಯಮಿತವಾಗಿ ಮಸಾಜ್ ಮಾಡುತ್ತಿದ್ದರೆ, ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಈರುಳ್ಳಿ: ಈರುಳ್ಳಿ ಮತ್ತು ನಿಂಬೆಯ ರಸವನ್ನು ಮಿಶ್ರಣ ಮಾಡಿಕೊಂಡು, ಕೂದಲಿಗೆ ಹಚ್ಚಿ. 15 ನಿಮಿಷದ ನಂತರ ತಣ್ಣೀರಿನಿಂದ ತೊಳೆದರೆ ಕೂದಲಿನ ಬಣ್ಣ ಕಪ್ಪಾಗುತ್ತದೆ. ಕೂದಲಿನ ಆರೋಗ್ಯವೂ ಸುಧಾರಿಸುತ್ತದೆ.

ಕರಿಬೇವು: ಕೂದಲಿಗೆ ನೈಸರ್ಗಿಕ ಬಣ್ಣ ನೀಡಲು ಇದು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಯನ್ನು ತೆಂಗಿನಎಣ್ಣೆಯಲ್ಲಿ ಬೆರೆಸಿಕೊಂಡು ಕುದಿಸಿ. ನಂತರ ಅದನ್ನು ತಣಿಯಲು ಬಿಡಿ. ಈ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿ ಮಸಾಜ್‌ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ನೆಲ್ಲಿಕಾಯಿ: ಮೆಹೆಂದಿ ಮತ್ತು ನೆಲ್ಲಿಕಾಯಿ ಪುಡಿಗಳನ್ನು ಲೋಹದ ಪಾತ್ರೆಯಲ್ಲಿ ರಾತ್ರಿಯಿಡಿ ನೆನೆಸಿ. ಮರುದಿನ ಬೆಳಿಗ್ಗೆ ಕೂದಲಿಗೆ ಹೆಚ್ಚಿ ಒಂದು ಗಂಟೆಯ ನಂತರ ತೊಳೆಯಿರಿ.

ತೆಂಗಿನೆಣ್ಣೆಯಲ್ಲಿ ನೆಲ್ಲಿಕಾಯಿ, ದಾಸವಾಳ ಹೂ, ನಿಂಬೆ ಸಿಪ್ಪೆ, ಮೆಂತೆ ಕಾಳು, ಕರಿಬೇವಿನ ಎಲೆ ಮತ್ತು ಬೇವಿನ ಎಲೆಯನ್ನು ಹಾಕಿ ಅರ್ಧ ಗಂಟೆ ಕುದಿಸಿ. ನಂತರ ಅದನ್ನು ಸೋಸಿ. ನಿಯಮಿತವಾಗಿ ಇದನ್ನು ಬಳಸುತ್ತ ಹೋದರೆ ಕೂದಲು ಕಪ್ಪಾಗಿಯೂ, ಸೊಂಪಾಗಿಯೂ ಬೆಳೆಯುತ್ತದೆ. ಕೂದಲಿನ ಇತರೆ ಸಮಸ್ಯೆಗಳಿಗೂ ಇದು ಔಷಧಿಯಂತೆ ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.