ADVERTISEMENT

ಕೊನೆಗೂ ಓಡಾಡಿತು ಕ್ಲಿಯರ್‌ ಸ್ಕೈ!

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಕ್ಲಿಯರ್‌ ಸ್ಕೈ
ಕ್ಲಿಯರ್‌ ಸ್ಕೈ   

ಥಾಯ್ಲೆಂಡ್‌ನ ಚೋನ್‌ಬುರಿ  ವಲಯದ ಆ ಪ್ರಾಣಿಗಳ ಆಸ್ಪತ್ರೆಯಲ್ಲಿ ಪುಟ್ಟ ಆನೆ ಮರಿಯೊಂದು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದರೆ ಅಲ್ಲಿನ ಸಿಬ್ಬಂದಿಯೆಲ್ಲ ಸಾರ್ಥಕ ಭಾವದಿಂದ ಅದನ್ನೇ ನೋಡುತ್ತಿದ್ದರು.

ಕೆಲವು ತಿಂಗಳುಗಳ ಹಿಂದೆ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ನಿರ್ಮಿಸಿದ್ದ ಹಳ್ಳಕ್ಕೆ ಬಿದ್ದು ಕಾಲು ಮುರಿದುಕೊಂಡಿದ್ದ 6 ತಿಂಗಳ ಆನೆ ಮರಿ ಹೀಗೆ ನಡೆದಾಡುವುದಕ್ಕೆ ಮುನ್ನ ಅನುಭವಿಸಿದ ನೋವು ಅಷ್ಟಿಷ್ಟಲ್ಲ.

ಆನೆ ಮರಿಯನ್ನು ಮತ್ತೆ ನಡೆದಾಡುವಂತೆ ಮಾಡಿದ ವೈದ್ಯಕೀಯ ಸಿಬ್ಬಂದಿಯ ಶ್ರಮವೂ ಆನೆ ತೂಕಕ್ಕೆ ಸಮವೇ. ಕಾಲಿಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಆನೆ ಮರಿಯನ್ನು ಆಸ್ಪತ್ರೆಗೆ ತಂದಾಗ ಅದಕ್ಕೆ ನಡೆದಾಡಲೂ ಸಾಧ್ಯವಿರಲಿಲ್ಲ,  ಆಸ್ಪತ್ರೆ ಸಿಬ್ಬಂದಿ ಅದರ ಚಿಕಿತ್ಸೆಗೆ ವಿಶೇಷ ಕಾಳಜಿವಹಿಸಿ ಹೈಡ್ರೋಥೆರಪಿ (ಜಲ ಚಿಕಿತ್ಸೆ) ವಿಧಾನ ಬಳಸಿ ಆನೆ ಮರಿಗೆ ಚಿಕಿತ್ಸೆ ನೀಡಿದರು.

ಮೊದಮೊದಲು ನೀರಿಗೆ  ಇಳಿಯಲು ಆನೆ ಹೆದರುತ್ತಿತ್ತು. ಮೇಲೆ ಬರಲು ತವಕಿಸುತ್ತಿತ್ತು, ದಿನಗಳು ಕಳೆದಂತೆ   ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿತು.
ಊನವಾಗಿದ್ದ ಕಾಲಿನ ಪಾದದ ಮೇಲೆ ಹೆಚ್ಚು ಒತ್ತಡ ಬೀಳದಂತೆ ತಡೆಯಲು ಕೃತಕ ಪಾದವನ್ನು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅದನ್ನು ತೆಗೆದು ಹಾಕಲಾಗುವುದು ಎಂದು ಪಶು ವೈದ್ಯ ಕಂಪೂನ್‌ ಟೆನ್‌ಝಾಕ ಹೇಳುತ್ತಾರೆ.

ಕಾಲು ಮುರಿತದಿಂದ ಬಾಲ್ಯದ ಕೆಲವು ಅಮೂಲ್ಯ ದಿನಗಳನ್ನು ಕಳೆದುಕೊಂಡಿರುವ ಮರಿ ಆನೆ ಚಿಕಿತ್ಸೆ ಮುಗಿದ ಬಳಿಕ ತನ್ನ ಜೀವನವನ್ನು ಯಾವುದೇ ಅಂಕೆ ಇಲ್ಲದೆ ಕಳೆಯಲಿ, ಹಾಗೂ ಯಾವುದೇ ನೋವುಗಳಿಲ್ಲದೆ ಇರಲಿ ಎಂಬ ಉದ್ದೇಶದಿಂದ ಮರಿ ಆನೆಗೆ ಆಸ್ಪತ್ರೆಯ ಸಿಬ್ಬಂದಿ ಇಟ್ಟಿರುವ ಹೆಸರು ‘ಕ್ಲಿಯರ್‌ ಸ್ಕೈ’. ಆನೆಯನ್ನು ರಾಷ್ಟ್ರೀಯ ಪ್ರಾಣಿಯಾಗಿಸಿಕೊಂಡಿರುವ ಥಾಯ್ಲೆಂಡಿಗರ ಈ ಆನೆ ಪ್ರೀತಿ ನಿರೀಕ್ಷಿತವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.