ADVERTISEMENT

ಚಳಿಗಾಲದಲ್ಲಿ ಸಾಕು ಪ್ರಾಣಿಗಳ ಆರೈಕೆ ಹೀಗಿರಲಿ...

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 19:30 IST
Last Updated 17 ನವೆಂಬರ್ 2017, 19:30 IST
ಚಳಿಗಾಲದಲ್ಲಿ ಸಾಕು ಪ್ರಾಣಿಗಳ ಆರೈಕೆ ಹೀಗಿರಲಿ...
ಚಳಿಗಾಲದಲ್ಲಿ ಸಾಕು ಪ್ರಾಣಿಗಳ ಆರೈಕೆ ಹೀಗಿರಲಿ...   

ನವೆಂಬರ್ ಬಂತೆಂದರೆ ಸಾಕು ವಾತಾವರಣ ತಂಪಾಗುವುದರ ಜತೆಗೆ ಮೆಲ್ಲಗೆ ಚಳಿಯೂ ಶುರುವಾಗುತ್ತದೆ. ಮನುಷ್ಯರಲ್ಲಿ ಪಾದ ಬಿರುಕು ಬಿಡುವುದು, ತುಟಿ ಒಡೆಯುವುದು, ಶುಷ್ಕ ತ್ವಚೆ ಉಂಟಾಗುವುದು ಸಹಜ. ಚಳಿ ತಡೆಯಲು ಸ್ವೆಟರ್, ಸಾಕ್ಸ್, ಮಫ್ಲರ್ ಮೊರೆ ಹೋಗಿ, ಚರ್ಮದ ರಕ್ಷಣೆಗಾಗಿ ಮಾಯಿಶ್ಚರೈಸರ್ ಬಳಸುತ್ತೇವೆ.

ಚಳಿಗಾಲದಲ್ಲಿ ನಮಗಷ್ಟೇ ಅಲ್ಲ ಮುದ್ದಿನ ಪ್ರಾಣಿಗಳಿಗೂ ಚಳಿಯಾಗುತ್ತದೆ. ವಾತಾವರಣ ಬದಲಾದಂತೆ ಪ್ರಾಣಿಗಳ ದೇಹದ ಮೇಲೂ ಪ್ರಭಾವ ಉಂಟಾಗಿ ಅನಾರೋಗ್ಯ ಸಂಭವವಿರುತ್ತದೆ. ಹಾಗಾಗಿ, ಚಳಿಗಾಲದಲ್ಲಿ ಸಾಕು ಪ್ರಾಣಿಗಳ ಕುರಿತು ತುಸು ಕಾಳಜಿ ವಹಿಸಿದಲ್ಲಿ ಮುದ್ದು ಸಾಕು ಪ್ರಾಣಿಗಳ ಆರೋಗ್ಯವನ್ನು ಕಾಪಾಡಬಹುದು.

ಚಳಿಗಾಲದಲ್ಲಿ ಪುಟ್ಟ ನಾಯಿಮರಿ, ಬೆಕ್ಕಿನ ಮರಿಗಳಿಗೆ ಹೆಚ್ಚು ಚಳಿಯಾಗುತ್ತದೆ ಎನ್ನುತ್ತಾರೆ ಪಶುವೈದ್ಯರು. ಸದಾ ಅಲ್ಲಿಂದ ಇಲ್ಲಿಗೆ ಓಡಾಡುವ ಪುಟ್ಟ ಮರಿಗಳು ಹೊರಗಿನ ವಾತಾವರಣದಲ್ಲಿ ಹೆಚ್ಚು ಕಾಲ ಇರದಂತೆ ಎಚ್ಚರ ವಹಿಸುವುದು ಸೂಕ್ತ. ಅಷ್ಟಕ್ಕೂ ಪುಟ್ಟಮರಿಗಳನ್ನು ಹೊರಗೆ ಕರೆದೊಯ್ಯಬೇಕೆಂದರೆ ಅವುಗಳಿಗೆ ಚಳಿಯಾಗದಂತೆ ಬೆಚ್ಚನೆಯ ಉಡುಪು ಅಥವಾ ದಪ್ಪವಾದ ಬಟ್ಟೆಯನ್ನು ಹೊದಿಸುವುದು ಉತ್ತಮ.

ADVERTISEMENT

ಮತ್ತೊಂದು ಮುಖ್ಯವಾದ ವಿಷಯವೆಂದರೆ ಚಳಿಗಾಲದಲ್ಲಿ ಸಾಕುಪ್ರಾಣಿಗಳಿಗೆ ಪದೇಪದೇ ಸ್ನಾನ ಮಾಡಿಸುವುದನ್ನು ತಡೆಯುವುದು ಒಳ್ಳೆಯದು. ಹದಿನೈದು–ಇಪ್ಪತ್ತು ದಿನಗಳಿಗೊಮ್ಮೆ ತುಸು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಬಹುದು. ಆದರೆ, ಸ್ನಾನದ ಅವಧಿ ದೀರ್ಘವಾಗದಂತೆ ಎಚ್ಚರ ವಹಿಸುವುದು ಒಳಿತು.

ಚಳಿಗಾಲವೆಂದು ಸಾಕುಪ್ರಾಣಿಗಳಿಗೆ ಕೆಲವರು ನೀರು ಕುಡಿಸುವುದನ್ನು ಕಡಿಮೆ ಮಾಡುತ್ತಾರೆ. ಆದರೆ, ಅದು ತಪ್ಪು. ಚಳಿಗಾಲದಲ್ಲೂ ಪ್ರಾಣಿಗಳಿಗೆ ನೀರು ಕುಡಿಸಬೇಕು. ಇದರಿಂದ ಪ್ರಾಣಿಗಳ ದೇಹದಲ್ಲಿ ತೇವಾಂಶದ ಕೊರತೆ ಆಗದಂತೆ ತಡೆಯಬಹುದು.

ಕೆಲವರು ಚಳಿಗಾಲದಲ್ಲಿ ಮನೆಗಳಲ್ಲಿ ರೂಮ್ ಹೀಟರ್‌ಗಳನ್ನು ಬಳಸುತ್ತಾರೆ. ಸಾಕುಪ್ರಾಣಿಗಳು ಇಂಥ ಸ್ಥಳಗಳಲ್ಲಿ ಓಡಾಡುವಾಗ ಎಚ್ಚರ ವಹಿಸಿ, ಗಾಯಗಳಾಗದಂತೆ ನೋಡಿಕೊಳ್ಳಬೇಕು.

ಸಾಕುಪ್ರಾಣಿಗಳು ಮಲಗುವ ಸ್ಥಳಗಳನ್ನು ಸ್ವಚ್ಛವಾಗಿಡುವ ಜತೆಗೆ ಬೆಚ್ಚಗೆ ಇರಿಸಬೇಕು. ಪ್ರಾಣಿಗಳು ಮಲಗುವ ಜಾಗದಲ್ಲಿ ಮೃದುವಾದ ಹಾಗೂ ಬೆಚ್ಚನೆಯ ಹಾಸಿಗೆ ಇದ್ದಲ್ಲಿ ಅವುಗಳಿಗೆ ಚಳಿಯಾಗದಂತೆ ತಡೆಯಬಹುದು.

ನಾಯಿಗಳ ಪಾದಗಳು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಮಲಗುವಾಗ ಪ್ರಾಣಿಗಳಿಗೆ ಬೆಚ್ಚನೆಯ ಹೊದಿಕೆ ಹೊದಿಸುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.