ADVERTISEMENT

ಚಳಿಗಾಲದಲ್ಲಿ ಹೆಚ್ಚಾಗುವ ಬೊಜ್ಜು

ಪ್ರಜಾವಾಣಿ ವಿಶೇಷ
Published 15 ಡಿಸೆಂಬರ್ 2015, 19:49 IST
Last Updated 15 ಡಿಸೆಂಬರ್ 2015, 19:49 IST

ಚಳಿಗಾಲದಲ್ಲಿ ಸೂರ್ಯ ಉದಯಿಸಿದರೂ ಹಾಸಿಗೆ ಬಿಟ್ಟು ಏಳಲು ಮನಸ್ಸಾಗುವುದಿಲ್ಲ. ಚಳಿಯ ನೆಪವೊಡ್ಡಿ ದೇಹ ದಂಡಿಸದಿದ್ದರೆ ಹಾಗೂ ಬೇಕಾಬಿಟ್ಟಿ ಕರಿದ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ಅನಗತ್ಯ ಬೊಜ್ಜು ಹೆಚ್ಚಾಗಲಿದೆಯಂತೆ. ಈ ಕಾಲದಲ್ಲಿ ಆರೋಗ್ಯದ ಕಡೆ ವಹಿಸಬೇಕಾದ ಮುನ್ನೆಚ್ಚರಿಕೆಯ ಕೆಲವು ಸಲಹೆಗಳು ಇಲ್ಲಿವೆ...

ಚಳಿಗಾಲವೇ ಹಾಗೆ, ಮನೆಯಲ್ಲಿ ಬೆಚ್ಚಗೆ ಕುಳಿತು ಬಿಸಿಬಿಸಿ ಕಾಫಿ ಕುಡಿಯಬೇಕೆನ್ನಿಸುತ್ತದೆ. ಕರಿದ ಕುರುಕಲು ತಿಂಡಿ ತಿನ್ನಬೇಕೆನಿಸುತ್ತದೆ, ಬೇರೆ ಋತುಗಳಿಗಿಂತ ಈ ಸಮಯದಲ್ಲಿ ಹೆಚ್ಚು ಊಟ ಮಾಡುತ್ತೇವೆ. ಚಳಿಗೆ ಬೆಳಿಗ್ಗೆ ಬೇಗ ಏಳಲೂ ಕಷ್ಟವಾಗುತ್ತದೆ, ವ್ಯಾಯಾಮದ ಮಾತಂತೂ ದೂರವೇ. ಇವುಗಳೆಲ್ಲದರ ಫಲವೇ ದೇಹದಲ್ಲಿ ಹೆಚ್ಚುವ ಅನಗತ್ಯ ಬೊಜ್ಜು.

ಬೊಜ್ಜು ಹೆಚ್ಚಾಗದಂತೆ ಹಾಗೂ ಚಳಿಗಾಲದಲ್ಲಿ ಆರೋಗ್ಯದ ಕಡೆ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಕೆಲವು ಸಲಹೆಗಳನ್ನು ನೀಡುತ್ತಾರೆ ಬೆಂಗಳೂರಿನ ಡಯಬೆಟಾ ಕೇರ್ ಕ್ಲಿನಿಕ್‌ನ ನ್ಯೂಟ್ರಿಷನಿಸ್ಟ್‌ ಡಾ. ತಾರಾ ಮುರಳಿ.

* ಚಳಿಗಾಲವಾದ್ದರಿಂದ ಹೆಚ್ಚು ಊಟ ಮಾಡಬೇಕೆನ್ನಿಸುತ್ತದೆ, ಕರಿದ ಆಹಾರ ಪದಾರ್ಥ ತಿನ್ನಬೇಕು ಅನ್ನಿಸುತ್ತದೆ. ಆದ್ದರಿಂದ ಆದಷ್ಟು ಕರಿದ ತಿನಿಸುಗಳಿಂದ ದೂರವಿರಬೇಕು.

* ಹೊರಗಡೆಯಿಂದ ಮನೆಗೆ ಬಂದಾಗ, ಸೀನಿದಾಗ ಕೈತೊಳೆದುಕೊಳ್ಳಬೇಕು. ಒಬ್ಬರಿಂದ ಮನೆ ಸದಸ್ಯರೆಲ್ಲರಿಗೂ ಶೀತ, ಜ್ವರವಾಗುವ ಸಾಧ್ಯತೆ ಇರುತ್ತದೆ.

* ನಿಂಬೆಹಣ್ಣು, ಕಿತ್ತಳೆ ಜ್ಯೂಸ್‌ ತೆಗೆದುಕೊಳ್ಳುವುದರಿಂದ ದೇಹಕ್ಕೆ ವಿಟಮಿನ್ಸ್‌ ದೊರೆಯುತ್ತದೆ. ಮದ್ಯಪಾನದಿಂದ ದೂರವಿರಬೇಕು.

* ಚಳಿಗಾಲದಲ್ಲಿ ಹೆಚ್ಚು ಮಂದಿ ವ್ಯಾಯಾಮ ಮಾಡುವುದಿಲ್ಲ. ಇದು ದೇಹದಲ್ಲಿ ಕೆಟ್ಟ ಕೊಬ್ಬಿನಂಶ ಹೆಚ್ಚಾಗಲು ಕಾರಣವಾಗುತ್ತದೆ. ಆದ್ದರಿಂದ ಮನೆಯಲ್ಲಿಯೇ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವ್ಯಾಯಾಮ, ಯೋಗ ಮಾಡುವುದು ಉತ್ತಮ.

* ಕಾಫಿ, ಟೀ ಸೇವನೆ ಕಡಿಮೆ ಮಾಡಿದರೆ ಒಳಿತು.

* ಸ್ವೆಟ್ಟರ್‌, ಶಾಲು, ಬೆಡ್‌ಶೀಟ್‌ಗಳನ್ನು ತೊಳೆದು ಉಪಯೋಗಿಸಬೇಕು, ಇಲ್ಲದಿದ್ದರೆ ದೂಳಿನಿಂದ ನೆಗಡಿ, ಕೆಮ್ಮ ಆಗುವ ಸಾಧ್ಯತೆಗಳಿರುತ್ತವೆ.

* ಹಿರಿಯರಿಗೆ ಮಂಡಿ ನೋವು ಕಾಣಿಸಿಕೊಳ್ಳಲೂಬಹುದು. ಕರಿದ ಆಹಾರ ಪದಾರ್ಥಗಳಿಗೆ ಬದಲಾಗಿ ಮೊಸರು, ಬೇಯಿಸಿದ ತರಕಾರಿ ತಿನ್ನುವುದರಿಂದ ದೇಹಕ್ಕೆ ಫೈಬರ್‌ ಅಂಶ ಸೇರುತ್ತದೆ, ಆರೋಗ್ಯವೂ ಉತ್ತಮವಾಗಿರುತ್ತದೆ.

* ರಾತ್ರಿ ಸಮಯದಲ್ಲಿ ಎಣ್ಣೆ ಪದಾರ್ಥ ಕಡಿಮೆ ಸೇವಿಸುವುದರಿಂದ ಎದೆಯುರಿ ಬರುವುದಿಲ್ಲ, ತಣ್ಣನೆಯ ನೀರಿಗಿಂತ ಬಿಸಿನೀರು ಒಳ್ಳೆಯದು.
ಎರಡು ಮೂರು ದಿನ ಫ್ರಿಜ್‌ನಲ್ಲಿ ಇಟ್ಟ ಆಹಾರ ಸೇವನೆ ಬೇಡ. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಈ ಕಾಲದಲ್ಲಿ ವಯಸ್ಸಾದವರಲ್ಲಿ ಒತ್ತಡ ಹೆಚ್ಚು ಕಂಡುಬರುತ್ತದೆ, ಇದಕ್ಕೆ ಪರಿಹಾರವೆಂದರೆ ಧ್ಯಾನ.

ಮಕ್ಕಳ ಪಾಲನೆ
ಚಳಿಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಕೈಗಳಿಗೆ ಗ್ಲೌಸ್ ಹಾಕಬೇಕು. ಮೈಗೆ ಥರ್ಮಲ್‌ ವೇರ್‌ ಸಹ ಒಳ್ಳೆಯದು. ಶೀತ, ಕೆಮ್ಮಿನಿಂದ ದೂರವಿರಬಹುದು. ಕೈ ತೊಳೆದು ಊಟ ಮಾಡುವಂತೆ ತಿಳಿಸಬೇಕು. ಬೆಳಿಗ್ಗೆ ತಿಂಡಿ ಮಾಡಿಸಿಯೇ ಶಾಲೆಗೆ ಕಳುಹಿಸಬೇಕು. ನೀರು ಬಾಟಲಿಯನ್ನು ಉಗುರು ಬೆಚ್ಚಗಿನ ಬಿಸಿನೀರಿನಲ್ಲಿ ತೊಳೆದು ಕೊಡಬೇಕು. ಬೆಳಗಿನ ಎಳೆಬಿಸಿನಲ್ಲಿ ಆಟವಾಡಿದರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.