ADVERTISEMENT

ಜೋಡಿ ವ್ಯಾಯಾಮದ ಮೋಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:30 IST
Last Updated 25 ಫೆಬ್ರುವರಿ 2018, 19:30 IST
ಜೊತೆಯಾಗಿ ವ್ಯಾಯಾಮ ಮಾಡುವ ಬಗೆ ಹೀಗೆ...
ಜೊತೆಯಾಗಿ ವ್ಯಾಯಾಮ ಮಾಡುವ ಬಗೆ ಹೀಗೆ...   

ಗಂಡ ಹೆಂಡತಿ ಜೊತೆಯಾಗಿ ಕಾಲ ಕಳೆಯುವುದಕ್ಕೆ ಹತ್ತಾರು ಮಾರ್ಗಗಳಿವೆ. ತಮ್ಮ ನಡುವಿನ ಪ್ರೀತಿಯನ್ನು ವ್ಯಕ್ತಪಡಿಸಲು, ಹಂಚಿಕೊಳ್ಳಲು, ಸಾಂಗತ್ಯದ ಸುಖ ಅನುಭವಿಸಲು ಮನಸ್ಸಿದ್ದರೆ ಕಾರಣಗಳನ್ನಷ್ಟೇ ಅಲ್ಲ ಮಾರ್ಗಗಳನ್ನೂ ಹುಡುಕಬಹುದು. ಅಂತಹ ಸುವರ್ಣಾವಕಾಶ ಇಲ್ಲಿದೆ. ಅದುವೇ, ಗಂಡ–ಹೆಂಡತಿ ಜೊತೆಯಾಗಿ ಒಬ್ಬರಿಗೊಬ್ಬರು ನೆರವಾಗುತ್ತಾ ಮಾಡುವ ‘ಜೋಡಿ ವ್ಯಾಯಾಮ’ದ ಮೋಡಿ.

ಗಂಡ ಮತ್ತು ಹೆಂಡತಿ ಒಂದೇ ಬಗೆಯ ವ್ಯಾಯಾಮವನ್ನು ಪ್ರತ್ಯೇಕವಾಗಿ ಮಾಡುವ ಬದಲು ಗಂಡ ಸರಿಯಾಗಿ ಆಸನ ಹಾಕಲು ಹೆಂಡತಿ ಕೈಜೋಡಿಸುವುದು, ಹೆಂಡತಿಗೆ ಗಂಡ ನೆರವಾಗುವುದೇ ‘ದಂಪತಿ ಯೋಗ’ದ ಸೂತ್ರ. ಕಾಲುಗಳನ್ನೆತ್ತಿ ನೇರವಾಗಿ ಸಮತೋಲನ ಮಾಡುವುದರಿಂದ ಹೆಂಡತಿಗೆ ಗರ್ಭಕೋಶ, ಸೊಂಟ, ಬೆನ್ನು, ಕತ್ತು ಮತ್ತು ಕಾಲಿನ ಸ್ನಾಯುಗಳು ಬಲಿಷ್ಠವಾಗುತ್ತವೆ. ಆದರೆ ಕಾಲುಗಳನ್ನು ಕೊರಡಿನಂತೆ ಹಿಡಿದಿಟ್ಟುಕೊಳ್ಳಲು ಆಕೆಗೆ ಆಗುತ್ತಿಲ್ಲವೇ? ಕಾಲನ್ನು ಹಿಮ್ಮಡಿಯ ಬಳಿಯೋ, ಮಂಡಿಯ ಅಡಿಭಾಗದಲ್ಲೋ ಹಿಡಿದುಕೊಂಡರೆ ಸಮತೋಲನ ಸುಲಭ.

ಗಂಡ ಶೀರ್ಷಾಶನ ಮಾಡಬೇಕು. ತಲೆ ಕೆಳಗೆ, ಕಾಲು ಮೇಲೆ. ಗೋಡೆಯ ನೆರವಿಲ್ಲದೆ ಮಾಡುವುದು ಅವರ ಗುರಿ. ನಿಂತುಕೊಂಡು ನೋಡುವ ಬದಲು ಅವರ ಪಾದಗಳಿಗೆ ನಿಮ್ಮ ಉಸಿರು ತಾಕುವಷ್ಟು ಸಮೀಪದಲ್ಲಿ ನಿಂತುಬಿಟ್ಟರಾಯಿತು. ಅವರು ಐದು ನಿಮಿಷ ಬೇಕಾದರೂ ಸಮತೋಲನ ಮಾಡಬಲ್ಲರು. ಇಂತಹ ಹತ್ತಾರು ಉದಾಹರಣೆಗಳನ್ನು ಕೊಡಬಹುದು. ಕೆಲವು ಆಸನಗಳನ್ನು ಇನ್ನೊಬ್ಬರ ನೆರವಿನಿಂದಲೇ ಮಾಡಬೇಕಾಗುತ್ತದೆ.

ADVERTISEMENT

ಕಾಲು, ಸೊಂಟ, ಬೆನ್ನಿನ ವ್ಯಾಯಾಮ: ಕಾಲುಗಳನ್ನು ಮೇಲೆತ್ತಿ, ಬದಿಗೊತ್ತಿ ಮಾಡುವ ವ್ಯಾಯಾಮ ಹೊಟ್ಟೆ ಮತ್ತು ಸೊಂಟಕ್ಕೆ ಅತ್ಯುತ್ತಮ. ಇದನ್ನು ಬೇರೊಬ್ಬರ ನೆರವಿನಿಂದಲೇ ಮಾಡಬೇಕಾಗುತ್ತದೆ. ನೀವು ನೆಲದಲ್ಲಿ ಅಂಗಾತ ಮಲಗಿ. ನಿಮ್ಮ ತಲೆಯ ಎಡ ಅಥವಾ ಬಲ ಭಾಗಕ್ಕೆ ನಿಮ್ಮ ಸಂಗಾತಿ ನಿಲ್ಲಲಿ. ಅವರನ್ನು ತಾಕುವಂತೆ ನೀವು ನೇರವಾಗಿ ಕಾಲುಗಳನ್ನೆತ್ತಿ. ನಿಮ್ಮ ಕಾಲನ್ನು ಒಂದಾದ ಮೇಲೊಂದರಂತೆ ಅವರು ನೆಲಕ್ಕೆ ಜೋರಾಗಿ ತಳ್ಳಲಿ (ಎಸೆಯುವಂತೆ). ಈ ವ್ಯಾಯಾಮವನ್ನು ಕನಿಷ್ಠ 10 ನಿಮಿಷ ಮಾಡಿ. ಸಂಗಾತಿಯ ಸರದಿಗೆ ನೀವು ನೆರವಾಗಿ.

ಭುಜ, ತೋಳು, ಮಣಿಕಟ್ಟಿನ ವ್ಯಾಯಾಮ: ನೆಲದಲ್ಲಿ ಊರಿದ ಮುಂಗೈ ಮತ್ತು ಕಾಲ್ಬೆರಳುಗಳಲ್ಲಿ ಇಡೀ ದೇಹವನ್ನು ನೇರವಾಗಿ ಸಮತೋಲನ ಮಾಡುವ ವ್ಯಾಯಾಮದಿಂದ ತೋಳು, ಭುಜ, ಹೊಟ್ಟೆ, ಬೆನ್ನು, ಸೊಂಟ ಮತ್ತು ಕೈಕಾಲು ಸದೃಢವಾಗುತ್ತದೆ. ಮಾಂಸಖಂಡಗಳು ಜೋತುಬೀಳುವುದು, ಬೆನ್ನು ಬಾಗುವುದು, ಮಂಡಿ ಮತ್ತು ಕಾಲುಗಳ ಸ್ನಾಯುಗಳಲ್ಲಿನ ನೋವಿನ ಸಮಸ್ಯೆ ಕಾಡುವುದಿಲ್ಲ. ಆರಂಭದಲ್ಲಿ ದೇಹವನ್ನು ಸಮತೋಲನ ಮಾಡಲು ಬೇರೊಬ್ಬರ ನೆರವು ಬೇಕಾಗುತ್ತದೆ. ಆ ‘ಬೇರೊಬ್ಬರು’ ನೀವೇ ಆಗಿ.

ಪುಶ್‌ ಅಪ್‌ ಮಾಡಿಸಿ: ಮೇಲಿನ ವ್ಯಾಯಾಮಕ್ಕೆ ಸಮತೋಲನ ಮಾಡಿದ ಸ್ಥಿತಿಯಲ್ಲಿಯೇ ಪುಶ್‌ ಅಪ್‌ಗಳನ್ನು ಮಾಡಿ. ನಿಮ್ಮ ಬೆನ್ನಿನ ಎರಡೂ ಕಡೆ ಕಾಲಿಟ್ಟುಕೊಂಡು ನಿಮ್ಮ ಸಂಗಾತಿ ನಿಲ್ಲಲಿ. ನಿಮ್ಮ ಪುಶ್‌ ಅಪ್‌ಗಳಿಗೆ ಅವರ ಇರುವಿಕೆ ಹೊಸ ಭಾಷ್ಯವನ್ನೂ, ನಿಯಂತ್ರಣವನ್ನೂ ಒದಗಿಸುತ್ತದೆ.

ಹೀಗೆ, ಯಾವುದೋ ಆಸನವನ್ನೋ ವ್ಯಾಯಾಮವನ್ನೋ ಮಾಡಲು ವಿಫಲರಾಗಿ ಕೈಬಿಟ್ಟಿದ್ದಲ್ಲಿ ಸಂಗಾತಿಯ ನೆರವಿನಿಂದ ಮತ್ತೆ ಶುರು ಮಾಡಿ. ಒಟ್ಟಿನಲ್ಲಿ ದಾಂಪತ್ಯ ಸುಖವನ್ನೂ, ಯೋಗ ಭಾಗ್ಯವನ್ನೂ ಏಕಕಾಲಕ್ಕೆ ಆನಂದಿಸಲು ಜೋಡಿ ವ್ಯಾಯಾಮದ ಮೋಡಿಗೆ ಜೈ ಅನ್ನಿ.
****
ಏನು ಲಾಭ
* ಇಬ್ಬರದೂ ಒಂದೇ ಗುರಿ– ಆರೋಗ್ಯ, ಮೈಕಟ್ಟು ಕಾಪಾಡಿಕೊಳ್ಳುವುದು. ಇಬ್ಬರ ಗುರಿಯೂ ಒಂದೇ ಎಂಬ ಭಾವವೇ ನಿಮ್ಮಲ್ಲಿ ಹೊಸ ಹುರುಪು ತುಂಬಬಲ್ಲದು. ಇದು ಸ್ಫೂರ್ತಿಯೂ ಹೌದಲ್ಲ?
* ಇಬ್ಬರೂ ಒಟ್ಟಾಗಿ ವ್ಯಾಯಾಮ ಮಾಡುವ ಕಾರಣ ನಾಳೆ ಮಾಡಿದರಾಯಿತು ಎಂಬ ಯೋಚನೆ ಕಾಡದು. ಯಾಕೆಂದರೆ ನಿಮ್ಮ ಸಂಗಾತಿಗಾಗಿ ಕಾಳಜಿ ನಿಮ್ಮಲ್ಲಿರುತ್ತದೆ.
* ಇಬ್ಬರೂ ದೇಹದಾರ್ಢ್ಯ ಕಾಪಾಡಿಕೊಂಡಾಗ ಖಿನ್ನತೆ, ಉದ್ವೇಗ, ಅನಾರೋಗ್ಯ ಕಾಡದು
* ನೃತ್ಯ, ಯೋಗಾಭ್ಯಾಸ, ಏರೊಬಿಕ್ಸ್‌, ಜಿಮ್‌ನಲ್ಲಿ ವಿವಿಧ ವ್ಯಾಯಾಮಗಳನ್ನು ಜೋಡಿಯಾಗಿ ಮಾಡುವುದರಿಂದ ಇಬ್ಬರ ಬಾಂಧವ್ಯ ಗಟ್ಟಿಯಾಗುತ್ತದೆ.
* ವ್ಯಾಯಾಮದ ಜತೆಗೆ ಪಥ್ಯಾಹಾರದ ಶಿಸ್ತನ್ನೂ ಕಾಪಾಡಿಕೊಂಡರೆ ಇಬ್ಬರೂ ಸದಾ ಕಾಲ ಆರೋಗ್ಯವಂತರಾಗಿರುತ್ತೀರಿ.
* ದೇಹ ಮತ್ತು ಮನಸ್ಸು ಉಲ್ಲಾಸ ಮತ್ತು ಚೈತನ್ಯದಿಂದ ಕೂಡಿರುವ ಕಾರಣ ಇಬ್ಬರಲ್ಲೂ ಲೈಂಗಿಕ ಶಕ್ತಿ ವೃದ್ಧಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.