ADVERTISEMENT

ತನ್ನತನದಲ್ಲೇ ಮಾಗಿದ ನಿರ್ದೇಶಕ

ವಿಶಾಖ ಎನ್.
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ತನ್ನತನದಲ್ಲೇ ಮಾಗಿದ ನಿರ್ದೇಶಕ
ತನ್ನತನದಲ್ಲೇ ಮಾಗಿದ ನಿರ್ದೇಶಕ   

ಇಪ್ಪತ್ತಮೂರು ವರ್ಷ. ನಿರ್ದೇಶಿಸಿದ್ದು ಹತ್ತೇ ಸಿನಿಮಾ. ಮಹೇಶ್ ಭಟ್ ಹಾಗೂ ಧರ್ಮೇಶ್ ದರ್ಶನ್ ಸಂಬಂಧಿ ಎಂಬ ಕಾರಣಕ್ಕೆ ಚಿತ್ರಲೋಕಕ್ಕೆ ಹತ್ತಿರವಾದ ಮಿಲನ್ ಲೂಥ್ರಾ ತನ್ನತನದ ಹಲವು ನೆನಪುಗಳನ್ನು ಉಳಿಸಿದವರು. ನಿಧಾನ ಅವರ ಬದುಕಿನ ವಿಧಾನ. ಅದೇ ಸಾವಧಾನ ಎಂದು ನಂಬಿರುವವರ ಪೈಕಿ.

'ಲೂಟೆರಾ' ಹಿಂದಿ ಸಿನಿಮಾವನ್ನು ಧರ್ಮೇಶ್ ನಿರ್ದೇಶಿಸುತ್ತಿದ್ದ 1993ರ ಕಾಲಘಟ್ಟದಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರ ಗರಡಿಗೆ ಸೇರಿದರು. ಆ ಕಾಲಘಟ್ಟದಲ್ಲಿ ಅವರಿಗೆ ಹತ್ತಿರವಾದದ್ದು ಅಜಯ್ ದೇವಗನ್. ಮೃದುಭಾಷಿ ಮಿಲನ್ ಮೊದಲಿನಿಂದಲೂ 1970ರ ದಶಕದ ಸಿನಿಮಾಗಳ ಡ್ರಾಮಾ ಹಾಗೂ ಥ್ರಿಲ್ಲರ್ ಅಂಶಗಳನ್ನು ಇಷ್ಟಪಟ್ಟವರು. ಚಿತ್ರಿಸಿದರೆ ಅಂಥ ಸಿನಿಮಾಗಳನ್ನೇ ಎಂದು ಅವರು ಸಂಕಲ್ಪ ಮಾಡಿದ್ದ ಕಾಲವಿತ್ತು.

ಮೊದಲು ಅವರು ಕಥೆಗಳನ್ನು ಹೇಳಿದಾಗ ಎಷ್ಟೋ ಆಪ್ತೇಷ್ಟರೇ ಕಾಲೆಳೆಯುತ್ತಿದ್ದರು. 'ಒಂದಾನೊಂದು ಕಾಲದಲ್ಲಿ' ಎಂಬ ಧಾಟಿಯಲ್ಲೇ ಶುರುವಾಗುತ್ತಿದ್ದ ಅವರ ಕಥೆಗಳನ್ನು ನಾಸ್ಟಾಲ್ಜಿಕ್ ಎಂದು ತಳ್ಳಿಹಾಕುವಂತೆ ಇರಲಿಲ್ಲ.

ADVERTISEMENT

ಅದಕ್ಕೇ 'ಕಚ್ಚೆ ಧಾಗೆ' ಸಿನಿಮಾದಲ್ಲಿ ನಟಿಸಲು ಅಜಯ್ ದೇವಗನ್ ಒಪ್ಪಿದ್ದು. ಮಿಲನ್ ಮೊದಲಿನಿಂದಲೂ ದೊಡ್ಡದಾಗಿಯೇ ಯೋಚಿಸುತ್ತಿದ್ದರು. ಸಿನಿಮಾ ಅವರ ಪಾಲಿಗೆ ಭರಪೂರ ಡ್ರಾಮಾ. ಅಣ್ಣ-ತಮ್ಮನ ಕಚ್ಚಾಟ, ಪ್ರಿಯಕರ-ಪ್ರಿಯತಮೆಯ ವಿರಸ, ಯುದ್ಧದ ಮುಖಗಳು ಎಲ್ಲವನ್ನೂ ಅವರು ಡ್ರಾಮಾ ವ್ಯಾಪ್ತಿಯಲ್ಲೇ ತಂದು ತೋರಬೇಕು ಎಂದು ನಂಬಿದ್ದರು. ಅದಕ್ಕೆ ಪುಷ್ಟಿಯಾಗಿ ಅವರು ಸದಾ ಹೇಳುತ್ತಿದ್ದುದು: '1970ರಲ್ಲಿ ಬಂದ ಕೆಲವು ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕ ಹಾದಿ ತಪ್ಪುತ್ತಾನೆ. ಅವನ ಅಂತ್ಯವೂ ದುರಂತವೇ ಹೌದು. ಅದು ವಾಸ್ತವ. ನಾಯಕ ಎಂದರೆ ಸದಾ ಒಳಿತಿನ ಮೂರ್ತಿಯೇ ಆಗಿರಬೇಕು ಎಂಬ ಧೋರಣೆಯೇ ಕ್ಲೀಷೆ. ಅದಕ್ಕೇ ಇಂಥ ನಾಯಕ ನನಗೆ ಇಷ್ಟವಾಗುವುದು'.

ಈಗಿನ ಬಾಲಿವುಡ್ ಸಿನಿಮಾಗಳಲ್ಲಿ ನಾಟಕೀಯತೆ ಕಡಿಮೆಯಾಗುತ್ತಿರುವ ಕುರಿತು ಅವರಿಗೆ ಹೇವರಿಕೆಯೂ ಇತ್ತು. ರಿಯಲಿಸ್ಟಿಕ್ ಎಂಬ ಭ್ರಮೆಯಲ್ಲಿ ಸಿನಿಮಾದ ದೊಡ್ಡ ಸಾಧ್ಯತೆಗೇ ಅನೇಕ ಪ್ರತಿಭಾವಂತರು ಬೆನ್ನು ಮಾಡುತ್ತಿರುವರಲ್ಲ ಎಂದು ಅವರು ದೂರಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು.

ಮಿಲನ್ ತಾವು ನಂಬಿದ ಸಿನಿಮಾ ತತ್ತ್ವದಲ್ಲಿ ರಾಜಿಯಾಗಲಿಲ್ಲ. 'ಚೋರಿ ಚೋರಿ', 'ದೀವಾರ್' ಅವರ ದೊಡ್ಡ ಯೋಜನೆಗಳಿಗೆ ಉದಾಹರಣೆಗಳು. 'ದೀವಾರ್'ನಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಅಭಿನಯಿಸಲು ಒಪ್ಪಿಸಿದ್ದೂ ಸಾಹಸವೇ.

ಹಾಗೆ ನೋಡಿದರೆ ಮೊದಲ ಸಿನಿಮಾವನ್ನು ರಾಜಸ್ಥಾನ ಹಾಗೂ ಸ್ವಿಟ್ಜರ್ಲೆಂಡ್ ನಲ್ಲಿ ಚಿತ್ರಿಸುವ ಕಷ್ಟವನ್ನು ಮೈಮೇಲೆ ಎಳೆದುಕೊಂಡವರು ಮಿಲನ್. ಆ ಸಿನಿಮಾಗೆ ಅಷ್ಟೆಲ್ಲ ಕಷ್ಟಪಟ್ಟರೂ ಸಿಕ್ಕ ಫಲ ಅಷ್ಟಕ್ಕಷ್ಟೆ. ಎರಡನೇ ಚಿತ್ರ 'ಚೋರಿ ಚೋರಿ' ಇನ್ನೇನು ತೆರೆಕಾಣಬೇಕು, ಅಷ್ಟರಲ್ಲಿ ನಿರ್ಮಾಪಕರು ಮೃತಪಟ್ಟರು. 'ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ' ಎಂದುಕೊಂಡು ಉಗುಳು ನುಂಗಿದ ಈ ನಿರ್ದೇಶಕ ತನ್ನತನದಲ್ಲಿ ಮಾತ್ರ ರಾಜಿಯಾಗಲೇ ಇಲ್ಲ.

ಕಾಮಿಡಿ ಮಾಡು ನೋಡೋಣ ಎಂದು ಕೆಲವರು ಕಿಚಾಯಿಸಿದಾಗ 'ಹ್ಯಾಟ್ರಿಕ್' ಚಿತ್ರ ಮಾಡಿದರು. ಥ್ರಿಲ್ಲರ್ ನ ಇನ್ನೊಂದು ವರಸೆಯಾಗಿ 'ಟ್ಯಾಕ್ಸಿ ನಂಬರ್ 9211' ಕೊಟ್ಟರು. 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ'ನಲ್ಲೂ ಅವರು ಹೇಳಿದ್ದು ನಾಸ್ಟಾಲ್ಜಿಕ್ ಸಂಗತಿಯನ್ನೇ. ಅದು ಗೆದ್ದ ನಂತರ ಮಿಲನ್ ಆತ್ಮವಿಶ್ವಾಸ ಹೆಚ್ಚಾಯಿತು. ಅದುವರೆಗೆ ಮಾಡಿದ ಪ್ರಯೋಗಗಳೆಲ್ಲ ಫಲಿಸಿತು ಎಂಬ ಭಾವನೆ ಮೂಡಿತ್ತು.

ಅಷ್ಟು ಹೊತ್ತಿಗೆ ಚಿತ್ರರಂಗದಲ್ಲಿ ಹದಿನೇಳು ವರ್ಷದ ಅನುಭವ ಬೆನ್ನಿಗಿಕ್ಕಿಕೊಂಡಿದ್ದ ಮಿಲನ್, 'ಡರ್ಟಿ ಪಿಕ್ಚರ್' ಮೂಲಕ ದೊಡ್ಡ ಸದ್ದು ಮಾಡಿದರು. ಸಿಲ್ಕ್ ಸ್ಮಿತಾ ಬದುಕಿನ ಕಥನವನ್ನು ಹೆಚ್ಚೇ ಸಿನಿಮೀಯ ಮಾಡಿ, ಗೆದ್ದರು. ಈಗ ಅವರದ್ದೇ ನಿರ್ದೇಶನದ 'ಬಾದ್ ಶಾಹೊ' ಸದ್ದು ಮಾಡುತ್ತಿದೆ.

ವಯಸ್ಸಾಗುವುದಕ್ಕೂ ಸಿನಿಮಾದಲ್ಲಿ ಕಥೆ ಕಟ್ಟುವುದಕ್ಕೂ ಸಂಬಂಧವಿಲ್ಲ ಎನ್ನುವ ಮಿಲನ್ ಉತ್ಸಾಹ ಈಗ ಇನ್ನಷ್ಟು ಜಾಸ್ತಿಯಾಗಿದೆ. ಯಾಕೆಂದರೆ ಮೊದಲ ಸಿನಿಮಾ ಮಾಡುವಾಗಲೇ ಅವರಿಗೆ 'ಬಾದ್ ಶಾಹೊ' ಕಥೆಯ ಎಳೆ ಹೊಳೆದಿತ್ತಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.