ADVERTISEMENT

ತಿಂದಿದ್ದನ್ನು ಅಳೆಯುವ ಸ್ಟಿಕ್ಕರ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 19:30 IST
Last Updated 11 ಏಪ್ರಿಲ್ 2018, 19:30 IST
ತಿಂದಿದ್ದನ್ನು ಅಳೆಯುವ ಸ್ಟಿಕ್ಕರ್
ತಿಂದಿದ್ದನ್ನು ಅಳೆಯುವ ಸ್ಟಿಕ್ಕರ್   

ನಾವು ಸೇವಿಸುವ ಆಹಾರದ ಮೇಲೆ ನಿಗಾ ಇಡಲು ಈಗ ಬೇಕಾದಷ್ಟು ಆ್ಯಪ್‌ಗಳಿವೆ. ಆರೋಗ್ಯದ ಕಾಳಜಿಗೆಂದೇ ಹಲವು ಸಾಧನಗಳೂ ಇವೆ. ಆದರೆ ಅವುಗಳ ಗೋಜಿಲ್ಲದೇ ನಾವು ಏನನ್ನು ತಿನ್ನುತ್ತಿದ್ದೇವೆ, ನಾವು ತಿನ್ನುವ ಸಾಮಗ್ರಿಯಲ್ಲಿ ಯಾವ್ಯಾವ ಅಂಶಗಳಿವೆ ಎಂಬುದನ್ನು ತಿಳಿಯುವ ಸುಲಭ ಉಪಾಯ ಆವಿಷ್ಕರಿಸಿದ್ದಾರೆ ಸಂಶೋಧಕರು.

ಅದೇ ಬಯೋ ರೆಸ್ಪಾನ್ಸಿವ್ ಟೂತ್ ಸ್ಟಿಕ್ಕರ್. ಈ ಪುಟ್ಟ ಸ್ಟಿಕ್ಕರ್ ಅನ್ನು ಹಲ್ಲಿನ ಮೇಲೆ ಅಂಟಿಸಿಕೊಂಡರೆ ಸಾಕು, ಆ್ಯಪ್ ಮಾಡುವ ಎಲ್ಲಾ ಕೆಲಸವನ್ನೂ ಮಾಡುತ್ತದೆ.

ಟಫ್ಟ್ಸ್ ಯೂನಿವರ್ಸಿಟಿ ಸ್ಕೂಲ್ ಆಫ್ ಎಂಜಿನಿಯರಿಂಗ್‌ನ ಸಂಶೋಧಕರ ತಂಡ ಈ ಸಾಧನ ರೂಪಿಸಿರುವುದು. 2x2ಮಿ.ಮೀ ಅಳತೆಯ ಈ ಸ್ಟಿಕ್ಕರ್‌ನಲ್ಲಿ ಟೂತ್ ಮೌಂಟೆಡ್ ಸೆನ್ಸರ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಲ್ಲಿ ಒಟ್ಟು ಮೂರು ಸೆನ್ಸರ್‌ಗಳಿರುತ್ತವೆ. ಬಯೋ ರೆಸ್ಪಾನ್ಸಿವ್ ಲೇಯರ್–ಆಹಾರದಲ್ಲಿನ ಪೋಷಕಾಂಶದ ಪೂರ್ಣ ಮಾಹಿತಿ ಒದಗಿಸುತ್ತದೆ. ಗೋಲ್ಡ್ ಲೇಯರ್– ಆ್ಯಂಟೆನಾದಂತೆ ಕೆಲಸ ನಿರ್ವಹಿಸುತ್ತದೆ.

ADVERTISEMENT

ಉಪ್ಪು, ಗ್ಲೂಕೋಸ್, ಆಲ್ಕೊಹಾಲ್‌ನ ಅಂಶಗಳನ್ನು ಈ ಪುಟ್ಟ ಸೆನ್ಸರ್ ಗ್ರಹಿಸುತ್ತದೆ. ವೈರ್‌ಲೆಸ್‌ ಟ್ರಾನ್ಸ್‌ಮಿಟರ್‌ಗಳ ಮೂಲಕ ಮೊಬೈಲ್‌ಗೆ ಮಾಹಿತಿ ರವಾನಿಸುತ್ತದೆ. ರೇಡಿಯೊ ಫ್ರೀಕ್ವೆನ್ಸಿಯಿಂದ ಈ ಗುರುತಿಸಿಕೊಳ್ಳುವಿಕೆ ಸಾಧ್ಯವಾಗಲಿದ್ದು, ಯಾವ ಅಂಶ ಎಷ್ಟು ಮಟ್ಟದಲ್ಲಿದೆ, ಎಷ್ಟು ಸೇವಿಸಬೇಕು, ಎಷ್ಟು ಅತಿಯಾಯಿತು ಎಂಬುದನ್ನೂ ವಿಶ್ಲೇಷಣೆ ಮಾಡಲಿದೆ.

ಎಲ್ಲರಿಗೂ ಆರೋಗ್ಯಕರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಹೀಗೊಂದು ಹೊಸ ಸ್ಟಿಕ್ಕರನ್ನು ಕಂಡುಹಿಡಿದಿರುವುದಾಗಿ ತಂಡ ಹೇಳಿಕೊಂಡಿದೆ.

ಒಂದೊಂದು ಅಂಶಕ್ಕೂ ಬೇರೆ ಬೇರೆ ರೀತಿಯ ಫ್ರೀಕ್ವೆನ್ಸಿಗಳನ್ನು ಹೊಂದಿಸಲಾಗಿರುತ್ತದೆ. ಇದು ಮುಂದೆ ಡಯೆಟ್ ಟ್ರ್ಯಾಕರ್‌ನಂತೆ ಕೆಲಸ ಮಾಡುವ ನಿರೀಕ್ಷೆಯೂ ಇದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.