ADVERTISEMENT

ತಿನ್ನುತ್ತಲೇ ಟೈಪ್ ಮಾಡಿ

ಕಿರಣ್ ಇಜಿಮಾನ್
Published 27 ಮೇ 2015, 19:30 IST
Last Updated 27 ಮೇ 2015, 19:30 IST

ಸ್ಮಾರ್ಟ್‌ಫೋನ್‌ ಬಂದ ಬಳಿಕ ಸಾಮಾಜಿಕ ಜಾಲತಾಣ ಮತ್ತು ಚಾಟ್ ಸೇವೆಗಳಲ್ಲಿ ಮುಳುಗಿರುವವರೇ ಹೆಚ್ಚು. ತಿಂಡಿ ತಿನ್ನುವಾಗಲೂ, ಸ್ನಾನ ಕೊಠಡಿಗೂ ಹೀಗೆ ಎಲ್ಲೆಂದರಲ್ಲಿ ಸ್ಮಾರ್ಟ್‌ಫೋನ್ ಒಯ್ಯುವವರೂ ಇದ್ದಾರೆ. ಊಟ ತಿಂಡಿಯಾದರೂ ಬಿಟ್ಟೇನು, ಆದರೆ ಚಾಟಿಂಗ್ ಮಾತ್ರ ಬಿಡಲೊಲ್ಲೆ ಎನ್ನುವ ಪೀಳಿಗೆಯನ್ನೇ ಇಂದು ನಾವು ಕಾಣುತ್ತಿದ್ದೇವೆ.

ಈ ಅತಿಯಾದ ಚಾಟಿಂಗ್ ಗೀಳು ಹತ್ತಿಸಿಕೊಂಡವರಿಗೆ ಹಲವಾರು ಕಿರಿಕಿರಿಯಾಗುವ ಸಂದರ್ಭವಿರುತ್ತದೆ. ಅಂದರೆ ಊಟ ಮಾಡುತ್ತಾ ಇಲ್ಲವೇ ತಿಂಡಿ ತಿನ್ನುತ್ತಾ ಚಾಟ್ ಮಾಡುವ ಸಂದರ್ಭದಲ್ಲಿ ಹಲವು ಕಸರತ್ತು ಮಾಡಬೇಕಾಗುತ್ತದೆ. ಅಂದರೆ ಒಂದು ಕೈಯಲ್ಲಿ ಮೆಸೇಜ್ ಟೈಪ್ ಮಾಡುತ್ತಾ, ಇನ್ನೊಂದು ಕೈಯಲ್ಲಿ ತಿಂಡಿ ತಿನ್ನುವ ಪರಿಸ್ಥಿತಿ ಉಂಟಾಗುತ್ತದೆ.

ಈ ಸಮಸ್ಯೆಯನ್ನು ಹೇಗೋ ನಿಭಾಯಿಸುತ್ತಾರೆ, ಆದರೆ ಎರಡೂ ಕೈಯಲ್ಲಿ ಸ್ಮಾರ್ಟ್‌ಫೋನ್ ಮುಟ್ಟುವುದು, ಊಟ ಮಾಡುವಾಗ ಅಕಸ್ಮಾತ್ತಾಗಿ ಸಾಂಬಾರ್ ಇಲ್ಲವೇ ಇನ್ನಿತರ ತಿಂಡಿ, ಐಸ್‌ ಕ್ರೀಂ ಮುಂತಾದವುಗಳು ಸ್ಮಾರ್ಟ್‌ಫೋನ್‌ನ ಪರದೆಯ ಮೇಲೆ ಇಲ್ಲವೇ ಮೇಲ್ಭಾಗಕ್ಕೆ ಬೀಳುತ್ತದೆ. ಇದರಿಂದ ದುಬಾರಿ ಫೋನ್‌ನ ಅಂದಗೆಡುತ್ತದೆ. ಅಲ್ಲದೇ ಎಣ್ಣೆಯ ಅಂಶಗಳಿಂದ ಕೂಡಿದ ಪದಾರ್ಥವನ್ನು ಕೈಯಿಂದ ಮುಟ್ಟಿ, ಬಳಿಕ ಅದೇ ಕೈಯಲ್ಲಿ ಫೋನ್ ಮುಟ್ಟಿದಾಗ, ಕೈಯಲ್ಲಿರುವ ಎಣ್ಣೆಯ ‌ಜಿಡ್ಡು ಸ್ಮಾರ್ಟ್‌ಫೋನ್‌ ಮೇಲ್ಮೈಗೆ ಸುಲಭವಾಗಿ ಅಂಟಿಕೊಳ್ಳುತ್ತದೆ.

ನೋಡುವವರಿಗೂ ಇದು ಅಸಹನೀಯ, ಅಲ್ಲದೇ ಫೋನ್ ಕೂಡಾ ಕೈಯಲ್ಲಿ ಮುಟ್ಟಲು ಗಲೀಜಾಗಿರುತ್ತದೆ. ಆದರೂ ಊಟದ ಸಮಯದಲ್ಲಿ ಫೋನ್ ಬದಿಗಿಡಲು ಚಾಟ್‌ ಪ್ರಿಯರು ಒಪ್ಪುವುದಿಲ್ಲ. ಅದಕ್ಕಾಗಿ ಈ ಸಮಸ್ಯೆಯಿಂದ ಜನರನ್ನು ಪಾರು ಮಾಡಲು, ಕೆಎಫ್‌ಸಿ, ಕೆಂಟುಕಿ ಫ್ರೈಡ್ ಚಿಕನ್ ಸಂಸ್ಥೆ ಹೊಸ ಮಾದರಿಯ ‘ಟ್ರೇ ಟೈಪರ್’ ಎಂಬ ಕೀ ಬೋರ್ಡ್‌ ಅನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ.

ನೀವು ಆರ್ಡರ್ ಮಾಡುವ ತಿನಿಸುಗಳನ್ನು ಈ ತಟ್ಟೆಯಲ್ಲಿಯೇ ಇಟ್ಟು ಕೆಎಫ್‌ಸಿ ನಿಮಗೆ ಕೊಡುತ್ತದೆ. ಇದು ನೋಡಲು ತಟ್ಟೆಯಾಗಿದ್ದರೂ, ಇದೊಂದು ವೈರ್‌ಲೆಸ್ ಕೀ ಬೋರ್ಡ್‌. ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಬ್ಲೂಟೂತ್ ಮೂಲಕ ಈ ಕೀಬೋರ್ಡ್‌ ಜೊತೆಗೆ ಸಂಪರ್ಕಿಸಬೇಕು. ಬಳಿಕ ನಿಮ್ಮ ಫೋನ್ ಮುಟ್ಟದೆಯೇ ನಿಮಗೆ ಬರುವ ಸಂದೇಶಗಳಿಗೆ, ಫೇಸ್‌ಬುಕ್, ವಾಟ್ಸ್‌ ಆಪ್ ಮುಂತಾದ ಸಾಮಾಜಿಕ ಜಾಲತಾಣಗಳಿಗೆ ಪ್ರವೇಶಿಸಬಹುದು. ಈ ಕೀ ಬೋರ್ಡ್‌ನಲ್ಲಿ QWERTY ಮಾದರಿಯ, ಸಾಮಾನ್ಯ ಕಂಪ್ಯೂಟರ್‌ನಲ್ಲಿ ಇರುವಂಥದ್ದೇ ಕೀಗಳಿವೆ. ಅಲ್ಲದೇ ಈ ಕೀ ಬೋರ್ಡ್‌ ವೈರ್‌ಲೆಸ್ ಆಗಿರುವುದರಿಂದ ಇದನ್ನು ಎಲ್ಲಿ ಬೇಕೆಂದರಲ್ಲಿ ಇಟ್ಟು ಬಳಸಬಹುದು. ಈ ‘ಟ್ರೇ ಟೈಪರ್’ ಸದ್ಯ ಜರ್ಮನಿಯ ಕೆಎಫ್‌ಸಿ ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಇದ್ದು, ಗ್ರಾಹಕರು ಮುಗಿಬಿದ್ದು ಇದನ್ನು ಬಳಸುತ್ತಿದ್ದಾರೆ.

ಹಗುರವಾದ ಇದು, ತೀರಾ ತೆಳುವಾಗಿದೆ. ಹಾಗಾಗಿ ಮಡಚಿ ಹಿಡಿದುಕೊಂಡು ಹೋಗಬಹುದು. ಚಾರ್ಜ್ ಮಾಡಿ ಮರುಬಳಕೆ ಮಾಡಲೂ ಅನುಕೂಲ. ತನ್ನ ಬ್ರಾಂಡ್ ಜಾಹೀರಾತಿಗೆ ಆರಂಭಿಸಿದ ಈ ನೂತನ ಐಡಿಯಾ ಈಗ ಫಲಕೊಟ್ಟಿದ್ದು, ಗ್ರಾಹಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ. ಈಗಾಗಲೇ ಟ್ವಿಟ್ಟರ್ ಮತ್ತು ಇಮೋಜಿ ಮೂಲಕ ಪಿಜ್ಜಾ ಆರ್ಡರ್ ಮಾಡುವ ಸೇವೆ ಬಂದಿದ್ದು, ತಂತ್ರಜ್ಞಾನಕ್ಕೆ ದಾಸರಾದ ಗ್ರಾಹಕರ ಮನದಿಂಗಿತವನ್ನು ಅರಿತು, ಕಂಪೆನಿಗಳು ಈ ರೀತಿಯ ಹೊಸ ಪ್ರಯೋಗಗಳ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಮುಂದೊಂದು ದಿನ ಸೆಲ್ಫೀ ಕ್ಯಾಮೆರಾ ಸಹಿತ ತಟ್ಟೆಗಳು ಬಂದರೂ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.