ADVERTISEMENT

ಥೇಟ್‌ ಒಂದೇ ರೀತಿ ಎನಿಸುವ ಸಿನಿಮಾ ಪೋಸ್ಟರ್‌ಗಳು

ಪೃಥ್ವಿರಾಜ್ ಎಂ ಎಚ್
Published 5 ನವೆಂಬರ್ 2017, 19:30 IST
Last Updated 5 ನವೆಂಬರ್ 2017, 19:30 IST
ಥೇಟ್‌ ಒಂದೇ ರೀತಿ ಎನಿಸುವ ಸಿನಿಮಾ ಪೋಸ್ಟರ್‌ಗಳು
ಥೇಟ್‌ ಒಂದೇ ರೀತಿ ಎನಿಸುವ ಸಿನಿಮಾ ಪೋಸ್ಟರ್‌ಗಳು   

ಒಂದೇ ಆಲೋಚನೆ ಇಬ್ಬರಿಗೂ ಒಮ್ಮೆಲೇ ಬಂತೋ ಅಥವಾ ಮೊದಲು ಬಿಡುಗಡೆಯಾದ ಚಿತ್ರದ ಪೋಸ್ಟರ್‌ನಿಂದ ಸ್ಫೂರ್ತಿ ಪಡೆದು ಅಂಥದ್ದೇ ಪೋಸ್ಟರ್‌ ರೂಪಿಸಿದರೋ ಗೊತ್ತಿಲ್ಲ. ಆದರೆ ಈಚೆಗೆ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಚಿತ್ರರಂಗದ ಸಿನಿಮಾಗಳ ಪೋಸ್ಟರ್‌ಗಳು ಥೇಟ್‌ ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ ಬಿಡುಗಡೆಯಾದ ಚಿತ್ರಗಳ ಪೋಸ್ಟರ್‌ಗಳನ್ನೇ ಹೋಲುತ್ತಿವೆ.

ಹಲವು ದಾಖಲೆಗಳನ್ನು ನಿರ್ಮಿಸಿದ ‘ಬಾಹುಬಲಿ’ ಚಿತ್ರದ ಪೋಸ್ಟರ್‌ ಸಹ ಈ ಪಟ್ಟಿಯಲ್ಲಿ ಇದೆ. ‘ಬಾಹುಬಲಿ ದಿ ಬಿಗಿನಿಂಗ್‌’ ಚಿತ್ರಕ್ಕಾಗಿ ತಯಾರಿಸಿದ, ಮಗುವನ್ನು ನೀರಿನಿಂದ ಮೇಲಕ್ಕೆ ಎತ್ತಿರುವ ಪೋಸ್ಟರ್‌ ಹಲವರಿಗೆ ಇಷ್ಟ ಆಯಿತು. ಸಿನಿಮಾದ ಬಗ್ಗೆ ಇರುವ ಕುತೂಹಲವನ್ನೂ ಹೆಚ್ಚಿಸಿತ್ತು.

ಆದರೆ ಇದು, 1998ರಲ್ಲಿ ಬಿಡುಗಡೆಯಾದ ಅಮೆರಿಕದ ಹಾಸ್ಯ ಚಿತ್ರ ‘ಸೈಮನ್‌ ಬರ್ಚ್‌’ ಚಿತ್ರದ ಪೋಸ್ಟರ್‌ ಅನ್ನು ಹೋಲುತ್ತಿದೆ. ಈ ವಿಷಯ ಅಂತರ್ಜಾಲದಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಇನ್ನು ‘ಬಾಹುಬಲಿ ದಿ ಕನ್‌ಕ್ಲೂಷನ್’ ಚಿತ್ರದಲ್ಲಿ ನಟ ಪ್ರಭಾಸ್ ಆನೆಯ ಮೇಲೆ ಹತ್ತಿರುವ ಪೋಸ್ಟರ್‌ ಥಾಯ್ಲೆಂಡ್‌ನ ‘ಆಂಗ್‌ಬಾಕ್‌–2’ ಚಿತ್ರದ ಪೋಸ್ಟರ್‌ ಅನ್ನು ಹೋಲುತ್ತಿತ್ತು!

ADVERTISEMENT

ದೇಶದ ಸಿನಿರಸಿಕರೆಲ್ಲಾ ಕಾತರದಿಂದ ಕಾಯುತ್ತಿರುವ ರೋಬೊ 2.0 ಚಿತ್ರದಲ್ಲಿ ರಜನಿಕಾಂತ್ ಮತ್ತು ಅಕ್ಷಯ್‌ಕುಮಾರ್ ಮುಖಾಮುಖಿಯಾಗಿರುವ ಪೋಸ್ಟರ್‌ ಸಹ ‘ಹ್ಯಾರಿಪಾಟರ್‌ ಇಟ್‌ ಆಲ್‌ ಎಂಡ್ಸ್‌’ ಚಿತ್ರದ ಪೋಸ್ಟರ್‌ನಂತಿದೆ.

ಇನ್ನು ರಜನಿಕಾಂತ್ ನಟಿಸಿದ ‘ಕಬಾಲಿ’ ಚಿತ್ರದ ಪೋಸ್ಟರ್‌ಗಳಂತೂ ಟಾಲಿವಡ್‌ನ ಡಿಕ್ಟೇಟರ್, ಹಾಲಿವುಡ್‌ನ ಜೇಮ್ಸ್‌ಬಾಂಡ್‌ ಸರಣಿಯ ‘ಸ್ಪೆಕ್ಟರ್’ ಪೋಸ್ಟರ್‌ಗಳನ್ನು ಹೋಲುತ್ತಿವೆ.

ವಿಜಯ್‌ ನಟನೆಯ ‘ತುಪಾಕಿ’ ಚಿತ್ರದ ಪೋಸ್ಟರ್‌ 1982ರಲ್ಲಿ ಬಿಡುಗಡೆಯಾದ ಹಾಲಿವುಡ್‌ನ ‘ಆ್ಯನ್‌ ಆಫೀಸರ್ ಆ್ಯಂಡ್ ಎ ಜೆಂಟಲ್‌ಮೆನ್‌’ ಪೋಸ್ಟರ್‌ನ ತದ್ರೂಪದಂತಿದೆ. ಇದರಲ್ಲಿ ನಾಯಕ, ನಾಯಕಿ ಅನ್ನು ಎತ್ತಿಕೊಂಡಿರುವ ರೀತಿ, ಅವರು ಧರಿಸಿರುವ ದಿರಿಸು ಶೀರ್ಷಿಕೆಯ ವಿನ್ಯಾಸ ಎಲ್ಲ ಒಂದೇ ರೀತಿ ಇವೆ.

ಬಾಲಿವುಡ್‌ನಲ್ಲೂ ಈ ರೀತಿಯ ಪೋಸ್ಟರ್‌ಗಳು ಇವೆ. 2010ರಲ್ಲಿ ಬಿಡುಗಡೆಯಾದ ‘ಅತಿಥಿ ತುಮ್‌ ಕಬ್‌ ಜಾವೊಗೆ’ ಚಿತ್ರದ ಭಿತ್ತಿಪತ್ರ 2007ರಲ್ಲಿ ಬಿಡುಗಡೆಯಾದ ಹಾಲಿವುಡ್‌ನ ‘ಲೈಸೆನ್ಸ್‌ ಟು ವೆಡ್‌’ ಪೋಸ್ಟರ್‌ ಅನ್ನು ಹೋಲುತ್ತಿದೆ.

2011ರಲ್ಲಿ ಬಿಡುಗಡೆಯಾದ ‘ಜಿಂದಗಿ ನಾ ಮಿಲೇಗಿ ದುಬಾರಾ’  ಚಿತ್ರ ಪೋಸ್ಟರ್ 12 ವರ್ಷದ ಹಿಂದೆ ಬಿಡುಗಡೆಯಾದ ಹಾಲಿವುಡ್‌ನ ‘ಲಾರ್ಡ್ಸ್‌ ಆಫ್‌ ಡಾಗ್‌ಟೌನ್‌’ ಪೋಸ್ಟರ್‌ನ ನಕಲು ಪ್ರತಿಯಂತೆ ಇದೆ. ಸದ್ಯ ಬಿಡುಗಡೆ ಆಗಿರುವ ಪ್ರಭಾಸ್‌ ಅಭಿನಯದ ‘ಸಾಹೊ’ ಚಿತ್ರದ ಪೋಸ್ಟರ್‌ ಕೂಡ ’ಬ್ಲೇಡ್‌ ರನ್ನರ್‌ 2049’ನ ತದ್ರೂಪ ಎಂದು ಅನೇಕರು ವಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.