ADVERTISEMENT

‘ದಪ್ಪಗಿದ್ದುದೇ ವರವಾಯ್ತು’

ಕಿರುತೆರೆ

ಸುರೇಖಾ ಹೆಗಡೆ
Published 8 ಮೇ 2017, 19:30 IST
Last Updated 8 ಮೇ 2017, 19:30 IST
ಗೀತಾ ಭಾರತಿ ಭಟ್‌
ಗೀತಾ ಭಾರತಿ ಭಟ್‌   

*ನಿಮ್ಮೂರು, ಶಿಕ್ಷಣ?
ಅಪ್ಪ ಮೂಡುಬಿದಿರೆಯವರು. ಅಮ್ಮ ನಾರಾವಿಯವರು. ವಾಸ ಬೆಂಗಳೂರಿನಲ್ಲೇ. ಬಿಕಾಂ ಮುಗಿಸಿ ನಾರ್ದರ್ನ್‌ ಟ್ರಸ್ಟ್‌ನಲ್ಲಿ ಕೆಲಸ ಮಾಡಿದ್ದೆ. ಸಂಗೀತ ಸೆಳೆತದಲ್ಲಿ ಕೆಲಸ ಬಿಟ್ಟೆ.

*ಹಾಡ್ತೀರಂತೆ...?
ಹೌದು, ಸಿನಿಮಾಗಳಲ್ಲಿ ಟ್ರ್ಯಾಕ್‌, ಹಿನ್ನೆಲೆ ಗೀತೆಯಲ್ಲಿ ದನಿಗೂಡಿಸಿದ್ದೆ. ಕೆಲವು ಹೊಸ ಸಿನಿಮಾಗಳಲ್ಲಿ ಹಾಡಿದ್ದೇನೆ. ಅವಿನ್ನೂ ಬಿಡುಗಡೆ ಆಗಿಲ್ಲ.

*ಯಾವ ಶೈಲಿಯ ಸಂಗೀತ ನೀವು ಕಲಿತಿದ್ದು?
15 ವರ್ಷದಿಂದ ಸಂಗೀತ ಪಾಠ ಹೇಳಿಸಿಕೊಳ್ಳುತ್ತಿದ್ದೇನೆ. 9 ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತೆ. ಈಗ 6 ವರ್ಷದಿಂದ  ಹಿಂದೂಸ್ತಾನಿ ಗಾಯನ ಕಲಿಯುತ್ತಿದ್ದೇನೆ.  ಸಂಗೀತವೇ ನನಗೆ ಬದುಕು.

*ಸಂಗೀತ ಪ್ರೇಮಿಯಾಗಿ ನಟನೆಯತ್ತ ಹೊರಳಿದ್ದು?
ನಟನೆಯ ಅವಕಾಶ ಸಿಗಲೂ ಸಂಗೀತವೇ ಕಾರಣ. ಉದಯ ಟೀವಿಯಲ್ಲಿನ ‘ಸಂ–ಗೀತ’ ಕಾರ್ಯ ಕ್ರಮಕ್ಕಾಗಿ ವಿಡಿಯೊ ಮಾಡಿದ್ದೆ. ಅದನ್ನು ನೋಡಿ ಅವಕಾಶ ಕೊಟ್ಟರು. ಮನುಷ್ಯನ ಭಾವನೆಗಳನ್ನು ತೋರಿಸಿಕೊಳ್ಳುವುದಕ್ಕೆ ಕಲೆ ಒಂದು ಮಾಧ್ಯಮ. ಅದು ಸಂಗೀತವಾದರೂ ಸರಿ, ನಟನೆಯಾದರೂ ಸರಿ. ಹೀಗಾಗಿ ಒಪ್ಪಿಕೊಂಡೆ.

*ಧಾರಾವಾಹಿಯಲ್ಲಿ ಕಾಣಿಸುವಷ್ಟು ದಪ್ಪಗಿದ್ದೀರಾ?
ಹೌದು, ಧಾರಾವಾಹಿಯಲ್ಲಿ ಕಾಣುತ್ತಿರುವಂತೆಯೇ ಇದ್ದೇನೆ. ಚಿಕ್ಕಂದಿನಿಂದಲೂ ಮುದ್ದುಮುದ್ದಾಗಿ, ಛಬ್ಬಿಯಾಗಿಯೇ ಇದ್ದೆ. ಬಾಸ್ಕೆಟ್‌ಬಾಲ್‌, ಕರಾಟೆ ಹೀಗೆ ಕ್ರೀಡಾ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡಿದ್ದೆ. ಒಮ್ಮೆ ಸೋಂಕು ತಗುಲಿ ಕಾಲಿನ ಆಪರೇಶನ್‌ ಮಾಡಿಸಿ ಕೊಳ್ಳಬೇಕಾಯಿತು. ಅದಾದ ನಂತರ ನಿಯಂತ್ರಣಕ್ಕೇ ಸಿಗದಷ್ಟು ದಪ್ಪಗಾಗಿಬಿಟ್ಟೆ. ಹಾಗಂತ ಬೇಸರವಿಲ್ಲ. ಹೀಗಿರುವುದರಿಂದಲೇ ಅಲ್ಲವೆ, ಧಾರಾವಾಹಿಗೆ ಅವಕಾಶ ಸಿಕ್ಕಿದ್ದು.

*ಸಣ್ಣಗಾಗುವ ಪ್ರಯತ್ನ ಮಾಡಿಲ್ಲವೆ?
ಮಾಡಿದ್ದೇನೆ. ಆದರೆ ಎಲ್ಲದಕ್ಕೂ ಸಮಯ ಕೂಡಿಬರಬೇಕು. ಈ ಧಾರಾವಾಹಿ ಮುಗಿಸಿದ ನಂತರವೇ ನನ್ನ ಸಣ್ಣಗಾಗುವ ಆಸೆ ಈಡೇರಬೇಕೆಂದಿದೆಯೋ ಏನೊ. ಸಣ್ಣಗಾಗಬೇಕು ಎಂದು ಊಟ ತಿಂಡಿ ಬಿಡಲು ಸಾಧ್ಯವಿಲ್ಲ. ನಾನು ತುಂಬಾ ತಿಂಡಿಪೋತಿ. ಯೋಗ, ಪ್ರಾಣಾಯಾಮ ಮಾಡುತ್ತೇನೆ.

*ನಾಯಕಿ ಎಂದಮೇಲೆ ತೆಳ್ಳಗೆ ಬೆಳ್ಳಗೆ ಇರಬೇಕಲ್ವಾ ಮೇಡಂ?
ಹೌದು, ಜನರ ಮನಸ್ಸಿನಲ್ಲಿ ನಾಯಕಿ ಎಂದರೆ ಅದೇ ಚಿತ್ರಣ ಮೂಡುತ್ತದೆ. ಆದರೆ ಈ ಮನಸ್ಥಿತಿಯಿಂದ ಹೊರತರುವ ಜವಾಬ್ದಾರಿ ಧಾರಾವಾಹಿ ಮೂಲಕ ನನಗೆ ಸಿಕ್ಕಿದೆ. ನಾಯಕಿ ಎನ್ನುವುದು ಬಾಹ್ಯ ಸೌಂದರ್ಯದಿಂದ ಸಿಗುವ ಪಟ್ಟವಲ್ಲ. ಅದು ವ್ಯಕ್ತಿತ್ವಕ್ಕೆ ಸಿಗುವ ರೂಪು. ದಪ್ಪಗಿರುವವರ ಅಂತರಾಳದ ಆಸೆ, ಯೋಚನೆ, ಭಾವನೆಗಳನ್ನು ತಿಳಿಸುವ ಈ ಧಾರಾವಾಹಿ ಖಂಡಿತ ಜನರಿಗೆ ಇಷ್ಟವಾಗುತ್ತದೆ.

*ಇದು ಹಾಸ್ಯ ಧಾರಾವಾಹಿಯೇ?
ಹಾಗೇನಿಲ್ಲ, ಕ್ಯಾಚಿ ಆಗಿರಲಿ ಎಂದು ಪ್ರೋಮೊದಲ್ಲಿ ತುಂಬಾ ತಮಾಷೆಯಾಗಿ ತೋರಿಸಿದ್ದಾರೆ. ಆದರೆ ಧಾರಾವಾಹಿ ಆಕೆಯ ಮನಸ್ಸು, ಸಹಾಯ ಮಾಡುವ ಮನಸ್ಥಿತಿಯ ಎಳೆಯ ಮೇಲೆ ಸಾಗುತ್ತದೆ.

*ಧಾರಾವಾಹಿಯಲ್ಲಂತೂ ಸಪೂರ ಸುಂದರ ನಾಯಕನನ್ನು ವರಿಸಿದ್ದೀರಿ. ನಿಜ ಜೀವನದಲ್ಲಿ...
ನಾನು ಲುಕ್‌ಗಳ ಬಗೆಗೆ ಹೆಚ್ಚು ಯೋಚಿಸುವುದಿಲ್ಲ. ಅದು ನನಗೆ ಮುಖ್ಯವೂ ಅಲ್ಲ. ನಮ್ಮಿಬ್ಬರ ಅಭಿರುಚಿ ಹೊಂದಬೇಕು. ಬೆಂಬಲ ನೀಡುವ ಮನಸ್ಥಿತಿ ಅವನದ್ದಾಗಿರಬೇಕು.

*ದಪ್ಪಗಿದ್ದೀರಿ ಎಂದು ನಿಮ್ಮನ್ನು ಯಾರಾದರೂ ರೇಗಿಸಿದ್ದಾರೆಯೇ?
ಅಂಥ ಸನ್ನಿವೇಶಗಳು ಸಾಕಷ್ಟು ಆಗಿವೆ. ಅದರಿಂದ ಹೊರಬರಲು ನನ್ನನ್ನು ನಾನೇ ತಮಾಷೆ ಮಾಡಿಕೊಳ್ಳಲಾರಂಭಿಸಿದೆ. ಪ್ರಾರಂಭದಲ್ಲಿ ಕಷ್ಟ ಎನಿಸಿತು. ಆದರೆ ನೈಜತೆಯನ್ನು ಒಪ್ಪಿಕೊಂಡಾಗ ತಮಾಷೆ ಬೇಸರ ನೀಡದು.

ಮೈಸೂರಿನ ಕಿಕ್ಕಿರಿದ ಸಭಾಂಗಣದಲ್ಲಿ ಹಾಡಬೇಕಿತ್ತು. ಕುಳಿತಲ್ಲಿಂದ ಮೆಟ್ಟಿಲು ಹತ್ತಿ ವೇದಿಕೆ ಏರಬೇಕಿತ್ತು. ಕಾಲು ತಡವರಿಸಿ ಬಿದ್ದು ಬಿಟ್ಟೆ. ಇಡೀ ಸಭಾಂಗಣವೇ ನನ್ನೆಡೆ ನೋಡಿ ನಕ್ಕುಬಿಟ್ಟಿತು. ಸಾವರಿಸಿಕೊಂಡು ಕುಳಿತು, ನಾನೂ ಜೋರಾಗಿ ನಕ್ಕುಬಿಟ್ಟೆ. ಎಲ್ಲರೂ ಸುಮ್ಮ ನಾದರು. ವೇದಿಕೆ ಏರಿ ಹಾಡಿದೆ. ಪ್ರಶಸ್ತಿಯೂ ಸಿಕ್ಕಿತು. ಆ ಸನ್ನಿವೇಶವನ್ನು ಎಂದೂ ಮರೆಯಲಾರೆ.

*ಧಾರಾವಾಹಿಯ ಪಾತ್ರಕ್ಕೂ, ನಿಜ ಬದುಕಿನ ನಿಮ್ಮ ವ್ಯಕ್ತಿತ್ವಕ್ಕೂ ಸಾಮ್ಯತೆ ಇದೆಯೇ?
ಭಯಂಕರ ಸಾಮ್ಯತೆ ಇದೆ. ಧನಾತ್ಮಕ ಚಿಂತನೆ, ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಸು, ಅವಳ ಮನಸ್ಸಿನ ಭಾವನೆಗಳು ಎಲ್ಲವೂ ನನ್ನಲ್ಲಿದೆ. ಆಕೆಗೆ ಕೋಪವೂ ಜಾಸ್ತಿ, ನಾಚಿಕೆಯೂ ಅತಿ. ಖುಷಿಯೂ ಹೆಚ್ಚು. ಅವಳಲ್ಲಿ ಯಾವುದೂ ಕಮ್ಮಿ ಇಲ್ಲ. ಎಲ್ಲವೂ ಹೆಚ್ಚೇ. ತುಂಬಾ ಮುಗ್ಧೆಯ ಪಾತ್ರವದು. ಹಲವು ಸಂದರ್ಭ ಗಳಲ್ಲಿ ನಾನೂ ಹಾಗೇ ಎನಿಸುತ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT