ADVERTISEMENT

ದೂರ ಹೋಗದು, ಹತ್ತಿರ ಬರದು

ಘನಶ್ಯಾಮ ಡಿ.ಎಂ.
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST
ಸಾಯಿ ಪಲ್ಲವಿ
ಸಾಯಿ ಪಲ್ಲವಿ   

'ನೂರೂ ಜನ್ಮಕೂ ನೂರಾರೂ ಜನ್ಮಕೂ...' ಹಾಡು ನೆನಪಿದೆಯೇ? 'ಅಮೆರಿಕ ಅಮೆರಿಕ' (1995) ಚಿತ್ರದ ಜನಪ್ರಿಯ ಗೀತೆಯಿದು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರವನ್ನು ಇಷ್ಟಪಡಲು ಇದ್ದ ಹಲವು ಕಾರಣಗಳಲ್ಲಿ ಈ ಸುಮಧುರ ಹಾಡೂ ಸಹ ಒಂದು. ನಾಯಕ ಬರೆದ ಪ್ರೇಮಪತ್ರದ ಮೇಲೆ ನಾಯಕಿ ಹೆಜ್ಜೆ ಇರಿಸುವ, ನಂತರ ನಾಯಕ ಆ ಹಾಳೆಗೆ ಮುತ್ತುಕೊಡುವ ಸನ್ನಿವೇಶವೂ ಹಾಡಿನಲ್ಲಿದೆ.

ಈಚೆಗೆ ಬಿಡುಗಡೆಯಾಗಿ ಸೂಪರ್‌ಹಿಟ್ ಆದ ಎರಡು ತೆಲುಗು ಚಿತ್ರಗಳು ಕನ್ನಡಿಗರಿಗೆ 'ಅಮೆರಿಕ ಅಮೆರಿಕ'ವನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿವೆ. ಶೇಖರ್ ಕಮ್ಮುಲ ನಿರ್ದೇಶನದ 'ಫಿದಾ' ಆಶಯ ಮತ್ತು ಚಿತ್ರಬಂಧದ ದೃಷ್ಟಿಯಿಂದ 'ಅಮೆರಿಕ ಅಮೆರಿಕ'ದ ಸನಿಹಕ್ಕೆ ಬರುತ್ತದೆ. ಇನ್ನು ಹರೀಶ್‌ ಶಂಕರ್ ನಿರ್ದೇಶನದ 'ದುವ್ವಾಡ ಜಗನ್ನಾಥಂ' (ಡಿಜೆ) ಚಿತ್ರವು ಅಮೆರಿಕ ಎನ್ನುವ ಪರಿಕಲ್ಪನೆಯ ಬಗ್ಗೆಯೇ ಹೊಸ ವ್ಯಾಖ್ಯಾನ ನೀಡುವ ಪ್ರಯತ್ನ ಮಾಡಿದೆ.

ತೆಲಂಗಾಣದ ಹಳ್ಳಿಗಳ ಬದುಕು, ಅಪ್ಪ-ಅಮ್ಮನನ್ನು ಬಿಟ್ಟು ಹೋಗಲು ಒಲ್ಲದ ಹರೆಯದ ಹುಡುಗಿಯ ಸಂದಿಗ್ಧ ಮನಸ್ಥಿತಿ, ಇಷ್ಟಪಟ್ಟವಳ ಚಪ್ಪಲಿಯ ಚಿತ್ರವನ್ನೇ ಕನ್ನಡಿ ಮೇಲೆ ಅಂಟಿಸಿಕೊಂಡು ಆರಾಧಿಸುವ ಭಾವುಕ ಪ್ರೇಮಿ, ಹಸಿರು ತುಂಬಿದ ಗದ್ದೆಗಳು, ಕಣ್ಣಿಗೆ ಸುಖಕೊಡುವ ಛಾಯಾಗ್ರಹಣ, ಕಿವಿಗೆ ಇಂಪೆರೆವ ಹಾಡುಗಳು, ಸಾಯಿಪಲ್ಲವಿಯ ನಸುಗೆಂಪು ಕೆನ್ನೆ... ಹೀಗೆ 'ಫಿದಾ' ಇಷ್ಟವಾಗಲು ಕಾರಣಗಳು ಹಲವು. ಆದರೆ, ಕೇವಲ ಕಥೆಗಾಗಿ ಅಥವಾ ಟಾಲಿವುಡ್ ರೋಚಕತೆಗಾಗಿ 'ಫಿದಾ' ನೋಡಿದರೆ ನಿರಾಶೆ ತಪ್ಪಿದ್ದಲ್ಲ.

ADVERTISEMENT

'ಲವ್ ಹೇಟ್ ಲವ್ ಸ್ಟೋರಿ' ಎನ್ನುವ ಅಡಿಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿದ್ದ 'ಫಿದಾ'ದ ಮುಖ್ಯಅಂಶವೇ ಅಮೆರಿಕ ಎನ್ನುವ ಕನಸಿನ ಕುದುರೆಯ ಬೆನ್ನೇರಿದವರನ್ನು ವಾಸ್ತವಕ್ಕೆ ಇಳಿಸುವುದು. ಇದೇ ಕಾರಣಕ್ಕೇ 'ಫಿದಾ'ದ ಭಾನುಮತಿಯನ್ನು (ಸಾಯಿ ಪಲ್ಲವಿ) ಕನ್ನಡದ ಮನಸುಗಳು 'ಅಮೆರಿಕ ಅಮೆರಿಕ'ದ ಸೂರ್ಯನ (ರಮೇಶ) ಜೊತೆಗೆ ಹೋಲಿಸಿ ಖುಷಿಪಡುವುದು.

'ಮದುವೆಯಾದ ಯುವತಿಯರು ಗಂಡನ ಮನೆಗೆ ಯಾಕೆ ಹೋಗಬೇಕು? ಮದುವೆಯಾದ ಹುಡುಗ ಯಾಕೆ ಹೆಂಡತಿ ಮನೆಗೆ ಬರಬಾರದು?' ಸ್ತ್ರೀಸ್ವಾತಂತ್ರ್ಯವನ್ನು ಇಂದಿಗೂ ಅದುಮಿಟ್ಟಿರುವ ತೆಲಂಗಾಣದಂಥ ಪ್ರಾಂತ್ಯಗಳಲ್ಲಿರುವ ಲಕ್ಷಾಂತರ ಯುವತಿಯರ ಮನದ ಪ್ರಶ್ನೆ ಇದು. ಅಕ್ಕತಂಗಿಯರ ಸಂಭಾಷಣೆ ಮೂಲಕ ಈ ವಿಚಾರವನ್ನು ಚಿತ್ರ ಚರ್ಚಿಸುತ್ತದೆ. ಕ್ಲೈಮ್ಯಾಕ್ಸ್‌ನ ಸನ್ನಿವೇಶ ಹೀಗಿದೆ...

'ಅಯ್ಯೋ ಹುಚ್ವಿ, ನಿನ್ನ ಹುಡುಗ ನಿನ್ನೂರಲ್ಲೇ ಇರ್ತಾನೆ. ನೀನೆಲ್ಲಿಗೂ ಹೋಗಬೇಕಿಲ್ಲ' ಎನ್ನುವುದು ಗಂಡನ ಮನೆಗೆ ಹೋಗಲು ಸಿದ್ಧಳಾಗಿದ್ದ ತಂಗಿಗೆ ಅಕ್ಕ ಹೇಳುವ ಮಾತು. ಅಕ್ಕನ ಮಾತು ಕೇಳಿದ ಭಾನುಮತಿ ತನ್ನವನನ್ನು ಹುಡುಕಲು ಓಡುತ್ತಾಳೆ. ಅವನಿಗೆ ತೆಕ್ಕೆಬಿದ್ದು ಲೊಚಲೊಚ ಮುದ್ದಿಕ್ಕಿದಾಗ ನಾಯಕನು 'ನೀನೇ ನನ್ನ ಪ್ರಪಂಚ. ನೀನೆಲ್ಲೋ ನಾನಲ್ಲೇ' ಎಂದು ತಬ್ಬುಗೆಯನ್ನು ಬಿಗಿಮಾಡುತ್ತಾನೆ. ಒಂದು ಸಾಮಾಜಿಕ ಪ್ರಶ್ನೆಗೆ ಸೃಜನಶೀಲ ನಿರ್ದೇಶಕ ಮುಖಾಮುಖಿಯಾಗಿರುವ ಪರಿಯಿದು.

'ಟಾಲಿವುಡ್‌' ಮಸಾಲೆಗಳನ್ನು ಮೈತುಂಬಿಕೊಂಡಿದ್ದ 'ದುವ್ವಾಡ ಜಗನ್ನಾಥಂ' (ಡಿಜೆ) ಜೊತೆಗೆ ಜನಪ್ರಿಯತೆಯ ದೃಷ್ಟಿಯಿಂದ 'ಫಿದಾ' ಸಿನಿಮಾವನ್ನು ಹೋಲಿಸಲು ಆಗದು. ಆದರೆ, ಅಲ್ಲು ಅರ್ಜುನ್ ಡಾನ್ಸು, ಸುಂದರ ಹುಡುಗಿ ಪೂಜಾ ಹೆಗಡೆಯ ಹಸಿಬಿಸಿ ಮೈಮಾಟವನ್ನೂ ಮೀರಿ 'ಡಿಜೆ' ಚಿತ್ರದ ಸಂಭಾಷಣೆಗಳು ಜನಪ್ರಿಯವಾದವು. 'ಅಮೆರಿಕದಂಥ ಕಾಣದ ದೇಶಕ್ಕೆ ಹೋದರೆ ಕುಟುಂಬದ ಬಂಧ ಸಡಿಲವಾಗುತ್ತೆ' ಎನ್ನುವ ದೊಡ್ಡವರ ಭ್ರಮೆಗಳನ್ನು ಈ ಚಿತ್ರವೂ ತನ್ನದೇ ಆದ ರೀತಿಯಲ್ಲಿ ವಿಮರ್ಶೆಗೆ ಒಳಪಡಿಸಿತು.

'ದೂರದ ದೇಶಕ್ಕೆ ಹೋದ ಮಕ್ಕಳು ಅಪ್ಪ-ಅಮ್ಮನನ್ನು ಮರೆತು ಬಿಡುತ್ತಾರೆ ಅಂತ ನೀವ್ಯಾಕೆ ಹೆದರ್ತೀರಿ? ಕೆಲಸ ಸಿಕ್ತು ಅಂತ ನೀವು ಹಳ್ಳಿಗಳಿಂದ ನಗರಗಳಿಗೆ ಬಂದ್ರಿ. ಈಗ ಕೆಲಸ ಸಿಗುತ್ತೆ ಅಂತ ನಿಮ್ಮ ಮಕ್ಕಳು ನಗರಗಳಿಂದ ಅಮೆರಿಕಕ್ಕೆ ಹೋಗುತ್ತಾರೆ. ನೀವು ಕಾಗದ ಬರೀತಿದ್ರಿ, ನಿಮ್ಮ ಮಕ್ಕಳು ಇಮೇಲ್ ಮಾಡ್ತಾರೆ. ಮಾಧ್ಯಮ ಬದಲಾಗಿರಬಹುದು, ಆದರೆ ಬಂಧ ಬದಲಾಗದು' ಎನ್ನುವುದು ನಿರ್ದೇಶಕರ ಚಿಂತನೆ. ಅವರ ಚಿಂತನೆಯೇ ಅಲ್ಲು ಅರ್ಜುನ್ ಬಾಯಲ್ಲಿ ಸಂಭಾಷಣೆಯಾಗಿ ಜನರ ಕಿವಿ ತಲುಪಿದೆ.

'ನಮ್ಮ ಕುಟುಂಬ ಬಂಧಗಳು-ಭಾವನೆಗಳನ್ನು ಉಳಿಸಿಕೊಂಡು ಅಮೆರಿಕ (ವಿದೇಶಕ್ಕೆ ಹೋಗಿ ಹಣ ಮಾಡುವುದು) ಎನ್ನುವ ಅತಿದೊಡ್ಡ ಅವಕಾಶವನ್ನು ನಿರ್ವಹಿಸುವುದು ಹೇಗೆ?' ಎನ್ನುವುದು ಇಂದಿನ ಸಮಾಜದ ಬಹುದೊಡ್ಡ ಪ್ರಶ್ನೆ. ಈ ಪ್ರಶ್ನೆಯನ್ನು ಒಂದು ಕಲಾಮಾಧ್ಯಮವಾಗಿ ಚಲನಚಿತ್ರಗಳು ಹೇಗೆ ನಿರ್ವಹಿಸಿವೆ ಎಂದು ಯೋಚಿಸಿದಾಗ ಮನದ ತೆರೆಯ ಮೇಲೆ ಮೂಡಿಬಂದ ಮೂರು ಚಿತ್ರಗಳಿವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.