ADVERTISEMENT

ನಟನೆಗೆ ಪರಿಧಿಯಿಲ್ಲ...

ಪ್ರಜಾವಾಣಿ ವಿಶೇಷ
Published 14 ಫೆಬ್ರುವರಿ 2016, 19:30 IST
Last Updated 14 ಫೆಬ್ರುವರಿ 2016, 19:30 IST
ನಟನೆಗೆ ಪರಿಧಿಯಿಲ್ಲ...
ನಟನೆಗೆ ಪರಿಧಿಯಿಲ್ಲ...   

ನೀಳಕಾಯ, ಸದಾ ಮಿನುಗುವ ಕಣ್ಣು,  ಮೊಗದಲ್ಲಿ ಎಂದೂ ಮಾಸದ ನಗುವಿನ ಈಕೆ ಕಡಲತಡಿಯ ಕುವರಿ ಯಜ್ಞಾ ಶೆಟ್ಟಿ. ನಟಿಯಾಗಬೇಕು ಎಂಬ ಯಾವುದೇ ನಿರೀಕ್ಷೆ ಇರಿಸಿಕೊಂಡಿರದ ಈಕೆ ನಟನಾ ಕ್ಷೇತ್ರಕ್ಕೆ ಪಾದವಿರಿಸಿದ್ದು ಆಕಸ್ಮಿಕ. ಬಾಲ್ಯದಿಂದಲೂ ಡ್ಯಾನ್ಸ್‌ ಮೇಲೆ ವಿಪರೀತ ಆಸಕ್ತಿ. ಶಾಲಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಆಕೆ ಮುಂದು.

ಒಂದು ಪ್ರೀತಿಯ ಕಥೆ, ಎದ್ದೇಳು ಮಂಜುನಾಥ, ಕಳ್ಳ ಮಳ್ಳ ಸುಳ್ಳ, ಉಳಿದರವರು ಕಂಡಂತೆ, ಕಿಲ್ಲಿಂಗ್ ವೀರಪ್ಪನ್‌, ಸುಗ್ರೀವ ಹೀಗೆ ಅವರು ನಟಿಸಿದ ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳನ್ನೇ ನಿರ್ವಹಿಸಿದ್ದಾರೆ. ಎದ್ದೇಳು ಮಂಜುನಾಥ ಚಿತ್ರದಲ್ಲಿ ಅಳುಮುಂಜಿ ಹೆಂಡತಿಯಾಗಿ ಕಾಣಿಸಿಕೊಂಡಿದ್ದ ಯಜ್ಞಾ, ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ಗಂಡನನ್ನು ಸದಾ ಅನುಮಾನದಿಂದ ನೋಡುವ ಹೆಂಡತಿ ಪಾತ್ರ.

ನನಗೆ ನಟನೆಯಷ್ಟೇ ಓದು ಕೂಡ ಮುಖ್ಯವಾಗಿತ್ತು ಎನ್ನುವ ಮಂಗಳೂರಿನ ಬಂಟರ ಹುಡುಗಿ ಎಂಬಿಎ ಪದವಿಧರೆ. ಗಾಸಿಪ್‌, ಗ್ಲಾಮರ್‌ ಬಗ್ಗೆ ಹೆಚ್ಚೆನೂ ತಲೆ ಕೆಡಿಸಿಕೊಳ್ಳದೆ ತಮ್ಮ ಚಿತ್ರರಂಗದ ಪಯಣವನ್ನು ಇಲ್ಲಿ ಹಂಚಿಕೊಂಡಿದ್ದಾರೆ..

* ನಟನಾ ಕ್ಷೇತ್ರಕ್ಕೆ ಕಾಲಿರಿಸಿದ್ದು ಆಕಸ್ಮಿಕವೇ?
ನಟನೆಗೆ ನಾನು ಬಯಸಿ ಬಂದಿದ್ದಲ್ಲ. ನನ್ನ ಸಹೋದರಿ ಫ್ಯಾಷನ್‌ ಡಿಸೈನಿಂಗ್‌ ವೃತ್ತಿ ಮಾಡುತ್ತಿದ್ದರು. ನಾನು ಓದುತ್ತಿರುವಾಗ ಅವರಿಗೆ ಫ್ರಿಲ್ಯಾನ್ಸರ್ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿ ತಂಗಿ ಕಾಲೇಜಲ್ಲಿ ‘ಟ್ಯಾಲೆಂಟ್ ಹಂಟ್’ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿ ನಾನು ಮೊದಲ ಬಾರಿ ವೇದಿಕೆಯ ಮೇಲೆ ಬಂದಿದ್ದು. ಅದೇ ನನ್ನ ನಟನೆಗೆ ಪ್ರೇರಣೆ ನೀಡಿತು.

* ಮೊದಲ ಬಾರಿ ಕ್ಯಾಮರಾ ಎದುರಿಸಿದಾಗಿನ ಅನುಭವ ಹೇಗಿತ್ತು?
ನಾನು ಬಾಲ್ಯದಿಂದಲೂ ಸಭಾ ಕಾರ್ಯಕ್ರಮಗಳನ್ನು ನೀಡುತ್ತಿದ್ದೆ. ಚಿಕ್ಕ ವಯಸ್ಸಿನಿಂದಲೂ ಡಾನ್ಸ್ ಮಾಡುತ್ತಿದ್ದೆ. ಜನರ ಎದುರು ನಟಿಸುವುದು ಹೊಸತಾದರೂ ಕ್ಯಾಮರಾ ಎದುರಿಸುವುದು ನನಗೆ ಹೊಸತು ಎನ್ನಿಸುತ್ತಿರಲಿಲ್ಲ. ನನ್ನ ಎದುರು ಜನ ಇಲ್ಲ ಎಂದು ಕಲ್ಪಿಸಿಕೊಂಡೇ ನಾನು ನಟನೆ ಮಾಡುತ್ತಿದ್ದೆ. ಹೀಗೆ ಕ್ಯಾಮೆರಾ ಎದುರಿಸಿದ್ದು ಮೊದಲ ಬಾರಿ ಅನ್ನಿಸಲೇ ಇಲ್ಲ. ನನಗೆ ನನ್ನ ಮೇಲೆ ತುಂಬಾನೇ ಆತ್ಮವಿಶ್ವಾಸವಿತ್ತು.

* ಚಿತ್ರರಂಗಕ್ಕೆ ಬರಲು ಮನೆಯವರ ಸಹಕಾರ ಹೇಗಿತ್ತು?
ಫಿಲ್ಮ್‌ನಲ್ಲಿ ಅಭಿನಯಿಸುತ್ತೇನೆ ಎಂದಾಗ ಮನೆಯವರು ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ನಮ್ಮ ಅಮ್ಮ  ಹಾಗೂ ಸಹೋದರಿ ತುಂಬಾನೇ ಸಹಕಾರ ನೀಡಿದ್ದರು. ನಮ್ಮ ಮನೆಯಲ್ಲಿ ಎಲ್ಲರೂ ಕಲೆಯ ಬಗ್ಗೆ ತುಂಬಾ ಅಭಿಮಾನ ಇಟ್ಟುಕೊಂಡಿದ್ದರು. ಹಾಗಾಗಿ ನಟಿಸುತ್ತೇನೆ ಎಂದಾಗ ಯಾರೂ ಬೇಡ ಎನ್ನಲಿಲ್ಲ. ಬದಲಾಗಿ ಪ್ರೋತ್ಸಾಹ ನೀಡಿದರು.

* ನಿಮಗೆ ಯಾವ ರೀತಿಯ ಪಾತ್ರದಲ್ಲಿ ಅಭಿನಯಿಸಲು ಇಷ್ಟ?
ನಾನು ನಟನೆಗೆ ಯಾವುದೇ ನಿರ್ದಿಷ್ಟ ಪರಿಧಿ ಹಾಕಿಕೊಂಡಿಲ್ಲ. ಪ್ರತಿ ಪಾತ್ರವನ್ನೂ ಇಷ್ಟಪಟ್ಟು ಅಭಿನಯಿಸುತ್ತೇನೆ. ನಾನು ಯಾವತ್ತೂ ಇಂತಹದ್ದೇ ಪಾತ್ರ ಮಾಡಬೇಕು ಎಂದು ಅಂದು ಕೊಂಡಿರಲಿಲ್ಲ. ಆದರೆ ನನಗೆ ಸಿಕ್ಕಿದ ಪ್ರತಿ ಪಾತ್ರವೂ ಭಿನ್ನವಾಗಿತ್ತು. ನನ್ನ ಅಭಿನಯದ ಬಗ್ಗೆ ನನಗೆ ಖುಷಿ ಇದೆ.

* ನೀವು ಅಭಿನಯಿಸಿದ ಚಿತ್ರಗಳಲ್ಲಿ ಹೆಚ್ಚು ಚಾಲೆಜಿಂಗ್ ಎನ್ನಿಸಿದ ಚಿತ್ರ ಯಾವುದು?
ನಾನು ಅಭಿನಯಿಸಿದ ಚಿತ್ರಗಳಲ್ಲಿ ಹೆಚ್ಚು ಚಾಲೆಜಿಂಗ್ ಎನ್ನಿಸಿದ್ದು ಸುಗ್ರೀವ. ಆ ಚಿತ್ರ ಕೇವಲ 18 ದಿನದಲ್ಲಿ ಶೂಟಿಂಗ್ ಮಾಡಿದ್ದು. ನಮಗೆ 2ನಿಮಿಷ ಕೂಡ ನಮ್ಮ ಬಗ್ಗೆ ಯೋಚಿಸಲು ಸಮಯವಿರಲಿಲ್ಲ. ಮತ್ತೆ ಕಿಲ್ಲಿಂಗ್‌ ವೀರಪ್ಪನ್ ಚಿತ್ರದ ಕ್ಲೈಮಾಕ್ಸ್ ಕೂಡ ನನಗೆ ಅಷ್ಟೇ ಚಾಲೆಜಿಂಗ್ ಎನ್ನಿಸಿತ್ತು.

* ಎದ್ದೇಳು ಮಂಜುನಾಥ ಚಿತ್ರದ ಬಗ್ಗೆ ನಿಮ್ಮ ಮಾತು?
ಆ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕೇವಲ ಡೈಲಾಗ್ಸ್‌ ಹೇಳುತ್ತಿದ್ದರು. ಗ್ಲಿಸರಿನ್‌ ಇಲ್ಲದೇ ನೈಜವಾಗಿ ನಟಿಸಲು ಹೇಳಿದ್ದರು. ಹಾಗೇ ಆ ಚಿತ್ರದಲ್ಲಿ ನನ್ನ ಅಭಿನಯ ಸಹಜವಾಗಿತ್ತು. ಜನ ನನ್ನ ನಟನೆಯನ್ನು ಇಷ್ಟಪಟ್ಟಿದ್ದರು. ಜಗ್ಗೇಶ್‌ ಸರ್‌ ಅಂತಹ ಅನುಭವವುಳ್ಳ ನಟರೊಂದಿಗೆ ನಟಿಸುವಾಗ ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸಬೇಕಿತ್ತು. ಹಾಗಾಗಿ ನೈಜತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೆ.

* ಚಿತ್ರರಂಗದಲ್ಲಿ ಗ್ಲ್ಯಾಮರ್‌, ಗಾಸಿಪ್‌ ಬೇಕೇ ಬೇಡವೇ ಎಂಬ ಬಗ್ಗೆ ನಿಮ್ಮ ಅಭಿಪ್ರಾಯ?
ಗ್ಲ್ಯಾಮರ್ ಎನ್ನುವುದು ಬೇಕೆ ಬೇಡವೇ ಎನ್ನುವುದಕ್ಕಿಂತ ಪಾತ್ರಕ್ಕೆ ನ್ಯಾಯ ಒದಗಿಸಬೇಕು. ಆ ಪಾತ್ರಕ್ಕೆ ಬೇಕು ಎನ್ನಿಸಿದರೆ  ಗ್ಲ್‌್ಯಾಮರ್‌ಗೆ  ಪ್ರಾಮುಖ್ಯತೆ ನೀಡಬೇಕು. ಗಾಸಿಪ್‌ ಎನ್ನುವುದು ಅವರವರ ಭಾವಕ್ಕೆ ತಕ್ಕಂತೆ ಎನ್ನಬಹುದು. ಕೆಲವರು ಪ್ರಚಾರಕ್ಕಾಗಿ ಗಾಸಿಪ್‌ ಹುಟ್ಟಿಸಿಕೊಳ್ಳುತ್ತಾರೆ, ಇನ್ನೂ ಕೆಲವರ ಜೀವನದಲ್ಲಿ ಅದು ಆಕಸ್ಮಿಕ, ಆದರೆ ನನನ್ನು ಗಾಸಿಪ್ ಎಂಬ ಭೂತ ಎಂದು ಕಾಡಿಲ್ಲ. ನಾನು ಇಂದಿಗೂ ಗಾಸಿಪ್ ಮುಕ್ತವಾಗಿದ್ದೇನೆ. ಯಾರೂ ಬೇಕು ಅಂತ ತಮ್ಮ ಹೆಸರು ಕೆಡಿಸಿಕೊಳ್ಳಲು ಇಷ್ಟಪಡುವುದಿಲ್ಲ.

* ಭವಿಷ್ಯದ ಬಗ್ಗೆ ಹೇಳಿ?
ಸದ್ಯ  ನಾನು ‘ಕಲತ್ತೂರ್‌ ಗ್ರಾಮಂ’ ಎಂಬ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಕಿಶೋರ್‌ ಹೀರೋ. ಇನ್ನೂ ಅಂಬೇಡ್ಕರ್‌ ಪತ್ನಿಯ ಜೀವನದ ಕತೆಯನ್ನು ಆಧಾರಿಸಿದ ಚಿತ್ರ ‘ರಾಮಾಬಾಯಿ’ ಬಿಡುಗಡೆಯಾಗಬೇಕಿದೆ. ಸಧ್ಯ ಚಿತ್ರಗಳಿಗೆ ಬ್ರೇಕ್ ನೀಡಿ ಮದುವೆ ಬಗ್ಗೆ ಯೋಚಿಸಿದ್ದೇನೆ. ಮದುವೆಯ ನಂತರ ಒಳ್ಳೆಯ ಪ್ರಾಜೆಕ್ಟಗಳು ಸಿಕ್ಕರೆ ಖಂಡಿತಾ ನಟಿಸುತ್ತೇನೆ.

* ಮದುವೆಯ ಬಗ್ಗೆ ನಿಮ್ಮ ಕನಸು?
ನಾನು ಮದುವೆಯ ಬಗ್ಗೆ ವಿಶೇಷ ಕನಸುಗಳನ್ನು ಕಟ್ಟಿಲ್ಲ, ಮೊದನಿಂದಲೂ ನಾನು ತಂದೆ ತಾಯಿಯ ಇಷ್ಟಕ್ಕೆ ಬೆಲೆ ನೀಡುವವಳು. ಮದುವೆಯ ವಿಷಯದಲ್ಲೂ ಅವರ ನಿರ್ಧಾರವೇ ನನ್ನ ಇಷ್ಟ. ಮದುವೆಯ ನಂತರ ಉತ್ತಮ ಕಥೆಗಳಿರುವ ಚಿತ್ರ ಸಿಕ್ಕರೆ ಅಭಿನಯಿಸುವ ಬಯಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.