ADVERTISEMENT

ನನ್ ಮಾತ್ ಕೇಳಿಸ್ತಾ...

ರೇಷ್ಮಾ ಶೆಟ್ಟಿ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ನನ್ ಮಾತ್ ಕೇಳಿಸ್ತಾ...
ನನ್ ಮಾತ್ ಕೇಳಿಸ್ತಾ...   

ದೇವಿಕಾ ಮತ್ತು ರಮ್ಯಾ ಹತ್ತು ವರ್ಷಗಳಿಂದ ಸ್ನೇಹಿತೆಯರು. ಸ್ನೇಹವೇ ಜೀವನ ಎನ್ನುವಂತಿದ್ದ ಅವರಿಬ್ಬರ ಸ್ನೇಹದ ಕೊಂಡಿ ಈಗ ಕಳಚಿದೆ. ಕಾರಣ ಸರಳ. ತುಂಬಾ ದಿನಗಳ ನಂತರ ದೇವಿಕಾ, ರಮ್ಯಾ ಭೇಟಿಯಾಗಿದ್ದರು. ಅಪರೂಪಕ್ಕೆ ಸಿಕ್ಕಿದ್ದೇವೆ ಎಂಬ ಕಾರಣಕ್ಕೆ ದೇವಿಕಾ ರಮ್ಯಾ ಬಳಿ ತನ್ನ ಕತೆಯನ್ನೆಲ್ಲಾ ಪಟಪಟನೆ ಹೇಳಿಕೊಳ್ಳುತ್ತಿದ್ದಳು. ಆದರೆ ರಮ್ಯಾ ಕೇಳಿಸಿಕೊಳ್ಳಲು ತಯಾರೇ ಇಲ್ಲ. ಎತ್ತಲೋ ನೋಡಿಕೊಂಡು, ಫೋನಿನಲ್ಲಿ ಬ್ರೌಸ್‌ ಮಾಡಿಕೊಂಡು ಕುಳಿತಿದ್ದಳು.

ಆಗಲೋ, ಈಗಲೋ ತಾನು ನಿನ್ನ ಮಾತನ್ನು ಕೇಳಿಸಿಕೊಳ್ಳುತ್ತಿದ್ದೇನೆ ಎಂಬಂತೆ ನಟಿಸುತ್ತಿದ್ದ ರಮ್ಯಾಳನ್ನು ನೋಡಿ ದೇವಿಕಾಗೆ ಕೋಪ, ಬೇಸರ ಎರಡೂ ಒಟ್ಟಿಗೆ ಬಂದಿತ್ತು. ಆ ಕ್ಷಣ ಅಲ್ಲಿಂದ ಎದ್ದು ಹೊರಟವಳು ಮತ್ತೆ ದೇವಿಕಾಳ ಜೊತೆ ಮಾತನಾಡುವುದ್ದನ್ನೇ ನಿಲ್ಲಿಸಿದಳು. ಮಾತು ಕೇಳಿಸಿಕೊಳ್ಳಲ್ಲಿಲ್ಲ ಎಂಬ ಕಾರಣಕ್ಕೆ ಹತ್ತು ವರ್ಷದ ಸ್ನೇಹಕ್ಕೆ ತಿಲಾಂಜಲಿ ಹಾಡಿದ್ದಳು ದೇವಿಕಾ. ಹೀಗೆ ಕೇಳಿಸಿಕೊಳ್ಳದೇ ಇರುವುದರಿಂದ ನೀವು ನಿಮ್ಮ ಸ್ನೇಹಿತರು ಹಾಗೂ ಬಂಧುಗಳ ಸಂಬಂಧವನ್ನು ಕಳೆದುಕೊಂಡಿರಬಹುದು.

‘ಕೇಳಿಸಿಕೊಳ್ಳದೇ ಇರುವುದಕ್ಕೆ ಮಾತು ಬಿಡುವುದಾ? ಇದು ತುಂಬಾ ಸಿಲ್ಲಿ ವಿಷಯ’ ಎಂದು ನಿಮಗೆ ಅನ್ನಿಸಬಹುದು. ಆದರೆ ಸುಂದರ ಸಂಬಂಧ ಒಡೆಯಲು ಕೇಳಿಸಿಕೊಳ್ಳದಿರುವುದು ಕೂಡ ಒಂದು ಕಾರಣ. ನಮ್ಮ ಎದುರಿಗಿರುವವರು ಏನು ಮಾತನಾಡುತ್ತಿದ್ದಾರೆ ಎಂದು ಕೇಳಿಸಿಕೊಳ್ಳುವ ಮನೋಭಾವ ನಮ್ಮದಾಗಬೇಕು. ಕೆಲವು ಬಾರಿ ಏನು ಮಾತನಾಡುತ್ತಿದ್ದಾರೆ ಎನ್ನುವುದರಷ್ಟೇ ಯಾರು ಮಾತನಾಡುತ್ತಿದ್ದಾರೆ ಎಂಬುದೂ ಮುಖ್ಯವಾಗುತ್ತೆ.

ADVERTISEMENT

ಕೆಲವೊಮ್ಮೆ ನಮ್ಮ ಮನಃಸ್ಥಿತಿ ಚೆನ್ನಾಗಿಲ್ಲ ಎಂದಾಗ ಬೇರೆಯವರ ಮಾತು ಕೇಳಿಸಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ. ಆಗ ನಮ್ಮ ಎದುರಿಗಿರುವವರಿಗೆ ನನ್ನ ಮನಃಸ್ಥಿತಿ ಚೆನ್ನಾಗಿಲ್ಲ, ಇನ್ನೊಮ್ಮೆ ನಿಮ್ಮ ಬಳಿ ಮಾತನಾಡುವೇ ಎಂದು ಸೂಕ್ಷ್ಮವಾಗಿ ತಿಳಿಸಿ ಹೇಳಬೇಕು. ಅದು ಬಿಟ್ಟು ಅವರು ಮಾತನಾಡುತ್ತಿರುವಾಗ ಎತ್ತಲೋ ನೋಡುತ್ತಾ ಅಸಡ್ಡೆ ತೋರಿದರೆ ಎದುರಿಗಿರುವವರಿಗೆ ನಾವು ಅವಮಾನ ಮಾಡಿದಂತೆಯೇ ಸರಿ. ಹಾಗೆ ಮಾಡುವುದರಿಂದ ನಮ್ಮ ಸುಂದರ ಸಂಬಂಧವನ್ನು ನಾವೇ ಹಾಳು ಮಾಡಿಕೊಂಡಂತೆ.

ಕೇಳಿಸಿಕೊಳ್ಳದೇ ಇರುವುದು ಆ ಕ್ಷಣದಲ್ಲಿ ನಮಗೆ ದೊಡ್ಡ ಸಂಗತಿ ಅಲ್ಲ ಎನ್ನಿಸಬಹುದು. ಆದರೆ ಅದರ ನೋವು ನಿಜವಾಗಿಯೂ ನಮಗೆ ಅರಿವಾಗಬೇಕು ಎಂದರೆ ನಾವು ಅದೇ ಪರಿಸ್ಥಿತಿಯನ್ನು ಅನುಭವಿಸಬೇಕು. ಎಷ್ಟೋ ಬಾರಿ ನಮ್ಮ ಮನಸ್ಸಿನ ನೋವನ್ನು ಆತ್ಮೀಯರ ಬಳಿ ಹಂಚಿಕೊಳ್ಳಬೇಕು ಎಂಬ ತುಡಿತವಿರುತ್ತದೆ. ಆದರೆ ಅದಕ್ಕೆ ನಮ್ಮ ಆತ್ಮೀಯರು ಸ್ಪಂದಿಸದಿದ್ದಾಗ ಮನಸ್ಸಿನ ನೋವು ಇನ್ನಷ್ಟು ಹೆಚ್ಚಾಗುತ್ತೆ. ನಮ್ಮ ವರ್ತನೆಯಿಂದ ನಮ್ಮ ಸ್ನೇಹಿತರ ಮನಸ್ಸಿಗೂ ಇಷ್ಟೇ ಘಾಸಿ ಆಗುತ್ತದೆ ಎಂಬುದನ್ನು ನಾವು ಅರಿಯಬೇಕು.

ಎಷ್ಟೋ ಸಂಬಂಧಗಳು ಬಿರುಕು ಬಿಡಲು ಕೇಳಿಸಿಕೊಳ್ಳದಿರುವುದೇ ಕಾರಣ ಎಂಬುದನ್ನು ಅಧ್ಯಯನವೊಂದು ತಿಳಿಸಿದೆ. ಮನೆಯಲ್ಲಿ ಕೂಡ ಗಂಡ– ಹೆಂಡತಿ ಒಬ್ಬರಿಗೊಬ್ಬರ ಮಾತನ್ನು ಕೇಳಿಸಿಕೊಳ್ಳದಿರುವುದು ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ. ಕೇಳಿಸಿಕೊಳ್ಳುವುದೆಂದರೆ ಇನ್ನೊಬ್ಬರ ಭಾವನೆಗೆ ಬೆಲೆ ನೀಡುವುದು ಎಂದರ್ಥ.

ಕೇಳಿಸಿಕೊಳ್ಳದೇ ಇರುವುದರಿಂದ ನಮ್ಮ ಎದುರಿನವರ ಮನಸ್ಸಿಗೆ ನೋವಾಗುತ್ತದೆ. ಅಲ್ಲದೇ ಅವರಿಗೆ ನನಗಾಗಿ ಯಾರು ಇಲ್ಲ ಎಂಬ ಭಾವನೆಯೂ ಹುಟ್ಟಿಕೊಳ್ಳುತ್ತದೆ. ಅಷ್ಟೇ ಅಲ್ಲ ಹತಾಶೆ, ಅಸಮಾಧಾನ, ಒಂಟಿತನದಿಂದ ಮನಸು ಮುದುಡುತ್ತದೆ.

ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆಯಾಗದಿರಬಹುದು. ಆದರೆ, ಸಂಬಂಧಗಳ ಬಂಧವನ್ನು ಮಾತ್ರ ಇದು ಮತ್ತಷ್ಟು ಬಿಗಿಯಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.